PM Modi (ಚಿತ್ರ X) 
ದೇಶ

ಕಾಮನ್‌ವೆಲ್ತ್ ಪದಕ ವಿಜೇತರ ಜೊತೆ ಪ್ರಧಾನಿ ಸಂವಾದ: ದೇಶದ ಗೌರವ ಕಾಯ್ದ ಲವ್ಲಿನಾಗೆ ಮೋದಿ ಮೆಚ್ಚುಗೆ! PM Modi

ನವದೆಹಲಿ: ಗ್ಲಾಸ್ಗೋ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಅತ್ಯುತ್ತಮ ಸಾಧನೆಗೈದು ದೇಶಕ್ಕೆ ಕೀರ್ತಿ ತಂದ ಭಾರತೀಯ ಕ್ರೀಡಾಪಟುಗಳನ್ನು ಪ್ರಧಾನಿ ನರೇಂದ್ರ ಮೋದಿ (

PM Modi)

ಅವರು ತಮ್ಮ ನಿವಾಸದಲ್ಲಿ ಭೇಟಿಯಾಗಿ ಅಭಿನಂದಿಸಿದರು. ಈ ಸಂವಾದ ಕಾರ್ಯಕ್ರಮದಲ್ಲಿ ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ, ರಾಜ್ಯ ದರ್ಜೆ ಕ್ರೀಡಾ ಸಚಿವೆ ರಕ್ಷಾ ಖಡ್ಸೆ ಹಾಗೂ ಭಾರತೀಯ ಒಲಿಂಪಿಕ್ ಸಂಘದ (IOA) ಅಧ್ಯಕ್ಷೆ ಪಿ.ಟಿ. ಉಷಾ ಉಪಸ್ಥಿತರಿದ್ದರು.

ಸುಮಾರು 10 ನಿಮಿಷಗಳಿಗಿಂತ ಹೆಚ್ಚು ಕಾಲ ನಡೆದ ಈ ಸಂವಾದದಲ್ಲಿ ಕ್ರೀಡಾಪಟುಗಳು ತಮ್ಮ ಕ್ರೀಡಾ ಪ್ರಯಾಣ, ಪಂದ್ಯಾವಳಿಯ ಸವಾಲುಗಳು ಹಾಗ ಕೆಲವು ತಮಾಷೆಯ ಕ್ಷಣಗಳನ್ನು ಮೋದಿಯವರೊಂದಿಗೆ ಹಂಚಿಕೊಂಡರು.

ರಾಷ್ಟ್ರಧ್ವಜದ ಗೌರವ ಎತ್ತಿಹಿಡಿದ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್

75 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಬಾಕ್ಸರ್ ಲವ್ಲಿನಾ ಅವರನ್ನು ಪ್ರಧಾನಿ ಮೋದಿ, "ಏನು... ಆ ರೆಸ್ಟೋರೆಂಟ್ ಸಿಬ್ಬಂದಿಯ ಜೊತೆ ಜಗಳವಾಡುತ್ತಿದ್ದಿರಾ?" ಎಂದು ತಮಾಷೆಯಾಗಿ ವಿಚಾರಿಸಿದರು.
ಇದಕ್ಕೆ ಸ್ಪಷ್ಟನೆ ನೀಡಿದ ಲವ್ಲಿನಾ, "ಪಂದ್ಯಾವಳಿಯ ಕೊನೆಯ ದಿನ ಪದಕ ಗೆದ್ದ ಖುಷಿಯಲ್ಲಿ ಕ್ರೀಡಾಪಟುಗಳೆಲ್ಲ ಸಂಭ್ರಮಿಸುತ್ತಿದ್ದೆವು. ಆದರೆ ಅಲ್ಲಿ ವಿನ್ಯಾಸ ಬದಲಾಗಿದ್ದ ಭಾರತೀಯ ಧ್ವಜವನ್ನು ಕಂಡು ನನಗೆ ಕೋಪ ಬಂತು. ಆಗ ನಾನು ರೆಸ್ಟೋರೆಂಟ್ ಸಿಬ್ಬಂದಿಯನ್ನು ಸೌಜನ್ಯದಿಂದಲೇ ತಿಳಿಸಿ ಅದನ್ನು ಸರಿಪಡಿಸಲು ಸಲಹೆ ನೀಡಿದೆ ಎಂದರು.

