ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ
- ಐತಿಹಾಸಿಕ ಕೆಂಪುಕೋಟೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ
- ಸತತ 13ನೇ ಬಾರಿಗೆ ಧ್ವಜಾರೋಹಣ ನೆರವೇರಿಸುವ ಮೂಲಕ ಶುಭಕೋರಿದ ಪ್ರಧಾನಿ ನರೇಂದ್ರ ಮೋದಿ
- ದೇಶದ ಜನತೆಯನ್ನು ಉದ್ದೇಶಿಸಿ ಭಾಷಣ
ನವದೆಹಲಿ: ಐತಿಹಾಸಿಕ ಕೆಂಪುಕೋಟೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮವನ್ನು ಸತತ 13ನೇ ಬಾರಿಗೆ ಧ್ವಜಾರೋಹಣ ನೆರವೇರಿಸುವ ಮೂಲಕ ಶುಭಕೋರಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಜನತೆಯನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಹಲವು ಪ್ರಮುಖ ವಿಚಾರಗಳನ್ನು ಹಂಚಿಕೊಂಡರು.
'ವಂದೇ ಮಾತರಂ' ಗೀತೆಯನ್ನು ಸ್ಮರಿಸುತ್ತ ಹಾಗೂ ತ್ರಿವರ್ಣ ಧ್ವಜಕ್ಕೆ ಗೌರವ ಸಲ್ಲಿಸುತ್ತ ಭಾಷಣ ಆರಂಭಿಸಿದ ಪ್ರಧಾನಿ ಮೋದಿ, ದೇಶದ ಸ್ವಾತಂತ್ರ್ಯಕ್ಕಾಗಿ ಜೀವದಾನ ಮಾಡಿದ ವೀರ ಮಹಾನಾಯಕರಿಗೆ ನನ್ನ ನಮನಗಳು. ಇಂದು ದೇಶದ ಪ್ರತಿಯೊಬ್ಬರ ಎದೆಯಲ್ಲೂ ವಂದೇ ಮಾತರಂ ನಾದ ಧ್ವನಿಸುತ್ತಿದೆ. ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ರಾರಾಜಿಸುತ್ತಿದೆ ಹಾಗೂ ಪ್ರತಿಯೊಬ್ಬರ ಮನದಲ್ಲೂ ದೇಶದ ಭಾವುಟವಿದೆ. ಸ್ವಾತಂತ್ರ್ಯವೇ ಏಕೈಕ ಧ್ಯೇಯವಾಗಿಟ್ಟುಕೊಂಡು ಜೀವನವನ್ನೇ ಸಮರ್ಪಿಸಿದ ಪೂಜ್ಯ ಮಹಾತ್ಮಾ ಗಾಂಧಿ ಸೇರಿದಂತೆ ನಮ್ಮೆಲ್ಲ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಕ್ರಾಂತಿಕಾರಿಗಳಿಗೆ ಹೃತ್ಪೂರ್ವಕವಾಗಿ ನಮನ. ಕೆಂಪುಕೋಟೆಯಲ್ಲಿ 'ವಂದೇ ಮಾತರಂ' ಧ್ವನಿಸಿದ್ದು ಒಂದು ಐತಿಹಾಸಿಕ ಕ್ಷಣ ಎಂದರು.
ಪ್ರವಾಹ ಪೀಡಿತರಿಗೆ ಸಾಂತ್ವನ
ಇತ್ತೀಚಿನ ದಿನಗಳಲ್ಲಿ ದೇಶದ ಹಲವು ಭಾಗಗಳಲ್ಲಿ ಸಂಭವಿಸಿದ ಪ್ರವಾಹ ಮತ್ತು ಭೂಕುಸಿತದಿಂದ ಭಾರಿ ಸಂಕಷ್ಟಕ್ಕೀಡಾಗಿರುವ ಕುಟುಂಬಗಳ ದುಃಖ, ಸಂಕಟ ನಮಗೆ ಅರ್ಥವಾಗುತ್ತೆ. ಇಡೀ ದೇಶವೇ ಸಂತ್ರಸ್ತ ಕುಟುಂಬಗಳ ಪರವಾಗಿ ನಿಂತಿದೆ ಎಂಬ ಭರವಸೆಯನ್ನು ನಾನು ನೀಡುತ್ತೇನೆ ಎಂದು ಸಂತ್ರಸ್ತರಿಗೆ ಅಭಯ ನೀಡಿದರು.
2047ರ ವೇಳೆಗೆ ವಿಕಸಿತ ಭಾರತದ ಸಂಕಲ್ಪ
ನಮ್ಮ ಕನಸುಗಳು ಮತ್ತು ಸಂಕಲ್ಪಗಳು ದೊಡ್ಡದಾಗಿದ್ದಾಗ ಮಾತ್ರವೇ ದೇಶದ ಸಾಮರ್ಥ್ಯವೂ ಉನ್ನತ ಮಟ್ಟಕ್ಕೇರುತ್ತದೆ ಎಂದ ಪ್ರಧಾನಿ, ಭಾರತವು ಹೊಸ ಎತ್ತರಗಳನ್ನು ತಲುಪಲು ದೊಡ್ಡ ಕನಸುಗಳನ್ನು ಕಾಣುತ್ತಿದೆ. 2047ರ ವೇಳೆಗೆ ಭಾರತವನ್ನು ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ನಾನು ಶ್ರಮಿಸುತ್ತೇನೆ. ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತವು ಅಭಿವೃದ್ಧಿ ಹೊಂದಿದ ದೇಶವಾದಾಗ ಇಡೀ ಜಗತ್ತೇ ನಮ್ಮ ದೇಶವನ್ನು ತಿರುಗಿ ನೋಡುವ ಸಮಯ ಬರುವುದು ಖಚಿತ. ಕಳೆದ 12 ವರ್ಷಗಳಿಂದ ಪ್ರತಿಯೊಬ್ಬ ಭಾರತೀಯನೂ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದರು.
