ಶಿವ ಭಕ್ತರಾದ ಕನ್ವಾರಿಯರ 'ಕನ್ವರ್ ಯಾತ್ರೆ'
- ರಸ್ತೆ ಮೇಲೆ ಮಲಗದಿರಲು ಕನ್ವರ್ ಯಾತ್ರಿಕರಿಗೆ ಉತ್ತರಾಖಂಡ ಪೊಲೀಸರ ಎಚ್ಚರಿಕೆ
- ಡ್ರೋನ್ ಮತ್ತು ಸಿಸಿಟಿವಿ ಕ್ಯಾಮೆರಾಗಳ ಮೂಲಕ 24x7 ನಿಗಾ
- ಸುರಕ್ಷಿತ ಯಾತ್ರೆಗಾಗಿ ಎಲ್ಲ ಯಾತ್ರಿಕರೂ ನಿಯಮಗಳು ಕಡ್ಡಾಯ
ಹರಿದ್ವಾರ: ಕನ್ವರ್ ಯಾತ್ರೆ ಮಾಡುತ್ತಿರುವ ಭಕ್ತರು ರಸ್ತೆ ಮಧ್ಯೆ ಅಥವಾ ಜನಜಂಗುಳಿ ಇರುವ ಜಾಗದಲ್ಲಿ ಕುಳಿತುಕೊಳ್ಳೋದು, ವಿಶ್ರಾಂತಿ ಮಾಡುವುದು ಬೇಡವೆಂದು ಉತ್ತರಾಖಂಡ ಪೊಲೀಸರು ಎಚ್ಚರಿಕೆ ಕೊಟ್ಟಿದ್ದಾರೆ.
ರಸ್ತೆ ಬದಿಯಲ್ಲಿ ಮಲಗುವ ಬದಲು ಆಡಳಿತ ಗುರುತಿಸಿರುವ ಸುರಕ್ಷಿತ ಜಾಗದಲ್ಲೇ ರೆಸ್ಟ್ ಮಾಡಬೇಕು. ಹೆದ್ದಾರಿಯಲ್ಲಿ ನಡೆಯುವ ಬದಲು ಕಾಲುವೆ ಪಕ್ಕದ ಪಾದಚಾರಿ ದಾರಿಯಲ್ಲೇ ಹೋಗಬೇಕು ಎಂದು ಪೊಲೀಸರು ಸಲಹೆ ನೀಡಿದ್ದಾರೆ. ಇದರಿಂದ ಟ್ರಾಫಿಕ್‌ಗೂ ತೊಂದರೆ ಆಗುವುದಿಲ್ಲ, ಯಾತ್ರಿಕರಿಗೂ ಸುರಕ್ಷತೆ ಇರುತ್ತದೆ ಎಂದು ಹೇಳಿದ್ದಾರೆ. ಇನ್ನೊಂದೆಡೆ, ವಾಹನಗಳಲ್ಲಿ ಸಾಗಿಸುವ ಕನ್ವರ್‌ಗಳ ಎತ್ತರ 13 ಅಡಿಗಿಂತ ಹೆಚ್ಚಿರಬಾರದು ಎಂಬ ನಿಯಮ ಸರ್ಕಾರ ಕಟ್ಟುನಿಟ್ಟಾಗಿ ಜಾರಿಗೆ ತಂದಿದೆ. ಇದಕ್ಕಿಂತ ಎತ್ತರದ ಕನ್ವರ್‌ಗಳು ವಿದ್ಯುತ್ ತಂತಿಗಳಿಗೆ ತಾಗಿ ಸಂಚಾರಕ್ಕೆ ಅಡ್ಡಿಯಾಗುವ ಸಾಧ್ಯತೆ ಇರುವುದರಿಂದ ಈ ನಿಯಮ ಜಾರಿಯಲ್ಲಿದೆ.
ಡ್ರೋನ್ ಮತ್ತು ಸಿಸಿಟಿವಿ ಕ್ಯಾಮೆರಾಗಳ ಮೂಲಕ 24x7 ನಿಗಾ
ರಾಜ್ಯದ ಗಡಿ ಭಾಗಗಳಲ್ಲಿ ಎಲ್ಲಾ ವಾಹನಗಳ ತಪಾಸಣೆ ನಡೆಯುತ್ತಿದೆ. ನಿಯಮ ಉಲ್ಲಂಘಿಸಿ ಬಂದ ವಾಹನಗಳಿಗೆ ಪ್ರವೇಶವಿಲ್ಲ. ನರ್ಸನ್ ಗಡಿಯಲ್ಲಿ 13 ಅಡಿಗಿಂತ ಎತ್ತರ ಇದ್ದ 12 ಕನ್ವರ್ ವಾಹನಗಳನ್ನು ಪೊಲೀಸರು ವಾಪಸ್ ಕಳಿಸಿದ್ದಾರೆ. ಯಾತ್ರೆ ನಡೆಯುವ ಮಾರ್ಗದ ಮೇಲೆ ಡ್ರೋನ್ ಮತ್ತು ಸಿಸಿಟಿವಿ ಕ್ಯಾಮೆರಾಗಳ ಮೂಲಕ 24x7 ನಿಗಾ ಇಡಲಾಗಿದೆ.
ಅಷ್ಟೇ ಅಲ್ಲದೇ ರಾಜ್ಯ ವಿಪತ್ತು ಸ್ಪಂದನಾ ಪಡೆ (SDRF) ಮತ್ತು ಕೇಂದ್ರ ಅರೆಸೈನಿಕ ಪಡೆಗಳನ್ನು ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಯಾತ್ರೆ ಸುರಕ್ಷಿತವಾಗಿ ನಡೆಬೇಕಾದರೆ ಎಲ್ಲಾ ಯಾತ್ರಿಕರೂ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಉತ್ತರಾಖಂಡ ಪೊಲೀಸರು ಮನವಿ ಮಾಡಿದ್ದಾರೆ. (ಏಜೆನ್ಸೀಸ್)