Puri Rathyatra | ಪುರಿಯಲ್ಲಿ ಜಗನ್ನಾಥ ರಥಯಾತ್ರೆ ಸಂಭ್ರಮ! 
ದೇಶ

ಪುರಿಯಲ್ಲಿ ಜಗನ್ನಾಥ ರಥಯಾತ್ರೆ ಸಂಭ್ರಮ!... ಪ್ರಧಾನಿ ಮೋದಿ, ರಾಷ್ಟ್ರಪತಿ ಮುರ್ಮು ಶುಭಹಾರೈಕೆ | Puri Rathyatra

Puri Rathyatra: ಒಡಿಶಾದ ಪುರಿಯಲ್ಲಿ ಬಿಗಿ ಭದ್ರತೆಯ ನಡುವೆ ರಥಯಾತ್ರೆ ಆರಂಭಗೊಳ್ಳುತ್ತಿರುವಂತೆಯೇ, ಪ್ರಧಾನಿ ನರೇಂದ್ರ ಮೋದಿ ಗುರುವಾರ ಶುಭಾಶಯ ಕೋರಿದ್ದು, ರಥಯಾತ್ರೆಯನ್ನು ಭಾರತದ ನಿರಂತರ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಸಂಕೇತ ಎಂದು ಬಣ್ಣಿಸಿದ್ದಾರೆ.

ಪ್ರಧಾನಿ ಮೋದಿ ಪೋಸ್ಟ್​!..

ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಪ್ರಧಾನಿ ಮೋದಿ, ರಥಯಾತ್ರೆಯ ಪವಿತ್ರ ಸಂದರ್ಭದಲ್ಲಿ ಎಲ್ಲರಿಗೂ ಶುಭಾಶಯಗಳು. ಇದು ಭಾರತದ ಕಾಲಾತೀತ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಉಜ್ವಲ ಅಭಿವ್ಯಕ್ತಿಯಾಗಿದೆ. ರಥಯಾತ್ರೆಗೆ ಸಂಬಂಧಿಸಿದ ಸಂಪ್ರದಾಯಗಳು ಭಾರತ ಮತ್ತು ಪ್ರಪಂಚದಾದ್ಯಂತ ತಲೆಮಾರುಗಳಿಗೆ ಪ್ರೇರಣೆ ನೀಡಿವೆ. ಅವು ವಿನಮ್ರತೆ, ಸಾಮೂಹಿಕ ಭಾಗವಹಿಸುವಿಕೆ ಮತ್ತು ನಿಸ್ವಾರ್ಥ ಸೇವೆಯನ್ನು ಬಿಂಬಿಸುತ್ತವೆ.
ಮಹಾಪ್ರಭು ಜಗನ್ನಾಥನು ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ, ಸಂತೋಷ ಮತ್ತು ಸಮೃದ್ಧಿಯನ್ನು ಕರುಣಿಸಲಿ. ನಮ್ಮ ಎಲ್ಲಾ ಪ್ರಯತ್ನಗಳಿಗೆ ಅವರು ನಮಗೆ ಶಕ್ತಿಯನ್ನು ನೀಡಲಿ ಮತ್ತು ನಮ್ಮ ಸಮಾಜದಲ್ಲಿ ಒಗ್ಗಟ್ಟಿನ ಭಾವನೆಯನ್ನು ಗೊಳಿಸಲಿ. ಜೈ ಜಗನ್ನಾಥ್! ಎಂದು ಬರೆದುಕೊಂಡಿದ್ದಾರೆ.

ರಥಯಾತ್ರೆಗೆ ಶುಭಾಶಯ ಕೋರಿದ ರಾಷ್ಟ್ರಪತಿ ಮುರ್ಮು

ಜಗನ್ನಾಥ ರಥಯಾತ್ರೆಯ ಶುಭ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೂ ಸಹ ಭಾರತ ಮತ್ತು ವಿಶ್ವದಾದ್ಯಂತ ಇರುವ ಭಕ್ತರಿಗೆ ಶುಭಾಶಯ ಕೋರಿದ್ದು, ಭಕ್ತ ಮತ್ತು ದೈವದ ಸಮ್ಮಿಲನವನ್ನು ಸೂಚಿಸುವ ಈ ಭಾವಪೂರ್ಣ ಸಂದರ್ಭವು ನಿಜಕ್ಕೂ ಅನನ್ಯ ಎಂದು ಹೇಳಿದ್ದಾರೆ.
ಇಂದು ಪ್ರಾರಂಭವಾಗುವ ವಾರ್ಷಿಕ ಜಗನ್ನಾಥ ರಥಯಾತ್ರೆಗೂ ಮುನ್ನ ಎಕ್ಸ್​​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ರಾಷ್ಟ್ರಪತಿ ಮುರ್ಮು, ಹಬ್ಬದ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಒಗ್ಗೂಡಿಸುವ ಮಹತ್ವವನ್ನು ಎತ್ತಿಹಿಡಿದರು ಹಾಗೂ ದೇಶ ಮತ್ತು ಅದರ ಜನರ ಸಂತೋಷ ಮತ್ತು ಸಮೃದ್ಧಿ ಸದಾ ವೃದ್ಧಿಸಲಿ ಎಂದು ಪ್ರಾರ್ಥಿಸಿದರು.

