India-USA | ನಮೋಗೆ ಕರೆ ಮಾಡಿದ ಟ್ರಂಪ್
ವಾಷಿಂಗ್ಟನ್/ನವದೆಹಲಿ: ಜಾಗತಿಕ ರಾಜಕೀಯದಲ್ಲಿ ಅತ್ಯಂತ ನಿರ್ಣಾಯಕ ಬೆಳವಣಿಗೆಯೊಂದರಲ್ಲಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುದೀರ್ಘ 40 ನಿಮಿಷಗಳ ಕಾಲ ದೂರವಾಣಿ ಮಾತುಕತೆ ನಡೆಸಿದ್ದು, ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚಿರುವ ಈ ಸಂದರ್ಭದಲ್ಲಿ ನಡೆದ ಈ ಮಾತುಕತೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ.
ನಾವು ನಿಮ್ಮನ್ನು ಪ್ರೀತಿಸುತ್ತೇವೆ.. ಮೋದಿಗೆ ಟ್ರಂಪ್ ಸಂದೇಶ
ಭಾರತಕ್ಕೆ ಅಮೆರಿಕದ ರಾಯಭಾರಿಯಾಗಿರುವ ಸೆರ್ಗಿಯೊ ಗೋರ್ ಈ ಮಾತುಕತೆಯ ವಿವರಗಳನ್ನು ಹಂಚಿಕೊಂಡಿದ್ದಾರೆ. ಈ ವರ್ಷ ಉಭಯ ನಾಯಕರ ನಡುವೆ ನಡೆದ ಮೂರನೇ ಕರೆ ಇದಾಗಿದ್ದು, ಮಾತುಕತೆಯ ವೇಳೆ ಅಧ್ಯಕ್ಷ ಟ್ರಂಪ್ ನಾವೆಲ್ಲರೂ ನಿಮ್ಮನ್ನು ಪ್ರೀತಿಸುತ್ತೇವೆ ಎಂಬ ಪ್ರೀತಿಯ ಸಂದೇಶವನ್ನು ಪ್ರಧಾನಿ ಮೋದಿಯವರಿಗೆ ರವಾನಿಸಿದ್ದಾರೆ ಎಂದು ಗೋರ್ ತಿಳಿಸಿದ್ದಾರೆ.
ಅಮೆರಿಕ-ಇರಾನ್ ಕದನ ವಿರಾಮದ ಬಳಿಕ ನಡೆದ ಮೊದಲ ಮಾತುಕತೆ ಇದಾಗಿದ್ದು, ಹಾರ್ಮುಜ್ ಜಲಸಂಧಿಯ ದಿಗ್ಬಂಧನದಂತಹ ಗಂಭೀರ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ. ಜಾಗತಿಕ ವ್ಯಾಪಾರ ಮತ್ತು ಇಂಧನ ಭದ್ರತೆಯ ದೃಷ್ಟಿಯಿಂದ ಹಾರ್ಮುಜ್ ಜಲಸಂಧಿಯನ್ನು ಮುಕ್ತವಾಗಿರಿಸುವುದು ಅತ್ಯಂತ ಅಗತ್ಯ ಎಂದು ಉಭಯ ನಾಯಕರು ಪ್ರತಿಪಾದಿಸಿದ್ದಾರೆ. ಇದೇ ವೇಳೆ, ಮುಂಬರುವ ದಿನಗಳಲ್ಲಿ ಭಾರತ ಮತ್ತು ಅಮೆರಿಕ ನಡುವೆ ಇಂಧನ ಕ್ಷೇತ್ರ ಸೇರಿದಂತೆ ಕೆಲವು ಬೃಹತ್ ಒಪ್ಪಂದಗಳು ನಡೆಯುವ ಸಾಧ್ಯತೆಯಿದೆ ಎಂದು ರಾಯಭಾರಿ ಗೋರ್ ಮುನ್ಸೂಚನೆ ನೀಡಿದ್ದಾರೆ.
ಪ್ರಧಾನಿ ಮೋದಿ ಹೇಳಿದ್ದೇನು..?
