ED VS DIDI 
ದೇಶ

ಇಡಿ VS ದೀದಿ... ಬಂಗಾಳದ ಬೀದಿಗಳಲ್ಲಿ ರಾಜಕೀಯ ಸಂಗ್ರಾಮ | ED VS DIDI

ED VS DIDI: ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ‘ಹೋರಾಟ’ ಮತ್ತು ‘ವಿವಾದ’ಗಳಿಗೇನೂ ಕೊರತೆ ಇಲ್ಲ. ಆದರೆ, ಇತ್ತೀಚೆಗೆ ಕೋಲ್ಕತ್ತಾದಲ್ಲಿ ನಡೆದ ಘಟನೆಗಳು ಇಡೀ ದೇಶದಲ್ಲಿ ಸಂಚಲನ ಮೂಡಿಸಿವೆ. ತೃಣಮೂಲ ಕಾಂಗ್ರೆಸ್​ನ (ಟಿಎಂಸಿ) ರಾಜಕೀಯ ತಂತ್ರಗಾರಿಕೆ ಸಂಸ್ಥೆಯಾದ ಐ-ಪ್ಯಾಕ್​ನ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ನಡೆಸಿದ ದಾಳಿ ಈಗ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ನೇರ ಸಂಘರ್ಷಕ್ಕೆ ನಾಂದಿ ಹಾಡಿದೆ.
ಇ.ಡಿ. ದಾಳಿ ನಡೆಯುತ್ತಿದ್ದ ಸ್ಥಳಕ್ಕೆ ಸ್ವತಃ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ ಧಾವಿಸಿ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ್ದಲ್ಲದೆ ಫೈಲ್​ಗಳನ್ನು ಕಸಿದುಕೊಂಡು ಹೋಗಿದ್ದು, ಇಡೀ ದೇಶದ ಗಮನ ಸೆಳೆದಿದೆ. ಮಮತಾ ಮತ್ತು ಕೇಂದ್ರ ತನಿಖಾ ಸಂಸ್ಥೆಗಳ ‘ಮುಖಾಮುಖಿ’ ಇದೇ ಮೊದಲಲ್ಲ. ಈ ಹಿಂದೆಯೂ ಇಂತಹ ಹಲವು ಪ್ರಕರಣಗಳು ನಡೆದಿವೆ. ಅವುಗಳ ಬಗ್ಗೆ ವಿವರ ಇಲ್ಲಿದೆ.
ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಗುರುವಾರ ಬೆಳಗ್ಗೆ ಏಳು ಗಂಟೆಗೆ ಇ.ಡಿ. ಅಧಿಕಾರಿಗಳು ಕೋಲ್ಕತ್ತಾದ ಐ-ಪ್ಯಾಕ್ ಕಚೇರಿ ಮೇಲೆ ದಾಳಿ ಆರಂಭಿಸಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಥಳಕ್ಕೆ ಧಾವಿಸಿದರು.
‘ತನಿಖೆಯ ಹೆಸರಿನಲ್ಲಿ ಟಿಎಂಸಿ ಪಕ್ಷದ ಚುನಾವಣಾ ಕಾರ್ಯತಂತ್ರ ಮತ್ತು ಅಭ್ಯರ್ಥಿಗಳ ಪಟ್ಟಿಯನ್ನು ಇ.