Tarique Rahmans Swearing 
ದೇಶ

ಫೆ.17 ಕ್ಕೆ ತಾರಿಕ್ ಪ್ರಮಾಣ ವಚನ; ಪ್ರಧಾನಿ ಮೋದಿಗೆ ಆಹ್ವಾನ..? ಕುತೂಹಲ ಮೂಡಿಸಿದ ಢಾಕಾ ಭೇಟಿ! | Tarique Rahmans Swearing

ದೆಹಲಿ: ಫೆಬ್ರವರಿ 17 ರಂದು ನಡೆಯಲಿರುವ ಬಾಂಗ್ಲಾದೇಶದ ಮುಂದಿನ ಪ್ರಧಾನಿ ತಾರಿಕ್ ರೆಹಮಾನ್ ಪ್ರಮಾಣವಚನ ಸ್ವೀಕಾರ (Tarique Rahmans Swearing) ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಹಲವಾರು ಪ್ರಾದೇಶಿಕ ನಾಯಕರನ್ನು ಆಹ್ವಾನಿಸಿದೆ ಎಂದು ವರದಿಯಾಗಿದೆ.
ಈಗಾಗಲೇ ಬಾಂಗ್ಲಾ ತನ್ನ ಯೋಜನೆಯನ್ನು ನವದೆಹಲಿಗೆ ತಿಳಿಸಿದೆ ಎನ್ನುವ ಮಾಹಿತಿ ಇದ್ದು, ಇಲ್ಲಿಯವರೆಗೆ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲ.
ರೆಹಮಾನ್​ರ ಪಕ್ಷವಾದ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ (ಬಿಎನ್‌ಪಿ), ಹಲವಾರು ದೇಶಗಳ ನಾಯಕರನ್ನು ಸಮಾರಂಭಕ್ಕೆ ಆಹ್ವಾನಿಸುವ ಸಾಧ್ಯತೆಯಿದೆ ಎನ್ನಲಾಗಿದ್ದು, ಇದೇ ಫೆಬ್ರವರಿ 17 ರಂದು ಬಾಂಗ್ಲಾದೇಶದ ಹೊಸ ಪ್ರಧಾನಿಯಾಗಿ ರೆಹಮಾನ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಭಾರತ ಸೇರಿದಂತೆ 13 ದೇಶಗಳಿಗೆ ಪ್ರಮಾಣವಚನ ಸಮಾರಂಭದ ಆಹ್ವಾನಗಳನ್ನು ಕಳುಹಿಸಲಾಗಿದೆ ಎಂದು ಬಿಎನ್‌ಪಿ ತಿಳಿಸಿದ್ದು, ಚೀನಾ, ಸೌದಿ ಅರೇಬಿಯಾ, ಪಾಕಿಸ್ತಾನ, ಟರ್ಕಿ, ಯುನೈಟೆಡ್ ಅರಬ್ ಎಮಿರೇಟ್ಸ್, ಕತಾರ್, ಮಲೇಷ್ಯಾ, ಬ್ರೂನಿ, ಶ್ರೀಲಂಕಾ, ನೇಪಾಳ, ಮಾಲ್ಡೀವ್ಸ್ ಮತ್ತು ಭೂತಾನ್ ಇತರ ಆಹ್ವಾನಿತ ರಾಷ್ಟ್ರಗಳಾಗಿವೆ.
ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಹಾಜರಾಗುತ್ತಾರಾ ಪ್ರಧಾನಿ ಮೋದಿ?
ಫೆಬ್ರವರಿ 17 ರಂದು ಮುಂಬೈನಲ್ಲಿ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿರುವ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಢಾಕಾಗೆ ಪ್ರಯಾಣಿಸುವ ತೀರಾ ಸಾಧ್ಯತೆ ಕಡಿಮೆ. ಆದ್ದರಿಂದ ಪ್ರಮಾಣವಚನ ಸಮಾರಂಭಕ್ಕೆ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತೆರಳಬಹುದು ಎನ್ನಲಾಗಿದೆ.

