ಎಡಪಕ್ಷಗಳಿಗೆ ರಾಜಕೀಯ ವನವಾಸ! 
ದೇಶ

ಎಡಪಕ್ಷಗಳಿಗೆ ರಾಜಕೀಯ ವನವಾಸ!

ಪಂಚರಾಜ್ಯಗಳ ಫಲಿತಾಂಶ ದೇಶದ ರಾಜಕೀಯ ರಂಗದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದೆ. ಅದರಲ್ಲೂ, ಕೇರಳದಲ್ಲಿ ಸತತ ಎರಡು ಅವಧಿಗಳ ಆಡಳಿತದ ನಂತರ, ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್​ವಾದಿ) ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗ (ಎಲ್​ಡಿಎಫ್) ಅಧಿಕಾರ ಕಳೆದುಕೊಂಡಿದೆ. 140 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) 102 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಜಯ ಸಾಧಿಸಿದೆ. ಈ ಫಲಿತಾಂಶದೊಂದಿಗೆ, 1977ರ ನಂತರ ಇದೇ ಮೊದಲ ಬಾರಿಗೆ ಭಾರತದ ಯಾವುದೇ ರಾಜ್ಯದಲ್ಲಿ ಕಮ್ಯುನಿಸ್ಟ್ ಸರ್ಕಾರವಿಲ್ಲದಂತಾಗಿದೆ. ಕೇರಳ, ತ್ರಿಪುರಾ ಮತ್ತು ಪಶ್ಚಿಮ ಬಂಗಾಳದಲ್ಲಿ ದಶಕಗಳ ಕಾಲ ಪ್ರಭಾವ ಬೀರಿದ್ದ ಮಾರ್ಕ್ಸ್​ವಾದಿ ಸಿದ್ಧಾಂತ ಇತ್ತೀಚಿನ ವರ್ಷಗಳಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಾ ಬಂದಿದೆ.
ಒಂದು ಕಾಲದಲ್ಲಿ ಶೋಷಿತರ ಧ್ವನಿಯಾಗಿ ರಾಜ್ಯಗಳನ್ನು ಆಳಿದ್ದ ಕಮ್ಯುನಿಸ್ಟ್ ಸಿದ್ಧಾಂತವು, ಕಾಲಕ್ಕೆ ತಕ್ಕಂತೆ ತನ್ನ ನೀತಿಗಳನ್ನು ಬದಲಿಸಿಕೊಳ್ಳದ ಕಾರಣ ಮತ್ತು ಪ್ರಾದೇಶಿಕ ಪರ್ಯಾಯಗಳ ಬೆಳವಣಿಗೆಯಿಂದಾಗಿ ಭಾರತೀಯ ರಾಜಕೀಯ ನಕ್ಷೆಯಲ್ಲಿ ಇಂದು ತನ್ನ ಅಸ್ತಿತ್ವಕ್ಕಾಗಿ ಹೋರಾಡುವಂತಾಗಿದೆ. ಸಿಪಿಐ, ಸಿಪಿಐ(ಎಂ) ಮತ್ತು ಸಿಪಿಐ(ಎಂಎಲ್) ಪಕ್ಷಗಳು ಸಂಘಟನಾತ್ಮಕವಾಗಿ ಅಸ್ತಿತ್ವದಲ್ಲಿದ್ದರೂ, ಅವುಗಳ ರಾಷ್ಟ್ರೀಯ ಪ್ರಭಾವ ಹೇಳಿಕೊಳ್ಳುವಂತಿಲ್ಲ. ಎಡಪಕ್ಷಗಳು ಭಾರತದಲ್ಲಿ ಪ್ರಸ್ತುತವಾಗಬೇಕಾದರೆ, ಅವು ಕೇವಲ ವಿರೋಧಕ್ಕಾಗಿಯೇ ಹೋರಾಡದೆ, ಬದಲಾಗುತ್ತಿರುವ ಭಾರತದ ಆರ್ಥಿಕತೆಗೆ ಪೂರಕವಾದ ಮತ್ತು ಸ್ಥಳೀಯ ಸಂಸ್ಕೃತಿಯನ್ನು ಗೌರವಿಸುವ ಹೊಸ ಮಾದರಿಯ ಸಮಾಜವಾದವನ್ನು ಅಳವಡಿಸಿಕೊಳ್ಳಬೇಕಿದೆ.

