National Herald Case | ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್
ದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸುವ ಮೂಲಕ ಕೇಂದ್ರ ಸರ್ಕಾರ ತನ್ನ ಸೇಡಿನ ರಾಜಕಾರಣವನ್ನು ಮುಂದುವರೆಸಿದೆ ಎಂದು ಕಾಂಗ್ರೆಸ್ ಪಕ್ಷ ಭಾನುವಾರ (ನ.30) ಆರೋಪಿಸಿದೆ.
ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಮೋದಿ ಷಾ ಜೋಡಿ, ಕಾಂಗ್ರೆಸ್‌ನ ಹಿರಿಯ ನಾಯಕರ ವಿರುದ್ಧ ಕಿರುಕುಳ, ಬೆದರಿಕೆ ಮತ್ತು ಸೇಡಿನ ರಾಜಕೀಯವನ್ನು ಮುಂದುವರೆಸಿದ್ದು, ಬೆದರಿಕೆ ಹಾಕುವವರು ಸ್ವತಃ ಅಸುರಕ್ಷಿತರು ಮತ್ತು ಭಯಭೀತರಾಗಿದ್ದಾರೆ. ನ್ಯಾಷನಲ್ ಹೆರಾಲ್ಡ್ ಎನ್ನುವುದು ಸಂಪೂರ್ಣವಾಗಿ ನಕಲಿ ಪ್ರಕರಣವಾಗಿದ್ದು. ಅಂತಿಮವಾಗಿ ನ್ಯಾಯವೇ ಜಯಗಳಿಸುತ್ತದೆ. ಸತ್ಯಮೇವ ಜಯತೇ ಎಂದು ಬರೆದುಕೊಂಡಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಪ್ರತಿಕ್ರಿಯೆ ನೀಡಿದ್ದು, ಎಫ್‌ಐಆರ್ ವೈನ್ ಹೊಸದಲ್ಲ, ಬಾಟಲಿಯೂ ಹೊಸದಲ್ಲ, ಗ್ಲಾಸ್ ಹೊಸದಲ್ಲ ಎಂದಿದ್ದು, ಯಾವುದೇ ಹಣ ಸ್ಥಳಾಂತರಗೊಂಡಿಲ್ಲ, ಸ್ಥಿರ ಆಸ್ತಿ ವರ್ಗಾವಣೆಯಾಗಿಲ್ಲ, ಆದರೆ ಹಣ ವರ್ಗಾವಣೆಯನ್ನು ಕಂಡುಹಿಡಿಯಲಾದ ಟ್ರಿಕ್ ಅದ್ಭುತ ಎಂದು ಬಣ್ಣಿಸಿದರು.
ಎಫ್‌ಐಆರ್...
ನ್ಯಾಷನಲ್ ಹೆರಾಲ್ಡ್ ಪ್ರಕರಣದ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ ನೀಡಿದ ದೂರಿನ ಆಧಾರದ ಮೇಲೆ ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ ಅಕ್ಟೋಬರ್ 3 ರಂದು FIR ದಾಖಲಿಸಿದೆ ಎಂದು ವರದಿಯಾಗಿದ್ದು, ಪೊಲೀಸರು IPC ಸೆಕ್ಷನ್ 120B, 403 (ಆಸ್ತಿ ದುರುಪಯೋಗ), 406 (ನಂಬಿಕೆ ಉಲ್ಲಂಘನೆ) ಮತ್ತು 420 (ವಂಚನೆ) ಅಡಿಯಲ್ಲಿ ದೂರು ದಾಖಲಿಸಿದ್ದಾರೆ.
ಪಿಎಂಎಲ್‌ಎ ಸೆಕ್ಷನ್ 44 ಮತ್ತು 45 ರ ಆರೋಪಪಟ್ಟಿಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸ್ಯಾಮ್ ಪಿತ್ರೋಡಾ, ಸುಮನ್ ದುಬೆ, ದಿವಂಗತ ಮೋತಿಲಾಲ್ ವೋರಾ ಮತ್ತು ಆಸ್ಕರ್ ಫರ್ನಾಂಡಿಸ್, ಯಂಗ್ ಇಂಡಿಯನ್ ಮತ್ತು ಡೋಟೆಕ್ಸ್ ಮರ್ಚಂಡೈಸ್ ಪ್ರೈವೇಟ್ ಲಿಮಿಟೆಡ್ ಹೆಸರುಗಳಿವೆ.
ಪ್ರಕರಣದ ಹಿನ್ನೆಲೆ ಮತ್ತು ED ಆರೋಪಗಳು
ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ 2012 ರಲ್ಲಿ ನೀಡಿದ ದೂರಿನಿಂದ ಆರಂಭವಾದ ಈ ತನಿಖೆಯು, ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಪ್ರಕಾಶಕರಾದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಆಸ್ತಿಗಳ ದುರುಪಯೋಗದ ಆರೋಪವನ್ನು ಗುರಿಯಾಗಿಸಿಕೊಂಡಿದೆ. ಸೋನಿಯಾ ಮತ್ತು ರಾಹುಲ್ ಗಾಂಧಿ ತಲಾ 38 ಪ್ರತಿಶತ ಷೇರುಗಳನ್ನು ಹೊಂದಿರುವ ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ ಮೂಲಕ ಕಾಂಗ್ರೆಸ್ ನಾಯಕರು ಪಕ್ಷದ ಸಾಲಗಳನ್ನು ಬಳಸಿಕೊಂಡು 50 ಲಕ್ಷ ರೂ.ಗೆ 2,000 ಕೋಟಿ ರೂ.ಗೂ ಹೆಚ್ಚು ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಂಚು ರೂಪಿಸಿದ್ದಾರೆ, ಇದರಲ್ಲಿ ನಕಲಿ ಬಾಡಿಗೆ ರಶೀದಿಗಳು ಮತ್ತು ನಕಲಿ ವಹಿವಾಟುಗಳು ಸೇರಿವೆ ಎನ್ನುವುದು ಇಡಿ ಆರೋಪ.
ಕಾನೂನು ತಂಡ...
ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ (ಸೋನಿಯಾ), ಆರ್‌ಎಸ್ ಚೀಮಾ (ರಾಹುಲ್), ಪ್ರಮೋದ್ ದುಬೆ (ಡೋಟೆಕ್ಸ್), ಮತ್ತು ಇಡಿ ಪರವಾಗಿ ಎಎಸ್‌ಜಿ ಎಸ್‌ವಿ ರಾಜು ವಾದ ಮಂಡಿಸಿದ ವಕೀಲರುಗಳು. ಮುಂದಿನ ವಿಚಾರಣೆ ಡಿಸೆಂಬರ್ 16 ಕ್ಕೆ ನಿಗದಿಯಾಗಿದೆ(ಏಜೆನ್ಸೀಸ್).