ತಮಿಳುನಾಡಿನ ರಾಜಕೀಯ ಸಂಚಲನ; ಚುನಾವಣಾ ಉಸ್ತುವಾರಿ ಸ್ಥಾನಕ್ಕೆ ಅಣ್ಣಾಮಲೈ ದಿಢೀರ್ ರಾಜೀನಾಮೆ..ಆಗಿದ್ದೇನು..?
ಚೆನ್ನೈ: ತಮಿಳುನಾಡು ಬಿಜೆಪಿಯ ಪ್ರಭಾವಿ ನಾಯಕ ಮತ್ತು ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ(Annamalai) ಅವರು 2026ರ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ತಮಗೆ ನೀಡಲಾಗಿದ್ದ ಆರು ಪ್ರಮುಖ ಕ್ಷೇತ್ರಗಳ ಉಸ್ತುವಾರಿ ಸ್ಥಾನದಿಂದ ಕೆಳಗಿಳಿಯುವುದಾಗಿ ಘೋಷಿಸಿದ್ದಾರೆ.
ಈ ಬಗ್ಗೆ ಮಂಗಳವಾರ ಕೊಯಮತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಣ್ಣಾಮಲೈ, ಈ ನಿರ್ಧಾರದ ಹಿಂದೆ ಯಾವುದೇ ರಾಜಕೀಯ ಕಾರಣವಿಲ್ಲ, ಬದಲಾಗಿ ಕೇವಲ ವೈಯಕ್ತಿಕ ಮತ್ತು ಕೌಟುಂಬಿಕ ಕಾರಣಗಳಿವೆ ಎಂದು ಸ್ಪಷ್ಟಪಡಿಸಿದ್ದಾರೆ.
ತಂದೆಯ ಅನಾರೋಗ್ಯವೇ ಮುಖ್ಯ ಕಾರಣ
ತಮ್ಮ ಈ ನಿರ್ಧಾರದ ಬಗ್ಗೆ ಭಾವುಕರಾಗಿ ಮಾತನಾಡಿದ ಅಣ್ಣಾಮಲೈ, ನನ್ನ ತಂದೆಯವರ ಆರೋಗ್ಯ ಹದಗೆಟ್ಟಿದೆ. ಅವರನ್ನು ಆರೈಕೆ ಮಾಡುವುದು ಮಗನಾಗಿ ನನ್ನ ಮೊದಲ ಆದ್ಯತೆ ಮತ್ತು ಕರ್ತವ್ಯವಾಗಿದೆ. ಈ ಕಾರಣದಿಂದಾಗಿ ನನಗೆ ನಿರಂತರವಾಗಿ ಪ್ರವಾಸ ಮಾಡಲು ಅಥವಾ ಚುನಾವಣಾ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಕೊಯಮತ್ತೂರಿನ ಸಿಂಗನಲ್ಲೂರು ಸೇರಿದಂತೆ ಆರು ಕ್ಷೇತ್ರಗಳ ಉಸ್ತುವಾರಿಯಿಂದ ನಾನು ಕೆಳಗಿಳಿಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಉಸ್ತುವಾರಿ ಬೇಡ, ಆದರೆ ಪ್ರಚಾರಕ್ಕೆ ಸಿದ್ಧ
ಮುಂದುವರೆದು ಮಾತನಾಡಿರುವ ಅಣ್ಣಾಮಲೈ, ಪಕ್ಷವು ತಮಗೆ ನೀಡಿದ್ದ ಆರು ಕ್ಷೇತ್ರಗಳ (ಸಿಂಗನಲ್ಲೂರು ಸೇರಿದಂತೆ) ಮೂಲಭೂತ ಸಂಘಟನಾ ಜವಾಬ್ದಾರಿಯನ್ನು ನಿರ್ವಹಿಸಲು ಕಷ್ಟವಾಗುವುದರಿಂದ, ಆ ಸ್ಥಾನಕ್ಕೆ ಬೇರೆಯವರನ್ನು ನೇಮಿಸುವಂತೆ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್ ಅವರಿಗೆ ತಿಳಿಸಿರುವುದಾಗಿ ಹೇಳಿದ್ದಾರೆ. ಆದರೆ, ಪಕ್ಷ ಸೂಚಿಸಿದರೆ ಪ್ರಚಾರ ಕಾರ್ಯದಲ್ಲಿ ಭಾಗವಹಿಸಲು ಮತ್ತು ಮೈತ್ರಿ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಲು ನಾನು ಸದಾ ಸಿದ್ಧ ಎಂದು ಸ್ಪಷ್ಟಪಡಿಸಿದರು.
