Shabad Murder ಸಾಂದರ್ಭಿಕ ಚಿತ್ರ 
ದೇಶ

ತೆಲಂಗಾಣದಲ್ಲಿ ಭೀಕರ ಸರಣಿ ಹತ್ಯಾಕಾಂಡ: ಪೋಕ್ಸೊ ಪ್ರಕರಣದ ಸೇಡು ತೀರಿಸಿಕೊಳ್ಳಲು ಇಡೀ ಕುಟುಂಬವನ್ನೇ ಮುಗಿಸಿದ ಪಾಪಿ! Shabad Murder

ತೆಲಂಗಾಣ: ಪೋಕ್ಸೊ ಕಾಯ್ದೆಯಡಿ ಆರೋಪಿಯಾಗಿದ್ದ ವ್ಯಕ್ತಿಯೊಬ್ಬ ತೀವ್ರ ಆಕ್ರೋಶ ಮತ್ತು ಸೇಡಿನ ಜ್ವಾಲೆಯಿಂದ ತನ್ನ ಸ್ವಂತ ಕುಟುಂಬ ಹಾಗೂ ತನ್ನ ಮೇಲೆ ಲೈಂಗಿಕ ಕಿರುಕುಳದ ದೂರು ನೀಡಿದ್ದ ಹದಿಹರೆಯದ ಹುಡುಗಿಯ ಕುಟುಂಬ ಸೇರಿದಂತೆ ಒಟ್ಟು ಆರು (Shabad Murder) ಜನರನ್ನು ಕೊಲೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿಯಲ್ಲಿ ನಡೆದಿದೆ. 
35 ವರ್ಷದ ರಾಜ್‌ಕುಮಾರ್ ಎಂದು ಗುರುತಿಸಲಾದ ಆರೋಪಿ ಶುಕ್ರವಾರ (ಜು.10) ತಡರಾತ್ರಿ ಎರಡು ವಿಭಿನ್ನ ಸ್ಥಳಗಳಲ್ಲಿ ಈ ಮಾರಣಾಂತಿಕ ದಾಳಿ ನಡೆಸಿ ಪ್ರಸ್ತುತ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ಆತನ ವಿರುದ್ಧ ದಾಖಲಾಗಿದ್ದ ಪೋಕ್ಸೊ ಪ್ರಕರಣದ ಸೇಡಿನಿಂದಲೇ ಈ ಭೀಕರ ಕೊಲೆಗಳು ನಡೆದಿವೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.

ಮೊದಲ ಬಲಿಪಶುಗಳು ಸ್ವಂತ ಪತ್ನಿ ಮತ್ತು ಇಬ್ಬರು ಮಕ್ಕಳು!

ಪೊಲೀಸರ ತನಿಖೆಯ ಪ್ರಕಾರ, ಆರೋಪಿ ರಾಜ್‌ಕುಮಾರ್ ಶುಕ್ರವಾರ ಮಧ್ಯರಾತ್ರಿಯ ಸುಮಾರಿಗೆ ಶಾಬಾದ್‌ನಲ್ಲಿರುವ ತನ್ನ ನಿವಾಸದಲ್ಲಿ ತನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳು ಮಲಗಿರುವಾಗ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. 
ಸ್ವಂತ ಕುಟುಂಬವನ್ನು ಮುಗಿಸಿದ ನಂತರವೂ ಆರೋಪಿಯ ಸೇಡಿನ ಜ್ವಾಲೆ ತಣ್ಣಗಾಗಿರಲಿಲ್ಲ. ನಂತರ ಆರು ಕಿಲೋಮೀಟರ್ ಪ್ರಯಾಣಿಸಿ ದೇವಲಗುಡ ಗ್ರಾಮಕ್ಕೆ ತಲುಪಿದ್ದು, ತನ್ನ ಮೇಲೆ ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದ ಹದಿಹರೆಯದ ಬಾಲಕಿಯ ಮನೆಗೆ ನುಗ್ಗಿ ಬಾಲಕಿ, ಆಕೆಯ ತಾಯಿ ಮತ್ತು ಅಜ್ಜಿಯ ಮೇಲೆ ದಾಳಿ ನಡೆಸಿ ಕೊಲೆ ಮಾಡಿದ್ದಾನೆ. 
ಪೊಲೀಸ್ ಅಧಿಕಾರಿಗಳ ಪ್ರಕಾರ, ಆರೋಪಿ ರಾಜ್‌ಕುಮಾರ್ ಕೇವಲ ಚಾಕುವಿನಿಂದ ಇರಿದಷ್ಟೇ ಅಲ್ಲದೆ, ಆರೂ ಜನ ಬಲಿಪಶುಗಳ ಕತ್ತನ್ನು ಸೀಳಿ ಅತ್ಯಂತ ಅಮಾನುಷವಾಗಿ ಹತ್ಯೆ ಮಾಡಿದ್ದಾನೆ. ಕೊಲೆಗೆ ಬಳಸಲಾದ ಚಾಕುವನ್ನು ಪೊಲೀಸರು ಅಪರಾಧ ನಡೆದ ಸ್ಥಳದಿಂದ ವಶಪಡಿಸಿಕೊಂಡಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿಯು ತಡರಾತ್ರಿ ಎರಡು ಬೇರೆ ಬೇರೆ ಸ್ಥಳಗಳಲ್ಲಿ ಈ ಸರಣಿ ಕೊಲೆಗಳನ್ನು ನಡೆಸಿದ್ದಾನೆ. ಕೃತ್ಯ ಎಸಗಿದ ತಕ್ಷಣವೇ ಆತ ತನ್ನ ತಂದೆಗೆ ಮೊಬೈಲ್ ಕರೆ ಮಾಡಿ, ತಾನು ಮಾಡಿದ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಫ್ಯೂಚರ್ ಸಿಟಿ ಪೊಲೀಸ್ ಕಮಿಷನರ್ ತರುಣ್ ಜೋಶಿ ತಿಳಿಸಿದ್ದಾರೆ. ಮಗನ ಕರೆಯಿಂದ ತಲ್ಲಣಗೊಂಡ ತಂದೆ, ತಕ್ಷಣವೇ ಶಾಬಾದ್ ಪೊಲೀಸ್ ಠಾಣೆಗೆ ಧಾವಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಸಿಗುತ್ತಿದ್ದಂತೆಯೇ ಫ್ಯೂಚರ್ ಸಿಟಿ ಪೊಲೀಸ್ ಕಮಿಷನರ್ ತರುಣ್ ಜೋಶಿ ಹಾಗೂ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ (DCP) ಯೋಗೇಶ್ ಗೌತಮ್ ಅವರು ಖುದ್ದಾಗಿ ಎರಡೂ ಘಟನಾ ಸ್ಥಳಗಳಿಗೆ ಭೇಟಿ ನೀಡಿ ತನಿಖೆಯ ಮೇಲ್ವಿಚಾರಣೆ ನಡೆಸಿದ್ದಾರೆ.