ದೇಶದಲ್ಲಿ 25 ಕೋಟಿ ಜನ ಬಡತನದಿಂದ ನಿರ್ಮೂಲನೆ ಆಗಿದ್ದಾರೆ. ಆಧುನಿಕ ಮೂಲಸೌಕರ್ಯಕ್ಕಾಗಿ ನಾವು ದೇಶವ್ಯಾಪಿ ಮೆಟ್ರೋ ಸೇವೆಗಳನ್ನು ವಿಸ್ತರಣೆ ಮಾಡಿದ್ದೇವೆ. ಕಳೆದ 12 ವರ್ಷಗಳಿಂದ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. 700 ನಗರಗಳಲ್ಲಿ ಪೈಪ್ಗ್ಯಾಸ್ ಸಂಪರ್ಕ ಕಲ್ಪಿಸಲಾಗಿದೆ. ಇದರೊಟ್ಟಿಗೆ, ಪರಮಾಣು ಕ್ಷೇತ್ರದಲ್ಲೂ ಆತ್ಮನಿರ್ಭರ ಯಶಸ್ಸು ಸಾಧಿಸಿದೆ. 2047ರೊಳಗೆ 100 ಗಿಗಾ ವ್ಯಾಟ್ ವಿದ್ಯುತ್ ಉತ್ಪಾದನೆಯನ್ನು ಗುರಿ ಹಾಕಿಕೊಂಡಿದ್ದೇವೆ ಎಂದು ಹೇಳಿದರು.
ಇನ್ನು, ರಕ್ಷಣಾ ಉತ್ಪಾದನೆಯು 12 ವರ್ಷಗಳಲ್ಲಿ 4 ಪಟ್ಟು ಹೆಚ್ಚಾಗಿದೆ. ದೇಶವನ್ನು ಆತಂಕಕ್ಕೆ ದೂಡುವುದು ಕೆಲವರ ಕೆಲಸ ಆಗಿತ್ತು. ಕೊರೊನಾದಿಂದ ಬದುಕಲು ಸಾಧ್ಯವಿಲ್ಲ ಎಂದು ಜನರಲ್ಲಿ ಭಯ ಹುಟ್ಟಿಸಿದರು. ಕೊರೊನಾ ವ್ಯಾಕ್ಸಿನ್ ಕುರಿತಾಗಿಯೂ ಸುಳ್ಳು ಸುದ್ದಿಗಳನ್ನು ಹರಡಿದರು. ಆದರೆ, ಭಾರತ ವ್ಯಾಕ್ಸಿನ್ ಕೊಟ್ಟು ಜನರ ಪ್ರಾಣ ಉಳಿಸಿತು. ಮತ್ತೊಂದೆಡೆ, ಗ್ಯಾಸ್, ಇಂಧನವಿಲ್ಲ ಎಂದು ಹೇಳಿಕೊಂಡು ಖುಷಿ ಪಡುತ್ತಿದ್ದರು. ಆದರೆ, ದೇಶದಲ್ಲಿ ಈಗ ಸಾಕಷ್ಟು ಯೂರಿಯಾ, ಗ್ಯಾಸ್ ಕೂಡ ಇದೆ. ಈಗ ನಮ್ಮ ತಾಕತ್ತನ್ನು ಇಡೀ ಜಗತ್ತಿಗೆ ತೋರಿಸಿದ್ದೇವೆ ಎಂದು ಗುಡುಗಿದರು.
ವಿಶ್ವದ 5 ಪ್ರಮುಖ ಬ್ಯಾಂಕ್ಗಳಲ್ಲಿ ನಮ್ಮದು ಇರಬೇಕು!
ಜಗತ್ತಿನ ಟಾಪ್ ಐದು ಪ್ರಮುಖ ಬ್ಯಾಂಕ್ಗಳ ಪಟ್ಟಿಯಲ್ಲಿ ಭಾರತದ ಬ್ಯಾಂಕ್ ಕೂಡ ಇರಬೇಕು. ವಿಶ್ವಮಟ್ಟದಲ್ಲಿ ನಾವು ದೇಶದ ಬ್ಯಾಂಕಿನ ಭಾವುಟವನ್ನು ಹಾರಿಸಬೇಕು. ಭಾರತದ ಜೊತೆ ಹಲವು ರಾಷ್ಟ್ರಗಳು ಮುಕ್ತ ವ್ಯಾಪಾರಕ್ಕೆ ಕೈಜೋಡಿಸುತ್ತಿವೆ. ಈಗಾಗಲೇ 40 ದೇಶಗಳೊಂದಿಗೆ ಮುಕ್ತ ವ್ಯಾಪಾರ ಹೊಂದಿದ್ದೇವೆ. ಇಂದು ನಮ್ಮ ದೇಶ ಎಲ್ಲ ಕ್ಷೇತ್ರಗಳಲ್ಲಿಯೂ ಸುಧಾರಣೆಯನ್ನು ಕಂಡಿದೆ ಎಂದು ಹೇಳಿದರು.