Police 
ದೇಶ

ಪೋಲಿಯಾದ ಪೊಲೀಸ್​: ಮಹಿಳೆಯ ಮೇಲೆ ಇನ್ಸ್‌ಪೆಕ್ಟರ್​ನಿಂದ ಅತ್ಯಾಚಾರ! | Police

ಪಲ್ನಾಡು (ಆಂಧ್ರಪ್ರದೇಶ): ಸಮಾಜಕ್ಕೆ ರಕ್ಷಣೆ ನೀಡಬೇಕಾದ ಪೊಲೀಸ್ (Police) ಅಧಿಕಾರಿಯೊಬ್ಬರೇ ಮಹಿಳೆಯ ಮೇಲೆ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಆಂಧ್ರಪ್ರದೇಶದ ಪಲ್ನಾಡಿನಲ್ಲಿ ನಡೆದಿದೆ. ಜಮೀನು ಲೀಸ್‌ಗೆ ನೀಡಿದ್ದ ಸರ್ಕಲ್ ಇನ್ಸ್‌ಪೆಕ್ಟರ್ (ಸಿಐ), ಅದೇ ಜಮೀನು ಪಡೆದಿದ್ದ ಮಹಿಳೆಯ ಮೇಲೆ ದೌರ್ಜನ್ಯ ಎಸಗಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.
ಅರೋಪಿತ ಪೊಲೀಸ್ ಅಧಿಕಾರಿಯನ್ನು ಚಿನ್ನಮಲ್ಲಯ್ಯ ಎಂದು ಗುರುತಿಸಲಾಗಿದೆ. ಸಂತ್ರಸ್ತ ಮಹಿಳೆಯು ಈ ಅಧಿಕಾರಿಯಿಂದ ಕೃಷಿ ಭೂಮಿಯನ್ನು ಗುತ್ತಿಗೆಗೆ (ಲೀಸ್) ಪಡೆದಿದ್ದರು. ಈ ಪರಿಚಯದ ಹಿನ್ನೆಲೆಯಲ್ಲಿ ಚಿನ್ನಮಲ್ಲಯ್ಯ ಅವರು ಮಹಿಳೆಯ ಮನೆಗೆ ತೆರಳಿದ್ದರು. ಮನೆಯೊಳಗೆ ಹೋದ ಅಧಿಕಾರಿಯು ಬಾಗಿಲು ಹಾಕಿಕೊಂಡು ಆಕೆಯ ಮೇಲೆ ಬಲವಂತವಾಗಿ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.

ಪೊಲೀಸ್ ಕ್ರಮ ಮತ್ತು ತನಿಖೆ

ಘಟನೆಯ ನಂತರ ಸಂತ್ರಸ್ತೆ ತಕ್ಷಣ ಪೊಲೀಸ್ ಠಾಣೆಗೆ ಧಾವಿಸಿ ತಮಗೆ ನ್ಯಾಯ ಒದಗಿಸುವಂತೆ ದೂರು ನೀಡಿದ್ದಾರೆ. ಮಹಿಳೆಯ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಕಾನೂನು ಪ್ರಕ್ರಿಯೆಯ ಭಾಗವಾಗಿ ಮಹಿಳೆಯನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.

ಅಧಿಕಾರಿ ಅಮಾನತು

ಸೇವೆಯಲ್ಲಿರುವ ಪೊಲೀಸ್ ಅಧಿಕಾರಿಯೇ ಈ ಕೃತ್ಯದಲ್ಲಿ ಭಾಗಿಯಾಗಿರುವುದರಿಂದ ಇಲಾಖೆಯು ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ತನಿಖೆಯ ಮೇಲೆ ಯಾವುದೇ ಪ್ರಭಾವ ಬೀರದಂತೆ ಮುನ್ನೆಚ್ಚರಿಕೆ ವಹಿಸಿರುವ ಹಿರಿಯ ಅಧಿಕಾರಿಗಳು, ಆರೋಪಿ ಚಿನ್ನಮಲ್ಲಯ್ಯ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸಕ್ರಿಯ ಸೇವೆಯಿಂದ ತೆರವುಗೊಳಿಸಿ 'ವಿಆರ್' (Vacancy Reserve) ಗೆ ವರ್ಗಾಯಿಸಿದ್ದಾರೆ.

ಸಾಕ್ಷ್ಯಗಳ ಸಂಗ್ರಹ

ಸದ್ಯ ವಿಧಿವಿಜ್ಞಾನ ತಂಡಗಳು ಮತ್ತು ವಿಶೇಷ ಪೊಲೀಸ್ ತಂಡಗಳು ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿವೆ. ಪ್ರಕರಣಕ್ಕೆ ಸಂಬಂಧಿಸಿದ ವ್ಯಕ್ತಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ. "ಆರೋಪಗಳು ಸಾಬೀತಾದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಹಾಗೂ ಈ ಪ್ರಕರಣದಲ್ಲಿ ನ್ಯಾಯಯುತ ತನಿಖೆ ನಡೆಯಲಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದ್ದಾರೆ,(ಏಜೆನ್ಸೀಸ್​).