Gamcha Trend | ಪ್ರಧಾನಿ ನರೇಂದ್ರ ಮೋದಿ ಜನಸಮೂಹದತ್ತ ಟವಲ್​ ಬೀಸುತ್ತಿರುವುದು 
ದೇಶ

Gamcha Trend | ಹೊಸ ಟ್ರೆಂಡ್​ಗೆ ಚಾಲನೆ ನೀಡಿದ ಪ್ರಧಾನಿ ಮೋದಿ; ಏನಿದು ಗಮ್ಚಾ ಸ್ಟೈಲ್​..?

ಪಟನಾ: ಇಂದು ಬಿಹಾರದ ನೂತನ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕರಿಸಿದ್ದು, ಕಾರ್ಯಕ್ರಮ ನಡೆದ ಪಾಟ್ನಾದ ಗಾಂಧಿ ಮೈದಾನ ಪದಗ್ರಹಣ ಹೊರತುಪಡಿಸಿ, ಮತ್ತೊಂದು ಹೊಸ ಟ್ರೆಂಡ್​ಗೆ ವೇದಿಕೆಯಾಗಿದೆ.
ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ಮೋದಿ ಸೇರಿದಂತೆ ಎನ್​​ಡಿಎ ಮೈತ್ರಿಕೂಟದ ಮಿತ್ರಪಕ್ಷಗಳ ಅನೇಕ ನಾಯಕರುಗಳು ಭಾಗವಹಿಸಿದ್ದರು.

ಗಮ್ಚಾ (ಟವಲ್​) ಬೀಸುತ್ತಿರುವ ಪ್ರಧಾನಿ ಮೋದಿ.....

ಸಿಎಂ ನಿತೀಶ್ ಕುಮಾರ್ ನೇತೃತ್ವದ ಸಂಪುಟ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಮೋದಿ ಟವಲ್​ವೊಂದನ್ನು ಜನಸಮೂಹದತ್ತ ಬೀಸಿದ್ದು ಕಾರ್ಯಕ್ರಮದ ಆಕರ್ಷಕ ದೃಶ್ಯವಾಗಿ ಕಂಡಿದ್ದು, ಅಲ್ಲಿ ನೆರೆದಿದ್ದ ಜನರು ಅದೇ ಉತ್ಸಾಹದಿಂದ ಪ್ರತಿಕ್ರಿಯೆ ನೀಡಿದರು. ನಿತೀಶ್ ಕುಮಾರ್ ನೇತೃತ್ವದಲ್ಲಿ ಹೊಸ ಸರ್ಕಾರ ಮುಂದಿನ ಐದು ವರ್ಷಗಳ ಕಾಲ ಕಾರ್ಯನಿರ್ವಹಿಸಲು ಇಂದು ಚಾಲನೆ ದೊರೆತಿದ್ದು, ಪ್ರಮಾಣವಚನ ಸ್ವೀಕಾರ ಸಮಾರಂಭದ ಸಂಕೇತವಾಗಿ ಮೋದಿಯವರ ಈ ಸನ್ನೆ ಬಂದಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದರು, ಇದರ ಹಿಂದಿರುವ ನೈಜ ಕಾರಣ ಏನು ಎನ್ನುವುದು ಇನ್ನುವರೆಗೆ ತಿಳಿದುಬಂದಿಲ್ಲ.

ಇದೇ ಮೊದಲಲ್ಲ......

  • ಪ್ರಧಾನಿ ನರೇಂದ್ರ ಮೋದಿ ಈ ಹೊಸ ಗಮ್ಚಾ ಟ್ರೆಂಡ್​ನ್ನು ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶದ ದಿನವೇ ಆರಂಭಿಸಿದ್ದು, ನವೆಂಬರ್ 14 ರಂದು ದೆಹಲಿಯ ಬಿಜೆಪಿ ಪ್ರಧಾನ ಕಚೇರಿಗೆ ಆಗಮಿಸುವ ವೇಳೆ ಅಲ್ಲಿ ನೆರೆದಿದ್ದ ಜನರತ್ತ ಪ್ರಧಾನಿ ಸ್ಕಾರ್ಫ್ ಬೀಸಿದ್ದರು.
  • ಇದಾದ ಬಳಿಕ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ದಕ್ಷಿಣ ಭಾರತ ನೈಸರ್ಗಿಕ ಕೃಷಿ ಶೃಂಗಸಭೆ ಉದ್ಘಾಟಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಕೊಯಮತ್ತೂರಿನಲ್ಲಿ ರೈತರು ತಮ್ಮ ಟವಲ್ ಬೀಸುತ್ತಿರುವ ದೃಶ್ಯವು ನನಗಿಂತ ಮೊದಲು ಬಿಹಾರದ ಗಾಳಿ ತಮಿಳುನಾಡಿಗೆ ಬಂದಂತೆ ಭಾಸವಾಯಿತು, ಅನ್ನದಾತರು ತಮ್ಮ ಟವೆಲ್‌ಗಳನ್ನು ತಿರುಗಿಸಿ ಸ್ವಾಗತಿಸುತ್ತಿರುವುದು ಬಿಹಾರದ ವಿಧಾನಸಭೆ ಚುನಾವಣೆಯ ಆಚರಣೆಗಳನ್ನು ನೆನಪಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಡವಾಗಿ ಪಾಲ್ಗೊಂಡಿದ್ದಕ್ಕೆ ಕ್ಷಮೆಯಾಚಿಸಿದ ಪ್ರಧಾನಿ, ಕೊಯಮತ್ತೂರಿಗೆ ಬರುವ ಮೊದಲು ಪುಟ್ಟಪರ್ತಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗಿ ತಿಳಿಸಿದರು. ತಮಿಳು ಗೊತ್ತಿದ್ದರೆ, ಶೃಂಗಸಭೆಯಲ್ಲಿನ ಹಿಂದಿನ ಭಾಷಣಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವ ಗೌರವ ಸಿಗುತ್ತಿತ್ತು ಎಂದರು. ಕೊಯಮತ್ತೂರಿನ ಜವಳಿ ವಲಯವು ದೇಶದ ಆರ್ಥಿಕತೆಗೆ ಬಹಳ ಹಿಂದಿನಿಂದಲೂ ಪ್ರಮುಖ ಕೊಡುಗೆ ನೀಡಿದೆ, ಈ ಪ್ರದೇಶದವರಾದ ಸಿ ಪಿ​ ರಾಧಾಕೃಷ್ಣನ್ ಅವರು ಭಾರತದ ಉಪ ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸುತ್ತಿರುವುದರಿಂದ, ರಾಷ್ಟ್ರಕ್ಕೆ ಈ ಭಾಗದ ಕೊಡುಗೆ ಹೆಚ್ಚಿದೆ ಎಂದು ಹೇಳಿದರು(ಏಜೆನ್ಸೀಸ್​).