ಉದ್ಯಮಿಗಳಿಗೆ ಪ್ರಧಾನಿ ಮೋದಿ ಖಡಕ್ ವಾರ್ನಿಂಗ್ WEB
ದೇಶ

ಉದ್ಯಮಿಗಳಿಗೆ ಪ್ರಧಾನಿ ಮೋದಿ ಖಡಕ್ ವಾರ್ನಿಂಗ್! 140 ಕೋಟಿ ಭಾರತೀಯರ ಬಗ್ಗೆ ನಮೋ ಹೇಳಿದ್ದೇನು ಗೊತ್ತಾ?PM Modi

ಭಾರತದ 140 ಕೋಟಿ ಜನರು ಏನನ್ನು ಬೇಕಾದರೂ ಖರೀದಿಸುತ್ತಾರೆ ಎಂದು ಹಗುರವಾಗಿ ಪರಿಗಣಿಸುವ ಕಾಲ ಮುಗಿದಿದೆ. ದೇಶದ ಮಾರುಕಟ್ಟೆಯನ್ನು ಲಘುವಾಗಿ ಕಾಣದೆ, ಗ್ರಾಹಕರಿಗೆ ಅತ್ಯುತ್ತಮ ಗುಣಮಟ್ಟದ ಉತ್ಪನ್ನಗಳನ್ನು ನೀಡಲು ಉದ್ಯಮಿಗಳು ಮುಂದಾಗಬೇಕು. ಪ್ರತಿಯೊಬ್ಬ ಭಾರತೀಯನೂ ಶ್ರೇಷ್ಠ ಗುಣಮಟ್ಟದ ವಸ್ತುಗಳಿಗೆ ಅರ್ಹನಾಗಿದ್ದಾನೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾರ್ಪೊರೇಟ್ ವಲಯಕ್ಕೆ ಖಡಕ್ ಸಂದೇಶ ನೀಡಿದ್ದಾರೆ.PM Modi

ನವದೆಹಲಿ: ಭಾರತದ 140 ಕೋಟಿ ಜನರು ಏನನ್ನು ಬೇಕಾದರೂ ಖರೀದಿಸುತ್ತಾರೆ ಎಂದು ಹಗುರವಾಗಿ ಪರಿಗಣಿಸುವ ಕಾಲ ಮುಗಿದಿದೆ. ದೇಶದ ಮಾರುಕಟ್ಟೆಯನ್ನು ಲಘುವಾಗಿ ಕಾಣದೆ, ಗ್ರಾಹಕರಿಗೆ ಅತ್ಯುತ್ತಮ ಗುಣಮಟ್ಟದ ಉತ್ಪನ್ನಗಳನ್ನು ನೀಡಲು ಉದ್ಯಮಿಗಳು ಮುಂದಾಗಬೇಕು. ಪ್ರತಿಯೊಬ್ಬ ಭಾರತೀಯನೂ ಶ್ರೇಷ್ಠ ಗುಣಮಟ್ಟದ ವಸ್ತುಗಳಿಗೆ ಅರ್ಹನಾಗಿದ್ದಾನೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾರ್ಪೊರೇಟ್ ವಲಯಕ್ಕೆ ಖಡಕ್ ಸಂದೇಶ ನೀಡಿದ್ದಾರೆ.

ಗುರುವಾರ ನಡೆದ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘದ (FICCI) ಶತಮಾನೋತ್ಸವ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಉತ್ಪನ್ನಗಳ ಗುಣಮಟ್ಟವನ್ನು ಹೆಚ್ಚಿಸುವಂತೆ ಉದ್ಯಮಿಗಳಿಗೆ ಕರೆ ನೀಡಿದರು. ಭಾರತೀಯ ಗ್ರಾಹಕರಿಗೆ ಉತ್ತಮ ಗುಣಮಟ್ಟದ ವಸ್ತುಗಳನ್ನು ಒದಗಿಸುವುದು ಉದ್ಯಮಗಳ ಆದ್ಯತೆಯಾಗಬೇಕು ಎಂದು ಒತ್ತಿ ಹೇಳಿದರು.