ಡಿ. ಅಧಿಕಾರಿಗಳು ಕದಿಯುತ್ತಿದ್ದಾರೆ’ ಎಂದು ಗಂಭೀರ ಆರೋಪ ಮಾಡಿದರು. ಅಧಿಕಾರಿಗಳ ಕೈಯಲ್ಲಿದ್ದ ಕೆಲವು ದಾಖಲೆಗಳು ಮತ್ತು ಮೊಬೈಲ್ ಫೋನ್​ಗಳನ್ನು ಕಿತ್ತುಕೊಂಡರು ಎಂದೂ ವರದಿಯಾಗಿದೆ. ಮರುದಿನ ಶುಕ್ರವಾರ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಕೋಲ್ಕತ್ತಾದ ಜಾಧವಪುರದಿಂದ ಹಜ್ರಾ ಕ್ರಾಸಿಂಗ್​ವರೆಗೆ ಸುಮಾರು 10 ಕಿಲೋಮೀಟರ್ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಯಿತು. ಈ ಮೂಲಕ ಇ.ಡಿ. ವಿರುದ್ಧ ದೀದಿ ಮತ್ತೊಮ್ಮೆ ತೋಳೇರಿಸಿ ಜಗಳಕ್ಕಿಳಿದಿದ್ದಾರೆ.
ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿದ ಕೇಸ್: ಈ ಪ್ರಕರಣದಲ್ಲಿ ಅತ್ಯಂತ ರೋಚಕ ತಿರುವೆಂದರೆ, ತನಿಖೆಗೆ ಅಡ್ಡಿಪಡಿಸಿದ ಆರೋಪದ ನಡುವೆಯೇ ಪಶ್ಚಿಮ ಬಂಗಾಳ ಪೊಲೀಸರು ಇ.ಡಿ. ಅಧಿಕಾರಿಗಳ ವಿರುದ್ಧವೇ ಎರಡು ಪ್ರತ್ಯೇಕ ಎಫ್​ಐಆರ್ ದಾಖಲಿಸಿದ್ದಾರೆ. ಅತಿಕ್ರಮ ಪ್ರವೇಶ, ಲ್ಯಾಪ್​ಟಾಪ್​ಗಳು ಮತ್ತು ದಾಖಲೆಗಳ ಕಳವಿನ ಆರೋಪಗಳನ್ನು ಅಧಿಕಾರಿಗಳ ಮೇಲೆ ಹೊರಿಸಲಾಗಿದೆ.
ಇದಕ್ಕೆ ಪ್ರತಿಯಾಗಿ ಇ.ಡಿ. ಅಧಿಕಾರಿಗಳು ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ್ದು, ಕಿಕ್ಕಿರಿದ ಜನಸಂದಣಿ, ಗದ್ದಲ- ಗೊಂದಲದಿಂದಾಗಿ ಸರಿಯಾಗಿ ವಾದ ಆಲಿಸಲಾಗದೆ ನ್ಯಾಯಾಧೀಶರು ವಿಚಾರಣೆಯನ್ನು ಜ. 14ಕ್ಕೆ ಮುಂದೂಡಿದ್ದಾರೆ. ಇದೀಗ ಇ.ಡಿ.ಯವರು ಶನಿವಾರ ಸುಪ್ರೀಂ ಕೋರ್ಟಿನ ಮೊರೆ ಹೋಗಿದ್ದು, ತನಿಖೆಗೆ ಅಡ್ಡಿ ಮಾಡದಂತೆ ಮಮತಾ ಬ್ಯಾನರ್ಜಿಗೆ ಮತ್ತು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸೂಚಿಸಬೇಕೆಂದು ಕೋರಿದೆ.
ಇದರ ವಿಚಾರಣೆಗೆ ರಜಾಕಾಲೀನ ಪೀಠ ರಚನೆಯಾಗುವುದಕ್ಕೆ ಮೊದಲೇ ಪಶ್ಚಿಮ ಬಂಗಾಳ ಸರ್ಕಾರ ಕೇವಿಯಟ್ ಸಲ್ಲಿಸಿ, ‘ನಮ್ಮ ವಾದವನ್ನು ಆಲಿಸದೇ ಈ ವಿಷಯದಲ್ಲಿ ಯಾವುದೇ ಅವಸರದ ತೀರ್ಪು ನೀಡಬೇಡಿ’ ಎಂದು ಸುಪ್ರೀಂಕೋರ್ಟ್​ಗೆ ಮನವಿ ಮಾಡಿದೆ.

ಐ-ಪ್ಯಾಕ್ ಜತೆಗೇನು ಮಮತಾ ಲಿಂಕ್?

