ಮೋದಿ ಸರ್ಕಾರ 360 ಸಂಸದರನ್ನು ಒಟ್ಟುಗೂಡಿಸಿದೆಯೇ?
ಕಳೆದ ಬಾರಿ 54 ಸಂಸದರ ಕೊರತೆಯಾಗಿತ್ತು
ಸಂಸತ್ತಿನ ಚಳಿಗಾಲದ ಅಧಿವೇಶನವು ಡಿಸೆಂಬರ್ ಮೊದಲ ವಾರದಲ್ಲಿ ಆರಂಭವಾಗುವ ಸಾಧ್ಯತೆಯಿದೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ವಿಚಾರವಾಗಿ ರಾಜಕೀಯ ಸಂಘರ್ಷ ತೀವ್ರಗೊಂಡಿರುವ ನಡುವೆಯೇ, ಕ್ಷೇತ್ರ ಪುನರ್ವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಮಸೂದೆಗಳನ್ನು ಈ ಅಧಿವೇಶನದಲ್ಲಿ ಅಂಗೀಕರಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿಕೊಳ್ಳುತ್ತಿದೆ. ಆದರೆ, ಈಗ ನಿಜವಾಗಿಯೂ ಸರ್ಕಾರ ಮೂರನೇ ಎರಡರಷ್ಟು ಸಂಸದರನ್ನು ಒಟ್ಟುಗೂಡಿಸಿದೆಯೇ? ಎನ್ಡಿಎ ಬಳಿ ಬಹುಮತಕ್ಕೆ ಬೇಕಾದ ಸಂಖ್ಯಾಬಲವಿಲ್ಲ, ಹಾಗಿರುವಾಗ ಮುಂದಿನ ದಾರಿ ಏನು? ಈ ಕುರಿತಾದ ವಿಶ್ಲೇಷಣೆ ಇಲ್ಲಿದೆ.
ಮುಂಬರುವ (2029) ಸಾರ್ವತ್ರಿಕ ಚುನಾವಣೆಗೂ ಮುನ್ನ ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡ 33ರಷ್ಟು ಮೀಸಲಾತಿ ಜಾರಿಗೊಳಿಸಲು ದಾರಿ ಮಾಡಿಕೊಡುವ ನಿಟ್ಟಿನಲ್ಲಿ, ಕ್ಷೇತ್ರ ಪುನರ್ವಿಂಗಡಣೆಯ ಮೂಲಕ ಲೋಕಸಭೆಯ ಬಲವನ್ನು ಪ್ರಸ್ತುತ ಇರುವ 543 ಸ್ಥಾನಗಳಿಂದ ಗರಿಷ್ಠ 850ಕ್ಕೆ ಹೆಚ್ಚಿಸಲು ಉದ್ದೇಶಿಸಿರುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲು ಸರ್ಕಾರ ಉತ್ಸುಕವಾಗಿದೆ. ಡಿಸೆಂಬರ್ ಮೊದಲ ವಾರದಲ್ಲಿ ಅಧಿವೇಶನ ನಡೆಸುವ ಸಾಧ್ಯತೆಗಳಿದ್ದು, ಸರ್ಕಾರದ ಉನ್ನತ ಮಟ್ಟದಲ್ಲಿ ಸಂಭಾವ್ಯ ದಿನಾಂಕಗಳ ಕುರಿತು ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ಈ ಮಹತ್ವದ ಮಸೂದೆಗೆ ಅಗತ್ಯವಿರುವ ಸಂಖ್ಯಾಬಲವನ್ನು ಕ್ರೋಢಿಕರಿಸುವುದು ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ಪ್ರಸ್ತುತ 543 ಸದಸ್ಯ ಬಲದ ಲೋಕಸಭೆಯಲ್ಲಿ ಈ ಮಸೂದೆ ಅಂಗೀಕಾರವಾಗಲು ಮೂರನೇ ಎರಡರಷ್ಟು ಬಹುಮತ, ಅಂದರೆ 361 ಮತಗಳ ಅಗತ್ಯವಿದೆ. ಮೂರು ಸ್ಥಾನಗಳು ಖಾಲಿ ಇರುವುದರಿಂದ ಸದ್ಯ ಸದನದಲ್ಲಿ 540 ಸದಸ್ಯರಿದ್ದಾರೆ. ಆಡಳಿತಾರೂಢ ಎನ್ಡಿಎ 320 ಸದಸ್ಯರನ್ನು ಹೊಂದಿದ್ದು, ಬಹುಮತದ ಗಡಿ ದಾಟಲು ವಿರೋಧ ಪಕ್ಷಗಳ ಬೆಂಬಲ ಪಡೆಯಬೇಕಾಗುತ್ತದೆ.
