Modi-Rahul | ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ 
ದೇಶ

ರಾಜಕೀಯ ವೈರತ್ವ ಮರೆತು ಒಂದಾದ ಪ್ರಧಾನಿ ಮೋದಿ-ರಾಹುಲ್.. ಅಪರೂಪದ ಸ್ನೇಹದ ಕ್ಷಣಕ್ಕೆ ಸಾಕ್ಷಿಯಾದ ಸಂಸತ್​ ಆವರಣ | Modi-Rahul

ನವದೆಹಲಿ: ಪರಸ್ಪರ ವಾಗ್ದಾಳಿ, ತೀಕ್ಷ್ಣ ಟೀಕೆಗಳಿಂದಲೇ ಸದ್ದು ಮಾಡುವ ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಶನಿವಾರ (ಏ.11) ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಮಹಾತ್ಮ ಜ್ಯೋತಿಬಾ ಫುಲೆ ಅವರ 200ನೇ ಜನ್ಮ ದಿನಾಚರಣೆಯ ಅಂಗವಾಗಿ ಸಂಸತ್ತಿನ ಪ್ರೇರಣಾ ಸ್ಥಳದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಈ ಇಬ್ಬರು ನಾಯಕರು ಪರಸ್ಪರ ಆತ್ಮೀಯವಾಗಿ ಸಂಭಾಷಣೆ ನಡೆಸುವ ಮೂಲಕ ಎಲ್ಲರ ಗಮನ ಸೆಳೆದರು.
ಸಂಸತ್ತಿನ ಕಲಾಪ ಆರಂಭವಾಗುವ ಮುನ್ನ ನಡೆದ ಈ ಸಂವಾದದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ, ಅರ್ಜುನ್ ರಾಮ್ ಮೇಘವಾಲ್ ಮತ್ತು ರಾಜ್ಯಸಭೆಯ ಮಾಜಿ ಉಪಾಧ್ಯಕ್ಷ ಹರಿವಂಶ್ ಸಮ್ಮುಖದಲ್ಲೇ ಮೋದಿ ಮತ್ತು ರಾಹುಲ್ ಗಾಂಧಿ ನಗುನಗುತ ಮಾತನಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ರಾಜಕೀಯವಾಗಿ ಸದಾ ಕಾದಾಟ ನಡೆಸುವ ಈ ಇಬ್ಬರು ನಾಯಕರ ನಡುವಿನ ಇಂತಹ ಪ್ರಾಮಾಣಿಕ ಮತ್ತು ಸೌಹಾರ್ದಯುತ ಸಂವಾದವು ನೆಟಿಜನ್‌ಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಮಹಾತ್ಮ ಜ್ಯೋತಿಬಾ ಫುಲೆ ಅವರಿಗೆ ಪ್ರಧಾನಿ ನಮನ

ಇದಕ್ಕೂ ಮುನ್ನ ಪ್ರಧಾನಿ ಮೋದಿ ಸಾಮಾಜಿಕ ಸುಧಾರಕ ಜ್ಯೋತಿಬಾ ಫುಲೆ ಅವರಿಗೆ ಗೌರವ ಸಲ್ಲಿಸಿದರು. ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಸಮಾನತೆ, ನ್ಯಾಯ ಮತ್ತು ಶಿಕ್ಷಣದ ಆದರ್ಶಗಳಿಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟ ದಾರ್ಶನಿಕ ಸಮಾಜ ಸುಧಾರಕರಿಗೆ ನಾನು ಗೌರವ ಸಲ್ಲಿಸುತ್ತೇನೆ. ಮಹಿಳೆಯರು ಮತ್ತು ಅಂಚಿನಲ್ಲಿರುವವರ ಹಕ್ಕುಗಳನ್ನು ಪ್ರತಿಪಾದಿಸುವಲ್ಲಿ ಅವರು ಮುಂಚೂಣಿಯಲ್ಲಿದ್ದರು. ಅವರ 200ನೇ ಜನ್ಮ ದಿನಾಚರಣೆಯ ಈ ವರ್ಷವು ಸಾಮಾಜಿಕ ಪ್ರಗತಿಯ ಅನ್ವೇಷಣೆಯಲ್ಲಿ ನಮಗೆಲ್ಲರಿಗೂ ಮಾರ್ಗದರ್ಶನ ನೀಡಲಿ ಎಂದು ಆಶಿಸಿದ್ದಾರೆ.
ರಾಹುಲ್ ಗಾಂಧಿ ಹೇಳಿದ್ದೇನು..?
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಹ ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಫುಲೆ ಅವರಿಗೆ ನಮನ ಸಲ್ಲಿಸಿದ್ದು, ಜ್ಯೋತಿಬಾ ಫುಲೆ ಅವರು ತಮ್ಮ ಇಡೀ ಜೀವನವನ್ನು ಅಂಚಿನಲ್ಲಿರುವವರ ಹಕ್ಕುಗಳ ರಕ್ಷಣೆಗಾಗಿ ಮುಡಿಪಾಗಿಟ್ಟರು. ತಾರತಮ್ಯ ಮತ್ತು ಅಸಮಾನತೆಯ ವಿರುದ್ಧದ ಅವರ ಹೋರಾಟವು ರಾಷ್ಟ್ರಕ್ಕೆ ಸಮಾನತೆ ಮತ್ತು ನ್ಯಾಯದ ಹಾದಿಯನ್ನು ತೋರಿಸಿತು. ಅವರ ಆದರ್ಶಗಳು ಸಾಮಾಜಿಕ ನ್ಯಾಯದ ಕಡೆಗೆ ಮುಂದುವರಿಯಲು ನಮಗೆ ಸ್ಫೂರ್ತಿಯಾಗಿವೆ ಎಂದು ರಾಹುಲ್ ಬರೆದುಕೊಂಡಿದ್ದಾರೆ.
ರಾಜಕೀಯ ಭಿನ್ನಾಭಿಪ್ರಾಯಗಳ ನಡುವೆಯೂ, ಮಹಾನ್ ಸಮಾಜ ಸುಧಾರಕರ ಸ್ಮರಣೆಯ ಸಂದರ್ಭದಲ್ಲಿ ದೇಶದ ಇಬ್ಬರು ಪ್ರಮುಖ ನಾಯಕರು ತೋರಿದ ಈ ಸೌಜನ್ಯವು ಸಂಸತ್ತಿನ ಘನತೆಯನ್ನು ಎತ್ತಿಹಿಡಿದಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ(ಏಜೆನ್ಸೀಸ್​).