ಕೇರಳದಲ್ಲಿ ಪ್ರಾಬಲ್ಯದಿಂದ ಪತನದವರೆಗೆ

ಕೇರಳದಲ್ಲಿ ಇ.ಎಂ.ಎಸ್. ನಂಬೂದಿರಿಪಾಡ್ ನೇತೃತ್ವದಲ್ಲಿ 1957ರಲ್ಲಿ ಮೊದಲ ಕಮ್ಯುನಿಸ್ಟ್ ಸರ್ಕಾರ ಅಸ್ತಿತ್ವಕ್ಕೆ ಬಂತು. ಇದು ವಿಶ್ವದಲ್ಲೇ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಚುನಾಯಿತವಾದ ಮೊದಲ ಕಮ್ಯುನಿಸ್ಟ್ ಸರ್ಕಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಅಂದಿನಿಂದ ಕೇರಳ ಎಡರಂಗದ ಪ್ರಬಲ ಕೇಂದ್ರವಾಗಿತ್ತು. ಈ ಸರ್ಕಾರವು ಕ್ರಾಂತಿಕಾರಿ ಭೂ ಸುಧಾರಣೆ ಮತ್ತು ಸಾಮಾಜಿಕ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿತು. ಆರ್ಥಿಕವಾಗಿ ಸದೃಢರಾದವರನ್ನು ಮೀಸಲಾತಿಯಿಂದ ಹೊರಗಿಡುವ ‘ಕೆನೆಪದರ’ (Creamy Layer) ಪರಿಕಲ್ಪನೆಯು ಮೊದಲ ಬಾರಿಗೆ ಇವರ ಆಡಳಿತ ಸುಧಾರಣಾ ಸಮಿತಿಯಿಂದಲೇ ಪ್ರಸ್ತಾಪಿಸಲ್ಪಟ್ಟಿತ್ತು. ತೀವ್ರ ರಾಜಕೀಯ ಪ್ರತಿರೋಧದಿಂದಾಗಿ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು 1959ರಲ್ಲಿ ಅನುಚ್ಛೇದ 356 ಬಳಸಿ ಕಮ್ಯುನಿಸ್ಟ್ ಸರ್ಕಾರವನ್ನು ವಜಾಗೊಳಿಸಿದರು. ಆದರೂ, ಆ ಸರ್ಕಾರ ಹಾಕಿಕೊಟ್ಟ ಭೂ ಸುಧಾರಣಾ ಹಾದಿಯನ್ನು ನಂತರದ ಸರ್ಕಾರಗಳು ಮುಂದುವರಿಸಬೇಕಾಯಿತು.
ಇಂದಿನ ಸ್ಥಿತಿ: ಪಿಣರಾಯಿ ವಿಜಯನ್ ಅವರ ಅತಿಯಾದ ವ್ಯಕ್ತಿ ಆಧಾರಿತ ರಾಜಕಾರಣ ಮತ್ತು ಆಡಳಿತ ವಿರೋಧಿ ಅಲೆಯು ಈ ಬಾರಿ ಎಡರಂಗದ ಸೋಲಿಗೆ ಪ್ರಮುಖ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಪ್ರಮುಖ ಮೈಲಿಗಲ್ಲುಗಳು