ಮತ್ತೊಂದೆಡೆ, ಮುಂಗಾರು ಅಧಿವೇಶನವನ್ನು ಔಪಚಾರಿಕವಾಗಿ ಮುಕ್ತಾಯಗೊಳಿಸದೆ ಜೀವಂತವಾಗಿರಿಸಿರುವ ಸರ್ಕಾರದ ನಿರ್ಧಾರವು ಮುಂದಿನ ಅಧಿವೇಶನದ ಸಮಯ ಮತ್ತು ಕಾರ್ಯಕಲಾಪಗಳ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸಿದೆ. ಆಗಸ್ಟ್ 13ರಂದು ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದ್ದ ಮುಂಗಾರು ಅಧಿವೇಶನವು 95 ದಿನಗಳಾದರೂ ಔಪಚಾರಿಕವಾಗಿ ಮುಕ್ತಾಯಗೊಂಡಿಲ್ಲ. ಇದು 2008ರಲ್ಲಿ ನಿರ್ಮಾಣವಾಗಿದ್ದ 87 ದಿನಗಳ ಹಿಂದಿನ ದಾಖಲೆಯನ್ನು ಮೀರಿಸಿದೆ. ಅಲ್ಪಾವಧಿಯ ನೋಟಿಸ್ನಲ್ಲಿ ವಿಸ್ತೃತ ಅಥವಾ ವಿಶೇಷ ಅಧಿವೇಶನ ಕರೆದು ಉದ್ದೇಶಿತ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಕೈಗೆತ್ತಿಕೊಳ್ಳುವ ಆಯ್ಕೆಯನ್ನು ಈ ವ್ಯವಸ್ಥೆಯು ಮುಕ್ತವಾಗಿರಿಸಿತ್ತು. ಪ್ರಸ್ತುತ ಇರುವ ಅಧಿವೇಶನದ ವಿಸ್ತೃತ ಕಲಾಪಕ್ಕೆ ಕನಿಷ್ಠ ಎರಡು ದಿನಗಳ ನೋಟಿಸ್ ಅಗತ್ಯವಿದ್ದರೆ, ಹೊಸ ಅಧಿವೇಶನ ಕರೆಯಲು ಕನಿಷ್ಠ 14 ದಿನಗಳ ನೋಟಿಸ್ ನೀಡಬೇಕಾಗುತ್ತದೆ. ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟ ನಂತರ ಸದನವನ್ನು ಔಪಚಾರಿಕವಾಗಿ ಮುಕ್ತಾಯಗೊಳಿಸಲು ಸಂವಿಧಾನವು ಯಾವುದೇ ನಿರ್ದಿಷ್ಟ ಕಾಲಮಿತಿಯನ್ನು ನಿಗದಿಪಡಿಸಿಲ್ಲ. ಕ್ಷೇತ್ರ ಪುನರ್ವಿಂಗಡಣೆಯ ಪರಿಣಾಮಗಳ ಬಗ್ಗೆ ವಿಶೇಷವಾಗಿ ದಕ್ಷಿಣದ ರಾಜ್ಯಗಳಲ್ಲಿರುವ ಆತಂಕಗಳನ್ನು ನಿವಾರಿಸಲು, ಎಲ್ಲ ರಾಜ್ಯಗಳಲ್ಲಿ ಲೋಕಸಭಾ ಸ್ಥಾನಗಳನ್ನು ಶೇಕಡ 50ರಷ್ಟು ಹೆಚ್ಚಿಸುವ ಸೂತ್ರವನ್ನು ಸರ್ಕಾರ ಪರಿಶೀಲಿಸುತ್ತಿದೆ ಎಂದು ತಿಳಿದುಬಂದಿದೆ.