ಚುನಾವಣಾ ಸ್ಪರ್ಧೆಯ ಬಗ್ಗೆ
2026ರ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಣ್ಣ, ಅದನ್ನು ಪಕ್ಷ ನಿರ್ಧರಿಸಲಿದೆ. ಪಕ್ಷದ ಕಾರ್ಯಕರ್ತನಾಗಿ ನಾನು ಹೈಕಮಾಂಡ್ ಆದೇಶವನ್ನು ಪಾಲಿಸುತ್ತೇನೆ. ಲೋಕಸಭಾ ಚುನಾವಣೆಯಲ್ಲಿ ನನಗೆ ಮತ ನೀಡಿದ ಕೊಯಮತ್ತೂರಿನ ಜನರಿಗೆ ನಾನು ಉತ್ತರದಾಯಿಯಾಗಿದ್ದೇನೆ. ಹಾಗಾಗಿ ಜನರ ಅಹವಾಲು ಸ್ವೀಕರಿಸಲು ಇಲ್ಲೇ ಪ್ರತ್ಯೇಕ ಮನೆ ಬಾಡಿಗೆಗೆ ಪಡೆದು ಇರಲಿದ್ದೇನೆ ಎಂದರು.
ಮುಂದಿನ ಮುಖ್ಯಮಂತ್ರಿ ಬಗ್ಗೆ ನಮಗೆ ಸ್ಪಷ್ಟತೆ ಇದೆ
ವಾನತಿ ಶ್ರೀನಿವಾಸನ್ ಮತ್ತು ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳ ಗೆಲುವಿಗಾಗಿ ಕೆಲಸ ಮಾಡುವುದಾಗಿ ಹೇಳಿದ ಅಣ್ಣಾಮಲೈ, ನಮ್ಮಲ್ಲಿ ಯಾವುದೇ ವೈಯಕ್ತಿಕ ಭಿನ್ನಾಭಿಪ್ರಾಯಗಳಿಲ್ಲ. ತಮಿಳುನಾಡಿನ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಮತ್ತು ರಾಷ್ಟ್ರೀಯ ನಾಯಕರು ನಮಗೆ ಏನು ಸೂಚಿಸಿದ್ದಾರೆ ಎಂಬ ಬಗ್ಗೆ ಸಂಪೂರ್ಣ ಸ್ಪಷ್ಟತೆ ಇದೆ ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ.
ಅಣ್ಣಾಮಲೈ ಉಸ್ತುವಾರಿಯಲ್ಲಿದ್ದ ಆ ಆರು ಕ್ಷೇತ್ರಗಳು
ಬಿಜೆಪಿ ಮತ್ತು ಎಐಎಡಿಎಂಕೆ (AIADMK) ಮೈತ್ರಿಯ ಭಾಗವಾಗಿ ಬಿಜೆಪಿಗೆ ಹಂಚಿಕೆಯಾಗಲಿರುವ 41 ಕ್ಷೇತ್ರಗಳ ಪೈಕಿ ಅಣ್ಣಾಮಲೈ ಅವರಿಗೆ ಈ ಕೆಳಗಿನ ಕ್ಷೇತ್ರಗಳ ಜವಾಬ್ದಾರಿ ನೀಡಲಾಗಿತ್ತು.
1. ಸಿಂಗನಲ್ಲೂರು (ಕೊಯಮತ್ತೂರು)
ವಾನತಿ ಶ್ರೀನಿವಾಸನ್ ಪರ ಬ್ಯಾಟಿಂಗ್
ಕೊಯಮತ್ತೂರು ದಕ್ಷಿಣ ಕ್ಷೇತ್ರದ ಹಾಲಿ ಶಾಸಕಿ ವಾನತಿ ಶ್ರೀನಿವಾಸನ್ ಅವರ ಪರವಾಗಿ ಮಾತನಾಡಿದ ಅಣ್ಣಾಮಲೈ, ನಮ್ಮ ಗುರಿ ಎಲ್ಲಾ ಕ್ಷೇತ್ರಗಳಲ್ಲಿ ಎನ್‌ಡಿಎ (NDA) ಮೈತ್ರಿಕೂಟವನ್ನು ಗೆಲ್ಲಿಸುವುದಾಗಿದೆ. ವಾನತಿ ಅವರು ಮತ್ತೊಮ್ಮೆ ಭಾರಿ ಬಹುಮತದಿಂದ ಗೆಲ್ಲಬೇಕು ಎಂಬುದು ನಮ್ಮ ಆಶಯವಾಗಿದೆ. ನಮ್ಮ ಮುಂದಿನ ಮುಖ್ಯಮಂತ್ರಿ ಯಾರು ಮತ್ತು ಯಾರ ಪರ ಕೆಲಸ ಮಾಡಬೇಕು ಎಂಬ ಬಗ್ಗೆ ನಮಗೆ ಸ್ಪಷ್ಟತೆ ಇದೆ, ಎಂದು ಹೇಳುವ ಮೂಲಕ ಮೈತ್ರಿ ಧರ್ಮವನ್ನು ಎತ್ತಿ ಹಿಡಿದರು,(ಏಜೆನ್ಸೀಸ್).