PM Modis Statue With Ganesh 
ದೇಶ

ವಿಘ್ನನಿವಾರಕನ ಜೊತೆ ಪ್ರಧಾನಿ ಮೋದಿ ಚಾಯ್ ಪೇ ಚರ್ಚಾ!...ಹೌರಾದ 'ಹಿಂದೂ ರಾಷ್ಟ್ರ' ಥೀಮ್ ಪೆಂಡಾಲ್‌ ಕಂಡು ಟಿಎಂಸಿ ಕೆಂಡಾಮಂಡಲ | PM Modis Statue With Ganesh

PM Modis Statue With Ganesh: ಕೋಲ್ಕತ್ತಾ ಸಮೀಪದ ಹೌರಾದ ಬೇಲೂರು ಬಜಾರ್‌ನಲ್ಲಿ ಆಯೋಜಿಸಲಾದ ಗಣೇಶ ಪೂಜೆಯ ಪೆಂಡಾಲ್ ವಿವಾದಕ್ಕೆ ಸಿಲುಕಿದೆ. ಈ ಬಾರಿ ಹಿಂದೂ ರಾಷ್ಟ್ರ ಎಂಬ ಥೀಮ್ ನೀಡಲಾಗಿದ್ದು, ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಈ ಪೆಂಡಾಲ್‌ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗಣಪತಿ ದೇವರು ಒಟ್ಟಿಗೆ ಕುಳಿತು ಚಾಯ್ ಪೇ ಚರ್ಚಾ (ಚಹಾ ಸೇವಿಸುತ್ತಾ ಚರ್ಚೆ) ನಡೆಸುತ್ತಿರುವಂತೆ ಪ್ರತಿಮೆಗಳನ್ನು ವಿನ್ಯಾಸಗೊಳಿಸಲಾಗಿದೆ. ಅಲ್ಲಿ ಹಿಂದೂ ರಾಷ್ಟ್ರ ಎಂಬ ಸಾಲುಗಳನ್ನು ಬರೆಯಲಾಗಿದ್ದು, ಪಕ್ಕದಲ್ಲೇ ಭಾರತದ ನಕ್ಷೆ ಮತ್ತು ಹಿಂದೂ ಧ್ವಜವನ್ನು ಪ್ರದರ್ಶಿಸಲಾಗಿದೆ.
ಈ ಪೂಜೆಯ ಪ್ರಮುಖ ಆಯೋಜಕರಾದ ವೃತ್ತಿಯಲ್ಲಿ ಪ್ರವರ್ತಕ (ಪ್ರೊಮೋಟರ್) ಖೋಕನ್ ಕಾನ್ರಾ ಅವರು ಮಾತನಾಡುತ್ತಾ, ತಾವು ಹಲವು ವರ್ಷಗಳಿಂದ ಈ ಪೂಜೆಯನ್ನು ಆಯೋಜಿಸುತ್ತಿದ್ದು, ಪ್ರತಿ ವರ್ಷವೂ ವಿಶಿಷ್ಟವಾದ ಥೀಮ್ ಪರಿಚಯಿಸುವುದು ತಮ್ಮ ಅಭ್ಯಾಸವಾಗಿದೆ ಎಂದಿದ್ದಾರೆ. ಈ ಬಾರಿಯ ಹಿಂದೂ ರಾಷ್ಟ್ರ ಥೀಮ್ ತಮ್ಮದೇ ಸ್ವಂತ ಆಲೋಚನೆಯಾಗಿದ್ದು, ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ತಿಳಿಸಿದ್ದಾರೆ.
ತಾವು ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಯಾಗಿದ್ದರಿಂದ ಹೀಗೆ ಮಾಡುತ್ತಿದ್ದಾರೆ ಎಂಬ ಆರೋಪಗಳು ಸಂಪೂರ್ಣ ಆಧಾರರಹಿತ ಎಂದಿರುವ ಅವರು, ಯಾವುದೇ ಧರ್ಮಕ್ಕೆ ನೋವುಂಟು ಮಾಡುವ ಉದ್ದೇಶ ತಮಗಿಲ್ಲ, ಪ್ರಧಾನಿ ನರೇಂದ್ರ ಮೋದಿ ಅವರನ್ನು ದೇಶದ ಸಂಕೇತವಾಗಿ ಮತ್ತು ಗಣೇಶ ದೇವರನ್ನು ಧರ್ಮದ ಸಂಕೇತವಾಗಿ ಕಂಡು ಈ ಥೀಮ್ ರೂಪಿಸಿರುವುದಾಗಿ ವಿವರಣೆ ನೀಡಿದ್ದಾರೆ.

ಟಿಎಂಸಿ ಆಕ್ಷೇಪ!

