Police Seize Chetan Chaudharys 2-Wheeler 
ದೇಶ

Ketan Agarwal Murder Case: ಸಿಯಾ ಪ್ರೇಮಿ, ಆರೋಪಿ ಚೇತನ್ ಚೌಧರಿ ಬೈಕ್, ಹೂಡಿ ಸೀಜ್

ಪ್ರಮುಖ ಮುಖ್ಯಾಂಶಗಳು

  • ಆರೋಪಿ ಚೇತನ್ ಬೈಕ್, ಹೂಡಿ ಮತ್ತು ಹೆಡ್‌ಫೋನ್ ವಶಕ್ಕೆ ಪಡೆದ ಪೊಲೀಸರು.
  • ಪ್ರಮುಖ ಆರೋಪಿ ಸಿಯಾ ಗೋಯಲ್ ಪೋಷಕರನ್ನು ವಿಚಾರಣೆ
  • ಪ್ರಕರಣದ ವಾದ ಮಂಡಿಸಲು ಹಿರಿಯ ವಕೀಲ ಉಜ್ವಲ್ ನಿಕಮ್ ನೇಮಕ.
ಲೋನಾವಾಲಾ: ಪುಣೆ ಬಳಿಯ ಲೋಹಗಢ್ ಕೋಟೆಯಲ್ಲಿ ನಡೆದ 26 ವರ್ಷದ ಉದ್ಯಮಿ ಕೇತನ್ ಅಗರ್ವಾಲ್(Ketan Agrawal Murder Case) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋನಾವಾಲಾ ಗ್ರಾಮಾಂತರ ಪೊಲೀಸರು ಭಾನುವಾರ ಪ್ರಮುಖ ಆರೋಪಿ ಚೇತನ್ ಚೌಧರಿಯ ದ್ವಿಚಕ್ರ ವಾಹನ ಹಾಗೂ ಘಟನೆ ನಡೆದ ದಿನ ಧರಿಸಿದ್ದ ಹೂಡಿ ಜಪ್ತಿ ಮಾಡಿದ್ದಾರೆ. 
ಆರೋಪಿ ಚೇತನ್ ಚೌಧರಿ ಪುಣೆಯಿಂದ ಲೋಹಗಢ್ ಕೋಟೆಗೆ ಪ್ರಯಾಣಿಸಲು ಈ ದ್ವಿಚಕ್ರ ವಾಹನವನ್ನು ಬಳಸಿದ್ದ ಎನ್ನಲಾಗಿದೆ. ವಾಹನದ ಜೊತೆಗೆ, ಘಟನೆ ನಡೆದ ದಿನ ಆರೋಪಿ ಧರಿಸಿದ್ದ ಹೂಡಿ ಮತ್ತು ಹೆಡ್‌ಫೋನ್‌ಗಳನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸೀಜ್ ಮಾಡಲಾದ ಬೈಕ್ ಹಾಗೂ ಬಟ್ಟೆಗಳನ್ನು ಈಗಾಗಲೇ ವಿಧಿವಿಜ್ಞಾನ ಪ್ರಯೋಗಾಲಯದ ತನಿಖೆಗೆ ಒಳಪಡಿಸಲಾಗಿದೆ ಎಂದು ಲೋನಾವಾಲಾ ಪೊಲೀಸರು ಖಚಿತಪಡಿಸಿದ್ದಾರೆ.

ಸಿಯಾ ಪೋಷಕರು ವಿಚಾರಣೆಗೆ ಹಾಜರು

ಇದೇ ವೇಳೆ, ಪ್ರಕರಣದ ಪ್ರಮುಖ ಆರೋಪಿಯಾದ ಸಿಯಾ ಗೋಯಲ್ ಪೋಷಕರಾದ ಪ್ರವೀಣ್ ಗೋಯಲ್ ಮತ್ತು ಪೂಜಾ ಗೋಯಲ್ ಅವರು ಇಂದು ವಿಚಾರಣೆಗಾಗಿ ಲೋನಾವಾಲಾ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾರೆ. ಪೊಲೀಸರು ಇವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಮದುವೆಗೆ ಒತ್ತಡ ಹಿನ್ನೆಲೆ ಕೊಲೆ

ಜೂನ್ 18 ರಂದು ಉದ್ಯಮಿ ಕೇತನ್ ಅಗರ್ವಾಲ್ ಲೋಹಗಢ್ ಕೋಟೆಯಿಂದ ಬಿದ್ದು ಸಾವನ್ನಪ್ಪಿದ್ದರು. ಆರಂಭದಲ್ಲಿ ಇದು ಅಪಘಾತ ಎನ್ನಲಾಗಿದ್ದರೂ, ನಂತರ ಕೊಲೆ ಪ್ರಕರಣ ದಾಖಲಾಗಿತ್ತು. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಮೃತರ ಭಾವಿ ಪತ್ನಿ ಸಿಯಾ ಗೋಯಲ್‌ಗೆ ಈ ಹಂತದಲ್ಲಿ ಮದುವೆಯಾಗಲು ಇಷ್ಟವಿರಲಿಲ್ಲ. ಆದರೆ, ಕೇತನ್‌ನನ್ನು ಮದುವೆಯಾಗುವಂತೆ ಕುಟುಂಬಸ್ಥರು ಆಕೆಯ ಮೇಲೆ ತೀವ್ರ ಒತ್ತಡ ಹೇರಿದ್ದರು. ಪೋಷಕರ ಗೌರವಕ್ಕೆ ಧಕ್ಕೆ ಮಾಡಬಾರದು ಎಂದು ಓಡಿ ಹೋಗುವ ಪ್ಲ್ಯಾನ್​ ಬಿಟ್ಟು ಕೊಲೆಮಾಡಲಾಗಿತ್ತು ಎನ್ನಲಾಗಿದೆ.

 ಉಜ್ವಲ್ ನಿಕಮ್ ನೇಮಕ

ಈ ಘಟನೆಯ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರ ಪ್ರಕರಣದ ತ್ವರಿತ ವಿಚಾರಣೆಗಾಗಿ 'ಫಾಸ್ಟ್ ಟ್ರ್ಯಾಕ್ ಕೋರ್ಟ್' ಸ್ಥಾಪಿಸಲು ಅನುಮೋದನೆ ನೀಡಿದೆ. ಅಷ್ಟೇ ಅಲ್ಲದೆ, ದೇಶದ ಹೆಸರಾಂತ ಹಿರಿಯ ವಕೀಲ ಹಾಗೂ ರಾಜ್ಯಸಭಾ ಸಂಸದ ಉಜ್ವಲ್ ನಿಕಮ್ ಅವರನ್ನು ಈ ಪ್ರಕರಣದ ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ (Special Public Prosecutor) ನೇಮಕ ಮಾಡಲಾಗಿದೆ.
ಮೃತ ಕೇತನ್ ಅಗರ್ವಾಲ್ ತಂದೆ ಪುಣೆಯಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿಯಾಗಿ ಶೀಘ್ರ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದರು. ಈ ವೇಳೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮತ್ತು ಪ್ರಕರಣವನ್ನು ಫಾಸ್ಟ್‌ ಟ್ರ್ಯಾಕ್ ನ್ಯಾಯಾಲಯಕ್ಕೆ ಒಪ್ಪಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದರು, (ಏಜೆನ್ಸೀಸ್).