Narendra Modi | ದಿಬ್ರುಗಢದ ತೋಟದಲ್ಲಿ ಕೆಲಸಗಾರರ ಜೊತೆ ಪ್ರಧಾನಿ ಮೋದಿ ಸಂವಾದ 
ದೇಶ

ಅಸ್ಸಾಂನ ಚಹಾ ಇಡೀ ವಿಶ್ವವನ್ನೇ ಆವರಿಸಿದೆ; ದಿಬ್ರುಗಢದ ತೋಟದಲ್ಲಿ ಶ್ರಮಜೀವಿಗಳ ಕಷ್ಟ-ಸುಖ ಆಲಿಸಿದ ನಮೋ | Narendra Modi

Narendra Modi: ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಅಸ್ಸಾಂ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಬುಧವಾರ (ಏ.1) ದಿಬ್ರುಗಢದಲ್ಲಿರುವ ಮನೋಹರಿ ಚಹಾ ತೋಟಕ್ಕೆ ಭೇಟಿ ನೀಡಿ, ಅಲ್ಲಿನ ಮಹಿಳಾ ಕಾರ್ಮಿಕರೊಂದಿಗೆ ಸುಮಾರು ಅರ್ಧ ಗಂಟೆ ಕಾಲ ಸಂವಾದ ನಡೆಸಿದ್ದು, ಚಹಾ ಎಲೆಗಳನ್ನು ಕೀಳುವ ಮೂಲಕ ಕಾರ್ಮಿಕರ ಕೆಲಸದಲ್ಲಿ ತಾವೂ ಭಾಗಿಯಾಗಿದ್ದಾರೆ.
 ಈ ವಿಷಯವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ, ಚಹಾ ಅಸ್ಸಾಂನ ಆತ್ಮ, ಇಲ್ಲಿಂದ ಬರುವ ಚಹಾ ಇಡೀ ವಿಶ್ವವನ್ನೇ ತಲುಪಿದೆ. ದಿಬ್ರುಗಢದ ತೋಟದಲ್ಲಿ ಮಹಿಳಾ ಕಾರ್ಮಿಕರೊಂದಿಗೆ ಕಳೆದ ಸಮಯ ಅತ್ಯಂತ ಸ್ಮರಣೀಯವಾಗಿತ್ತು ಎಂದು ಮೋದಿ ಬರೆದುಕೊಂಡಿದ್ದಾರೆ. ಕಾರ್ಮಿಕರ ಶಿಕ್ಷಣ, ಆರೋಗ್ಯ ಮತ್ತು ವೇತನದಂತಹ ಪ್ರಮುಖ ವಿಷಯಗಳ ಕುರಿತು ಚರ್ಚಿಸಿದ ಅವರು, ಚಹಾ ತೋಟದ ಕುಟುಂಬಗಳ ಪರಿಶ್ರಮ ಅಸ್ಸಾಂನ ಹೆಮ್ಮೆಯನ್ನು ಹೆಚ್ಚಿಸಿದೆ ಎಂದು ಶ್ಲಾಘಿಸಿದರು.

ಗೋಗಮುಖ್‌ದಲ್ಲಿ ಪ್ರಧಾನಿ ಮೋದಿ ಗರ್ಜನೆ

ಗೋಗಮುಖ್‌ನಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ರಾಜ್ಯದ ಜನರಲ್ಲಿ ಕಂಡುಬರುತ್ತಿರುವ ಅಭೂತಪೂರ್ವ ಉತ್ಸಾಹವು ಅಸ್ಸಾಂನ ನಿರಂತರ ಬೆಳವಣಿಗೆ ಮತ್ತು ಸ್ಥಿರತೆಗೆ ನೀಡುತ್ತಿರುವ ಬೆಂಬಲವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತಿದೆ ಎಂದರು. ಈ ಬಾರಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯು ಕೇವಲ ಅಧಿಕಾರಕ್ಕಾಗಿ ಅಲ್ಲ, ಬದಲಾಗಿ ವಿಕಸಿತ ಭಾರತದ ದೃಷ್ಟಿಕೋನವನ್ನು ಸಾಕಾರಗೊಳಿಸಲು ನಡೆಯುತ್ತಿರುವ ಸಮರ, ಅಸ್ಸಾಂನಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಲಿದೆ ಎಂದು ಹೇಳಿದರು.

ಕಾಂಗ್ರೆಸ್​ ವಿರುದ್ಧ ವಾಗ್ದಾಳಿ..