ಪ್ರೀತಿ ಮಾಡಿ ಮದುವೆಯಾಗಿದ್ದ ದಂಪತಿ!

ಆರೋಪಿ ರಾಜ್‌ಕುಮಾರ್ ಮತ್ತು ಮೃತ ಸರಿತಾ 2018 ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯ ನಂತರ ಇವರು ಶಾಬಾದ್ ಮತ್ತು ದೇವಲಗುಡ ಪ್ರದೇಶಗಳಲ್ಲಿ ವಾಸವಾಗಿದ್ದರು. ಆದರೆ, ರಾಜ್‌ಕುಮಾರ್ ಅಪ್ರಾಪ್ತ ಬಾಲಕಿಯೊಬ್ಬಳಿಗೆ ನೀಡಿದ ಕಿರುಕುಳ ಇಡೀ ಸಂಸಾರವನ್ನು ಸ್ಮಶಾನವಾಗಿಸಿದೆ.
17 ವರ್ಷದ ಬಾಲಕಿಯನ್ನು ಹಿಂಬಾಲಿಸಿ, ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ರಾಜ್‌ಕುಮಾರ್ ವಿರುದ್ಧ ಈ ಹಿಂದೆ ಪೋಕ್ಸೊ ಕಾಯ್ದೆಯ ಸೆಕ್ಷನ್ 11 ಮತ್ತು 12 ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ, ಈ ಅಪರಾಧಗಳಿಗೆ 7 ವರ್ಷಗಳಿಗಿಂತ ಕಡಿಮೆ ಅವಧಿಯ ಶಿಕ್ಷೆ ಇರುವ ಕಾರಣ, ಆತನಿಗೆ 20,000 ರೂಪಾಯಿಗಳ ವೈಯಕ್ತಿಕ ಬಾಂಡ್ ಮೇಲೆ ಜಾಮೀನು ದೊರೆತು ಜೈಲಿನಿಂದ ಬಿಡುಗಡೆಯಾಗಿದ್ದರು.

ಸೇಡಿನ ದಳ್ಳುರಿ ತಂದಿಟ್ಟ ವಿನಾಶ

ಮೈನರ್ ಬಾಲಕಿ ದಾಖಲಿಸಿದ್ದ ಈ ಕ್ರಿಮಿನಲ್ ಪ್ರಕರಣವೇ ರಾಜ್‌ಕುಮಾರ್ ಮನಸ್ಸಿನಲ್ಲಿ ತೀವ್ರ ದ್ವೇಷದ ಜ್ವಾಲೆ ಉರಿಯುವಂತೆ ಮಾಡಿತ್ತು. ಜೈಲಿನಿಂದ ಬಂದ ತಕ್ಷಣವೇ ಆತ ಹದಿಹರೆಯದ ಬಾಲಕಿಯ ಕುಟುಂಬ ಮತ್ತು ತನ್ನದೇ ಪತ್ನಿ-ಮಕ್ಕಳನ್ನು ಮುಗಿಸಲು ಸಂಚು ರೂಪಿಸಿದ್ದಾನೆ. ಈ ಆರೂ ಕೊಲೆಗಳು ಪೋಕ್ಸೊ ಕೇಸಿನ ಹಿನ್ನೆಲೆಯಲ್ಲಿ ನಡೆದ ಆಕ್ರೋಶದ ಪ್ರತೀಕಾರ ಎಂದು ಪೊಲೀಸರು ಬಲವಾಗಿ ಶಂಕಿಸಿದ್ದಾರೆ.
ಸದ್ಯ ಶಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಹಂತಕ ರಾಜ್‌ಕುಮಾರ್‌ನನ್ನು ಸೆರೆಹಿಡಿಯಲು ಪೊಲೀಸರ ಹಲವು ವಿಶೇಷ ತಂಡಗಳು ಗಾಳ ಬೀಸಿವೆ. "ಆರೋಪಿ ಹಂತಕ ಸಿಕ್ಕಿಬಿದ್ದ ನಂತರ ತನಿಖೆ ಮುಂದುವರಿದಂತೆ ಇನ್ನಷ್ಟು ನಿಖರ ವಿವರಗಳು ಹೊರಬರಲಿವೆ," ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ (ಏಜೆನ್ಸೀಸ್​).