1951-52: ದೇಶದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಲೋಕಸಭೆಯ ಅತಿದೊಡ್ಡ ವಿರೋಧ ಪಕ್ಷವಾಗಿ ಉದಯ.
1957: ಕೇರಳದಲ್ಲಿ ಅಧಿಕಾರ ಹಿಡಿಯುವ ಮೂಲಕ, ವಿಶ್ವದ ಯಾವುದೇ ಪ್ರಮುಖ ರಾಷ್ಟ್ರದಲ್ಲಿ ಪ್ರಜಾಪ್ರಭುತ್ವದ ಹಾದಿಯಲ್ಲಿ ಚುನಾಯಿತಗೊಂಡ ಮೊದಲ ಕಮ್ಯುನಿಸ್ಟ್ ಸರ್ಕಾರ ಎಂಬ ಖ್ಯಾತಿಗೆ ಪಾತ್ರವಾಯಿತು.
1980ರ ದಶಕ: ಕೇರಳ, ತ್ರಿಪುರಾ ಮತ್ತು ಪಶ್ಚಿಮ ಬಂಗಾಳದಲ್ಲಿ ಏಕಕಾಲಕ್ಕೆ ಆಡಳಿತ ನಡೆಸುವ ಮೂಲಕ ಉತ್ತುಂಗಕ್ಕೆ.
2004: ಲೋಕಸಭೆಯಲ್ಲಿ ಎಡಪಕ್ಷಗಳ ಗರಿಷ್ಠ ಸಂಖ್ಯೆಯ ಸಂಸದರ ಪ್ರಾತಿನಿಧ್ಯ.
2026: ಕೇರಳದ ಸೋಲಿನೊಂದಿಗೆ ಭಾರತದಲ್ಲಿ ಕಮ್ಯುನಿಸ್ಟ್ ಮುಖ್ಯಮಂತ್ರಿಗಳ ಯುಗ ಅಂತ್ಯ.

ಕೆಂಪು ಹಾದಿ

ಬಂಗಾಳದ ಭದ್ರಕೋಟೆ: ಪಶ್ಚಿಮ ಬಂಗಾಳದಲ್ಲಿ 1977ರಲ್ಲಿ ಸಿಪಿಐ(ಎಂ) ಅಧಿಕಾರಕ್ಕೆ ಬಂದು ಸತತ 34 ವರ್ಷಗಳ ಕಾಲ ಆಳ್ವಿಕೆ ನಡೆಸಿತು. ಸಿಪಿಐ(ಎಂ) ಹಿರಿಯ ನಾಯಕ ಜ್ಯೋತಿ ಬಸು 23 ವರ್ಷಗಳ ಕಾಲ ಸತತವಾಗಿ ಮುಖ್ಯಮಂತ್ರಿಯಾಗಿ ಇತಿಹಾಸ ನಿರ್ಮಿಸಿದರು.
ಐತಿಹಾಸಿಕ ಪ್ರಮಾದ: ಕೇಂದ್ರದಲ್ಲಿ 1996ರಲ್ಲಿ ಯುನೈಟೆಡ್ ಫ್ರಂಟ್ ಆಡಳಿತದ ಅವಧಿಯಲ್ಲಿ ಜ್ಯೋತಿ ಬಸು ಅವರಿಗೆ ದೇಶದ ಪ್ರಧಾನಿಯಾಗುವ ಅವಕಾಶ ಒದಗಿಬಂದಿತ್ತು. ಆದರೆ ಕಮ್ಯುನಿಸ್ಟ್ ಪಾರ್ಟಿಯ ಪಾಲಿಟ್​ಬ್ಯೂರೋ ಈ ಅವಕಾಶವನ್ನು ಒಪ್ಪಿಕೊಳ್ಳದೆ ತಿರಸ್ಕರಿಸಿತು. ಇದನ್ನು ಜ್ಯೋತಿ ಬಸು ನಂತರದ ದಿನಗಳಲ್ಲಿ ‘ಐತಿಹಾಸಿಕ ಪ್ರಮಾದ’ ಎಂದು ಕರೆದಿದ್ದರು.
ಪತನದ ಹಾದಿ: ಯುಪಿಎ ಸರ್ಕಾರಕ್ಕೆ (2008) ಹೊರಗಿನಿಂದ ಬೆಂಬಲ ನೀಡುವ ಮೂಲಕ ರಾಷ್ಟ್ರ ರಾಜಕಾರಣವನ್ನು ನಿಯಂತ್ರಿಸುತ್ತಿದ್ದ ಎಡರಂಗದ ಪತನ 2011ರಿಂದ ತೀವ್ರವಾಯಿತು. ಪಶ್ಚಿಮ ಬಂಗಾಳದಲ್ಲಿ 2011ರಲ್ಲಿ ಮಮತಾ ಬ್ಯಾನರ್ಜಿ ಅವರ ‘ಪರಿಬೋರ್ತನ್’ ಅಲೆ ಮತ್ತು ಸಿಂಗೂರು-ನಂದಿಗ್ರಾಮ ಭೂಸ್ವಾಧೀನ ವಿರೋಧಿ ಚಳವಳಿಯಿಂದಾಗಿ 34 ವರ್ಷಗಳ ಕೆಂಪುಕೋಟೆ ಕುಸಿಯಿತು. ತ್ರಿಪುರಾದಲ್ಲಿ 2018ರಲ್ಲಿ ಸೋಲಿನಿಂದಾಗಿ ಮಾಣಿಕ್ ಸರ್ಕಾರ್ ಅವರ ಕಮ್ಯುನಿಸ್ಟ್ ಸರ್ಕಾರ ಪತನಗೊಂಡು, ಬಿಜೆಪಿ ಅಧಿಕಾರಕ್ಕೆ ಬಂತು. ಕೇರಳದಲ್ಲಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ 2021ರಲ್ಲಿ ಸತತ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದು ಇತಿಹಾಸ ಬರೆದಿದ್ದ ಎಡರಂಗಕ್ಕೆ ಈ ಬಾರಿ ಮತದಾರರು ಕೈಕೊಟ್ಟಿದ್ದಾರೆ.