2026ರ ಏಪ್ರಿಲ್ನಲ್ಲಿ ನಡೆದಿದ್ದ ಸಂಸತ್ ಅಧಿವೇಶನದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರಕ್ಕೆ ಅಗತ್ಯವಾದ ಬಹುಮತವನ್ನು ಒಟ್ಟುಗೂಡಿಸಲು ಸಾಧ್ಯವಾಗಿರಲಿಲ್ಲ ಮತ್ತು ಮಸೂದೆಯು 54 ಮತಗಳ ಅಂತರದಿಂದ ಬಿದ್ದುಹೋಗಿತ್ತು. ಹೀಗಾಗಿ, ಚಳಿಗಾಲದ ಅಧಿವೇಶನದಲ್ಲಿ ಇದರ ಭವಿಷ್ಯವು ಸರ್ಕಾರಕ್ಕೆ ಪ್ರಮುಖ ರಾಜಕೀಯ ಪರೀಕ್ಷೆಯಾಗಲಿದೆ. ಏಪ್ರಿಲ್ನಲ್ಲಿ ನಡೆದ ಮತದಾನದ ವೇಳೆ ಲೋಕಸಭೆಯಲ್ಲಿ 528 ಸಂಸದರು ಹಾಜರಿದ್ದರು. ಇದರ ಮೂರನೇ ಎರಡರಷ್ಟು ಬಹುಮತದ ಪ್ರಕಾರ, ಮಸೂದೆಯನ್ನು ಅಂಗೀಕರಿಸಲು 352 ಮತಗಳ ಅಗತ್ಯವಿತ್ತು. ಮತದಾನ ನಡೆದಾಗ ಮಸೂದೆಯ ಪರವಾಗಿ 298 ಮತಗಳು ಮತ್ತು ವಿರುದ್ಧವಾಗಿ 230 ಮತಗಳು ಚಲಾವಣೆಯಾದವು. ಇದರಿಂದಾಗಿ ಸಂವಿಧಾನ (131ನೇ ತಿದ್ದುಪಡಿ) ಮಸೂದೆಯು 54 ಮತಗಳ ಅಂತರದಿಂದ ಬಿದ್ದುಹೋಯಿತು. ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ ನೀಡುವ ಹಾಗೂ ಲೋಕಸಭಾ ಸ್ಥಾನಗಳನ್ನು ಹೆಚ್ಚಿಸುವುದಕ್ಕೆ ಸಂಬಂಧಿಸಿದ ನಿಬಂಧನೆಗಳು ಇದರಲ್ಲಿ ಒಳಗೊಂಡಿದ್ದವು.
ಪ್ರಜಾಪ್ರಭುತ್ವದಲ್ಲಿ "ಒಬ್ಬ ವ್ಯಕ್ತಿ, ಒಂದು ಮತ' ಎಂಬುದು ಮೂಲತತ್ವ. "ಪ್ರತಿ ಮತಕ್ಕೂ ಸಮಾನ ಮೌಲ್ಯವಿರಬೇಕು' ಎಂಬುದು ಕೂಡ ಅದರ ಇನ್ನೊಂದು ಆಶಯ. ಆದರೆ ವಲಸೆ ಮತ್ತಿತರ ಕಾರಣಗಳಿಂದಾಗಿ ಪ್ರತಿಯೊಂದು ಪ್ರದೇಶದ ಜನಸಂಖ್ಯೆಯೂ ಕಾಲಕಾಲಕ್ಕೆ ಬದಲಾಗುತ್ತ ಹೋಗುತ್ತದೆ. ಜನನ ದರದಲ್ಲಿನ ವ್ಯತ್ಯಾಸದಿಂದಾಗಿ ಮತದಾರರ ಸಂಖ್ಯೆಯೂ ಏರುಪೇರಾಗುತ್ತದೆ. ಇದನ್ನು ಸರಿಪಡಿಸಲು, ಅಂದರೆ ಪ್ರತಿಯೊಬ್ಬ ಜನಪ್ರತಿನಿಧಿಯು (ಸಂಸದ ಅಥವಾ ಶಾಸಕ) ಸರಿಸುಮಾರು ಸಮಾನ ಸಂಖ್ಯೆಯ ಜನರನ್ನು ಪ್ರತಿನಿಧಿಸುವಂತೆ ಕ್ಷೇತ್ರಗಳ ಗಡಿಗಳನ್ನು ಮರುಹೊಂದಿಸುವ ಪ್ರಕ್ರಿಯೆಯೇ ಕ್ಷೇತ್ರ ಪುನರ್ವಿಂಗಡಣೆ ಅಥವಾ ಡಿಲಿಮಿಟೇಶನ್. ಭಾರತದ ಸಂವಿಧಾನದ 82ನೇ ವಿಧಿಯ ಅಡಿಯಲ್ಲಿ ಪ್ರತಿ ಸಲದ ಜನಗಣತಿಯ ನಂತರವೂ ಸಂಸತ್ತು ಕ್ಷೇತ್ರಗಳ ಪುನರ್ವಿಂಗಡಣಾ ವಿಧೇಯಕವನ್ನು ಮಂಡಿಸಿ ಅಂಗೀಕರಿಸಬೇಕು. ಅದರ ಅನುಷ್ಠಾನಕ್ಕಾಗಿ ರಾಷ್ಟ್ರಪತಿಗಳು ಒಂದು ಸ್ವತಂತ್ರ ಆಯೋಗವನ್ನು ರಚಿಸುತ್ತಾರೆ.
