Rahul Gandhi | ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ 
ದೇಶ

ಸಿಪಿಐ(ಎಂ)-ಬಿಜೆಪಿ ನಡುವೆ ಅಪವಿತ್ರ ಮೈತ್ರಿ...ಪ್ರಧಾನಿ ಮೋದಿಗೆ ಎಲ್​ಡಿಎಫ್ ಗೆಲುವೇ ಮುಖ್ಯ ಎಂದ ರಾಹುಲ್​ | Rahul Gandhi

ತಿರುವನಂತಪುರಂ: ಆಡಳಿತಾರೂಢ ಎಲ್​ಡಿಎಫ್ ಮತ್ತು ಬಿಜೆಪಿ ನಡುವೆ ಅಪವಿತ್ರ ಮೈತ್ರಿ ಇದ್ದು, ರಾಜ್ಯದಲ್ಲಿ ಮತ್ತೊಮ್ಮೆ ಎಡರಂಗವೇ ಅಧಿಕಾರಕ್ಕೆ ಬರಬೇಕೆನ್ನುವುದು ಪ್ರಧಾನಿ ನರೇಂದ್ರ ಮೋದಿ ಬಯಕೆಯಾಗಿದೆ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
ಮಂಗಳವಾರ (ಮಾ.31) ಕಣ್ಣೂರಿನಲ್ಲಿ ನಡೆದ ಬೃಹತ್ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್​, ಈ ಚುನಾವಣೆಯು ಕೇವಲ ರಾಜಕೀಯ ಸ್ಪರ್ಧೆಯಲ್ಲ, ಬದಲಾಗಿ ಎರಡು ಭಿನ್ನ ಸಿದ್ಧಾಂತಗಳ ನಡುವಿನ ಹೋರಾಟವಾಗಿದೆ ಎಂದು ಕರೆದರು.
ಬಲಪಂಥೀಯ ಸಿದ್ಧಾಂತದ ಬಿಜೆಪಿ ಮತ್ತು ಎಡಪಂಥೀಯ ಸಿದ್ಧಾಂತದ ಸಿಪಿಐ(ಎಂ) ಹೇಗೆ ಒಂದಾಗಲು ಸಾಧ್ಯ ಎಂಬುದು ಯಕ್ಷಪ್ರಶ್ನೆಯಾಗಿದ್ದು, ಸಿದ್ಧಾಂತಗಳು ಸಂಪೂರ್ಣ ವಿರುದ್ಧವಾಗಿದ್ದರೂ ಇವೆರಡೂ ಪಕ್ಷಗಳು ಪಾಲುದಾರಿಕೆ ಹೊಂದಿರುವುದು ಅಚ್ಚರಿ ಮೂಡಿಸಿದೆ. ಇದಕ್ಕೆ ಉತ್ತರ ವೇದಿಕೆಯ ಮೇಲಿರುವ ಮಾಜಿ ಸಿಪಿಐ(ಎಂ) ನಾಯಕರಲ್ಲಿದೆ ಎಂದರು. ಸಿಪಿಎಂ ನಾಯಕರು ತಮ್ಮ ಪಕ್ಷ ಬಿಟ್ಟು ನಮ್ಮೊಂದಿಗೆ ಇರಲು ಕಾರಣವೆಂದರೆ, ಎಡರಂಗವು ಜನರ ಪಕ್ಷವಾಗಿ ಉಳಿದಿಲ್ಲ, ಅದು ಕಾರ್ಪೊರೇಟ್ ಶಕ್ತಿಗಳ ಮತ್ತು ಬಿಜೆಪಿಯ ಪಾಲುದಾರ ಪಕ್ಷವಾಗಿ ಬದಲಾಗಿದ್ದು, ನೈಜ ಎಡಪಂಥೀಯ ಚಿಂತನೆಯುಳ್ಳವರು ಇಂದು ಕಾಂಗ್ರೆಸ್ ಮತ್ತು ಯುಡಿಎಫ್ ಜೊತೆಗಿದ್ದಾರೆ ಎಂದು ಹೇಳಿದರು.