ಬಂಗಾಳದಲ್ಲಿ ಮೂರು ದಶಕಗಳ ಪಯಣ

ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಸಂ ಸುದೀರ್ಘ ಇತಿಹಾಸವನ್ನು ಹೊಂದಿದೆ. 1925ರಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷವನ್ನು ಸ್ಥಾಪಿಸಿದ ಎಂ.ಎನ್. ರಾಯ್ ಕಾಲದಿಂದಲೂ ಇದು ಬೆಳೆದು ಬಂದಿದೆ. ಬಂಗಾಳದಲ್ಲಿ 1977ರಿಂದ 2011ರವರೆಗೆ ಸತತ 34 ವರ್ಷಗಳ ಕಾಲ ಜ್ಯೋತಿ ಬಸು ಮತ್ತು ಬುದ್ಧದೇವ ಭಟ್ಟಾಚಾರ್ಯ ನಾಯಕತ್ವದಲ್ಲಿ ಎಡಪಕ್ಷಗಳ ಆಡಳಿತವಿತ್ತು. ಜ್ಯೋತಿ ಬಸು 23 ವರ್ಷಗಳ ಕಾಲ ಸಿಎಂ ಆಗಿ ಕಾರ್ಯನಿರ್ವಹಿಸಿ, ನಂತರ ಬುದ್ಧದೇವ ಭಟ್ಟಾಚಾರ್ಯ ಅವರಿಗೆ ಅಧಿಕಾರ ಹಸ್ತಾಂತರಿಸಿದ್ದರು. ಬುದ್ಧದೇವ 11 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದರು. 1964ರಲ್ಲಿ ಸಿಪಿಐ ಮತ್ತು ಸಿಪಿಐ(ಎಂ) ವಿಭಜನೆಯ ನಂತರ ಬಂಗಾಳದ ನೆಲದಲ್ಲಿ ಈ ಪಕ್ಷವು ರೈತರು ಮತ್ತು ಕಾರ್ಮಿಕ ವರ್ಗದ ಶಕ್ತಿಯಾಗಿ ಬೆಳೆಯಿತು. ಪಂಚಾಯತ್ ರಾಜ್ ವ್ಯವಸ್ಥೆ ಮತ್ತು ಗ್ರಾಮ ಮಟ್ಟಕ್ಕೆ ಅಧಿಕಾರ ವಿಕೇಂದ್ರೀಕರಣಗೊಳಿಸಿದ ಕೀರ್ತಿ ಈ ಸರ್ಕಾರಕ್ಕೆ ಸಲ್ಲುತ್ತದೆ. 90ರ ದಶಕದಲ್ಲಿ ಕೈಗಾರಿಕೀಕರಣಕ್ಕಾಗಿ ನಡೆಸಿದ ಬಲವಂತದ ಭೂಸ್ವಾಧೀನ ಪ್ರಕ್ರಿಯೆಯು ಪಕ್ಷದ ಮೂಲ ನೆಲೆಗಟ್ಟನ್ನೇ ಅಲುಗಾಡಿಸಿತು. 2011ರಲ್ಲಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಎದುರು ಎಡರಂಗ ಮುಖಭಂಗ ಅನುಭವಿಸಿತು. ಆರ್ಥಿಕತೆ ಕುಸಿತ ಮತ್ತು ರಾಜಕೀಯ ಹಿಂಸಾಚಾರಗಳು ಇಲ್ಲಿ ಪಕ್ಷದ ಪತನಕ್ಕೆ ಮುನ್ನುಡಿ ಬರೆದವು.