140 ಕೋಟಿ ಭಾರತೀಯರನ್ನು ಏನನ್ನೇ ಮಾರಾಟ ಮಾಡಿದರೂ ಖರೀದಿಸುವ ಖಚಿತ ಮಾರುಕಟ್ಟೆ ಎಂದು ಭಾವಿಸಬೇಡಿ. ಈ ಮನಸ್ಥಿತಿ ಬದಲಾಗಬೇಕು. ನನ್ನ ದೇಶದ ಜನರು ಅತ್ಯುತ್ತಮ ಗುಣಮಟ್ಟದ ಉತ್ಪನ್ನಗಳಿಗೆ ಅರ್ಹರು ಎಂದು ಮೋದಿ ಹೇಳಿದರು. ಉತ್ಪನ್ನಗಳ ಗುಣಮಟ್ಟವನ್ನು ವಿವರಿಸಲು ಇನ್ನೂ ಎಕ್ಸ್‌ಪೋರ್ಟ್ ಕ್ವಾಲಿಟಿ (ರಫ್ತು ಗುಣಮಟ್ಟ) ಎಂಬ ಪದವನ್ನು ಬಳಸಬೇಕಾದ ಪರಿಸ್ಥಿತಿ ಏಕೆ ಇದೆ ಎಂಬ ಪ್ರಶ್ನೆಯನ್ನೂ ಅವರು ಮುಂದಿಟ್ಟರು. ವಿದೇಶಗಳಿಗೆ ರಫ್ತು ಮಾಡುವ ಉತ್ಪನ್ನಗಳಿಗೆ ನೀಡುವ ಗುಣಮಟ್ಟವನ್ನೇ ಭಾರತೀಯ ಗ್ರಾಹಕರಿಗೂ ಒದಗಿಸಬೇಕು ಎಂಬುದು ಅವರ ಮಾತಿನ ಆಶಯವಾಗಿತ್ತು.

ಮುಕ್ತ ವ್ಯಾಪಾರ ಒಪ್ಪಂದಗಳ ಲಾಭ ಪಡೆದುಕೊಳ್ಳಿ

ಭಾರತ ಹಲವು ಪ್ರಮುಖ ಆರ್ಥಿಕ ರಾಷ್ಟ್ರಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡಿದ್ದು, ಇದರಿಂದ ಉದ್ಯಮಗಳಿಗೆ ಹೊಸ ಮಾರುಕಟ್ಟೆಗಳ ಬಾಗಿಲು ತೆರೆದಿವೆ ಎಂದು ಪ್ರಧಾನಿ ತಿಳಿಸಿದರು. ಈ ಅವಕಾಶಗಳನ್ನು ಬಳಸಿಕೊಳ್ಳಲು ಉದ್ಯಮಗಳು ಯಾವ ರೀತಿಯ ಸಿದ್ಧತೆ ಮಾಡಿಕೊಂಡಿವೆ ಎಂದು ಪ್ರಶ್ನಿಸಿದ ಅವರು, ಭಾರತ ಹಲವು ಪ್ರಮುಖ ಆರ್ಥಿಕತೆಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿದೆ. ನಿಮಗಾಗಿ ಹೊಸ ಅವಕಾಶಗಳು ತೆರೆದಿವೆ. ಈ ಅವಕಾಶಗಳನ್ನು ಬಳಸಿಕೊಳ್ಳಲು ಯೋಜನೆ ರೂಪಿಸಿದ್ದೀರಾ? ನನ್ನೆಲ್ಲ ಪ್ರಯತ್ನಗಳ ಲಾಭವನ್ನು ನೀವು ಪಡೆದುಕೊಳ್ಳದಿದ್ದರೆ ಇನ್ಯಾರು ಪಡೆದುಕೊಳ್ಳುತ್ತಾರೆ? ಎಂದು ಉದ್ಯಮಿಗಳನ್ನು ಪ್ರಶ್ನಿಸಿದರು. ದೇಶದ ಆರ್ಥಿಕ ಬೆಳವಣಿಗೆಗೆ ಮತ್ತಷ್ಟು ಅಗತ್ಯವಿರುವ ಸುಧಾರಣೆಗಳ ಬಗ್ಗೆ ಯಾವುದೇ ಹಿಂಜರಿಕೆಯಿಲ್ಲದೆ ಸರ್ಕಾರಕ್ಕೆ ಸಲಹೆ ನೀಡುವಂತೆಯೂ ಉದ್ಯಮ ವಲಯಕ್ಕೆ ಮನವಿ ಮಾಡಿದರು.