ಏಪ್ರಿಲ್ಗೆ ಹೋಲಿಸಿದರೆ ಉಭಯ ಸದನಗಳಲ್ಲಿ (ಲೋಕಸಭೆ ಮತ್ತು ರಾಜ್ಯಸಭೆ) ಸರ್ಕಾರಕ್ಕೆ ಬೆಂಬಲ ಹೆಚ್ಚಾಗಿದೆ, ಆದರೆ ಮೂರನೇ ಎರಡರಷ್ಟು ಬಹುಮತಕ್ಕಿಂತ ಇನ್ನೂ ಹಿಂದೆಯೇ ಇದೆ. ಲೋಕಸಭೆಯಲ್ಲಿ ಎನ್ಡಿಎ ಜೊತೆ 319 ಸಂಸದರು ಇದ್ದಾರೆ.
2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 240 ಸ್ಥಾನಗಳನ್ನು ಗೆದ್ದಿತ್ತು. ಎನ್ಡಿಎ ಮೈತ್ರಿಕೂಟದಲ್ಲಿ ಚಂದ್ರಬಾಬು ನಾಯ್ಡು ಅವರ ಟಿಡಿಪಿಯ 16, ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷದ 12, ಶಿವಸೇನೆ (ಶಿಂಧೆ ಬಣ) 7, ಎಲ್ಜೆಪಿ (ರಾಮ್ ವಿಲಾಸ್ ಬಣ) 5 ಮತ್ತು ಇತರ ಪಕ್ಷಗಳ 13 ಸಂಸದರು ಸೇರಿ ಒಟ್ಟು ಸಂಖ್ಯಾಬಲ 292 ಆಗಿತ್ತು.
2026ರ ಜೂನ್ 14ರಂದು ಟಿಎಂಸಿ ನಾಯಕಿ ಕಾಕೋಲಿ ಘೋಷ್ ದಸ್ತಿದಾರ್ ಸೇರಿದಂತೆ 20 ಲೋಕಸಭಾ ಸಂಸದರು ಎನ್ಡಿಎ ಬೆಂಬಲಿತ ನ್ಯಾಷನಲಿಸ್ಟ್ ಸಿಟಿಜನ್ ಪಾರ್ಟಿಗೆ ಸೇರ್ಪಡೆಯಾದರು. ಇದರಿಂದ ಎನ್ಡಿಎ ಸಂಖ್ಯಾಬಲ 292ರಿಂದ 312ಕ್ಕೆ ಏರಿಕೆಯಾಯಿತು.
2026ರ ಜೂನ್ನಲ್ಲೇ ಶಿವಸೇನೆಯ ಉದ್ಧವ್ ಬಣದ 9 ಸಂಸದರ ಪೈಕಿ 6 ಮಂದಿ ಎನ್ಡಿಎ ಮಿತ್ರಪಕ್ಷವಾದ ಶಿವಸೇನೆಗೆ (ಶಿಂಧೆ ಬಣ) ಸೇರ್ಪಡೆಯಾದರು, ಇದರಿಂದ ಎನ್ಡಿಎ ಸಂಖ್ಯೆ 318ಕ್ಕೆ ತಲುಪಿತು. ಅಸ್ಸಾಂನ ನಾಗಾಂವ್ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ದೇವಾಶಿಶ್ ಶರ್ಮಾ ಕೂಡ ಗೆಲುವು ಸಾಧಿಸಿದ್ದಾರೆ.
