ಸಿಎಂ ಚಂದ್ರಬಾಬು ನಾಯ್ಡು 
ದೇಶ

ಆಂಧ್ರದಲ್ಲಿ ರಾಜಕೀಯ ಉದ್ವಿಗ್ನತೆ; ಯಾರಿಗೂ ಕಾನೂನು ಉಲ್ಲಂಘಿಸಲು ಅವಕಾಶ ನೀಡಲ್ಲ: ಸಿಎಂ ಚಂದ್ರಬಾಬು ನಾಯ್ಡು | CM Chandrababu Naidu

ಅಮರಾವತಿ: ಆಂಧ್ರ ಪ್ರದೇಶದಲ್ಲಿ ಆಡಳಿತರೂಢ ತೆಲುಗುದೇಶಂ ಪಕ್ಷ ಮತ್ತು ವೈಎಸ್​ಆರ್ ಕಾಂಗ್ರೆಸ್ ನಡುವಿನ ವೈಷಮ್ಯ ರಾಜಕೀಯ ರಾಜ್ಯದಲ್ಲಿ ಉದ್ವಿಗ್ನತೆಯನ್ನುಂಟು ಮಾಡಿದ್ದು, ವೈಸಿಪಿ ಮಾಜಿ ಸಚಿವರಾದ ಅಂಬಟಿ ರಾಂಬಾಬು ಮತ್ತು ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಎಂ ಚಂದ್ರಬಾಬು ನಾಯ್ಡು ಪ್ರತಿಕ್ರಿಯಿಸಿದ್ದು, ಯಾರಿಗೂ ಕಾನೂನು ಉಲ್ಲಂಘಿಸಲು ಅವಕಾಶ ನೀಡಲ್ಲ ಎಂದು ಹೇಳಿದ್ದಾರೆ.
ರಾಜಕೀಯ ಉದ್ವಿಗ್ನತೆಯ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಹಾಕಿ, ವೈಎಸ್​ಆರ್ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿರುವ ಸಿಎಂ ನಾಯ್ಡು, ರಾಜಕೀಯವನ್ನು ಅಪರಾಧೀಕರಿಸುವುದು ವೈಸಿಪಿ ಪಕ್ಷದ ಸಂಸ್ಕೃತಿಯಾಗಿದೆ. ಕಾನೂನುಬಾಹಿರತೆ ಅದರ ಅಧಿಕಾರಾವಧಿಯ ವಿಶಿಷ್ಟ ಲಕ್ಷಣವಾಗಿತ್ತು. 2024ರಲ್ಲಿ ನಾವು ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಜಾರಿಗೊಳಿಸಿದ್ದೇವೆ ಎಂದು ಕಿಡಿಕಾರಿದ್ದಾರೆ.
