Dr Jitendra Singh | ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್
ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ ನಡೆಸುತ್ತಿರುವ ಪ್ರತಿಭಟನೆಯ ನಡುವೆ, ವಿದ್ಯಾರ್ಥಿ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಲು ಸರ್ಕಾರವು ಮತ್ತೊಮ್ಮೆ ಮುಕ್ತ ಪ್ರಸ್ತಾಪವನ್ನು ಮುಂದಿಟ್ಟಿದೆ. ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ (Dr Jitendra Singh), ಕಳೆದ 24 ಗಂಟೆಗಳಲ್ಲಿ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಸಂವಾದಕ್ಕಾಗಿ ಬರೋಬ್ಬರಿ ನಾಲ್ಕು ಆಹ್ವಾನಗಳನ್ನು ನೀಡಲಾಗಿದೆ ಎಂಬ ಪ್ರಮುಖ ವಿಚಾರವನ್ನು ಹಂಚಿಕೊಂಡಿದ್ದಾರೆ.
ಎಎನ್ಐ ಜೊತೆ ಮಾತನಾಡಿದ ಸಚಿವ ಸಿಂಗ್, ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ವಿನಮ್ರವಾಗಿ ಮನವಿ ಮಾಡಿದ ಅವರು, ಸರ್ಕಾರವು ನಿಮ್ಮೊಂದಿಗೆ ಚರ್ಚೆಗೆ ಸಂಪೂರ್ಣ ಸಿದ್ಧವಾಗಿದೆ, ದಿನದ ಯಾವುದೇ ಸಮಯದಲ್ಲಿ, ಎಷ್ಟು ಸಮಯದವರೆಗೆ ಚರ್ಚಿಸಲು ಬಯಸುತ್ತಾರೋ ಅಷ್ಟು ಸಮಯದವರೆಗೆ ಮುಕ್ತವಾಗಿ ಮಾತನಾಡಲು ಸರ್ಕಾರ ಬಾಗಿಲು ತೆರೆದಿದೆ. ಆಂದೋಲನಕ್ಕೆ ಕಾರಣವಾದ ಮೂಲ ವಿಷಯದ ಜೊತೆಗೆ, ಅದಕ್ಕೆ ಸಂಬಂಧಿಸಿದ ಎಲ್ಲಾ ಇತರೆ ವಿಚಾರಗಳನ್ನು ಚರ್ಚಿಸಲು ಸರ್ಕಾರ ಸಿದ್ಧವಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸಮಯ, ಸ್ಥಳ ನಿಮ್ಮದೇ ಎಂದ ಸಚಿವ ಡಾ. ಜಿತೇಂದ್ರ ಸಿಂಗ್!
ಈ ಸಂವಾದವು ಸಂಪೂರ್ಣವಾಗಿ ಮುಕ್ತ ಮನಸ್ಸಿನಿಂದ ನಡೆಯಲಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ. ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರ ನಿವಾಸದಲ್ಲಿ ಈ ಮಾತುಕತೆಗಳು ನಡೆಯಲಿದ್ದು, ಅವರೊಂದಿಗೆ ತಾವೂ ಕೂಡ ಭಾಗವಹಿಸುವುದಾಗಿ ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ. ಚರ್ಚೆಯ ಸ್ಥಳದ ಕುರಿತು ವಿದ್ಯಾರ್ಥಿಗಳಿಗೇ ಆಯ್ಕೆಯನ್ನು ನೀಡಲಾಗಿದ್ದು, ಸಚಿವ ಜೆ.ಪಿ. ನಡ್ಡಾ ಅವರ ನಿವಾಸದಲ್ಲಾಗಲಿ ಅಥವಾ ಅವರ ಕಚೇರಿಯಲ್ಲಾಗಲಿ, ಇವೆರಡರಲ್ಲಿ ವಿದ್ಯಾರ್ಥಿಗಳು ಬಯಸುವ ಯಾವುದೇ ಸ್ಥಳದಲ್ಲಿ ಮಾತುಕತೆಗೆ ಬರಬಹುದು ಎಂದು ಕೇಂದ್ರ ಸರ್ಕಾರವು ತಿಳಿಸಿದೆ.
ವಿದ್ಯಾರ್ಥಿಗಳ ಹಿತರಕ್ಷಣೆ ಮತ್ತು ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರವು ನಿರಂತರವಾಗಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಅದರ ಭಾಗವಾಗಿಯೇ ಈ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ. ವಿದ್ಯಾರ್ಥಿ ಸಮುದಾಯದಲ್ಲಿ ಅತ್ಯಂತ ವಿನಮ್ರತೆಯಿಂದ ಮನವಿ ಮಾಡುವುದಿಷ್ಟೆ, ದಯವಿಟ್ಟು ಬನ್ನಿ, ಕುಳಿತು ಮಾತುಕತೆ ನಡೆಸಿ ಎಂದು ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಪೇಪರ್ ಲೀಕ್ ಪ್ರಕರಣಗಳ ಶೀಘ್ರ ವಿಚಾರಣೆಗಾಗಿ ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳನ್ನು (ವೇಗವರ್ಧಿತ ನ್ಯಾಯಾಲಯ) ಸ್ಥಾಪಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತೆಗೆದುಕೊಂಡ ನಿರ್ಧಾರವನ್ನು ಉಲ್ಲೇಖಿಸಿದ ಜಿತೇಂದ್ರ ಸಿಂಗ್, ಪ್ರಧಾನಿ ಮೋದಿಯವರು ಇಂತಹ ಸೂಕ್ಷ್ಮ ವಿಷಯಗಳ ಕುರಿತು ಅತ್ಯಂತ ಕಾಳಜಿ ಹೊಂದಿದ್ದಾರೆ ಹಾಗೂ ಯುವಜನತೆಗೆ ಸಂಬಂಧಿಸಿದ ವಿಚಾರಗಳಿಗೆ ಗರಿಷ್ಠ ಆದ್ಯತೆ ಮತ್ತು ಪ್ರಾಮುಖ್ಯತೆಯನ್ನು ನೀಡುತ್ತಾರೆ ಎಂದು ವಿವರಿಸಿದರು.