ಈ ವಿಷಯವಾಗಿ ಪ್ರಧಾನಿ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ನನ್ನ ಸ್ನೇಹಿತ ಟ್ರಂಪ್ ಅವರೊಂದಿಗೆ ದ್ವಿಪಕ್ಷೀಯ ಸಹಕಾರದಲ್ಲಿನ ಪ್ರಗತಿಯನ್ನು ಪರಿಶೀಲಿಸಿದೆವು. ಸಮಗ್ರ ಜಾಗತಿಕ ಕಾರ್ಯತಂತ್ರದ ಸಹಭಾಗಿತ್ವವನ್ನು ಬಲಪಡಿಸಲು ನಾವು ಬದ್ಧರಾಗಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ವಾಷಿಂಗ್ಟನ್‌ನಲ್ಲಿ ಲೆಬನಾನ್ - ಇಸ್ರೇಲ್ ಐತಿಹಾಸಿಕ ಮಾತುಕತೆ
ಇತ್ತ ದಶಕಗಳಲ್ಲೇ ಮೊದಲ ಬಾರಿಗೆ ಲೆಬನಾನ್ ಮತ್ತು ಇಸ್ರೇಲ್ ದೇಶಗಳು ವಾಷಿಂಗ್ಟನ್‌ನಲ್ಲಿ ಮಂಗಳವಾರ ನೇರ ರಾಜತಾಂತ್ರಿಕ ಮಾತುಕತೆಯನ್ನು ನಡೆಸಲಿದ್ದು, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಸಮ್ಮುಖದಲ್ಲಿ ಈ ಮಾತುಕತೆ ನಡೆಯಲಿದೆ. ಒಂದು ತಿಂಗಳಿಗೂ ಹೆಚ್ಚು ಕಾಲ ನಡೆದ ಇಸ್ರೇಲ್ ಮತ್ತು ಹೆಜ್ಬೊಲ್ಲಾ ಸಂಘರ್ಷದ ನಂತರ ಯುದ್ಧವನ್ನು ಕೊನೆಗೊಳಿಸುವ ಉದ್ದೇಶದಿಂದ ಈ ಪ್ರಯತ್ನ ನಡೆಯುತ್ತಿದೆ.
ಹೆಜ್ಬೊಲ್ಲಾ ವಿರೋಧ
ಈ ನೇರ ಮಾತುಕತೆಯನ್ನು ಹೆಜ್ಬೊಲ್ಲಾ ಉಗ್ರಗಾಮಿ ಗುಂಪು ತೀವ್ರವಾಗಿ ವಿರೋಧಿಸಿದ್ದು, ಈ ಸಭೆಯಲ್ಲಿ ಕೈಗೊಳ್ಳುವ ಯಾವುದೇ ನಿರ್ಧಾರಗಳಿಗೆ ನಾವು ಬದ್ಧರಾಗಿರುವುದಿಲ್ಲ ಎಂದು ಅಲ್ಲಿನ ನಾಯಕ ವಾಫಿಕ್ ಸಫಾ ಸ್ಪಷ್ಟಪಡಿಸಿದ್ದಾರೆ. ಇರಾನ್ ಕೂಡ ಈ ಪ್ರದೇಶದಲ್ಲಿ ಯುದ್ಧ ಕೊನೆಗೊಳಿಸುವುದನ್ನು ಅಮೆರಿಕದೊಂದಿಗಿನ ಮಾತುಕತೆಗೆ ಷರತ್ತಾಗಿ ವಿಧಿಸಿದೆ. ಲೆಬನಾನ್ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಇಸ್ರೇಲಿ ದಾಳಿಯಲ್ಲಿ ಈವರೆಗೆ ಕನಿಷ್ಠ 2,089 ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ ಮಹಿಳೆಯರು, ಮಕ್ಕಳು ಮತ್ತು ವೈದ್ಯಕೀಯ ಕಾರ್ಯಕರ್ತರು ಸೇರಿದ್ದಾರೆ. ಸುಮಾರು 1 ಮಿಲಿಯನ್‌ಗಿಂತಲೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ವಾಷಿಂಗ್ಟನ್‌ನಲ್ಲಿ ನಡೆಯುವ ಮಾತುಕತೆಯು ಶಾಂತಿಗೆ ದಾರಿ ಮಾಡಿಕೊಡುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ(ಏಜೆನ್ಸೀಸ್).