ಕೆಂಪುಕೋಟೆಯಲ್ಲಿ ಕೇಸರಿ ಅಲೆ

ಈಶಾನ್ಯ ಭಾರತದ ತ್ರಿಪುರಾದಲ್ಲಿ 1977ರಿಂದಲೂ ಕಮ್ಯುನಿಸ್ಟ್ ಪಕ್ಷವು ಬಲವಾಗಿತ್ತು. 1977ರಲ್ಲೇ ತ್ರಿಪುರಾದ ಮೊದಲ ಕಮ್ಯುನಿಸ್ಟ್ ಸರ್ಕಾರ ಅಧಿಕಾರಕ್ಕೆ ಬಂತು. ಕಮ್ಯುನಿಸ್ಟರು ಭಾರತದ ಸ್ವಾತಂತ್ರ್ಯ ಪ್ರಾಪ್ತಿಗಿಂತ ಮೊದಲೇ ತ್ರಿಪುರಾದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದರು. ಮುಖ್ಯವಾಗಿ ಬುಡಕಟ್ಟು ಸಮುದಾಯಗಳ ನಡುವೆ ಕೆಲಸ ಮಾಡಿ ಭದ್ರವಾದ ಸಂಘಟನೆಯನ್ನು ಕಟ್ಟಿದ್ದರು. ಕಮ್ಯುನಿಸ್ಟ್ ನಾಯಕ ಮಾಣಿಕ್ ಸರ್ಕಾರ್ 1998ರಿಂದ 2018ರವರೆಗೆ ಎರಡು ದಶಕಗಳ ಕಾಲ ಸರಳತೆಯ ಸಂಕೇತವಾಗಿ ಆಡಳಿತ ನಡೆಸಿದರು. ಬುಡಕಟ್ಟು ಸಮುದಾಯಗಳ ಹಕ್ಕುಗಳಿಗಾಗಿ ಹೋರಾಡುವ ಮೂಲಕ ಕಮ್ಯುನಿಸ್ಟರು ಇಲ್ಲಿ ಸಂಘಟಿತರಾಗಿದ್ದರು. ರಾಜಮನೆತನದ ವಿರುದ್ಧದ ಹೋರಾಟವು ಇವರಿಗೆ ಜನಬೆಂಬಲ ತಂದುಕೊಟ್ಟಿತ್ತು. 2018ರಲ್ಲಿ ಬಿಜೆಪಿ ಮತ್ತು ಆರ್​ಎಸ್​ಎಸ್​ನ ತಳಮಟ್ಟದ ಸಂಘಟನಾ ಶಕ್ತಿಯು ಈ ಭದ್ರಕೋಟೆಯನ್ನು ಧ್ವಂಸಗೊಳಿಸಿತು. ಕಮ್ಯುನಿಸ್ಟ್ ಸರ್ಕಾರವು ವೇತನ ಆಯೋಗದ ಜಾರಿಯಲ್ಲಿ ವಿಳಂಬ ಮಾಡಿದ್ದು ಮತ್ತು ಯುವ ಮತದಾರರನ್ನು ಸೆಳೆಯುವಲ್ಲಿ ಬಿಜೆಪಿ ಯಶಸ್ವಿಯಾದ ಪರಿಣಾಮ 25 ವರ್ಷಗಳ ಎಡಪಕ್ಷಗಳ ಆಡಳಿತಕ್ಕೆ ತೆರೆಬಿತ್ತು.

