ತಿರುವನಂತಪುರಂ: ಕೇರಳದಲ್ಲಿ ವಲಸಿಗ ಕಾರ್ಮಿಕನೊಬನ್ನು ಬಾಂಗ್ಲಾದೇಶದ ಪ್ರಜೆ ಎಂದು ಶಂಕಿಸಿ, ಕಳ್ಳತನದ ಆರೋಪದ ಮೇಲೆ ಆತನನ್ನು ಗುಂಪೊಂದು ಥಳಿಸಿ ಕೊಲೆ ಮಾಡಿದ್ದು, ಘಟನೆಗೆ ಸಂಬಂಧಿಸಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಭಾನುವಾರ(ಡಿ. 21) ವರದಿಯಾಗಿದೆ.
ಪಾಲಕ್ಕಾಡ್ನಲ್ಲಿ ಈ ಘಟನೆ ನಡೆದಿದೆ. ಛತ್ತೀಸ್‌ಗಢದ ಶಕ್ತಿ ಜಿಲ್ಲೆಯ 31 ವರ್ಷದ ರಾಮನಾರಾಯಣ್ ಬಾಘೇಲ್ ಕೆಲಸಕ್ಕಾಗಿ ಕೇರಳಕ್ಕೆ ವಲಸೆ ಬಂದಿದ್ದು, ವಲಯಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಅಟ್ಟಪಲ್ಲಂ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ.
ಏತನ್ಮಧ್ಯೆ ಡಿ. 17ರಂದು ಸ್ಥಳೀಯರ ಗುಂಪೊಂದು ರಾಮನಾರಾಯಣ್ ಕಳ್ಳತನ ಮಾಡಿದ್ದಾನೆಂದು ಆರೋಪಿಸಿ, ಜೊತೆಗೆ ಬಾಂಗ್ಲಾ ದೇಶದವನು ಎಂದು ಹೇಳಿ ಕ್ರೂರವಾಗಿ ಥಳಿಸಿದೆ. ಈ ಸಂದರ್ಭದಲ್ಲಿ ತೀವ್ರ ಗಾಯಗೊಂಡಿದ್ದ ರಾಮನಾರಾಯಣ್ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾನೆ.
ತಕ್ಷಣ ಸ್ಥಳಕ್ಕೆ ತೆರಳಿದ್ದ ಪೊಲೀಸರು, ರಾಮನಾರಾಯಣ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದು, ದೇಹದ ಮೇಲೆ 80 ಕ್ಕೂ ಹೆಚ್ಚು ಗಾಯಗಳಾಗಿದ್ದವು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯು ಆ ವ್ಯಕ್ತಿಯನ್ನು ಕ್ರೂರವಾಗಿ ಹೊಡೆದ ಕಾರಣ ಸಾವನ್ನಪ್ಪಿದ್ದಾನೆ ಎಂದು ದೃಢಪಡಿಸಿದೆ.
ಘಟನೆ ಸಂಬಂಧ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದು, ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ತನಿಖೆ ನಡೆಯುತ್ತಿದೆ. ಇನ್ನೂ ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ (ಏಜೆನ್ಸೀಸ್).