ಅಮರಾವತಿ: ಆಂಧ್ರ ಪ್ರದೇಶದಲ್ಲಿ ಆಡಳಿತರೂಢ ತೆಲುಗುದೇಶಂ ಪಕ್ಷ ಮತ್ತು ವೈಎಸ್ಆರ್ ಕಾಂಗ್ರೆಸ್ ನಡುವಿನ ವೈಷಮ್ಯ ರಾಜಕೀಯ, ರಾಜ್ಯದಲ್ಲಿ ಉದ್ವಿಗ್ನತೆಯನ್ನುಂಟು ಮಾಡಿದ್ದು, ನಿನ್ನೆ ವೈಸಿಪಿ ಮಾಜಿ ಸಚಿವ ಅಂಬಟಿ ರಾಂಬಾಬು ಮನೆಗೆ ಬೆಂಕಿ ಹಚ್ಚಿದ್ದ ಟಿಡಿಪಿ ಕಾರ್ಯಕರ್ತರು, ಇಂದು ಅದೇ ರೀತಿ ಮತ್ತೊಬ್ಬ ಮಾಜಿ ಸಚಿವ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ್ದಾರೆ.
ಸಿಎಂ ಚಂದ್ರಬಾಬು ನಾಯ್ಡು ಪುತ್ರ ಮತ್ತು ಆಂಧ್ರ ಐಟಿ ಮತ್ತು ಶಿಕ್ಷಣ ಸಚಿವ ನಾರಾ ಲೋಕೇಶ್ ವಿರುದ್ಧ ಅನುಚಿತ ಹೇಳಿಕೆ ನೀಡಿದ ಆರೋಪದ ಮೇಲೆ ಕೃಷ್ಣ ಜಿಲ್ಲೆಯ ಇಬ್ರಾಹಿಂ ಪಟ್ಟಣದಲ್ಲಿರುವ ಮಾಜಿ ಸಚಿವ ಜೋಗಿ ರಮೇಶ್ ಮನೆಗೆ ಟಿಡಿಪಿ ಕಾರ್ಯಕರ್ತರು ದಾಳಿ ಮಾಡಿದ್ದು, ಮನೆ ಧ್ವಂಸ ಮಾಡಿ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.
ಜೋಗಿ ರಮೇಶ್ ಅವರ ಮನೆಯ ಮುಂಭಾಗದಲ್ಲಿರುವ ಫ್ಲೆಕ್ಸಿ, ಕಿಟಕಿಗಳನ್ನು ಒಡೆದಿದ್ದಾರೆ. ಬೆಂಕಿಗೆ ಮನೆಯಲ್ಲಿದ್ದ ಪೀಠೋಪಕರಣಗಳು ಬೆಂಕಿಗೆ ಆಹುತಿಯಾಗಿದ್ದು, ದಟ್ಟ ಹೊಗೆ ಆವರಿಸಿದ್ದು ವಿಡಿಯೋಗಳಲ್ಲಿ ದಾಖಲಾಗಿದೆ. ಘಟನೆ ನಡೆದ ವೇಳೆ ಜೋಗಿ ರಮೇಶ್ ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ.
ಇನ್ನೂ ನಿನ್ನೆ ಸಿಎಂ ಚಂದ್ರಬಾಬು ನಾಯ್ಡು ವಿರುದ್ಧ ಅಸಭ್ಯಕರ ಪದ ಬಳಸಿದ ಹಿನ್ನೆಲೆ ಮಾಜಿ ಸಚಿವ ಅಂಬಟಿ ರಾಂಬಾಬು ಅವರ ಗುಂಟೂರು ಮನೆ ಮೇಲೆ ದಾಳಿ ಮಾಡಿದ್ದ ಟಿಡಿಪಿ ಕಾರ್ಯಕರ್ತರು, ಮನೆಯನ್ನು ಧ್ವಂಸ ಮಾಡಿ, ಕಾರು, ಪಿಠೋಪಕರಣಗಳನ್ನು ಹೊಡೆದಾಕಿದ್ದರು. ಅಸಭ್ಯ ಪದ ಬಳಸಿ ಹಿನ್ನೆಲೆ ಅಂಬಟಿ ರಾಂಬಾಬು ಅವರನ್ನು ಗುಂಟೂರು ಪೊಲೀಸರು ರಾತ್ರಿಯೇ ಬಂಧಿಸಿ ಕರೆದೊಯ್ದಿದ್ದಾರೆ.
ಏತನ್ಮಧ್ಯೆ, ತಮ್ಮ ಪಕ್ಷದ ನಾಯಕರು ಮತ್ತು ಅವರ ಮನೆಗಳ ಮೇಲೆ ನಡೆಯುತ್ತಿರುವ ದಾಳಿಯನ್ನು ಖಂಡಿಸಿರುವ ವೈಎಸ್ಸಿಪಿ ಮುಖ್ಯಸ್ಥ ಮತ್ತು ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ, ಟಿಡಿಪಿ ನೇತೃತ್ವದ ಮೈತ್ರಿ ಸರ್ಕಾರ ಆಂಧ್ರ ಪ್ರದೇಶವನ್ನು ಜಂಗಲ್ ರಾಜ್ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯದಲ್ಲಿ ಗಲಭೆಯಲ್ಲಿ ತಡೆಯಲು ಪೊಲೀಸ್ ಇಲಾಖೆ ವಿಫಲವಾಗಿದ್ದು, ಕೇಂದ್ರ ಗೃಹ ಇಲಾಖೆ ಮಧ್ಯಪ್ರವೇಶ ಮಾಡುವಂತೆ ಒತ್ತಾಯಿಸಿದ್ದಾರೆ.
ವೈಸಿಪಿ ನಾಯಕರಾದ ಅಂಬಟಿ ರಾಂಬಾಬು ಅವರ ಅಸಭ್ಯ ಮಾತು, ಅವರ ಮನೆ ಮೇಲಿನ ದಾಳಿ ಮತ್ತು ಇಂದು ನಡೆದ ಜೋಗಿ ರಮೇಶ್ ಮನೆ ಮೇಲಿನ ದಾಳಿಗೆ ಸಂಬಂಧಪಟ್ಟಂತೆ ಸಿಎಂ ಚಂದ್ರಬಾಬು ನಾಯ್ಡು ಮತ್ತು ಅವರ ಪುತ್ರ ಸಚಿವ ನಾರಾ ಲೋಕೇಶ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ (ಏಜೆನ್ಸೀಸ್).