ವೈಫಲ್ಯಕ್ಕೆ ಕಾರಣಗಳು

-ಭಾರತದ ಯುವಪೀಳಿಗೆಗೆ ಆರ್ಥಿಕ ಉದಾರೀಕರಣ ಮತ್ತು ಬಂಡವಾಳಶಾಹಿ ವ್ಯವಸ್ಥೆಯ ಮೇಲೆ ಒಲವು ಹೆಚ್ಚಿದೆ. ಇಂದಿನ ಯುವಕರಿಗೆ ಕೇವಲ ಹಕ್ಕುಗಳಿಗಾಗಿ ಹೋರಾಡುವ ಪಕ್ಷಕ್ಕಿಂತ, ಕೆಲಸದ ಅವಕಾಶ ಮತ್ತು ಉದ್ಯಮಶೀಲತೆಗೆ ಬೆಂಬಲ ನೀಡುವ ಪಕ್ಷಗಳ ಮೇಲೆ ಹೆಚ್ಚಿನ ನಂಬಿಕೆ ಇದೆ.
- ಎಡಪಕ್ಷಗಳು ಇಂದಿಗೂ 19ನೇ ಶತಮಾನದ ಮಾರ್ಕ್ಸ್​ವಾದಿ ಅಥವಾ ಲೆನಿನ್​ವಾದಿ ಸಿದ್ಧಾಂತಗಳನ್ನೇ ಕಟ್ಟುನಿಟ್ಟಾಗಿ ಪಾಲಿಸುತ್ತಿವೆ ಎಂಬ ಟೀಕೆ ಇದೆ. ಬದಲಾಗುತ್ತಿರುವ ಭಾರತೀಯ ಸಮಾಜಕ್ಕೆ ತಕ್ಕಂತೆ ತಮ್ಮ ಸಿದ್ಧಾಂತಗಳನ್ನು ನವೀಕರಿಸಿಕೊಳ್ಳುವಲ್ಲಿ ಅವರು ವಿಫಲರಾಗಿದ್ದಾರೆ. ಉದಾಹರಣೆಗೆ, ಕೈಗಾರಿಕೀಕರಣ ಮತ್ತು ತಂತ್ರಜ್ಞಾನದ ಬಗ್ಗೆ ಅವರ ಕೆಲವು ಹಳೆಯ ನಿಲುವುಗಳು ಪ್ರಗತಿಗೆ ತಡೆಯೊಡ್ಡುತ್ತವೆ ಎಂಬ ಭಾವನೆ ಜನಸಾಮಾನ್ಯರಲ್ಲಿದೆ.
- ಜೆಎನ್​ಯು ನಂತಹ ವಿವಿಗಳಲ್ಲಿ ಪ್ರಬಲವಾಗಿರುವ ಯುವ ಎಡ ನಾಯಕರ ವರ್ಚಸ್ಸು ಚುನಾವಣೆಗಳಲ್ಲಿ ಮತಗಳಾಗಿ ಪರಿವರ್ತನೆಯಾಗುತ್ತಿಲ್ಲ. ರಾಷ್ಟ್ರೀಯ ಮಟ್ಟದಲ್ಲಿ ಜನರನ್ನು ಆಕರ್ಷಿಸಬಲ್ಲ ವರ್ಚಸ್ವಿ ನಾಯಕರ ಕೊರತೆ ಎದ್ದುಕಾಣುತ್ತಿದೆ.
- ಭಾರತದ ರಾಜಕಾರಣದಲ್ಲಿ ರಾಷ್ಟ್ರೀಯತೆ ಮತ್ತು ಧರ್ಮ ಪ್ರಮುಖ ಪಾತ್ರ ವಹಿಸುತ್ತವೆ. ಎಡಪಕ್ಷಗಳು ಧರ್ಮನಿರಪೇಕ್ಷತೆಗೆ ಹೆಚ್ಚು ಒತ್ತು ನೀಡುವ ಪ್ರಕ್ರಿಯೆಯಲ್ಲಿ, ಬಹುಸಂಖ್ಯಾತ ಜನರ ಸಾಂಸ್ಕೃತಿಕ ಭಾವನೆಗಳಿಂದ ದೂರವಾದವು ಎಂಬ ಅಭಿಪ್ರಾಯವಿದೆ. ಇದು ವಿಶೇಷವಾಗಿ ಉತ್ತರ ಭಾರತದಲ್ಲಿ ಕಮ್ಯುನಿಸ್ಟರನ್ನು ಜನರಿಂದ ದೂರವಿಟ್ಟಿದೆ.