ನಮ್ಮ ಸಂಸ್ಕೃತಿ ಸಬಲೀಕರಣ ಮತ್ತು ಜನರಿಗೆ ಸೇವೆ ಸಲ್ಲಿಸುವುದಾಗಿದೆ. ವಿರೋಧ ಪಕ್ಷದ ನಾಯಕರು ಹತಾಶೆಯಿಂದ ಅಸಭ್ಯ ಪದಗಳನ್ನು ಬಳಸುತ್ತಿದ್ದಾರೆ. ದಿನ ಕಳೆದಂತೆ ಜನರ ಮುಂದೆ ತಮ್ಮ ಪ್ರವೃತ್ತಿಯನ್ನು ತೋರಿಸುತ್ತಿದ್ದಾರೆ. ಅವರು ನಾಶಪಡಿಸಿದ್ದನ್ನು ನಾವು ಪುನಃ ನಿರ್ಮಿಸುತ್ತಿದ್ದೇವೆ. ಅದನ್ನು ನೋಡಿ ಅವರು ಹತಾಶೆಗೊಂಡಿದ್ದಾರೆ. ಆದಾಗ್ಯೂ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯಲ್ಲಿದೆ. ಕಾನೂನಿನ ನಿಯಮವನ್ನು ಉಲ್ಲಂಘಿಸಲು ನಾವು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಸಿಎಂ ಚಂದ್ರಬಾಬು ನಾಯ್ಡು ಪುತ್ರ ಮತ್ತು ಆಂಧ್ರ ಐಟಿ ಮತ್ತು ಶಿಕ್ಷಣ ಸಚಿವ ನಾರಾ ಲೋಕೇಶ್ ವಿರುದ್ಧ ಅನುಚಿತ ಹೇಳಿಕೆ ನೀಡಿದ ಆರೋಪದ ಮೇಲೆ ನಿನ್ನೆ ಕೃಷ್ಣ ಜಿಲ್ಲೆಯ ಇಬ್ರಾಹಿಂ ಪಟ್ಟಣದಲ್ಲಿರುವ ಮಾಜಿ ಸಚಿವ ಜೋಗಿ ರಮೇಶ್ ಮನೆಗೆ ಟಿಡಿಪಿ ಕಾರ್ಯಕರ್ತರು ದಾಳಿ ಮಾಡಿದ್ದು, ಮನೆ ಧ್ವಂಸ ಮಾಡಿ ಬೆಂಕಿ ಹಚ್ಚಿದ್ದರು.
ಅದೇ ರೀತಿ ಮೊನ್ನೆ ಸಿಎಂ ಚಂದ್ರಬಾಬು ನಾಯ್ಡು ವಿರುದ್ಧ ಅಸಭ್ಯಕರ ಪದ ಬಳಸಿದ ಹಿನ್ನೆಲೆ ಮಾಜಿ ಸಚಿವ ಅಂಬಟಿ ರಾಂಬಾಬು ಅವರ ಗುಂಟೂರು ಮನೆ ಮೇಲೆ ದಾಳಿ ಮಾಡಿದ್ದ ಟಿಡಿಪಿ ಕಾರ್ಯಕರ್ತರು, ಮನೆಯನ್ನು ಧ್ವಂಸ ಮಾಡಿದ್ದು, ಕಾರು, ಪಿಠೋಪಕರಣಗಳನ್ನು ಹೊಡೆದಾಕಿದ್ದರು. ಅಸಭ್ಯ ಪದ ಬಳಸಿ ಹಿನ್ನೆಲೆ ಅಂಬಟಿ ರಾಂಬಾಬು ಗುಂಟೂರು ಪೊಲೀಸರು ಬಂಧಿಸಿದ್ದಾರೆ.
ಏತನ್ಮಧ್ಯೆ, ತಮ್ಮ ಪಕ್ಷದ ನಾಯಕರು ಮತ್ತು ಅವರ ಮನೆಗಳ ಮೇಲೆ ನಡೆಯುತ್ತಿರುವ ದಾಳಿಯನ್ನು ಖಂಡಿಸಿರುವ ವೈಎಸ್​ಸಿಪಿ ಮುಖ್ಯಸ್ಥ ಮತ್ತು ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ, ಟಿಡಿಪಿ ನೇತೃತ್ವದ ಮೈತ್ರಿ ಸರ್ಕಾರ ಆಂಧ್ರ ಪ್ರದೇಶವನ್ನು ಜಂಗಲ್​ ರಾಜ್ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯದಲ್ಲಿ ಗಲಭೆಯಲ್ಲಿ ತಡೆಯಲು ಪೊಲೀಸ್ ಇಲಾಖೆ ವಿಫಲವಾಗಿದ್ದು, ಕೇಂದ್ರ ಗೃಹ ಇಲಾಖೆ ಮಧ್ಯಪ್ರವೇಶ ಮಾಡುವಂತೆ ಒತ್ತಾಯಿಸಿದ್ದಾರೆ (ಏಜೆನ್ಸೀಸ್).