ಕೃಷಿ, ಸ್ವಾವಲಂಬನೆಗೆ ಹೆಚ್ಚಿನ ಹೂಡಿಕೆ ಅಗತ್ಯ

ಭಾರತವನ್ನು ಸ್ವಾವಲಂಬಿ ರಾಷ್ಟ್ರವನ್ನಾಗಿ ರೂಪಿಸುವಲ್ಲಿ ಕಾರ್ಪೊರೇಟ್ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸಬೇಕು ಎಂದು ಮೋದಿ ಹೇಳಿದರು. ಕೃಷಿ ಹಾಗೂ ಅದಕ್ಕೆ ಸಂಬಂಧಿಸಿದ ಉಪವಲಯಗಳಲ್ಲಿ ಹೆಚ್ಚಿನ ಪ್ರಮಾಣದ ಹೂಡಿಕೆ ಮಾಡುವಂತೆ ಉದ್ಯಮಿಗಳಿಗೆ ಕರೆ ನೀಡಿದರು. ಕಳೆದ 12ರಿಂದ 13 ವರ್ಷಗಳಲ್ಲಿ ಸರ್ಕಾರ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಉಲ್ಲೇಖಿಸಿದ ಅವರು, ಸಮಾಜದ ವಿವಿಧ ವರ್ಗಗಳ ಕೊಡುಗೆಯನ್ನು ಶ್ಲಾಘಿಸಿದರು. ವಿಶ್ವಬ್ಯಾಂಕ್‌ನ ಇತ್ತೀಚಿನ ವರದಿಯನ್ನು ಉಲ್ಲೇಖಿಸಿ, ಕಳೆದ 12ರಿಂದ 13 ವರ್ಷಗಳಲ್ಲಿ ಸುಮಾರು 50 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ : GTA 6 ಕ್ರೇಜ್‌ಗೆ ಮೋದಿ ಎಂಟ್ರಿ! 13 ವರ್ಷಗಳಲ್ಲಿ ಭಾರತದ ಬದಲಾವಣೆ ತೋರಿಸಿದ ಪ್ರಧಾನಿ | PM Modi

ತೆರಿಗೆ ಇಳಿಕೆ ಮಾಡಿದರೆ ಉದ್ಯೋಗಿಗಳ ವೇತನವೂ ಹೆಚ್ಚಾಗಬೇಕಲ್ಲವೇ?

2014ರಲ್ಲಿ ಶೇ.30ರಷ್ಟಿದ್ದ ಮೂಲ ಕಾರ್ಪೊರೇಟ್ ತೆರಿಗೆ ದರವನ್ನು ಈಗ ಶೇ.22ಕ್ಕೆ ಇಳಿಸಲಾಗಿದೆ ಎಂದು ಮೋದಿ ತಿಳಿಸಿದರು. ವಾರ್ಷಿಕ 12 ಲಕ್ಷ ರೂ.ವರೆಗಿನ ವೈಯಕ್ತಿಕ ಆದಾಯಕ್ಕೂ ತೆರಿಗೆ ವಿನಾಯಿತಿ ನೀಡಿರುವುದನ್ನು ಪ್ರಸ್ತಾಪಿಸಿದರು. ಆದರೆ, ಸರ್ಕಾರ ತೆರಿಗೆ ಹೊರೆಯನ್ನು ಕಡಿಮೆ ಮಾಡಿರುವಂತೆ ಉದ್ಯಮಗಳು ತಮ್ಮ ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸಿವೆಯೇ? ಅವರ ವೇತನವನ್ನು ಸುಧಾರಿಸಿವೆಯೇ? ಎಂಬ ಪ್ರಶ್ನೆಗಳನ್ನು ಮುಂದಿಟ್ಟರು.

ದೇಶದ ನಿಜವಾದ ಪ್ರಗತಿ ಎಂದರೆ ಕೇವಲ ಆರ್ಥಿಕ ಅಂಕಿಅಂಶಗಳ ಏರಿಕೆಯಲ್ಲ. ರೈತರು, ಸಣ್ಣ ಉದ್ಯಮಿಗಳು, ಕೈಗಾರಿಕೆಗಳು, ಸಂಪತ್ತು ಸೃಷ್ಟಿಸುವವರು ಹಾಗೂ ತೆರಿಗೆ ಪಾವತಿದಾರರಿಗೆ ಗೌರವ ನೀಡಿದಾಗ ಮಾತ್ರ ದೇಶ ಸಮಗ್ರವಾಗಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಪ್ರಧಾನಿ ಅಭಿಪ್ರಾಯಪಟ್ಟರು. ದೇಶೀಯ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಒದಗಿಸುವುದು, ಜಾಗತಿಕ ವ್ಯಾಪಾರ ಅವಕಾಶಗಳನ್ನು ಬಳಸಿಕೊಳ್ಳುವುದು ಮತ್ತು ಉದ್ಯೋಗಿಗಳ ಕಲ್ಯಾಣಕ್ಕೆ ಆದ್ಯತೆ ನೀಡುವುದು ಸೇರಿದಂತೆ ಹಲವು ವಿಚಾರಗಳಲ್ಲಿ ಉದ್ಯಮ ವಲಯ ತನ್ನ ಕಾರ್ಯವೈಖರಿಯನ್ನು ಬದಲಿಸಿಕೊಳ್ಳಬೇಕು ಎಂಬ ಸ್ಪಷ್ಟ ಸಂದೇಶವನ್ನು ಮೋದಿ ನೀಡಿದ್ದಾರೆ.