ಜಂತರ್ ಮಂತರ್‌ನಲ್ಲೇ ಚರ್ಚೆಗೆ ಸಿಜೆಪಿ ಪಟ್ಟು
ಕೇಂದ್ರ ಸರ್ಕಾರವು ಚರ್ಚೆಗೆ ಸಿದ್ಧವಿದೆ ಎಂದು ಪದೇ ಪದೇ ಹೇಳುತ್ತಿದೆಯಾದರೂ ಕಾಕ್ರೋಚ್ ಜನತಾ ಪಾರ್ಟಿ ಸರ್ಕಾರದ ಮಾತುಕತೆಯ ಪ್ರಸ್ತಾಪವನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ. ಈ ಕುರಿತು ಪ್ರತಿಕ್ರಿಯಿಸಿದ ಸಿಜೆಪಿ ಮುಖ್ಯ ವಕ್ತಾರ ಸೌರವ್ ದಾಸ್, ಸರ್ಕಾರವು ಮಾತುಕತೆ ನಡೆಸಲು ಬಯಸಿದರೆ ಜಂತರ್ ಮಂತರ್‌ಗೆ ಬರಬೇಕು ಅಥವಾ ಕಾನ್‌ಸ್ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾನಂತಹ ತಟಸ್ಥ ಸ್ಥಳದಲ್ಲಿ ಸಭೆ ಕರೆಯಬೇಕು ಎಂದು ಷರತ್ತು ವಿಧಿಸಿದ್ದಾರೆ. ಅಲ್ಲದೆ, ಈವರೆಗೆ ಸರ್ಕಾರದಿಂದ ತಮಗೆ ಯಾವುದೇ ಅಧಿಕೃತ ಸಂದೇಶ ತಲುಪಿಲ್ಲ ಎಂದು ಅವರು ತಿಳಿಸಿದ್ದಾರೆ.
ನಾಳೆ ದೇಶವ್ಯಾಪಿ ಪ್ರತಿಭಟನೆಗೆ ಸಿಜೆಪಿ ಕರೆ!
ಕಾಕ್ರೋಚ್ ಜನತಾ ಪಾರ್ಟಿ ಗುರುವಾರ ಮಹತ್ವದ ಪ್ರಕಟಣೆ ಹೊರಡಿಸಿದ್ದು, ಪೇಪರ್ ಲೀಕ್ ಪ್ರಕರಣಗಳ ಕುರಿತು ಸರ್ಕಾರದ ಸುದೀರ್ಘ ಭರವಸೆಗಳು ಮತ್ತು ಚರ್ಚೆಗೆ ನೀಡಿರುವ ಆಹ್ವಾನಗಳ ನಡುವೆಯೂ ಸಿಜೆಪಿ ತನ್ನ ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಿದ್ದು, ನಾಳೆ (ಜುಲೈ 24) ದೇಶವ್ಯಾಪಿ ಬೃಹತ್ ಪ್ರತಿಭಟನೆಗೆ (Nation wide Protest) ಕರೆ ನೀಡಿದೆ.
ಈ ದೇಶವ್ಯಾಪಿ ಪ್ರತಿಭಟನೆಯು ಭಾರತದಾದ್ಯಂತ ಪೋಲಿಸ್ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರೊಂದಿಗೆ ಒಗ್ಗಟ್ಟು ಪ್ರದರ್ಶಿಸುವ ಉದ್ದೇಶವನ್ನು ಹೊಂದಿದೆ ಎಂದು ಸಿಜೆಪಿ ತಿಳಿಸಿದೆ. ಪ್ರತಿಭಟನೆಯ ಯಶಸ್ಸಿಗೆ ಅಗತ್ಯವಿರುವ ಅನುಮತಿಗಳು ಮತ್ತು ಲಾಜಿಸ್ಟಿಕ್ಸ್ ಸಿದ್ಧತೆಗಳಿಗಾಗಿ ಎಲ್ಲಾ ವಿದ್ಯಾರ್ಥಿ ಸಂಘಟನೆಗಳು ಮತ್ತು ಗುಂಪುಗಳು ಪರಸ್ಪರ ಸಹಕರಿಸಿ ಒಟ್ಟಾಗಿ ಕೆಲಸ ಮಾಡಬೇಕು ಎಂದು ಸಂಘಟನೆ ಮನವಿ ಮಾಡಿದೆ(ಏಜೆನ್ಸೀಸ್).