2019ರ ಲೋಕಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಹಿನ್ನಡೆ ಅನುಭವಿಸಿದ ನಂತರ, ಮಮತಾ ಬ್ಯಾನರ್ಜಿ ತಮ್ಮ ಪಕ್ಷದ ವರ್ಚಸ್ಸು ಹೆಚ್ಚಿಸಲು ಐ-ಪ್ಯಾಕ್ ಜತೆ ಒಪ್ಪಂದ ಮಾಡಿಕೊಂಡರು. 2021ರ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಮಮತಾ ಅವರ ಭರ್ಜರಿ ಜಯಕ್ಕೆ ಈ ಸಂಸ್ಥೆಯ ‘ದೀದಿ ಕೆ ಬೊಲೊ’ (ದೀದಿಗೆ ಹೇಳಿ) ಮತ್ತು ‘ಬಾಂಗ್ಲಾ ನಿಜೇರ್ ಮೇಯೆ ಕೆ ಚಾಯ್’ (ಬಂಗಾಳ ತನ್ನ ಮಗಳನ್ನೇ ಬಯಸುತ್ತದೆ) ಎಂಬ ಅಭಿಯಾನಗಳು ಪ್ರಮುಖ ಕಾರಣವಾಗಿದ್ದವು. ಪ್ರಸ್ತುತ, ಐ-ಪ್ಯಾಕ್ ಕೇವಲ ಸಲಹಾ ಸಂಸ್ಥೆಯಾಗಿ ಉಳಿಯದೆ, ಟಿಎಂಸಿಯ ಆಂತರಿಕ ನಿರ್ಧಾರಗಳು, ಅಭ್ಯರ್ಥಿಗಳ ಆಯ್ಕೆ, ಸರ್ಕಾರದ ತೀರ್ವನಗಳಲ್ಲೂ ಪ್ರಭಾವ ಬೀರುವ ಮಟ್ಟಕ್ಕೆ ಬೆಳೆದಿದೆ. ಈ ಸಂಸ್ಥೆಯ ಮೂಲಕ ಕಲ್ಲಿದ್ದಲು ಹಗರಣದ ಹಣ ವರ್ಗಾವಣೆಯಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇತ್ತೀಚೆಗೆ ಇ.ಡಿ. ದಾಳಿ ನಡೆಸಿದೆ.

ಬಿಜೆಪಿ ವಾದವೇನು?

ಜಗತ್ತಿನ ಯಾವುದೇ ಪ್ರಜಾಪ್ರಭುತ್ವ ದೇಶದಲ್ಲಿ ಒಬ್ಬ ಮುಖ್ಯಮಂತ್ರಿ ತನಿಖಾ ಸ್ಥಳಕ್ಕೆ ಹೋಗಿ ಫೈಲ್​ಗಳನ್ನು ಕಿತ್ತುಕೊಂಡ ಉದಾಹರಣೆ ಇಲ್ಲ. ಮಮತಾ ಬ್ಯಾನರ್ಜಿ ಅವರಿಗೆ ಏನನ್ನೋ ಮುಚ್ಚಿಡುವ ಉದ್ದೇಶವಿದೆ. ಹಾಗಾಗಿ ಅವರು ಈ ರೀತಿ ಅಸಾಂವಿಧಾನಿಕವಾಗಿ ವರ್ತಿಸುತ್ತಿದ್ದಾರೆ’ ಎಂಬುದು ಬಿಜೆಪಿ ನಾಯಕರಾದ ರವಿಶಂಕರ್ ಪ್ರಸಾದ್ ಮತ್ತು ಸುವೇಂದು ಅಧಿಕಾರಿ ಅವರ ಅಭಿಪ್ರಾಯ.

ಅಸೆಂಬ್ಲಿ ಚುನಾವಣೆ ಮೇಲೆ ಪರಿಣಾಮ?