ಪ್ರಸ್ತುತ 3 ಲೋಕಸಭಾ ಸ್ಥಾನಗಳು ಖಾಲಿ ಇವೆ. ಜಮ್ಮು ಮತ್ತು ಕಾಶ್ಮೀರದ ಶ್ರೀನಗರ, ಪಶ್ಚಿಮ ಬಂಗಾಳದ ಬಸಿರ್ಹತ್ ಮತ್ತು ಮೇಘಾಲಯದ ಶಿಲ್ಲಾಂಗ್. ಅಂದರೆ, ಲೋಕಸಭೆಯಲ್ಲಿ ಗರಿಷ್ಠ 540 ಸಂಸದರು ಮಸೂದೆಯ ಮೇಲೆ ಮತ ಚಲಾಯಿಸಲಿದ್ದಾರೆ. ಈ ಲೆಕ್ಕಾಚಾರದ ಪ್ರಕಾರ, ಲೋಕಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತಕ್ಕೆ ಬೇಕಾದ 360ರ ಸಂಖ್ಯೆಗಿಂತ ಎನ್ಡಿಎ ಪ್ರಸ್ತುತ 41 ಮತಗಳಷ್ಟು ಹಿಂದಿದೆ.
ಇದೇ ಏಪ್ರಿಲ್ನಲ್ಲಿ ಪಂಜಾಬ್ನಿಂದ ಎಎಪಿ ಪಕ್ಷದ 7 ರಾಜ್ಯಸಭಾ ಸಂಸದರು ಬಿಜೆಪಿಗೆ ಸೇರ್ಪಡೆಯಾದ ಬಳಿಕ ಮತ್ತು ಜೂನ್ನಲ್ಲಿ ನಡೆದ ರಾಜ್ಯಸಭಾ ಚುನಾವಣೆಯ ನಂತರ, 245 ಸ್ಥಾನಗಳ ರಾಜ್ಯಸಭೆಯಲ್ಲಿ ಎನ್ಡಿಎ ಒಟ್ಟು 149 ಸಂಸದರನ್ನು ಹೊಂದಿತ್ತು. ಇದರಲ್ಲಿ ಬಿಜೆಪಿಯ 114 ಸಂಸದರಿದ್ದರು.
ಜುಲೈ 9ರಂದು ಟಿಎಂಸಿ ಪಕ್ಷದ ರಾಜ್ಯಸಭಾ ಸಂಸದರಾದ ಸುಖೇಂದು ಶೇಖರ್ ರೇ, ಸುಶ್ಮಿತಾ ದೇವ್ ಮತ್ತು ಪ್ರಕಾಶ್ ಚಿಕ್ ಬರೈಕ್ ಅವರು ಪಕ್ಷ ತೊರೆದು ಬಿಜೆಪಿ ಸೇರಿದರು. ಜುಲೈ 17ರಂದು ಈ ಮೂವರೂ ರಾಜ್ಯಸಭಾ ಸಂಸದರಾಗಿ ಅವಿರೋಧವಾಗಿ ಆಯ್ಕೆಯಾದರು. ಇದರಿಂದ ರಾಜ್ಯಸಭೆಯಲ್ಲಿ ಎನ್ಡಿಎ ಸಂಖ್ಯಾಬಲ 152ಕ್ಕೆ ಏರಿಕೆಯಾಯಿತು.
