Assam Election 2026 | ಗೋಗಮುಖ್‌ನಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ 
ದೇಶ

ಸ್ಥಳೀಯರನ್ನೇ ಅಲ್ಪಸಂಖ್ಯಾತರನ್ನಾಗಿಸಲು ಕೈ ಸಂಚು..ಕಾಂಗ್ರೆಸ್ ರಾಜಕುಮಾರನಿಗೆ ಹ್ಯಾಟ್ರಿಕ್ ಸೋಲು ಖಚಿತ ಎಂದ ಪ್ರಧಾನಿ ಮೋದಿ | Assam Election 2026

Assam Election 2026: ಕಳೆದ ಹತ್ತು ವರ್ಷಗಳಲ್ಲಿ ಅಸ್ಸಾಂ ಕಂಡಿರುವ ಅಭಿವೃದ್ಧಿಯೇ ಬಿಜೆಪಿಯ ಗೆಲುವಿಗೆ ಶ್ರೀರಕ್ಷೆಯಾಗಲಿದ್ದು, ರಾಜ್ಯದ ಜನತೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವನ್ನು ಮತ್ತೊಮ್ಮೆ ಆಶೀರ್ವದಿಸುವುದು ಖಚಿತ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ಬುಧವಾರ ಗೋಗಮುಖ್‌ನಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ರಾಜ್ಯದ ಜನರಲ್ಲಿ ಕಂಡುಬರುತ್ತಿರುವ ಅಭೂತಪೂರ್ವ ಉತ್ಸಾಹವು ಅಸ್ಸಾಂನ ನಿರಂತರ ಬೆಳವಣಿಗೆ ಮತ್ತು ಸ್ಥಿರತೆಗೆ ನೀಡುತ್ತಿರುವ ಬೆಂಬಲವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತಿದೆ ಎಂದರು.
ಈ ಬಾರಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯು ಕೇವಲ ಅಧಿಕಾರಕ್ಕಾಗಿ ಅಲ್ಲ, ಬದಲಾಗಿ ವಿಕಸಿತ ಭಾರತದ ದೃಷ್ಟಿಕೋನವನ್ನು ಸಾಕಾರಗೊಳಿಸಲು ನಡೆಯುತ್ತಿರುವ ಸಮರ, ಅಸ್ಸಾಂನಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಲಿದೆ ಎಂದು ಹೇಳಿದರು.

ಕಾಂಗ್ರೆಸ್​ ವಿರುದ್ಧ ವಾಗ್ದಾಳಿ..

