Priyanka Gandhi | ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ
ದೆಹಲಿ: ಸಂಸತ್ತು ನಾಟಕ ಮಾಡುವ ವೇದಿಕೆಯಲ್ಲ, ಇಲ್ಲಿ ವಿಷಯಗಳು ಸ್ಪಷ್ಟವಾಗಿರಬೇಕು ಎಂದಿದ್ದ ಪ್ರಧಾನಿ ನರೇಂದ್ರ ಮೋದಿ, ವಿಪಕ್ಷಗಳು ಸದನ ಸುಗಮವಾಗಿ ನಡೆಯಲು ಅನುವು ಮಾಡಿಕೊಡುವಂತೆ ಒತ್ತಾಯಿಸಿದ್ದರು. ಸದ್ಯ ಈ ಹೇಳಿಕೆಗೆ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ತಿರುಗೇಟು ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಿಯಾಂಕಾ ಗಾಂಧಿ, ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ವಾಯು ಮಾಲಿನ್ಯ ದೊಡ್ಡ ಸಮಸ್ಯೆಗಳು. ನಾವು ಅವುಗಳನ್ನು ಚರ್ಚಿಸೋಣ. ಸಂಸತ್ತು ಇರುವುದು ಯಾವುದಕ್ಕಾಗಿ..?ಸಮಸ್ಯೆಗಳ ಬಗ್ಗೆ ಮಾತನಾಡುವುದು ಮತ್ತು ಅದರ ಕುರಿತಾಗಿ ಧ್ವನಿ ಎತ್ತುವುದು ನಾಟಕವಲ್ಲ, ಜನಸಾಮಾನ್ಯರಿಗೆ ಮುಖ್ಯವಾಗಿರುವ ವಿಷಯಗಳಿಗೆ, ಪ್ರಜಾಸತ್ತಾತ್ಮಕ ಚರ್ಚೆಗಳಿಗೆ ಅವಕಾಶ ನೀಡದಿರುವುದು ನಾಟಕ ಎಂದು ಟೀಕಿಸಿದ್ದಾರೆ.
ಪ್ರಧಾನಿ ಮೋದಿ ಹೇಳಿದ್ದೇನು..?
ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದ್ದಂತೆ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಭಾರತವು ಪ್ರಜಾಪ್ರಭುತ್ವವನ್ನು ಸಾಧಿಸಬಲ್ಲದು ಎಂಬುದನ್ನು ಪ್ರದರ್ಶಿಸಿದೆ. ದೇಶದ ಪ್ರಜಾಪ್ರಭುತ್ವ ಮತ್ತು ದೇಶದ ಆರ್ಥಿಕ ಶಕ್ತಿ ಎರಡನ್ನೂ ಜಗತ್ತು ಕಂಡಿದೆ. ಅಧಿವೇಶನದ ಗಮನವು ಗಣನೀಯ ರಾಷ್ಟ್ರೀಯ ಸಮಸ್ಯೆಗಳು ಮತ್ತು ಸಾರ್ವಜನಿಕ ಪ್ರತಿನಿಧಿಗಳ ಜವಾಬ್ದಾರಿಗಳ ಮೇಲೆ ಇರಬೇಕು ಎಂದಿದ್ದರು.
ಬಿಹಾರ ಚುನಾವಣಾ ಫಲಿತಾಂಶದ ಆಘಾತದಿಂದ ಹೊರಬಂದು ಸದನದಲ್ಲಿ ಬಲವಾದ, ನೈಜ ಸಮಸ್ಯೆಗಳನ್ನು ಎತ್ತುವಂತೆ ವಿರೋಧ ಪಕ್ಷಗಳಿಗೆ ಸಲಹೆ ನೀಡಿದ ಪ್ರಧಾನಿಗಳು, ಸೋಲಿನ ಭೀತಿ ಚರ್ಚೆಗೆ ವೇದಿಕೆಯಾಗಬಾರದು. ಚುನಾವಣೆಗಳು ಮುಗಿದು ಸಮಯ ಕಳೆದರೂ ಕೆಲವು ಪಕ್ಷಗಳು ತಮಗಾಗಿರುವ ಸೋಲಿನ ನಷ್ಟವನ್ನು ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ಹೊಸದಾಗಿ ಆಯ್ಕೆಯಾದ ಸಂಸದರು ತಮ್ಮ ಕ್ಷೇತ್ರಗಳ ಬಗ್ಗೆ ಮಾತನಾಡಲು ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯಗಳನ್ನು ಎತ್ತಲು ಅವಕಾಶಗಳು ಸಿಗದ ಕಾರಣ ನಿರಾಶೆಗೊಳ್ಳುತ್ತಿದ್ದಾರೆ. ಪಕ್ಷಗಳನ್ನು ಮೀರಿ ಮೊದಲ ಬಾರಿಗೆ ಸಂಸದರಾದವರಿಗೆ ಸದನದಲ್ಲಿ ಸ್ಥಳಾವಕಾಶ ನೀಡಬೇಕು. ನಾಟಕ ಮಾಡಲು ಹಲವು ಸ್ಥಳಗಳಿವೆ ಎಂದು ಪ್ರತಿಪಕ್ಷಗಳನ್ನು ಕುಟುಕಿದ್ದಾರೆ(ಏಜೆನ್ಸೀಸ್).