ಜುಲೈ 16ರಂದು ಟಿಎಂಸಿ ರಾಜ್ಯಸಭಾ ಸಂಸದೆ ಕೋಯಲ್ ಮಲ್ಲಿಕ್ ಕೂಡ ರಾಜೀನಾಮೆ ನೀಡಿದರು ಮತ್ತು ಅಕ್ಟೋಬರ್ನಲ್ಲಿ ಅದೇ ಖಾಲಿ ಸ್ಥಾನಕ್ಕೆ ಬಿಜೆಪಿ ಟಿಕೆಟ್ನಿಂದ ನಡೆದ ಉಪಚುನಾವಣೆಯಲ್ಲಿ ಗೆದ್ದು ಮತ್ತೆ ಸಂಸದರಾದರು. ನವೆಂಬರ್ನಲ್ಲಿ ಮಧ್ಯಪ್ರದೇಶದಲ್ಲಿ ಖಾಲಿಯಾಗಿದ್ದ ರಾಜ್ಯಸಭಾ ಸ್ಥಾನಕ್ಕೆ ಬಿಜೆಪಿಯ ಹರ್ದೀಪ್ ಸಿಂಗ್ ಪುರಿ ಅವರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಂದರೆ, ಎನ್ಡಿಎ ಸಂಖ್ಯಾಬಲ 154ಕ್ಕೆ ತಲುಪಿದ್ದು, ಮೂರನೇ ಎರಡರಷ್ಟು ಬಹುಮತಕ್ಕೆ ಬೇಕಾದ 163ರ ಸಂಖ್ಯೆಗಿಂತ ಎನ್ಡಿಎ 9 ಮತಗಳಷ್ಟು ಹಿಂದಿದೆ. ಆದಾಗ್ಯೂ, ಲೋಕಸಭೆಯಲ್ಲಿ ಎನ್ಡಿಎ ಸಂಖ್ಯೆ 320 ಮತ್ತು ರಾಜ್ಯಸಭೆಯಲ್ಲಿ 155 ಇದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಈ ಲೆಕ್ಕಾಚಾರದ ಪ್ರಕಾರ, ಎನ್ಡಿಎ ಮೂರನೇ ಎರಡರಷ್ಟು ಬಹುಮತವನ್ನು ತಲುಪಲು ಲೋಕಸಭೆಯಲ್ಲಿ 40 ಮತ್ತು ರಾಜ್ಯಸಭೆಯಲ್ಲಿ 8 ಸೇರಿ ಒಟ್ಟು 48 ಹೆಚ್ಚುವರಿ ಸಂಸದರ ಬೆಂಬಲದ ಅಗತ್ಯವಿದೆ. ಆದರೆ, 15ರಿಂದ 18 ಮತಗಳ ಅಂತರದಿಂದ ಮಸೂದೆ ಅಂಗೀಕಾರವಾಗಲಿದೆ ಎಂದು ಬಿಜೆಪಿ ಮೂಲಗಳು ವಿಶ್ವಾಸ ವ್ಯಕ್ತಪಡಿಸಿವೆ.
ಕ್ಷೇತ್ರ ಪುನರ್ವಿಂಗಡಣೆ ಮಸೂದೆ (ಡಿಲಿಮಿಟೇಶನ್ ಬಿಲ್) ಎರಡು ಮಸೂದೆಗಳ ಪ್ಯಾಕೇಜ್ ಆಗಿದೆ. ಇದರಲ್ಲಿ ಲೋಕಸಭೆಯ ಗರಿಷ್ಠ ಸ್ಥಾನಗಳನ್ನು 550ರಿಂದ 850ಕ್ಕೆ ಹೆಚ್ಚಿಸುವ ಮತ್ತು ಲೋಕಸಭಾ ಕ್ಷೇತ್ರಗಳ ಗಾತ್ರವನ್ನು ಮರುನಿಗದಿಪಡಿಸುವ (ಪುನರ್ವಿಂಗಡಣೆ) ಪ್ರಸ್ತಾವನೆಗಳಿವೆ. ಮೋದಿ ಸರ್ಕಾರವು 2026ರ ಏಪ್ರಿಲ್ 16ರಿಂದ 18ರವರೆಗೆ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆದು ಈ ಮಸೂದೆಗಳನ್ನು ಮಂಡಿಸಿತ್ತು. ವಿರೋಧ ಪಕ್ಷಗಳು ಇದರ ವಿರುದ್ಧ ಒಗ್ಗಟ್ಟಾದವು. ಮಹಿಳಾ ಮೀಸಲಾತಿಯ ನೆಪದಲ್ಲಿ ಬಿಜೆಪಿ ತನ್ನ ಕಾರ್ಯಸೂಚಿಯನ್ನು ಪೂರೈಸಿಕೊಳ್ಳಲು ಬಯಸುತ್ತಿದೆ ಎಂಬುದು ಅವುಗಳ ವಾದವಾಗಿತ್ತು.