Luxury Bunker | ಟಿಎಂಸಿ ನಾಯಕನ ಮನೆಯಲ್ಲಿ ಬಂಗಾರದ ಹಾಸಿಗೆ
Luxury Bunker: ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಶಿವಪುರ ಪ್ರದೇಶದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಶಮೀಮ್ ಅಹ್ಮದ್ ನಿವಾಸದ ಮೇಲೆ ಪೊಲೀಸರು ನಡೆಸಿದ ದಾಳಿಯ ವೇಳೆ ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಬಿಜೆಪಿ ನಾಯಕರೊಬ್ಬರ ನಿವಾಸದ ಮೇಲೆ ನಡೆದಿದ್ದ ಬಾಂಬ್ ದಾಳಿ ಪ್ರಕರಣದಲ್ಲಿ ಶಮೀಮ್ ಅಹ್ಮದ್ ಪಾತ್ರವಿರುವ ಶಂಕೆಯ ಮೇರೆಗೆ ಅಧಿಕಾರಿಗಳು ಈ ಕ್ರಮಕ್ಕೆ ಮುಂದಾಗಿದ್ದರು.
ಪೊಲೀಸರು ಶಿವಪುರದಲ್ಲಿರುವ ಶಮೀಮ್ ಅಹ್ಮದ್ ಮನೆಗೆ ಬಂದು ತಪಾಸಣೆ ನಡೆಸಿದಾಗ ಅಲ್ಲಿ ಭೂಗತ ಮೆಟ್ಟಿಲುಗಳು ಪತ್ತೆಯಾಗಿವೆ. ಆ ಮೆಟ್ಟಿಲುಗಳ ಮೂಲಕ ಕೆಳಗೆ ಹೋದಾಗ ಮನೆಯ ಅಡಿಯಲ್ಲಿ ಭವ್ಯವಾದ ನೆಲಮಾಳಿಗೆ ಇರುವುದು ಕಂಡುಬಂದಿದೆ. ಈ ರಹಸ್ಯ ಮಹಡಿಗೆ ಹೋಗುವ ಮೆಟ್ಟಿಲು ಮತ್ತು ಟ್ರಾಪ್‌ಡೋರ್ ಪತ್ತೆಯಾಗುವವರೆಗೂ ಆ ಮನೆ ಸಾಮಾನ್ಯ ಮನೆಯಂತೆಯೇ ಕಂಡಿತ್ತು, ಕೆಳಗೆ ಹೋದಾಗ ಎಸಿ (AC), ರೆಫ್ರಿಜರೇಟರ್‌ಗಳು, ಸಿಸಿಟಿವಿ ಕ್ಯಾಮೆರಾಗಳು ಮತ್ತು ಅತ್ಯುನ್ನತ ಗುಣಮಟ್ಟದ ಐಷಾರಾಮಿ ಅಲಂಕಾರದ ವಸ್ತುಗಳಿದ್ದವು ಎಂದು ತಿಳಿದುಬಂದಿದೆ.
ಇದಷ್ಟೆ ಅಲ್ಲದೇ ಅಲ್ಲಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಹಲವಾರು ಐಷಾರಾಮಿ ವಸ್ತುಗಳು ಮತ್ತು ದುಬಾರಿ ಬೆಡ್ಗಳು ಪತ್ತೆಯಾಗಿವೆ. ಪೊಲೀಸ್ ಮೂಲಗಳ ಪ್ರಕಾರ, ನೆಲಮಾಳಿಗೆಯಲ್ಲಿದ್ದ ಹಾಸಿಗೆ ಮತ್ತು ಸೋಫಾಗಳಲ್ಲಿ ಚಿನ್ನದ ಕೆತ್ತನೆಯ ಕೈಚಳಕವಿದ್ದು, ಇಡೀ ನೆಲಮಾಳಿಗೆಯನ್ನು ಒಂದು ಐಷಾರಾಮಿ ಸೂಟ್‌ನಂತೆ ವಿನ್ಯಾಸಗೊಳಿಸಲಾಗಿತ್ತು. ಇಲ್ಲಿನ ಸೊಬಗು ಮತ್ತು ಅಪಾರ ಸಂಪತ್ತನ್ನು ಕಂಡು ಪೊಲೀಸ್ ಅಧಿಕಾರಿಗಳೇ ದಂಗಾಗಿದ್ದಾರೆ. ಶಮೀಮ್ ಅಹ್ಮದ್ ಪ್ರಸ್ತುತ ತಲೆಮರೆಸಿಕೊಂಡಿದ್ದು, ಅವರನ್ನು ಬಂಧಿಸಲು ಪೊಲೀಸರು ಶೋಧ ನಡೆಸುತ್ತಿದ್ದಾರೆ. ಶಮೀಮ್ ಒಡೆತನದ ಈ ಅಪಾರ ಸಂಪತ್ತಿನ ಮೂಲಗಳ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಇಲ್ಲಿದೆ ಮತ್ತೊಂದು ಪ್ರಕರಣ!...
ಇದೇ ರೀತಿಯ ಮತ್ತೊಂದು ಘಟನೆಯಲ್ಲಿ, ತೃಣಮೂಲ ನಾಯಕ ನಾರಾಯಣ್ ರಂಜಿತ್ ಮತ್ತು ಆತನ ಸಹಚರ ಗೋಪಾಲ್ ಮಲ್ಲಿಕ್ರನ್ನು ಒಡಿಶಾದಲ್ಲಿ ಬಂಧಿಸಲಾಗಿದೆ. ಕೋಲ್ಕತ್ತಾ ಪೊಲೀಸರು ರಂಜಿತ್ರ ಆನಂದಪುರದ ನಿವಾಸದಿಂದ ಪಿಸ್ತೂಲುಗಳು, ಮ್ಯಾಗಜೀನ್‌ಗಳು ಮತ್ತು ಜೀವಂತ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದ್ದು, ಆರೋಪಿ ಪರಾರಿಯಾಗಿದ್ದಾನೆ(ಏಜೆನ್ಸೀಸ್).