ಹಿರಿಯ ಐಪಿಎಸ್ ಅಧಿಕಾರಿ ಸುನಿಲ್ ನಾಯಕ್
ಪಾಟ್ನಾ: ಸಂಸದರೊಬ್ಬರಿಗೆ ಪ್ರಕರಣವೊಂದರಲ್ಲಿ ಕಸ್ಟಡಿಯಲ್ಲಿದ್ದ ವೇಳೆ ಥರ್ಡ್ ಡಿಗ್ರಿ ಟ್ರೀಟ್ಮೆಂಟ್ ನೀಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಐಪಿಎಸ್ ಅಧಿಕಾರಿ(IPS officer) ಸುನಿಲ್ ನಾಯಕ್ ಅವರನ್ನು ಆಂಧ್ರ ಪ್ರದೇಶ ಪೊಲೀಸರು ಸೋಮವಾರ(ಫೆ. 23) ಪಾಟ್ನಾದಲ್ಲಿ ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಆಂಧ್ರಪ್ರದೇಶದಲ್ಲಿ ಸಿಎಂ ಜಗನ್ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್‌ಸಿಪಿ ಸರ್ಕಾರದ ಅವಧಿಯಲ್ಲಿ ಸಂಸದರಾಗಿದ್ದ ಮತ್ತು ಪ್ರಸ್ತುತ ಆಂಧ್ರ ವಿಧಾನಸಭೆಯ ಉಪ ಸ್ಪೀಕರ್ ಆಗಿರುವ ರಘುರಾಮಕೃಷ್ಣಂ ರಾಜು ಅವರಿಗೆ ಕಸ್ಟಡಿಯಲ್ಲಿದ್ದ ವೇಳೆ ಥರ್ಡ್ ಡಿಗ್ರಿ ಟ್ರಿಟ್ಮೆಂಟ್ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಟಿಡಿಪಿ ಸರ್ಕಾರ ತನಿಖೆ ಆದೇಶಿಸಿದೆ.
ಬಿಹಾರ ಕೇಡರ್ನಲ್ಲಿ ಪ್ರಸ್ತುತ ಐಜಿಯಾಗಿ ಸೇವೆ ಸಲ್ಲಿಸುತ್ತಿರುವ ಸುನಿಲ್ ನಾಯಕ್ ಅವರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಹಾಜರಾಗುವಂತೆ ಈ ಹಿಂದೆ ಆಂಧ್ರ ಪೊಲೀಸರು ಹಲವು ಬಾರಿ ನೋಟಿಸ್ ಜಾರಿ ಮಾಡಿದ್ದರು ಎನ್ನಲಾಗಿದೆ. ಆದರೆ ಸುನಿಲ್ ಕುಮಾರ್ ಆ ಯಾವುದೇ ನೋಟಿಸ್ಗೆ ಪ್ರತಿಕ್ರಿಯೆ ನೀಡದ ಹಿನ್ನೆಲೆ ಪಾಟ್ನಾ ತೆರಳಿದ್ದ ಆಂಧ್ರ ಪೊಲೀಸರನ್ನು ಅವರನ್ನು ಬಂಧಿಸಿ ಕರೆ ತರುತ್ತಿದ್ದಾರೆ ಎನ್ನಲಾಗಿದೆ.
ಪ್ರಕರಣದ ಹಿನ್ನೆಲೆ ಏನು?
ವೈಎಸ್‌ಆರ್‌ಸಿಪಿ ಸರ್ಕಾರದ ಅವಧಿಯಲ್ಲಿ, ಆಂಧ್ರಪ್ರದೇಶ ಸಿಐಡಿಯಲ್ಲಿ ಐಜಿಯಾಗಿ ಡೆಪ್ಯುಟೇಶನ್‌ನಲ್ಲಿ ಸುನಿಲ್ ನಾಯಕ್ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. 2021ರಲ್ಲಿ ಪ್ರಕರಣವೊಂದರಲ್ಲಿ ಬಂಧಿಸಲ್ಪಟ್ಟು ಸಿಐಡಿ ಕಸ್ಟಡಿಯಲ್ಲಿದ್ದಾಗ ಸುನಿಲ್ ನಾಯಕ್ ತಮ್ಮ ಮೇಲೆ ಥರ್ಡ್ ಡಿಗ್ರಿ ಟ್ರೀಟ್ಮೆಂಟ್ ಮೂಲಕ ಹಲ್ಲೆ ನಡೆಸಿದ್ದಾರೆ. ಕಾಲುಗಳಿಗೆ ಬಲವಾದ ಹೊಡೆತ ನೀಡಿ, ಮಾನಸಿಕವಾಗಿ ಬಹಳ ಕಿರುಕುಳ ನೀಡಿದ್ದರು ಎಂದು ಸಂಸದರಾಗಿದ್ದ ರಘುರಾಮಕೃಷ್ಣ ರಾಜು ಆರೋಪಿಸಿದ್ದರು.
ಸುನಿಲ್ ನಾಯಕ್ ಅಷ್ಟೇ ಅಲ್ಲದೇ ಸಿಐಡಿ ಐಜಿಪಿಯಾಗಿದ್ದ ಪಿ.ವಿ.ಸುನಿಲ್ ಕುಮಾರ್ ಮತ್ತು ಮತ್ತೊಬ್ಬ ಪಿಎಸ್ಐ ವಿರುದ್ಧ ಆರೋಪಿಸಿ ದೂರು ನೀಡಿದ್ದರು. 2024ರಲ್ಲಿ ವೈಎಸ್‌ಆರ್‌ಸಿಪಿ ಸರ್ಕಾರ ಹೋಗಿ ಟಿಡಿಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು, ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಆದೇಶಿಸಿತ್ತು.
ಪ್ರಕರಣದಲ್ಲಿ ಆರೋಪಿತರಾಗಿರುವ ಮತ್ತೊಬ್ಬ ಹಿರಿಯ ಐಪಿಎಸ್ ಅಧಿಕಾರಿ ಪಿ.ವಿ.ಸುನಿಲ್ ಕುಮಾರ್ ಅವರನ್ನು ಸರ್ಕಾರ ನಿವೃತ್ತಿ ಹೊಂದುವವರೆಗೂ ಅಮಾನತು ಮಾಡಿ ಆದೇಶ ಹೊರಡಿಸಿದೆ ಎನ್ನಲಾಗಿದೆ (ಏಜೆನ್ಸೀಸ್).