ಕಾಂಗ್ರೆಸ್‌ನ 6 ದಶಕಗಳ ಆಡಳಿತ ಮತ್ತು ಬಿಜೆಪಿಯ 10 ವರ್ಷಗಳ ಅಭಿವೃದ್ಧಿ ಕಾರ್ಯಗಳನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಕಾಂಗ್ರೆಸ್ 65 ವರ್ಷಗಳಲ್ಲಿ ಕೇವಲ 3 ಸೇತುವೆಗಳನ್ನು ನಿರ್ಮಿಸಿದ್ದರೆ, ಎನ್​ಡಿಎ ಸರ್ಕಾರ ಕೇವಲ 10 ವರ್ಷಗಳಲ್ಲಿ 7 ಬೃಹತ್ ಸೇತುವೆಗಳನ್ನು ನಿರ್ಮಿಸಿ ವೇಗವಾಗಿ ಅಭಿವೃದ್ಧಿ ಸಾಧಿಸಿದೆ ಎಂದು ಅಂಕಿಅಂಶಗಳ ಸಮೇತ ವಿವರಿಸಿದರು. ಅಸ್ಸಾಂನ ದೀರ್ಘಕಾಲದ ಸಮಸ್ಯೆಯಾದ ಪ್ರವಾಹಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು 18,000 ಕೋಟಿ ರೂ.ಗಳ ವೆಚ್ಚದಲ್ಲಿ ಬಾದ್ ಮುಕ್ತ್ ಅಸ್ಸಾಂ ಮಿಷನ್ (ಪ್ರವಾಹ ಮುಕ್ತ ಅಸ್ಸಾಂ ಅಭಿಯಾನ) ಪ್ರಾರಂಭಿಸಲಾಗಿದೆ ಎಂದು ತಿಳಿಸಿದ ಪ್ರಧಾನಿ, ಆಧುನಿಕ ಒಡ್ಡುಗಳ ನಿರ್ಮಾಣಕ್ಕೆ ನೂರಾರು ಕೋಟಿ ರೂಪಾಯಿ ವ್ಯಯಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಚುನಾವಣೆ ಕಾಂಗ್ರೆಸ್‌ ಪಾಲಿಗೆ ಶತಮಾನದ ಸೋಲು ಆಗಲಿದೆ, ಆ ಪಕ್ಷದ ಸ್ವಯಂ ಘೋಷಿತ ರಾಜಕುಮಾರ (ರಾಹುಲ್​ ಗಾಂಧಿ) ಹ್ಯಾಟ್ರಿಕ್ ಸೋಲನ್ನು ಎದುರು ನೋಡುತ್ತಿದ್ದರೆ, ಅಸ್ಸಾಂನಲ್ಲಿ ಎನ್‌ಡಿಎ ಹ್ಯಾಟ್ರಿಕ್ ಗೆಲುವಿನತ್ತ ಮುನ್ನುಗ್ಗುತ್ತಿದೆ ಎಂದು ವ್ಯಂಗ್ಯವಾಡಿದ ಪ್ರಧಾನಿಯವರು, ಸಭೆಯಲ್ಲಿ ನೆರೆದಿದ್ದ ಬೃಹತ್ ಜನಸಾಗರವೇ ಬಿಜೆಪಿಯ ಮೂರನೇ ಬಾರಿಯ ಗೆಲುವಿಗೆ ಸಾಕ್ಷಿ ಎನ್ನುತ್ತಾ, ತಮಗೆ ಸಿಕ್ಕ ಹ್ಯಾಟ್ರಿಕ್ ಅವಕಾಶದಂತೆ, ಅಸ್ಸಾಂನಲ್ಲೂ ಜನರು ಬಿಜೆಪಿಗೆ ಮತ್ತೊಮ್ಮೆ ಆಶೀರ್ವಾದ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಅಸ್ಸಾಂನಲ್ಲಿ ಒಳನುಸುಳುಕೋರರಿಗೆ ಮುಕ್ತ ಅವಕಾಶ ನೀಡಲಾಗಿತ್ತು ಎಂಬ ಗಂಭೀರ ಆರೋಪ ಮಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ಪಕ್ಷವು ತನ್ನ ಮತಬ್ಯಾಂಕ್ ರಾಜಕಾರಣಕ್ಕಾಗಿ ಸ್ಥಳೀಯ ಜನರನ್ನು ಅಲ್ಪಸಂಖ್ಯಾತರನ್ನಾಗಿ ಮಾಡಲು ಸಂಚು ರೂಪಿಸಿದೆ ಮತ್ತು ನುಸುಳುಕೋರರು ಬುಡಕಟ್ಟು ಜನಾಂಗದವರ ಭೂಮಿಯನ್ನು ಅತಿಕ್ರಮಿಸಲು ಪ್ರೋತ್ಸಾಹ ನೀಡಿದೆ ಎಂದು ಕಿಡಿಕಾರಿದ್ದಾರೆ.
ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ರೈತರು, ಬುಡಕಟ್ಟು ಜನಾಂಗದವರು ಮತ್ತು ಅರಣ್ಯ ಭೂಮಿಯನ್ನು ನುಸುಳುಕೋರರ ವಶಕ್ಕೆ ಹೋಗಲು ಬಿಡುವುದಿಲ್ಲ ಎಂದು ಭರವಸೆ ನೀಡಿದ ಅವರು, ಅಕ್ರಮ ಆಕ್ರಮಣದ ವಿರುದ್ಧ ಸರ್ಕಾರದ ಕಠಿಣ ಕ್ರಮಗಳು ಮುಂದುವರಿಯಲಿವೆ ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ಪ್ರಣಾಳಿಕೆ