ಕಾಂಗ್ರೆಸ್‌ನ 6 ದಶಕಗಳ ಆಡಳಿತ ಮತ್ತು ಬಿಜೆಪಿಯ 10 ವರ್ಷಗಳ ಅಭಿವೃದ್ಧಿ ಕಾರ್ಯಗಳನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಕಾಂಗ್ರೆಸ್ 65 ವರ್ಷಗಳಲ್ಲಿ ಕೇವಲ 3 ಸೇತುವೆಗಳನ್ನು ನಿರ್ಮಿಸಿದ್ದರೆ, ಎನ್​ಡಿಎ ಸರ್ಕಾರ ಕೇವಲ 10 ವರ್ಷಗಳಲ್ಲಿ 7 ಬೃಹತ್ ಸೇತುವೆಗಳನ್ನು ನಿರ್ಮಿಸಿ ವೇಗವಾಗಿ ಅಭಿವೃದ್ಧಿ ಸಾಧಿಸಿದೆ ಎಂದು ಅಂಕಿಅಂಶಗಳ ಸಮೇತ ವಿವರಿಸಿದರು. ಅಸ್ಸಾಂನ ದೀರ್ಘಕಾಲದ ಸಮಸ್ಯೆಯಾದ ಪ್ರವಾಹಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು 18,000 ಕೋಟಿ ರೂ.ಗಳ ವೆಚ್ಚದಲ್ಲಿ ಬಾದ್ ಮುಕ್ತ್ ಅಸ್ಸಾಂ ಮಿಷನ್ (ಪ್ರವಾಹ ಮುಕ್ತ ಅಸ್ಸಾಂ ಅಭಿಯಾನ) ಪ್ರಾರಂಭಿಸಲಾಗಿದೆ ಎಂದು ತಿಳಿಸಿದ ಪ್ರಧಾನಿ, ಆಧುನಿಕ ಒಡ್ಡುಗಳ ನಿರ್ಮಾಣಕ್ಕೆ ನೂರಾರು ಕೋಟಿ ರೂಪಾಯಿ ವ್ಯಯಿಸಲಾಗುತ್ತಿದೆ ಎಂದು ತಿಳಿಸಿದರು.
ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ರೈತರು, ಬುಡಕಟ್ಟು ಜನಾಂಗದವರು ಮತ್ತು ಅರಣ್ಯ ಭೂಮಿಯನ್ನು ನುಸುಳುಕೋರರ ವಶಕ್ಕೆ ಹೋಗಲು ಬಿಡುವುದಿಲ್ಲ ಎಂದು ಭರವಸೆ ನೀಡಿದ ಅವರು, ಅಕ್ರಮ ಆಕ್ರಮಣದ ವಿರುದ್ಧ ಸರ್ಕಾರದ ಕಠಿಣ ಕ್ರಮಗಳು ಮುಂದುವರಿಯಲಿವೆ ಎಂದು ಎಚ್ಚರಿಕೆ ನೀಡಿದರು.

ಯುಜಿಸಿ ಬಗ್ಗೆ ಹೇಳಿದ್ದೇನು..?

ಇದೇ ವೇಳೆ ಏಕರೂಪ ನಾಗರಿಕ ಸಂಹಿತೆ (UCC) ಜಾರಿಯ ಬಗ್ಗೆ ಮಾತನಾಡಿದ ಪ್ರಧಾನಿ, ಯುಸಿಸಿ ಜಾರಿಯು ಬುಡಕಟ್ಟು ಸಮುದಾಯಗಳ ಸಂಸ್ಕೃತಿ ಮತ್ತು ಸಂಪ್ರದಾಯಗಳ ರಕ್ಷಣೆಯೊಂದಿಗೆ ಸಮತೋಲನ ಕಾಯ್ದುಕೊಳ್ಳಲಿದೆ ಎಂದು ಭರವಸೆ ನೀಡಿದರು. ಬಿಜೆಪಿ ನೀಡಿದ ಪ್ರತಿಯೊಂದು ಭರವಸೆಯನ್ನು ಈಡೇರಿಸುತ್ತದೆ, ಆದರೆ ಕಾಂಗ್ರೆಸ್ ಪಕ್ಷ ವಿಭಜಕ ರಾಜಕಾರಣ ಮಾಡುತ್ತಿದೆ ಎಂದರು.
2014 ಕ್ಕಿಂತ ಮೊದಲು ಪ್ರಸ್ತಾವಿತ ಕೋಮು ಹಿಂಸಾಚಾರ ಮಸೂದೆಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಕಾಂಗ್ರೆಸ್‌ನ ವಿಭಜಕ ನೀತಿಗಳು ಬಹುಸಂಖ್ಯಾತ ಸಮುದಾಯಕ್ಕೆ ಕಿರುಕುಳ ನೀಡುವ ಉದ್ದೇಶ ಹೊಂದಿದ್ದವು ಎಂದು ಆರೋಪಿಸಿದರು. ಆ ಮಸೂದೆಯಲ್ಲಿ ಬಹುಸಂಖ್ಯಾತರನ್ನು ಅಪರಾಧಿಗಳಂತೆ ಮತ್ತು ಅಲ್ಪಸಂಖ್ಯಾತರನ್ನು ಬಲಿಪಶುಗಳಂತೆ ಬಿಂಬಿಸುವ ಪ್ರಯತ್ನ ನಡೆದಿತ್ತು, ಈಗ ಅಸ್ಸಾಂನಲ್ಲೂ ಅಂತಹದೇ ಮಸೂದೆ ತರಲು ಕಾಂಗ್ರೆಸ್ ನಾಯಕರು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದು ಜನರನ್ನು ಎಚ್ಚರಿಸಿದರು.
126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಗೆ ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಕೇಂದ್ರ ಆಯೋಗ ಘೋಷಿಸಿದೆ(ಏಜೆನ್ಸೀಸ್​).