ಪುರಿ ರಥಯಾತ್ರೆಯ ಸಂಪೂರ್ಣ ಮಾಹಿತಿ

ಇಂದು ಆರಂಭವಾಗಲಿರುವ ವಾರ್ಷಿಕ ರಥಯಾತ್ರೆಗೆ ಮುನ್ನ ಪುರಿ ಜಗನ್ನಾಥ ದೇವಾಲಯದ ಸಿಂಹದ್ವಾರದಲ್ಲಿ ಭಗವಾನ್ ಜಗನ್ನಾಥ, ಬಲಭದ್ರ ಮತ್ತು ಸುಭದ್ರಾ ದೇವಿಯ ಮೂರು ರಥಗಳಾದ ನಂದಿಘೋಷ, ದರ್ಪದಳನ ಮತ್ತು ತಾಳಧ್ವಜಗಳನ್ನು ತಂದು ನಿಲ್ಲಿಸಲಾಗಿದೆ. ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಒಂದಾದ ಜಗನ್ನಾಥ ರಥಯಾತ್ರೆಯು ಪ್ರತಿ ವರ್ಷ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ. ರಥಯಾತ್ರೆಯು ಸುಸೂತ್ರವಾಗಿ ಮತ್ತು ಶಾಂತಿಯುತವಾಗಿ ನಡೆಯಲು ವ್ಯಾಪಕ ಭದ್ರತೆ ಮತ್ತು ಸಾರಿಗೆ ವ್ಯವಸ್ಥೆಗಳನ್ನು ಮಾಡಲಾಗಿದೆ.

ಪುರಿಯಲ್ಲಿ ಭದ್ರತೆ ಹೆಚ್ಚಳ!...

ರಾಜ್ಯ ಪೊಲೀಸ್, ಕೇಂದ್ರ ಪಡೆಗಳು, ಭಾರತೀಯ ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್ ಸಿಬ್ಬಂದಿಯನ್ನು ನಿಯೋಜಿಸುವುದರೊಂದಿಗೆ ಪುರಿಯಲ್ಲಿ ಬಹುಪದರದ ಭದ್ರತಾ ಕವಚವನ್ನು ಅಳವಡಿಸಲಾಗಿದೆ. ಜನಸಂದಣಿ ನಿಯಂತ್ರಣ, ಸಂಚಾರ ನಿರ್ವಹಣೆ ಮತ್ತು ತುರ್ತು ಸ್ಪಂದನೆಗೆ ವಿಶೇಷ ಗಮನ ಹರಿಸಲಾಗಿದೆ. ಎಡಿಜಿ ಸಂಜಯ್ ಕುಮಾರ್ ಮಾತನಾಡಿ, 15 ಕಂಪನಿಗಳ ಕೇಂದ್ರ ಸಶಸ್ತ್ರ ಪಡೆಗಳು, ಎನ್‌ಎಸ್‌ಜಿ ಕಮಾಂಡೋಗಳು ಮತ್ತು ಸಮುದ್ರ ತೀರದಲ್ಲಿ 500 ಜೀವ ರಕ್ಷಕರನ್ನೊಳಗೊಂಡ 13,000 ಪೊಲೀಸ್ ಸಿಬ್ಬಂದಿಯನ್ನು ಈಗಾಗಲೇ ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಒಡಿಶಾ ಪೊಲೀಸ್ ಮಹಾನಿರ್ದೇಶಕ ವೈ.ಬಿ. ಖುರಾನಿಯಾ ಮಾತನಾಡಿ, ನಾವು ನೆಲದ ಮೇಲೆ ಜನಸಂದಣಿ ನಿಯಂತ್ರಣ, ಸಂಚಾರ ನಿರ್ವಹಣೆ ಮತ್ತು ತುರ್ತು ಸ್ಪಂದನೆಯತ್ತ ಗಮನ ಹರಿಸುತ್ತೇವೆ, ಆದರೆ ಡ್ರೋನ್ ಮತ್ತು ಆಂಟಿ-ಡ್ರೋನ್ ಸಾಧನಗಳು ವೈಮಾನಿಕ ಭದ್ರತೆಗೆ ನೆರವಾಗಲಿವೆ ಎಂದು ಅವರು ಹೇಳಿದರು. ಅಲ್ಲದೆ ಭಾರತೀಯ ನೌಕಾಪಡೆ, ಕೋಸ್ಟ್ ಗಾರ್ಡ್ ಮತ್ತು ಒಡಿಶಾ ಪೊಲೀಸ್ ಕರಾವಳಿ ಕೇಂದ್ರದ ಕ್ಷಿಪ್ರ ಪಡೆಯ ತಂಡಗಳು ಕರಾವಳಿ ತೀರದಲ್ಲಿ ಗಸ್ತು ತಿರುಗಲಿವೆ ಎಂದು ಅವರು ತಿಳಿಸಿದ್ದಾರೆ(ಏಜೆನ್ಸೀಸ್​).