ತಮ್ಮ ಭಾಷಣದಲ್ಲಿ ಬಿಜೆಪಿ ಪ್ರಣಾಳಿಕೆಯ ಪ್ರಮುಖ ಕಲ್ಯಾಣ ಯೋಜನೆಗಳನ್ನು ಪಟ್ಟಿ ಮಾಡಿದ ಪ್ರಧಾನಿ ಮೋದಿ, ಅಸ್ಸಾಂನ 15 ಲಕ್ಷಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮನೆಗಳನ್ನು ಒದಗಿಸುವ ಭರವಸೆ ನೀಡಿದರು. ವಿಶೇಷವಾಗಿ ಬಡ ಕುಟುಂಬದ ಮಕ್ಕಳಿಗೆ ಕೆಜಿಯಿಂದ ಪಿಜಿವರೆಗೆ ಉಚಿತ ಶಿಕ್ಷಣ ನೀಡುವ ನಿರ್ಧಾರವನ್ನು ಘೋಷಿಸಿದರು.
ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದ ಅವರು, ಲಖ್ಪತಿ ದೀದಿ ಯೋಜನೆಯ ಮೂಲಕ ಈಗಾಗಲೇ 3 ಲಕ್ಷ ಮಹಿಳೆಯರು ಪ್ರಯೋಜನ ಪಡೆದಿದ್ದು, ಮುಂದಿನ ದಿನಗಳಲ್ಲಿ ಇದನ್ನು 40 ಲಕ್ಷ ಮಹಿಳೆಯರಿಗೆ ವಿಸ್ತರಿಸುವ ಗುರಿ ಹೊಂದಿರುವುದಾಗಿ ತಿಳಿಸಿದರು. ಜೊತೆಗೆ ಮಹಿಳೆಯರ ಆರ್ಥಿಕ ಭದ್ರತೆಗಾಗಿ ಒರುನೊಡೊಯ್ ಯೋಜನೆಯಲ್ಲಿ ಮತ್ತಷ್ಟು ಸುಧಾರಣೆಗಳನ್ನು ತರುವುದಾಗಿ ಮೋದಿ ಭರವಸೆ ನೀಡಿದರು.

ಯುಜಿಸಿ ಬಗ್ಗೆ ಹೇಳಿದ್ದೇನು..?

ಇದೇ ವೇಳೆ ಏಕರೂಪ ನಾಗರಿಕ ಸಂಹಿತೆ (UCC) ಜಾರಿಯ ಬಗ್ಗೆ ಮಾತನಾಡಿದ ಪ್ರಧಾನಿ, ಯುಸಿಸಿ ಜಾರಿಯು ಬುಡಕಟ್ಟು ಸಮುದಾಯಗಳ ಸಂಸ್ಕೃತಿ ಮತ್ತು ಸಂಪ್ರದಾಯಗಳ ರಕ್ಷಣೆಯೊಂದಿಗೆ ಸಮತೋಲನ ಕಾಯ್ದುಕೊಳ್ಳಲಿದೆ ಎಂದು ಭರವಸೆ ನೀಡಿದರು. ಬಿಜೆಪಿ ನೀಡಿದ ಪ್ರತಿಯೊಂದು ಭರವಸೆಯನ್ನು ಈಡೇರಿಸುತ್ತದೆ, ಆದರೆ ಕಾಂಗ್ರೆಸ್ ಪಕ್ಷ ವಿಭಜಕ ರಾಜಕಾರಣ ಮಾಡುತ್ತಿದೆ ಎಂದರು.
2014 ಕ್ಕಿಂತ ಮೊದಲು ಪ್ರಸ್ತಾವಿತ ಕೋಮು ಹಿಂಸಾಚಾರ ಮಸೂದೆಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಕಾಂಗ್ರೆಸ್‌ನ ವಿಭಜಕ ನೀತಿಗಳು ಬಹುಸಂಖ್ಯಾತ ಸಮುದಾಯಕ್ಕೆ ಕಿರುಕುಳ ನೀಡುವ ಉದ್ದೇಶ ಹೊಂದಿದ್ದವು ಎಂದು ಆರೋಪಿಸಿದರು. ಆ ಮಸೂದೆಯಲ್ಲಿ ಬಹುಸಂಖ್ಯಾತರನ್ನು ಅಪರಾಧಿಗಳಂತೆ ಮತ್ತು ಅಲ್ಪಸಂಖ್ಯಾತರನ್ನು ಬಲಿಪಶುಗಳಂತೆ ಬಿಂಬಿಸುವ ಪ್ರಯತ್ನ ನಡೆದಿತ್ತು, ಈಗ ಅಸ್ಸಾಂನಲ್ಲೂ ಅಂತಹದೇ ಮಸೂದೆ ತರಲು ಕಾಂಗ್ರೆಸ್ ನಾಯಕರು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದು ಜನರನ್ನು ಎಚ್ಚರಿಸಿದರು.
126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಗೆ ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಕೇಂದ್ರ ಆಯೋಗ ಘೋಷಿಸಿದೆ(ಏಜೆನ್ಸೀಸ್​).