ತಾರಿಕ್​ಗೆ ಕರೆ ಮಾಡಿದ್ದ ಪ್ರಧಾನಿ

ಬಾಂಗ್ಲಾದೇಶದ ಚುನಾವಣೆಯಲ್ಲಿ ಅದ್ಭುತ ಗೆಲುವು ಸಾಧಿಸಿರುವ ಬಿಎನ್‌ಪಿ ಮುಖ್ಯಸ್ಥ ತಾರಿಕ್ ರೆಹಮಾನ್​ರಿಗೆ ಇಂದು ದೂರವಾಣಿ ಕರೆ ಮಾಡಿರುವ ಪ್ರಧಾನಿ ಮೋದಿ ತಾರಿಕ್​ರನ್ನು ಅಭಿನಂದಿಸುತ್ತಾ, ಭಾರತ ಬೆಂಬಲದ ಬದ್ಧತೆಯನ್ನು ಪುನರುಚ್ಛರಿಸಿದ್ದಾರೆ.
ಈ ವಿಷಯವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ವಿಷಯ ಬಹಿರಂಗಪಡಿಸಿರುವ ಪ್ರಧಾನಿ ಮೋದಿ, ತಾರಿಕ್ ರೆಹಮಾನ್ ಅವರೊಂದಿಗೆ ಮಾತನಾಡಲು ಸಂತೋಷವಾಯಿತು. ಬಾಂಗ್ಲಾದೇಶ ಚುನಾವಣೆಯಲ್ಲಿನ ಗಮನಾರ್ಹ ಗೆಲುವಿಗಾಗಿ ನಾನು ಅವರನ್ನು ಅಭಿನಂದಿಸುತ್ತೇನೆ.
ಬಾಂಗ್ಲಾದೇಶದ ಜನರ ಆಕಾಂಕ್ಷೆಗಳನ್ನು ಈಡೇರಿಸುವ ಅವರ ಪ್ರಯತ್ನಕ್ಕೆ ನನ್ನ ಶುಭಾಶಯಗಳು ಮತ್ತು ಬೆಂಬಲವನ್ನು ತಿಳಿಸಿದ್ದೇನೆ. ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಹೊಂದಿರುವ ಎರಡು ನಿಕಟ ನೆರೆಹೊರೆಯವರಾಗಿ, ನಮ್ಮ ಎರಡೂ ಜನರ ಶಾಂತಿ, ಪ್ರಗತಿ ಮತ್ತು ಸಮೃದ್ಧಿಗೆ ಭಾರತದ ನಿರಂತರ ಬದ್ಧತೆಯನ್ನು ಪುನರುಚ್ಚರಿಸಿದ್ದೇನೆ ಎಂದು ಪ್ರಧಾನಿ ಬರೆದುಕೊಂಡಿದ್ದಾರೆ.

ಬಿಎನ್‌ಪಿ ಗೆಲುವು

ಬಾಂಗ್ಲಾ ಸಂಸತ್ತಿನ ಚುನಾವಣೆಯಲ್ಲಿ ಬಿಎನ್‌ಪಿ 297 ರಲ್ಲಿ 209 ಸ್ಥಾನಗಳನ್ನು ಗೆದ್ದು, 20 ವರ್ಷಗಳ ಬಳಿಕ ಅಧಿಕಾರಕ್ಕೆ ಮರಳಿದೆ. ಪಾಕಿಸ್ತಾನದೊಂದಿಗೆ ನಿಕಟ ಸಂಬಂಧ ಹೊಂದಿದೆ ಎಂದು ಪರಿಗಣಿಸಲಾದ ಬಲಪಂಥೀಯ ಜಮಾತ್-ಇ-ಇಸ್ಲಾಮಿ ಬಾಂಗ್ಲಾದೇಶ 68 ಸ್ಥಾನಗಳನ್ನು ಗೆದ್ದಿದೆ.
ಬಿಎನ್‌ಪಿ ಸರ್ಕಾರ ರಚಿಸಿದರೆ, ತಾರಿಕ್ ರೆಹಮಾನ್ 36 ವರ್ಷಗಳ ಬಳಿಕ ಬಾಂಗ್ಲಾದೇಶದ ಮೊದಲ ಪುರುಷ ಪ್ರಧಾನಿಯಾಗಲಿದ್ದಾರೆ. 17 ವರ್ಷಗಳಿಗೂ ಹೆಚ್ಚು ಕಾಲ ಸ್ವಯಂ-ಗಡಿಪಾರಾಗಿದ್ದ ಅವರು ಕಳೆದ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶಕ್ಕೆ ಮರಳಿದ್ದರು. ಪಕ್ಷದ ಕಾರ್ಯಕರ್ತರು ವಿಜಯೋತ್ಸವದ ಮೆರವಣಿಗೆ ಬಿಟ್ಟು ದೇಶಾದ್ಯಂತ ವಿಶೇಷ ಪ್ರಾರ್ಥನೆಗಳನ್ನು ನಡೆಸುವಂತೆ ಒತ್ತಾಯಿಸಿದ್ದಾರೆ(ಏಜೆನ್ಸೀಸ್​).