Police Suspension (ಚಿತ್ರ X)
ಜೈಪುರ: ಪೊಲೀಸ್ ಠಾಣೆಯೊಂದರಲ್ಲಿ ದೂರು ನೀಡಲು ವೃದ್ಧ ವ್ಯಕ್ತಿಯೊಬ್ಬರು ಕಾಯುತ್ತಿರುವ ಸಂದರ್ಭದಲ್ಲಿ ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಕಾನ್ಸ್ಟೇಬಲ್ ತಮ್ಮ ಎರಡೂ ಕಾಲುಗಳನ್ನು ಮೇಜಿನ ಮೇಲಿಟ್ಟು ಕುಳಿತಿದ್ದ ಪೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ, ಅವರನ್ನು (Police Suspension) ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಿದ ಘಟನೆ ರಾಜಸ್ಥಾನದ ಡುಂಗರಪುರದಲ್ಲಿ ನಡೆದಿದೆ.
ಏನಿದು ಘಟನೆ?
ರಾಜಸ್ಥಾನದ ಡುಂಗರಪುರ ಜಿಲ್ಲೆಯ ಬಿಚ್ಚಿವಾರಾ ಪೊಲೀಸ್ ಠಾಣೆಗೆ ತಮಗಾದ ಸಮಸ್ಯೆಯ ಬಗ್ಗೆ ದೂಡು ನೀಡಲು ವೃದ್ಧರೊಬ್ಬರು ಬಂದಿದ್ದರು.ಆದರೆ, ಅಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ಕಾನ್‌ಸ್ಟೆಬಲ್ ಅವರ ಸಮಸ್ಯೆಯನ್ನು ಕೇಳುವ ಆಸಕ್ತಿಯನ್ನೇ ತೋರಲಿಲ್ಲ. ಬದಲಾಗಿ ಮುಂದೆ ಇದ್ದ ಟೇಬಲ್ ಮೇಲೆ ರಾಜಾರೋಷವಾಗಿ ತನ್ನೆರಡೂ ಕಾಲುಗಳನ್ನು ಚಾಚಿ ಕುಳಿತು ಮೊಬೈಲ್ ನೋಡುತ್ತಿರುವುದನ್ನು ಕಾಣಬಹುದಾಗಿದೆ.
ಚಿತ್ರ ಸೃಷ್ಟಿಸಿದ ಆಕ್ರೋಶದ ಅಲೆ
ಸಾಮಾಜಿಕ ಮಾಧ್ಯಮಗಳಲ್ಲಿ ಈ ಫೋಟೋ ವೈರಲ್ ಆಗುತ್ತಿದ್ದಂತೆ ಅನೇಕ ನೆಟ್ಟಿಗರು ಪೊಲೀಸ್ ಅಧಿಕಾರಿ ವಿರುದ್ದ ಆಕ್ರೋಶವನ್ನು ಹೊರಹಾಕಿದ್ದಾರೆ. ಖಾಕಿ ಯೂನಿಫಾರ್ಮ್ ಧರಿಸಿ ಸಾರ್ವಜನಿಕರ ರಕ್ಷಣೆಗೆ ನಿಲ್ಲಬೇಕಾದವರೇ ಈ ರೀತಿ ವರ್ತಿಸಿದರೆ ಸಾಮಾನ್ಯ ಜನರ ಕಥೆಯೇನು ಎಂದು ಕೆಲವರು ಪ್ರಶ್ನಿಸಿದ್ದಾರೆ. ಇನ್ನೂ ಕೆಲವರು ಹಿರಿಯ ನಾಗರಿಕರಿಗೆ ನೀಡಬೇಕಾದ ಕನಿಷ್ಠ ಸೌಜನ್ಯ ಹಾಗೂ ಗೌರವವನ್ನೂ ನೀಡದೆ, ಸಾರ್ವಜನಿಕ ಸೇವಾ ವಲಯಕ್ಕೆ ಕಪ್ಪುಚುಕ್ಕೆ ತರುವಂತೆ ನಡೆದುಕೊಂಡ ಕಾನ್‌ಸ್ಟೆಬಲ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯ ಮಾಡಿದ್ದರು.
ಅಧಿಕಾರಿಗಳ ತಕ್ಷಣದ ಶಿಸ್ತು ಕ್ರಮ
ಘಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡ ಹಿರಿಯ ಪೊಲೀಸ್ ಅಧಿಕಾರಿಗಳು, ಮಹಿಳಾ ಕಾನ್‌ಸ್ಟೆಬಲ್ ಅವರ ಈ ವರ್ತನೆ ಸಂಪೂರ್ಣ ನಿಯಮ ಬಾಹಿರ ಮತ್ತು ಕರ್ತವ್ಯ ಲೋಪ ಎಂದು ಪರಿಗಣಿಸಿ, ಅವರನ್ನು ಸೇವೆಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಆದಾಗ್ಯೂ, ಸಾಮಾಜಿಕ ಮಾಧ್ಯಮಗಳಲ್ಲಿ ಸಾರ್ವಜನಿಕರು ಹಂಚಿಕೊಂಡಿದ್ದ ವೈರಲ್ ಪೋಸ್ಟ್‌ಗೆ ನೇರವಾಗಿ ಉತ್ತರಿಸಿರುವ ಡುಂಗರಪುರ ಪೊಲೀಸರು, ಕರ್ತವ್ಯ ಲೋಪ ಎಸಗಿದ ಮಹಿಳಾ ಕಾನ್‌ಸ್ಟೆಬಲ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ (ಏಜೆನ್ಸೀಸ್).