ಹೈದರಾಬಾದ್: ತೆಲಂಗಾಣದಲ್ಲಿ ಬಾಲಕಿಯೊಬ್ಬಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪೋಕ್ಸೊ ಪ್ರಕರಣದಲ್ಲಿ(POCSO case) ಜಗಿತ್ಯಾಲ ಫಾಸ್ಟ್ ಟ್ರ್ಯಾಕ್ ವಿಶೇಷ ಸೆಷನ್ಸ್ ಕೋರ್ಟ್ ಬುಧವಾರ(ಜು. 15) ತೀರ್ಪು ಪ್ರಕಟಿಸಿದ್ದು, ಐದು ಜನರಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 20,000 ರೂ. ದಂಡ ವಿಧಿಸಿದೆ ಎಂದು ವರದಿಯಾಗಿದೆ.
ಪೊಲೀಸರ ಪ್ರಕಾರ, 2020 ಅಕ್ಟೋಬರ್ನಲ್ಲಿ ಮೆಟ್ಪಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಬಾಲಕಿಯ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಿನ ಎಸ್ಐ ಸಡಕರ್ ಅವರು ಲೋಕಿನಿ ರಾಜೇಶ್(22), ದರಾಂಗುಲ ಸಾಯಿಕುಮಾರ್ (21), ಮೊಗಿಲಿಪಾಕ ಅನಿಲ್ (19), ಕುಂಚೇಪು ಶಿವ (19), ಮತ್ತು ಕುಂಚೇಪು ವೆಂಕಟೇಶ್ (22) ವಿರುದ್ಧ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು.
ಪ್ರಕರಣದ ಸಾಕ್ಷ್ಯ ಮತ್ತು ಹೇಳಿಕೆಗಳನ್ನು ಪರಿಶೀಲಿಸಿದ ನಂತರ ಫಾಸ್ಟ್ ಟ್ರ್ಯಾಕ್ ವಿಶೇಷ ಕೋರ್ಟ್ನ ನ್ಯಾಯಾಧೀಶೆ ರತ್ನಾ ಪದ್ಮಾವತಿ ಅವರು, ಐವರು ಆರೋಪಿಗಳನ್ನು ತಪ್ಪಿತಸ್ಥರೆಂದು ಘೋಷಿಸಿ, ಜೀವಾವಧಿ ಶಿಕ್ಷೆ ಮತ್ತು ತಲಾ 20,000 ರೂ. ದಂಡ ವಿಧಿಸಿದರು. ಸಂತ್ರಸ್ತ ಬಾಲಕಿಗೆ ಪರಿಹಾರವಾಗಿ 12 ಲಕ್ಷ ರೂ.ಗಳನ್ನು ಪಾವತಿಸಲು ಆದೇಶಿಸಿದ್ದಾರೆ (ಏಜೆನ್ಸೀಸ್).