Narendra Modi | ಪ್ರಧಾನಿ ನರೇಂದ್ರ ಮೋದಿ
ನವದೆಹಲಿ: ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಬರೆಯುತ್ತಿದ್ದ ನೀಟ್ (NEET-UG) ಮರುಪರೀಕ್ಷೆಗೆ ಯಾವುದೇ ತೊಂದರೆಯಾಗಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ( Narendra Modi) ಅವರು ಶನಿವಾರ ದೆಹಲಿ ವಿಮಾನ ನಿಲ್ದಾಣದಿಂದ ತಮ್ಮ ನಿವಾಸದತ್ತ ಹೊರಡುವುದನ್ನು ತಡಮಾಡಿದ್ದಾರೆ ಎಂದು ವರದಿಯಾಗಿದೆ. ಪ್ರಧಾನಿಯವರ ಕಾರುಗಳ ಸಾಲು (ವಿಐಪಿ ಕಾನ್ವಾಯ್) ರಸ್ತೆಗೆ ಬಂದರೆ ಟ್ರಾಫಿಕ್ ಜಾಮ್ ಆಗಿ ಪರೀಕ್ಷೆಗೆ ಹೋಗುವ ವಿದ್ಯಾರ್ಥಿಗಳಿಗೆ ತಡವಾಗಬಹುದು ಎಂಬ ಕಾರಣಕ್ಕೆ ಮೋದಿ ಅವರು ಈ ನಿರ್ಧಾರ ತಳೆದಿದ್ದಾರೆ ಎನ್ನಲಾಗಿದೆ.
ಪ್ರಧಾನಿ ಮೋದಿ ಮಧ್ಯಾಹ್ನ ಸುಮಾರು 1:15 ಕ್ಕೆ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ವೈದ್ಯಕೀಯ ಪ್ರವೇಶ ಪರೀಕ್ಷೆ ಆರಂಭವಾಗಲು ಕೇವಲ 45 ನಿಮಿಷಗಳು ಮಾತ್ರ ಬಾಕಿ ಇತ್ತು. ಒಂದು ವೇಳೆ ವಿಮಾನ ನಿಲ್ದಾಣದಿಂದ ಪ್ರಧಾನಿಯವರ ಬೆಂಗಾವಲು ಪಡೆ ಹೊರಟರೆ ರಸ್ತೆ ಸಂಚಾರ ಸ್ಥಗಿತಗೊಂಡು ಪರೀಕ್ಷಾರ್ಥಿಗಳಿಗೆ ತೊಂದರೆಯಾಗಬಹುದು ಎಂಬುದನ್ನು ಅರಿತ ಮೋದಿ ಅವರು, ತಕ್ಷಣವೇ ತಮ್ಮ ನಿವಾಸಕ್ಕೆ ತೆರಳದೆ ಪರೀಕ್ಷೆ ಅಧಿಕೃತವಾಗಿ ಆರಂಭವಾಗುವವರೆಗೂ ವಿಮಾನ ನಿಲ್ದಾಣದಲ್ಲೇ ಉಳಿಯಲು ನಿರ್ಧರಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
22 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳಿಂದ ಮರುಪರೀಕ್ಷೆ
ಈ ಹಿಂದೆ ನಡೆದಿದ್ದ ಪರೀಕ್ಷೆಯಲ್ಲಿ ಅಕ್ರಮ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಆ ಪರೀಕ್ಷೆಯನ್ನು ರದ್ದುಗೊಳಿಸಲಾಗಿದ್ದು, ಪ್ರಸ್ತುತ ಭದ್ರತಾ ಕ್ರಮಗಳ ನಡುವೆ ಈ ಮರುಪರೀಕ್ಷೆಯನ್ನು ನಡೆಸಲಾಗುತ್ತಿದೆ. ಈ ವರ್ಷ ಭಾರತದ 5,440 ಕೇಂದ್ರಗಳು ಹಾಗೂ ವಿದೇಶದ 14 ಸ್ಥಳಗಳು ಸೇರಿದಂತೆ ದೇಶ-ವಿದೇಶಗಳಲ್ಲಿ ಒಟ್ಟು 22 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ ಎನ್ನಲಾಗಿದೆ.
ಪರೀಕ್ಷಾ ಪ್ರಕ್ರಿಯೆಯು ಅತ್ಯಂತ ಪಾರದರ್ಶಕ ಮತ್ತು ಸುರಕ್ಷಿತವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ಬೃಹತ್ ನಿಗಾ ವ್ಯವಸ್ಥೆಯನ್ನು ಮಾಡಿದೆ. ಪರೀಕ್ಷಾ ಅಕ್ರಮಗಳಿಗೆ ಬ್ರೇಕ್ ಹಾಕಲು ಎನ್‌ಟಿಎ ಈ ಬಾರಿ ಹೈಟೆಕ್ ತಂತ್ರಜ್ಞಾನವನ್ನು ಬಳಸಿಕೊಂಡಿದ್ದು, 1.38 ಲಕ್ಷ ಸಿಸಿಟಿವಿ ಕ್ಯಾಮೆರಾಗಳು, ಕೃತಕ ಬುದ್ಧಿಮತ್ತೆ (AI) ಆಧಾರಿತ ಕಣ್ಗಾವಲು ವ್ಯವಸ್ಥೆಗಳು, 51,000 ಕ್ಕೂ ಹೆಚ್ಚು ಸಿಗ್ನಲ್ ಜಾಮರ್‌ಗಳು, ಬಯೋಮೆಟ್ರಿಕ್ ಪರಿಶೀಲನಾ ತಂಡಗಳು ಹಾಗೂ ಕಟ್ಟು ನಿಟ್ಟಾದ ತಪಾಸಣಾ ಸಿಬ್ಬಂದಿಯನ್ನು ನಿಯೋಜಿಸಿದೆ. ಪದವಿ ಪೂರ್ವ ವೈದ್ಯಕೀಯ ಪ್ರವೇಶಾತಿಗೆ ಪ್ರಮುಖ ಹೆಬ್ಬಾಗಿಲಾಗಿರುವ ನೀಟ್ ಯುಜಿ ಪರೀಕ್ಷೆಯು ದೇಶದ ಲಕ್ಷಾಂತರ ಉದಯೋನ್ಮುಖ ವೈದ್ಯರ ಭವಿಷ್ಯವನ್ನು ನಿರ್ಧರಿಸುವ ಅತ್ಯಂತ ನಿರ್ಣಾಯಕ ಪರೀಕ್ಷೆಯಾಗಿದೆ(ಏಜೆನ್ಸೀಸ್).