ಪ್ರಧಾನಿ ಮೋದಿ ಮಖನ್ಲಾಲ್ ಸರ್ಕಾರ್ ಆಶೀರ್ವಾದ ಪಡೆಯುತ್ತಿರುವುದು.
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಇಂದು(ಮೇ 09) ತನ್ನ ಮೊದಲ ಸರ್ಕಾರವನ್ನು ರಚಿಸಿದ್ದು, ಸುವೇಂದು ಅಧಿಕಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ 98 ವರ್ಷದ ಹಿರಿಯ ಬಿಜೆಪಿ ನಾಯಕ ಮಖನ್ಲಾಲ್ ಸರ್ಕಾರ್ ಅವರ ಪಾದ ಮುಟ್ಟಿ ಆಶೀರ್ವಾದ ಪಡೆಯುತ್ತಿರುವ ಕ್ಷಣ ಎಲ್ಲರನ್ನೂ ಗಮನ ಸೆಳೆದಿದೆ.
ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಧಾನಿ ಮೋದಿ, ಸರ್ಕಾರ್ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು, ಅವರ ಪಾದವನ್ನು ಮುಟ್ಟಿ ನಮಸ್ಕರಿಸಿ ಅಪ್ಪಿಕೊಂಡರು. ಈ ಕ್ಷಣವನ್ನು ನೆರೆದಿದ್ದ ಲಕ್ಷಾಂತರ ಬಿಜೆಪಿ ಕಾರ್ಯಕರ್ತರು ಹರ್ಷೋದ್ಘಾರದಿಂದ ಅಭಿನಂದಿಸಿದರು.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮೊದಲ ಬಾರಿಗೆ ತನ್ನ ಸರ್ಕಾರವನ್ನು ರಚಿಸಿದ್ದು, ಮಾಣವಚನ ಸಮಾರಂಭದಲ್ಲಿ ಪಕ್ಷವು ಮಖನ್ಲಾಲ್ ಸರ್ಕಾರ್ ಅವರಿಗೆ ಮುಖ್ಯ ವೇದಿಕೆಯಲ್ಲಿ ಸ್ಥಾನ ನೀಡಿತು. ಅವರನ್ನು ಅಭಿನಂದಿಸಿತು. ಸ್ವಾತಂತ್ರ್ಯ ಹೋರಾಟಗಾರನಿಂದ ಬಿಜೆಪಿ ಕಟ್ಟಿದ ತನ್ನ ನಾಯಕನನ್ನು ಬಿಜೆಪಿ ಆಧಾರಿಸಿತು.
ಯಾರೂ ಈ ಮಖನ್ಲಾಲ್ ಸರ್ಕಾರ್?
ಪಶ್ಚಿಮ ಬಂಗಾಳದ ರಾಷ್ಟ್ರೀಯತಾವಾದಿ ಚಳವಳಿಯೊಂದಿಗೆ ಸಂಬಂಧ ಹೊಂದಿದ್ದ ಅತ್ಯಂತ ಹಿರಿಯ ನಾಯಕರಲ್ಲಿ ಮಖನ್ಲಾಲ್ ಸರ್ಕಾರ್ ಒಬ್ಬರು. 1952ರಲ್ಲಿ ಕಾಶ್ಮೀರದಲ್ಲಿ ಭಾರತೀಯ ತ್ರಿವರ್ಣ ಧ್ವಜ ಹಾರಿಸುವ ಚಳವಳಿಯ ಸಂದರ್ಭದಲ್ಲಿ ಶ್ಯಾಮ ಪ್ರಸಾದ್ ಮುಖರ್ಜಿ ಅವರೊಂದಿಗೆ ಅವರನ್ನು ಬಂಧಿಸಲಾಗಿತ್ತು.
ಆಂದೋಲನದ ಸಮಯದಲ್ಲಿ ಜೈಲಿನಲ್ಲಿ ಕಳೆದ ಅವರು, ನಂತರ ಜನಸಂಘದ ಸ್ಥಾಪಕ ಸದಸ್ಯರೊಂದಿಗೆ ಕೆಲಸ ಮಾಡಿದರು. 1980ರಲ್ಲಿ ಬಿಜೆಪಿ ರಚನೆಯಾದ ಬಳಿಕ ಸರ್ಕಾರ್ ಅವರು ಪಶ್ಚಿಮ ಬಂಗಾಳದ ಉತ್ತರ ಭಾಗದಲ್ಲಿ ಪಕ್ಷದ ಅಸ್ತಿತ್ವವನ್ನು ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿಗೆ ರಾಜಕೀಯ ಪ್ರಭಾವ ಕಡಿಮೆ ಇದ್ದ ಸಮಯದಲ್ಲಿ ಅವರನ್ನು ಪಶ್ಚಿಮ ದಿನಾಜ್‌ಪುರ, ಜಲಪೈಗುರಿ ಮತ್ತು ಡಾರ್ಜಿಲಿಂಗ್ ಜಿಲ್ಲೆಗಳಿಗೆ ಸಂಘಟನಾ ಸಂಯೋಜಕರಾಗಿ ನೇಮಿಸಲಾಗಿತ್ತು. ಒಂದು ವರ್ಷದೊಳಗೆ ಸುಮಾರು 10,000 ಸದಸ್ಯರನ್ನು ಪಕ್ಷದ ಸಂಘಟನೆಗೆ ಸೇರಿಸಿಕೊಳ್ಳಲು ಸಹಾಯ ಮಾಡಿದ್ದಾರೆ ಎನ್ನಲಾಗಿದೆ.
1981ರಿಂದ ಏಳು ವರ್ಷಗಳ ಕಾಲ ನಿರಂತರವಾಗಿ ಜಿಲ್ಲಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ನ 15 ವರ್ಷಗಳ ಆಳ್ವಿಕೆಯನ್ನು ಕೊನೆಗೊಳಿಸಿ ರಾಜ್ಯದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಅಧಿಕೃತವಾಗಿ ಪ್ರಮಾಣ ವಚನ ಸ್ವೀಕರಿಸಿದ ಸುವೇಂದು ಅಧಿಕಾರಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮೋದಿ ಮತ್ತು ಸರ್ಕಾರ್ ನಡುವಿನ ಕ್ಷಣ ಎಲ್ಲರನ್ನು ಮನಸೊರೆಗೊಳಿಸಿದೆ (ಏಜೆನ್ಸೀಸ್).