2026ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಇನ್ನು ಕೆಲವು ತಿಂಗಳುಗಳಷ್ಟೇ ಬಾಕಿ ಇವೆ. ಇಂತಹ ಸಮಯದಲ್ಲಿ ಇ.ಡಿ. ದಾಳಿ ನಡೆಸಿರುವುದು ಮತ್ತು ಅದಕ್ಕೆ ಮಮತಾ ಬ್ಯಾನರ್ಜಿ ನೀಡಿರುವ ತೀಕ್ಷ್ಣ ಪ್ರತಿಕ್ರಿಯೆ ಬಂಗಾಳದಲ್ಲಿ ಚುನಾವಣಾ ಕಾವು ಈಗಾಗಲೇ ಏರಿರುವುದಕ್ಕೆ ಸಾಕ್ಷಿಯಾಗಿದೆ. ಇದು ಭ್ರಷ್ಟಾಚಾರದ ವಿರುದ್ಧದ ತನಿಖೆ ಎಂದು ಬಿಜೆಪಿ ವಾದಿಸುತ್ತಿದ್ದರೆ, ರಾಜಕೀಯ ಪ್ರೇರಿತ ಕ್ರಮ ಎಂದು ಟಿಎಂಸಿ ಆರೋಪಿಸುತ್ತಿದೆ. ಇದಕ್ಕೆ ಉತ್ತರವನ್ನು ಮುಂಬರುವ ಚುನಾವಣೆಯಲ್ಲಿ ಜನ ನೀಡಲಿದ್ದಾರೆ.

ಏನಿದು ಐ-ಪ್ಯಾಕ್

ಐ-ಪ್ಯಾಕ್ (ಇಂಡಿಯನ್ ಪೊಲಿಟಿಕಲ್ ಆಕ್ಷನ್ ಕಮಿಟಿ) ಎಂಬುದು ದೇಶದ ರಾಜಕೀಯ ಕಾರ್ಯತಂತ್ರ ರೂಪಿಸುವ ಪ್ರಮುಖ ಸಂಸ್ಥೆ. ಇದನ್ನು 2015ರಲ್ಲಿ ಪ್ರಶಾಂತ್ ಕಿಶೋರ್ ಮತ್ತು ಅವರ ತಂಡ ಸ್ಥಾಪಿಸಿತು. ಈ ಸಂಸ್ಥೆ ರಾಜಕೀಯ ಪಕ್ಷಗಳಿಗೆ ಚುನಾವಣೆಗಳನ್ನು ಗೆಲ್ಲಲು ಡೇಟಾ ವಿಶ್ಲೇಷಣೆ, ಸಾಮಾಜಿಕ ಮಾಧ್ಯಮ ನಿರ್ವಹಣೆ ಮತ್ತು ಜನರ ನಾಡಿಮಿಡಿತ ಅರಿಯುವ ತಂತ್ರಗಳನ್ನು ರೂಪಿಸಿಕೊಡುತ್ತದೆ.

ಯಾರು ಈ ಪ್ರತೀಕ್ ಜೈನ್?

ಐ-ಪ್ಯಾಕ್ ಸಂಸ್ಥೆಯ ಪ್ರಮುಖ ನಿರ್ದೇಶಕರಲ್ಲಿ ಒಬ್ಬರು ಮತ್ತು ಪ್ರಸ್ತುತ ಅದರ ದೈನಂದಿನ ಚಟುವಟಿಕೆಗಳನ್ನು ಮುನ್ನಡೆಸುತ್ತಿರುವ ವ್ಯಕ್ತಿ ಪ್ರತೀಕ್ ಜೈನ್. ಐ-ಪ್ಯಾಕ್​ನಿಂದ ಪ್ರಶಾಂತ್ ಕಿಶೋರ್ ಅಧಿಕೃತವಾಗಿ ಹೊರಬಂದ ನಂತರ, ಸಂಸ್ಥೆಯ ಜವಾಬ್ದಾರಿ ಹೊತ್ತ ಉನ್ನತ ಮಟ್ಟದ ಕಾರ್ಯಕಾರಿ ತಂಡದಲ್ಲಿ ಪ್ರತೀಕ್ ಜೈನ್ ಪ್ರಮುಖರು. ಐಐಟಿ ಪದವೀಧರರಾಗಿದ್ದು, ರಾಜಕೀಯ ತಂತ್ರಗಾರಿಕೆಯಲ್ಲಿ ದಶಕಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಪಶ್ಚಿಮ ಬಂಗಾಳ ಮಾತ್ರವಲ್ಲದೆ, ಆಂಧ್ರಪ್ರದೇಶದ ವೈಎಸ್​ಆರ್ ಕಾಂಗ್ರೆಸ್ ಮತ್ತು ತಮಿಳುನಾಡಿನ ಡಿಎಂಕೆಯಂತಹ ದೊಡ್ಡ ಪಕ್ಷಗಳ ಚುನಾವಣಾ ಪ್ರಚಾರದ ಉಸ್ತುವಾರಿ ವಹಿಸಿದ್ದರು. ಡೇಟಾ ವಿಜ್ಞಾನದಲ್ಲಿ, ಮತದಾರರ ಮನಸ್ಥಿತಿ ವಿಶ್ಲೇಷಿಸುವಲ್ಲಿ ನಿಷ್ಣಾತ ಎಂದು ಗುರುತಿಸಿಕೊಂಡಿದ್ದಾರೆ.