ಈ ವಿವಾದವು ಇತ್ತೀಚೆಗೆ ದುರ್ಗಾಪೂಜೆಯ ಥೀಮ್‌ಗಳ ಕುರಿತು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ನೀಡಿದ್ದ ಹೇಳಿಕೆಗಳ ಬೆನ್ನಲ್ಲೇ ಹೊರಬಿದ್ದಿದೆ. ದುರ್ಗಾಪೂಜಾ ಪೆಂಡಾಲ್‌ಗಳ ಥೀಮ್‌ಗಳು ಭಾರತೀಯ ಸಂಸ್ಕೃತಿ, ಆಧ್ಯಾತ್ಮಿಕತೆ ಮತ್ತು ರಾಷ್ಟ್ರೀಯ ಭಾವನೆಗಳಿಗೆ ಧಕ್ಕೆ ತರುವಂತಿರಬಾರದು ಹಾಗೂ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಬಾರದು ಎಂದು ಮಾತ್ರ ತಾವು ಮನವಿ ಮಾಡಿರುವುದಾಗಿ ವಿಎಚ್‌ಪಿ ಪೂರ್ವ ವಲಯ ಕಾರ್ಯದರ್ಶಿ ಅಮಿಯ ಸರ್ಕಾರ್ ಸ್ಪಷ್ಟಪಡಿಸಿದ್ದರು.
ಮತ್ತೊಂದೆಡೆ, ಈ ಥೀಮ್ ಬಗ್ಗೆ ಟಿಎಂಸಿ ಆಕ್ಷೇಪವೆತ್ತಿದ್ದು, ಮಧ್ಯ ಹೌರಾದ ತೃಣಮೂಲ ಶಾಸಕ ಅರುಪ್ ರಾಯ್ ಮಾತನಾಡಿ, ಇತ್ತೀಚೆಗೆ ಬಿಜೆಪಿಗೆ ಸೇರಿದ ಕೆಲವರು ಪ್ರಚಾರಕ್ಕಾಗಿ ಇಂತಹ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಪೂಜೆಗಳಲ್ಲಿ ಇಂತಹ ರಾಜಕೀಯ ತರಬಾರದು, ಪ್ರಧಾನಿ ಮೋದಿಯವರಿಗೆ ಅಥವಾ ಬಿಜೆಪಿ ಹಿರಿಯ ನಾಯಕರಿಗೆ ಈ ಬಗ್ಗೆ ಮಾಹಿತಿ ಇದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಜಿಲ್ಲಾ ಮತ್ತು ರಾಜ್ಯ ಬಿಜೆಪಿ ಘಟಕಗಳು ಈ ಆಯೋಜಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಬಿಜೆಪಿ ಸಮರ್ಥನೆ!...

ಈ ಥೀಮ್‌ನಲ್ಲಿ ಯಾವುದೇ ತಪ್ಪಿಲ್ಲ ಎಂದು ಬಿಜೆಪಿ ಸಮರ್ಥಿಸಿಕೊಂಡಿದೆ. ಹೌರಾ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಓಂಪ್ರಕಾಶ್ ಸಿಂಗ್ ಮಾತನಾಡಿ, ಈ ಕಾರ್ಯಕ್ರಮವನ್ನು ಯಾರು ಆಯೋಜಿಸಿದ್ದಾರೆ ಎಂಬುದು ತಮಗೆ ತಿಳಿದಿಲ್ಲವಾದರೂ, ಇದರಲ್ಲಿ ತಪ್ಪು ಹುಡುಕುವಂತದ್ದು ಏನು ಇಲ್ಲ ಎಂದಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ವಿವಿಧ ರೀತಿಯ ಪೂಜೆಗಳು ನಡೆಯುತ್ತವೆ, ದುರ್ಗಾಪೂಜೆಯಲ್ಲೂ ವೈವಿಧ್ಯಮಯ ಥೀಮ್‌ಗಳನ್ನು ಕಾಣಬಹುದು ಎಂದು ಅವರು ಹೇಳಿದ್ದಾರೆ. ಜೊತೆಗೆ, ಟಿಎಂಸಿ ನಾಯಕ ಅರುಪ್ ರಾಯ್ ಅವರ ಹೇಳಿಕೆಯನ್ನು ತಳ್ಳಿಹಾಕಿದ ಸಿಂಗ್, ಟಿಎಂಸಿ ಆಡಳಿತದಲ್ಲಿ ಪೂಜೆ ಮಾಡಲು ಕೋರ್ಟ್‌ಗೆ ಹೋಗಬೇಕಾದ ಪರಿಸ್ಥಿತಿ ಇತ್ತು ಎಂದು ತಿರುಗೇಟು ನೀಡಿದ್ದಾರೆ(ಏಜೆನ್ಸೀಸ್​).