ಆಸಿಯಾನ್ ಮತ್ತು ಕ್ವಾಡ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಇಂದಿನಿಂದ ಪ್ರಧಾನಿ ಮೋದಿ ಫಿಲಿಪ್ಪೀನ್ಸ್ ಪ್ರವಾಸ WEB
ದೇಶ

ಇಂದು ಪ್ರಧಾನಿ ಮೋದಿ ಫಿಲಿಪ್ಪೀನ್ಸ್ ಪ್ರವಾಸ! ಮನಿಲಾದಲ್ಲಿ ನಡೆಯುತ್ತಿರುವ ಆಸಿಯನ್​ ಶೃಂಗಸಬೆಯಲ್ಲಿ ಭಾಗಿ | PM Modi

ಜಾಗತಿಕ ಭೂರಾಜಕೀಯ ಸಮೀಕರಣಗಳು ವೇಗವಾಗಿ ಬದಲಾಗುತ್ತಿರುವ ಹೊತ್ತಿನಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಫಿಲಿಪ್ಪೀನ್ಸ್ ಅಧ್ಯಕ್ಷ ಫರ್ಡಿನಾಂಡ್ ಆರ್. ಮಾರ್ಕೋಸ್ ಜೂನಿಯರ್ ಅವರ ಆಹ್ವಾನದ ಮೇರೆಗೆ ಇಂದಿನಿಂದ (ನವೆಂಬರ್ 16 ಮತ್ತು 17) ಮನಿಲಾಗೆ ಎರಡು ದಿನಗಳ ಮಹತ್ವದ ಪ್ರವಾಸ ಕೈಗೊಂಡಿದ್ದಾರೆ.

ನವದೆಹಲಿ: ಜಾಗತಿಕ ಭೂರಾಜಕೀಯ ಸಮೀಕರಣಗಳು ವೇಗವಾಗಿ ಬದಲಾಗುತ್ತಿರುವ ಹೊತ್ತಿನಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಫಿಲಿಪ್ಪೀನ್ಸ್ ಅಧ್ಯಕ್ಷ ಫರ್ಡಿನಾಂಡ್ ಆರ್. ಮಾರ್ಕೋಸ್ ಜೂನಿಯರ್ ಅವರ ಆಹ್ವಾನದ ಮೇರೆಗೆ ಇಂದಿನಿಂದ (ನವೆಂಬರ್ 16 ಮತ್ತು 17) ಮನಿಲಾಗೆ ಎರಡು ದಿನಗಳ ಮಹತ್ವದ ಪ್ರವಾಸ ಕೈಗೊಂಡಿದ್ದಾರೆ. ಈ ಭೇಟಿಯ ವೇಳೆ ಪ್ರಧಾನಿ ಮೋದಿ ಅವರು 23ನೇ ಆಸಿಯಾನ್-ಭಾರತ ಶೃಂಗಸಭೆ, 21ನೇ ಪೂರ್ವ ಏಷ್ಯಾ ಶೃಂಗಸಭೆ ಹಾಗೂ ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾ ನಾಯಕರನ್ನೊಳಗೊಂಡ ಕ್ವಾಡ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಾರ, ಆಸಿಯಾನ್ ರಾಷ್ಟ್ರಗಳೊಂದಿಗಿನ ಬಾಂಧವ್ಯವು ಭಾರತದ ಆಕ್ಟ್ ಈಸ್ಟ್ ನೀತಿ ಮತ್ತು ಇಂಡೋ-ಪೆಸಿಫಿಕ್ ದೂರದೃಷ್ಟಿಯ ಪ್ರಮುಖ ಆಧಾರಸ್ತಂಭವಾಗಿದೆ. ವಿಶೇಷವೆಂದರೆ, 2026ನೇ ವರ್ಷವನ್ನು ಭಾರತ ಮತ್ತು ಆಸಿಯಾನ್ ನಡುವಿನ ಕಡಲ ಸಹಕಾರದ ವರ್ಷ ಎಂದು ಆಚರಿಸಲಾಗುತ್ತಿದ್ದು, 2027ರಲ್ಲಿ ಉಭಯ ದೇಶಗಳ ಸಂವಾದ ಸಂಬಂಧಕ್ಕೆ 35 ವರ್ಷ ಹಾಗೂ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಗೆ 5 ವರ್ಷ ತುಂಬಲಿದೆ.

ಈ ಹಿನ್ನೆಲೆಯಲ್ಲಿ ನಡೆಯುತ್ತಿರುವ ಶೃಂಗಸಭೆಯಲ್ಲಿ 2026ರಿಂದ 2030ರವರೆಗಿನ ಕ್ರಿಯಾ ಯೋಜನೆಯ ಪ್ರಗತಿಯನ್ನು ಪರಿಶೀಲಿಸುವುದರ ಜೊತೆಗೆ, ವಿಪತ್ತು ನಿರ್ವಹಣೆ, ವ್ಯಾಪಾರ ಮತ್ತು ಹೂಡಿಕೆ, ಡಿಜಿಟಲ್ ತಂತ್ರಜ್ಞಾನ, ಸಾರಿಗೆ ಸಂಪರ್ಕ ಹಾಗೂ ಅಭಿವೃದ್ಧಿ ಪಾಲುದಾರಿಕೆಯಂತಹ ಕ್ಷೇತ್ರಗಳಲ್ಲಿ ಹೊಸ ಸಹಕಾರದ ಮಾರ್ಗಗಳನ್ನು ಅನ್ವೇಷಿಸಲಾಗುತ್ತಿದೆ.