ಘರ್ಷಣೆ ಇದೇ ಮೊದಲಲ್ಲ!

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಇ.ಡಿ., ಸಿಬಿಐನಂತಹ ಕೇಂದ್ರ ತನಿಖಾ ಸಂಸ್ಥೆಗಳ ನಡುವಿನ ಸಂಘರ್ಷ ಇದೇ ಮೊದಲಲ್ಲ. ಹಿಂದೆ ನಡೆದ ಕೆಲವು ಸಂಘರ್ಷಗಳ ವಿವರ ಇಲ್ಲಿದೆ.

ರಾಜೀವ್​ಕುಮಾರ್- ಸಿಬಿಐ ಹೈಡ್ರಾಮಾ

ಬಹುಕೋಟಿ ಮೊತ್ತದ ಶಾರದಾ ಮತ್ತು ರೋಸ್ ವ್ಯಾಲಿ ಚಿಟ್​ಫಂಡ್ ಹಗರಣದ ತನಿಖೆಗಾಗಿ ಕೋಲ್ಕತ್ತಾದ ಅಂದಿನ ಪೊಲೀಸ್ ಕಮಿಷನರ್ ರಾಜೀವ್​ಕುಮಾರ್ ಅವರ ನಿವಾಸಕ್ಕೆ ಸಿಬಿಐ ಅಧಿಕಾರಿಗಳು ತೆರಳಿದ್ದರು. ಅಚ್ಚರಿಯ ಬೆಳವಣಿಗೆಯಲ್ಲಿ, ಸಿಬಿಐ ಅಧಿಕಾರಿಗಳನ್ನೇ ಕೋಲ್ಕತ್ತಾ ಪೊಲೀಸರು ವಶಕ್ಕೆ ಪಡೆದರು. ಇದು ದೇಶದ ಇತಿಹಾಸದಲ್ಲೇ ಅತ್ಯಂತ ಅಪರೂಪದ ‘ಪೊಲೀಸ್ ವರ್ಸಸ್ ಸಿಬಿಐ’ ಸಂಘರ್ಷಕ್ಕೆ ನಾಂದಿ ಹಾಡಿತು. ‘ಸಿಬಿಐನ ಕ್ರಮ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ದಾಳಿ’ ಎಂದು ಆರೋಪಿಸಿದ ಮಮತಾ ಬ್ಯಾನರ್ಜಿ, ಕೋಲ್ಕತ್ತಾದಲ್ಲಿ ‘ಸಂವಿಧಾನ ಉಳಿಸಿ’ ಎಂಬ ಹೆಸರಿನಲ್ಲಿ ಮೂರು ದಿನ ಧರಣಿ ನಡೆಸಿದ್ದರು.

