Pooja Singh | ಹೈಜಂಪ್‌ನಲ್ಲಿ ಹೊಸ ದಾಖಲೆ ಬರೆದ ಪೂಜಾ! 
ದೇಶ

ಏಷ್ಯನ್ ಯು-20 ಅಥ್ಲೆಟಿಕ್ಸ್; 14 ವರ್ಷಗಳ ಹಳೆಯ ದಾಖಲೆ ಮುರಿದು ಇತಿಹಾಸ ಸೃಷ್ಟಿಸಿದ ಪೂಜಾ ಸಿಂಗ್‌ಗೆ ಚಿನ್ನದ ಪದಕ! | Pooja Singh

ಹಾಂಗ್ ಕಾಂಗ್: ಏಷ್ಯನ್ ಯು-20 ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಯುವ ಅಥ್ಲೀಟ್ ಪೂಜಾ ಸಿಂಗ್ (Pooja Singh) ಇತಿಹಾಸ ಸೃಷ್ಟಿಸಿದ್ದು, ಮಹಿಳೆಯರ ಹೈಜಂಪ್ ವಿಭಾಗದಲ್ಲಿ ಅದ್ಭುತ ಪ್ರದರ್ಶನ ನೀಡಿದ ಪೂಜಾ, ಬರೋಬ್ಬರಿ 14 ವರ್ಷಗಳ ಹಿಂದಿನ ರಾಷ್ಟ್ರೀಯ ದಾಖಲೆಯನ್ನು ಧೂಳೀಪಟ ಮಾಡಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.
ಹಾಂಗ್ ಕಾಂಗ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ 19 ವರ್ಷದ ಪೂಜಾ ಸಿಂಗ್, 1.93 ಮೀಟರ್ ಎತ್ತರಕ್ಕೆ ಜಿಗಿಯುವ ಮೂಲಕ ಈ ಅಭೂತಪೂರ್ವ ಮೈಲಿಗಲ್ಲು ಸ್ಥಾಪಿಸಿದರು. ಇದಕ್ಕೂ ಮುನ್ನ 2011 ರಲ್ಲಿ ಸಹಾನಾ ಕುಮಾರಿ ಬರೆದಿದ್ದ 1.92 ಮೀಟರ್‌ಗಳ ದಾಖಲೆಯನ್ನು ಪೂಜಾ ಈಗ ಅಳಿಸಿಹಾಕಿದ್ದಾರೆ. ಇದರೊಂದಿಗೆ ಏಷ್ಯನ್ ಯು-20 ಚಾಂಪಿಯನ್‌ಶಿಪ್‌ನ ಮಹಿಳಾ ಹೈಜಂಪ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್‌ಗೆ ಅರ್ಹತೆ..?

ಪೂಜಾ ಈ ಅಮೋಘ ಸಾಧನೆ ಮುಂಬರುವ ಕಾಮನ್‌ವೆಲ್ತ್ ಕ್ರೀಡಾಕೂಟದ ಅರ್ಹತಾ ಮಾನದಂಡವನ್ನು (1.92 ಮೀಟರ್) ಯಶಸ್ವಿಯಾಗಿ ದಾಟಿದ್ದು, ಫೆಡರೇಶನ್ ಕಪ್ ಅನ್ನು ಅಂತಿಮ ಅರ್ಹತಾ ಸುತ್ತು ಎಂದು ಮೊದಲೇ ನಿರ್ಧರಿಸಲಾಗಿದ್ದರೂ, ಪೂಜಾ ಅವರ ಈ ಅಸಾಧಾರಣ ಪ್ರದರ್ಶನವನ್ನು ಪರಿಗಣಿಸಿ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (AFI) ಅವರಿಗೆ ಕ್ರೀಡಾಕೂಟದಲ್ಲಿ ಭಾಗವಹಿಸಲು ವಿನಾಯಿತಿ ನೀಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಪೂಜಾ ಸಿಂಗ್ ಮುಡಿಗೇರಿದ ಪ್ರಮುಖ ಸಾಧನೆಗಳು
ರಾಷ್ಟ್ರೀಯ ದಾಖಲೆ: 1.93 ಮೀಟರ್ ಜಿಗಿತದೊಂದಿಗೆ ಹಿರಿಯರ ಮತ್ತು ಯು-20 ವಿಭಾಗದ ಹೊಸ ರಾಷ್ಟ್ರೀಯ ದಾಖಲೆ ಬರೆದಿದ್ದಾರೆ.
ಏಷ್ಯಾದ ನಂಬರ್ 1 ತಾರೆ: 2026ರ ಕ್ರೀಡಾಋತುವಿನಲ್ಲಿ ಏಷ್ಯಾದ ಅತ್ಯುತ್ತಮ ಯು-20 ಮಹಿಳಾ ಹೈಜಂಪರ್ ಎಂಬ ಕೀರ್ತಿ.
ಜಾಗತಿಕ ಮನ್ನಣೆ: ಪ್ರಸ್ತುತ ಸೀಸನ್‌ನಲ್ಲಿ ವಿಶ್ವದ ಟಾಪ್-2 ಯು-20 ಮಹಿಳಾ ಹೈಜಂಪರ್‌ಗಳ ಪಟ್ಟಿಯಲ್ಲಿ ಸ್ಥಾನ.
ಪದಕಗಳ ಬೇಟೆ: ಏಷ್ಯನ್ ಇನ್ಡೋರ್ ಚಾಂಪಿಯನ್‌ಶಿಪ್, ಏಷ್ಯನ್ ಯು-18 ಮತ್ತು ದಕ್ಷಿಣ ಏಷ್ಯನ್ ಯು-20 ಕ್ರೀಡಾಕೂಟಗಳಲ್ಲೂ ಪದಕ ಗೆದ್ದ ಇತಿಹಾಸ ಹೊಂದಿದ್ದಾರೆ.
ಈ ಭರ್ಜರಿ ಯಶಸ್ಸಿನ ಮೂಲಕ ಪೂಜಾ ಸಿಂಗ್ ಭಾರತದ ಸಾರ್ವಕಾಲಿಕ ಶ್ರೇಷ್ಠ ಮಹಿಳಾ ಹೈಜಂಪರ್ ಆಗಿ ಹೊರಹೊಮ್ಮಿದ್ದು, ಅಂತರರಾಷ್ಟ್ರೀಯ ಕ್ರೀಡಾ ವೇದಿಕೆಯಲ್ಲಿ ಭಾರತದ ಭವಿಷ್ಯದ ದೊಡ್ಡ ಭರವಸೆಯಾಗಿದ್ದಾರೆ(ಏಜೆನ್ಸೀಸ್​​).