ಇದನ್ನೂ ಓದಿ : ಶೇಖ್ ಹಸೀನಾ ತವರೂರಿನಲ್ಲಿ ಭುಗಿಲೆದ್ದ ಹಿಂಸಾಚಾರ! ದೇಶಕ್ಕೆ ಮರಳುವ ಪ್ರಸ್ತಾಪದ ಬೆನ್ನಲ್ಲೇ ಗೋಪಾಲ್‌ಗಂಜ್‌ನಲ್ಲಿ ಭಾರಿ ಪ್ರತಿಭಟನೆ.Sheikh Hasina

ಹಿಂದೂ ಮಹಾಸಾಗರ ಮತ್ತು ಆಗ್ನೇಯ ಏಷ್ಯಾದ ಆಯಕಟ್ಟಿನ ಜಲಮಾರ್ಗಗಳ ನಡುವೆ ಭೌಗೋಳಿಕ ಸಂಪರ್ಕ ಹೊಂದಿರುವ ಭಾರತಕ್ಕೆ ಇಂಡೋ-ಪೆಸಿಫಿಕ್ ಪ್ರದೇಶದ ಕಡಲ ಭದ್ರತೆ ಮತ್ತು ನೌಕಾ ಸಹಕಾರ ಅತ್ಯಂತ ನಿರ್ಣಾಯಕವಾಗಿದೆ. ವಿದೇಶಾಂಗ ಸಚಿವಾಲಯದ ಪೂರ್ವ ವಿಭಾಗದ ಕಾರ್ಯದರ್ಶಿ ರುದ್ರೇಂದ್ರ ಟಂಡನ್ ಅವರು ತಿಳಿಸಿರುವಂತೆ, ಆಸಿಯಾನ್ ರಾಷ್ಟ್ರಗಳು ಭಾರತದ ಪ್ರಮುಖ ವ್ಯಾಪಾರ ಪಾಲುದಾರರಾಗಿ ಬೆಳೆದಿದ್ದು, ಈ ಪ್ರದೇಶದೊಂದಿಗೆ ಭಾರತದ ಒಟ್ಟು ವ್ಯಾಪಾರ ವಹಿವಾಟು ಸುಮಾರು 122 ಶತಕೋಟಿ ಡಾಲರ್‌ಗಳಷ್ಟಿದೆ. ಬದಲಾಗುತ್ತಿರುವ ಜಾಗತಿಕ ಸವಾಲುಗಳನ್ನು ಎದುರಿಸಲು ಮತ್ತು ಏಷ್ಯಾದಲ್ಲಿ ಶಾಂತಿ ಹಾಗೂ ಸ್ಥಿರತೆಯನ್ನು ಕಾಪಾಡಲು ಈ ಗಟ್ಟಿ ಸಂಬಂಧವು ನೆರವಾಗಲಿದೆ.

ಫಿಲಿಪ್ಪೀನ್ಸ್ ಅಧ್ಯಕ್ಷತೆಯಲ್ಲಿ ನಮ್ಮ ಭವಿಷ್ಯವನ್ನು ಒಟ್ಟಾಗಿ ರೂಪಿಸೋಣ (Navigating Our Future, Together) ಎಂಬ ಧ್ಯೇಯವಾಕ್ಯದೊಂದಿಗೆ ನಡೆಯುತ್ತಿರುವ ಈ ಶೃಂಗಸಭೆಯು ಜಾಗತಿಕ ನಾಯಕರ ಮಹಾಸಂಗಮಕ್ಕೂ ಸಾಕ್ಷಿಯಾಗುತ್ತಿದೆ. ಪ್ರಧಾನಿ ಮೋದಿ ಅವರೊಂದಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಹಾಗೂ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಸೇರಿದಂತೆ ಹಲವು ಪ್ರಮುಖ ನಾಯಕರು ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನಿ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ವಿವಿಧ ರಾಷ್ಟ್ರಗಳ ನಾಯಕರೊಂದಿಗೆ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸುವ ನಿರೀಕ್ಷೆಯಿದ್ದು, ಏಷ್ಯಾದ ಭದ್ರತೆ ಮತ್ತು ಆರ್ಥಿಕ ಪ್ರಗತಿಗೆ ಈ ಭೇಟಿ ಹೊಸ ದಿಕ್ಸೂಚಿಯಾಗಲಿದೆ. ( ಏಜೇನ್ಸಿಸ್​)