ನಾರದ ಸ್ಟಿಂಗ್ ಆಪರೇಷನ್

ಮ್ಯಾಥ್ಯೂ ಸ್ಯಾಮುವೆಲ್ ಎಂಬ ಪತ್ರಕರ್ತ 2014ರಲ್ಲಿ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ (ಸ್ಟಿಂಗ್ ಆಪರೇಷನ್), ಟಿಎಂಸಿ ನಾಯಕರು ಕಂಪನಿಯೊಂದಕ್ಕೆ ಸಹಾಯ ಮಾಡಲು ಹಣ ಪಡೆಯುತ್ತಿರುವ ದೃಶ್ಯ ಸೆರೆಯಾಗಿತ್ತು. 2021ರ ಮೇ ತಿಂಗಳಲ್ಲಿ ಸಚಿವರಾದ ಫಿರ್ಹಾದ್ ಹಕೀಮ್ ಸುಬ್ರತಾ ಮುಖರ್ಜಿ ಮತ್ತು ಮದನ್ ಮಿತ್ರಾ ಅವರನ್ನು ಸಿಬಿಐ ಬಂಧಿಸಿತು. ಬಂಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಮಮತಾ ಬ್ಯಾನರ್ಜಿ ಸಿಬಿಐ ಕಚೇರಿಗೆ ಧಾವಿಸಿ, ನನ್ನನ್ನೂ ಬಂಧಿಸಿ ಎಂದು ಸವಾಲು ಹಾಕಿದರು. ಟಿಎಂಸಿ ಕಾರ್ಯಕರ್ತರು ಸಿಬಿಐ ಕಚೇರಿ ಮೇಲೆ ಕಲ್ಲು ತೂರಾಟ ಕೂಡ ನಡೆಸಿದರು.

ಸುವೇಂದು ‘ವಾಷಿಂಗ್ ಮಷಿನ್’

ನಾರದ ಮತ್ತು ಶಾರದಾ ಹಗರಣಗಳಲ್ಲಿ ಆರೋಪಿಯಾಗಿದ್ದ ಸುವೇಂದು ಅಧಿಕಾರಿ 2020ರಲ್ಲಿ ಬಿಜೆಪಿ ಸೇರಿದರು. ಸುವೇಂದು ಅಧಿಕಾರಿ ಅವರನ್ನು ವಾಷಿಂಗ್ ಮಷಿನ್ ರಾಜಕಾರಣದ ಸಂಕೇತ ಎಂದು ಮಮತಾ ಬ್ಯಾನರ್ಜಿ ಟೀಕಿಸಿದ್ದರು. ಅಂದರೆ, ಭ್ರಷ್ಟ ನಾಯಕರು ಬಿಜೆಪಿ ಸೇರಿದ ಕೂಡಲೇ ಅವರ ಮೇಲಿನ ಸಿಬಿಐ/ಇ.ಡಿ. ತನಿಖೆಗಳು ನಿಂತುಹೋಗುತ್ತವೆ ಇಲ್ಲವೆ ಮಂದಗತಿಯಲ್ಲಿ ಸಾಗುತ್ತವೆ ಎಂಬುದು ದೀದಿಯ ಪ್ರಮುಖ ಆರೋಪ.

ಸೋದರಳಿಯನ ಕಲ್ಲಿದ್ದಲು ಹಗರಣ

ಪಶ್ಚಿಮ ಬಂಗಾಳದ ಈಸ್ಟರ್ನ್ ಕೋಲ್ ಫೀಲ್ಡ್ಸ್ ಗಣಿಗಳಿಂದ ಅಕ್ರಮವಾಗಿ ಕಲ್ಲಿದ್ದಲು ಸಾಗಾಟ ಮಾಡಿದ ಹಗರಣಕ್ಕೆ ಸಂಬಂಧಿಸಿದಂತೆ ಮಮತಾ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಮತ್ತು ಅವರ ಪತ್ನಿ ರುಜಿರಾ ಬ್ಯಾನರ್ಜಿ ಅವರನ್ನು ಇ.ಡಿ. ಪದೇಪದೆ ವಿಚಾರಣೆಗೆ ಒಳಪಡಿಸುತ್ತಿದೆ. ದೆಹಲಿಗೆ ವಿಚಾರಣೆಗೆ ಕರೆಯುವುದನ್ನು ವಿರೋಧಿಸಿ ಅಭಿಷೇಕ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ತನ್ನ ಕುಟುಂಬವನ್ನು ರಾಜಕೀಯವಾಗಿ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರುತ್ತಲೇ ಬಂದಿದ್ದಾರೆ.