ಶಬರಿಮಲೆ ಪ್ರಕರಣ

ಶಬರಿಮಲೆ ದೇವಸ್ಥಾನದ ಚಿನ್ನ ನಾಪತ್ತೆಯಾಗಿರುವ ಗಂಭೀರ ವಿಷಯದ ಬಗ್ಗೆ ಪ್ರಧಾನಿ ಮೋದಿ ಮತ್ತು ಬಿಜೆಪಿ ಮೌನ ವಹಿಸಿರುವುದನ್ನು ರಾಹುಲ್ ಪ್ರಶ್ನಿಸಿದ್ದು, ದೇಶಾದ್ಯಂತ ಹಿಂದೂ ಧರ್ಮ ಮತ್ತು ದೇವಾಲಯಗಳ ರಕ್ಷಕ ಎಂದು ಬಿಂಬಿಸಿಕೊಳ್ಳುವ ಪ್ರಧಾನಿ ಮೋದಿಯವರು ಕೇರಳಕ್ಕೆ ಬಂದಾಗ ಶಬರಿಮಲೆಯ ಚಿನ್ನದ ನಷ್ಟದ ಬಗ್ಗೆ ಮಾತನಾಡುವುದಿಲ್ಲ. ಈ ಹಗರಣದಲ್ಲಿ ಸಿಪಿಐ(ಎಂ) ನಾಯಕರು ಭಾಗಿಯಾಗಿದ್ದರೂ ಬಿಜೆಪಿ ಕ್ರಮ ಕೈಗೊಳ್ಳುತ್ತಿಲ್ಲ ಎಂದರು.
ಎಲ್​ಡಿಎಫ್ ಅಧಿಕಾರದಲ್ಲಿ ಮುಂದುವರಿಯುವುದು ಮೋದಿಯವರಿಗೆ ಅವಶ್ಯವಾಗಿದ್ದು, ಬಿಜೆಪಿ ಮತ್ತು ಆರ್‌ಎಸ್‌ಎಸ್ ಅನ್ನು ರಾಷ್ಟ್ರಮಟ್ಟದಲ್ಲಿ ಎದುರಿಸುವ ಶಕ್ತಿ ಇರುವುದು ಕೇವಲ ಕಾಂಗ್ರೆಸ್‌ಗೆ ಮಾತ್ರ, ಸಿಪಿಐ(ಎಂ)ಗೆ ಅಲ್ಲ ಎನ್ನುವುದು ಮೋದಿಯವರಿಗೆ ಪ್ರಧಾನಿಗಳಿಗೆ ಮನವರಿಕೆಯಾಗಿದೆ ಎಂದರು.
ಪ್ರಧಾನಿ ಮೋದಿ ಕೇರಳ ಮುಖ್ಯಮಂತ್ರಿಗಳನ್ನು ನಿಯಂತ್ರಿಸುತ್ತಿದ್ದು, ಮುಖ್ಯಮಂತ್ರಿಯವರ ಮೇಲಿರುವ ವಿವಿಧ ಪ್ರಕರಣಗಳ ತನಿಖೆ ನಡೆಸಿ ಅವರನ್ನು ಜೈಲಿಗೆ ಹಾಕುವ ಕೀಲಿಕೈ ಪ್ರಧಾನಿಯವರ ಕೈಯಲ್ಲಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ನಾಯಕರು ಮೋದಿಯವರನ್ನು ಟೀಕಿಸಿದಂತೆ ಕೇರಳ ಸಿಎಂ ಎಂದಿಗೂ ಮೋದಿಯನ್ನು ಟೀಕಿಸುವುದಿಲ್ಲ, ಹಾಗೆಯೇ ಮೋದಿ ಕೂಡ ಪಿಣರಾಯಿ ವಿಜಯನ್​ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ ಎಂದು ವ್ಯಂಗ್ಯವಾಡಿದರು(ಏಜೆನ್ಸೀಸ್​​).