ಶಿಕ್ಷಕರ ನೇಮಕಾತಿ ಹಗರಣ

2022ರಲ್ಲಿ ಅಂದಿನ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಅವರ ಆಪ್ತೆ ಅರ್ಪಿತಾ ಮುಖರ್ಜಿ ಮನೆಯಲ್ಲಿ ಇ.ಡಿ. ಅಧಿಕಾರಿಗಳು ಸುಮಾರು 50 ಕೋಟಿ ರೂ. ನಗದು ಮತ್ತು ಅಪಾರ ಪ್ರಮಾಣದ ಚಿನ್ನವನ್ನು ವಶಪಡಿಸಿಕೊಂಡಿದ್ದರು. ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ನಡೆದ ಈ ದಾಳಿ ಮಮತಾ ಸರ್ಕಾರಕ್ಕೆ ದೊಡ್ಡ ಮುಜುಗರ ತಂದಿತ್ತು. ‘ತನಿಖಾ ಸಂಸ್ಥೆಗಳು ಕೇವಲ ಟಿಎಂಸಿ ನಾಯಕರನ್ನೇ ಗುರಿಯಾಗಿಸುತ್ತಿವೆ’ ಎಂದು ಮಮತಾ ಆಕ್ಷೇಪ ವ್ಯಕ್ತಪಡಿಸಿದ್ದರು. ಪಾರ್ಥ ಚಟರ್ಜಿ ಅವರನ್ನು ತಾವೇ ಸ್ವತಃ ಸಂಪುಟದಿಂದ ತೆಗೆದುಹಾಕಿದರೂ, ಇ.ಡಿ. ಕಾರ್ಯವೈಖರಿಯನ್ನು ಮಮತಾ ವಿರೋಧಿಸುತ್ತಲೇ ಇದ್ದಾರೆ.

ಇ.ಡಿ. ಸಿಬ್ಬಂದಿ ಮೇಲೆ ಹಲ್ಲೆ

ಪಡಿತರ ಹಗರಣಕ್ಕೆ ಸಂಬಂಧಿಸಿದಂತೆ 2024ರ ಜನವರಿಯಲ್ಲಿ ಟಿಎಂಸಿ ನಾಯಕ ಶೇಖ್ ಷಹಜಹಾನ್ ನಿವಾಸದ ಮೇಲೆ ದಾಳಿ ಮಾಡಲು ಹೋದ ಇ.ಡಿ. ಅಧಿಕಾರಿಗಳ ಮೇಲೆ ನೂರಾರು ಗ್ರಾಮಸ್ಥರು ಹಲ್ಲೆ ನಡೆಸಿದರು. ಅಧಿಕಾರಿಗಳು ತಲೆಗೆ ಪೆಟ್ಟು ಬಿದ್ದು ಆಸ್ಪತ್ರೆಗೆ ದಾಖಲಾಗಬೇಕಾಯಿತು. ಈ ಘಟನೆ ಕೇಂದ್ರ ಮತ್ತು ರಾಜ್ಯದ ನಡುವೆ ದೊಡ್ಡ ಮಟ್ಟದ ಕಾನೂನು ಸಮರಕ್ಕೆ ಕಾರಣವಾಯಿತು. ಕೊನೆಗೆ ಹೈಕೋರ್ಟ್ ಆದೇಶದಂತೆ ಸಿಬಿಐ ತನಿಖೆ ಕೈಗೆತ್ತಿಕೊಂಡು ಷಹಜಹಾನ್​ನನ್ನು ಬಂಧಿಸಿತು.