ಸಂಭ್ರಮದ ವೇಳೆಯಲ್ಲೂ ದೇಶದ ಧ್ವಜಕ್ಕೆ ತೋರಿದ ಜಾಗರೂಕತೆ ಮತ್ತು ದೇಶಪ್ರೇಮವನ್ನು ಪ್ರಧಾನಿಯವರು ಮುಕ್ತಕಂಠದಿಂದ ಶ್ಲಾಘಿಸಿದ್ದು, ನಿಮ್ಮ ಈ ನಡೆಯ ವಿಡಿಯೋ ಸಾಮಾನ್ಯವಾದುದ್ದಲ್ಲ, ಇದು ಸಾರ್ವಜನಿಕರ ಮನಸ್ಸಿನಲ್ಲಿ ದೀರ್ಘಕಾಲ ಉಳಿಯುತ್ತದೆ ಎಂದು ಪ್ರಶಂಸಿದರು.

ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಕಣ್ಣೀರಿನ ಹಿಂದಿನ ನೋವು

48 ಕೆಜಿ ವಿಭಾಗದಲ್ಲಿ 190 ಕೆಜಿ ಭಾರ ಎತ್ತುವ ಮೂಲಕ ದಾಖಲೆಯೊಂದಿಗೆ ಚಿನ್ನ ಗೆದ್ದ ಮೀರಾಬಾಯಿ , ವೇದಿಕೆಯ ಮೇಲೆ ಸುರಿಸಿದ ಕಣ್ಣೀರಿನ ಬಗ್ಗೆ ಪ್ರಧಾನಿ ಮೋದಿ ಪ್ರಸ್ತಾಪಿಸಿ ಅವರಿಗೆ ಸಿಹಿ ತಿನ್ನಿಸಿದರು.
ತಮ್ಮ ನೋವನ್ನು ಹಂಚಿಕೊಂಡ ಮೀರಾಬಾಯಿ, "ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕೇವಲ 1 ಕೆಜಿಯಿಂದ ಪದಕ ಕೈತಪ್ಪಿತ್ತು. ಕಳೆದ ನಾಲ್ಕು ವರ್ಷಗಳಲ್ಲಿ ಗಾಯದ ಸಮಸ್ಯೆ ಮತ್ತು ಕುಟುಂಬದ ಸಂಕಷ್ಟಗಳನ್ನು ಎದುರಿಸಿದ್ದೆ. ಈ ಎಲ್ಲಾ ಸವಾಲುಗಳ ನಡುವೆ ರಾಷ್ಟ್ರಧ್ವಜ ಮೇಲೆರುತ್ತಿದ್ದಾಗ ಹಾಗೂ ರಾಷ್ಟ್ರಗೀತೆ ಮೊಳಗಿದಾಗ ಕಣ್ಣೀರು ತಡೆಯಲು ಸಾಧ್ಯವಾಗಲಿಲ್ಲ ಎಂದು ಭಾವುಕರಾದರು.

ಪಾಕಿಸ್ತಾನಿ ಬಾಕ್ಸರ್‌ನ ತಮಾಷೆಯ ಪ್ರಸಂಗ ಹಂಚಿಕೊಂಡ ನರೇಂದರ್

90 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಬಾಕ್ಸರ್ ನರೇಂದರ್ ಬರ್ವಾಲ್, 2015 ರ ಮಿಲಿಟರಿ ವರ್ಲ್ಡ್ ಗೇಮ್ಸ್‌ನಲ್ಲಿ ನಡೆದ ಸ್ವಾರಸ್ಯಕರ ಘಟನೆಯೊಂದನ್ನು ನೆನಪಿಸಿಕೊಂಡರು.
ಆ ಕೂಟದಲ್ಲಿ ನಾನು ಪಾಕಿಸ್ತಾನಿ ಬಾಕ್ಸರ್‌ನನ್ನು ಸೋಲಿಸಿದ್ದೆ. ಪಂದ್ಯದ ಬಳಿಕ ವೈದ್ಯಕೀಯ ಕೊಠಡಿಯಲ್ಲಿ ಚಿಕಿತ್ಸೆ ಪಡೆಯುವಾಗ ಅವರು ನನ್ನ ಬಳಿ ಬಂದು ಸಹೋದರ, ನಿಮ್ಮ ಹೆಸರು ನರೇಂದರ್, ನಿಮ್ಮ ಕೋಚ್ ಹೆಸರು ನರೇಂದರ್, ನಿಮ್ಮ ದೇಶದ ಪ್ರಧಾನಿ ಹೆಸರೂ ನರೇಂದರ್... ನನಗೆ ಈ ನರೇಂದರ್ ಎಂಬ ಹೆಸರು ಕೇಳಿದರೆ ಸಾಕು ಕೋಪ ಬರುತ್ತದೆ ಎಂದು ತಮಾಷೆಯಾಗಿ ಹೇಳಿದ್ದರು ಎಂದು ತಿಳಿಸಿದಾಗ ಪ್ರಧಾನಿ ಅವರು ನಗಾಡಿದರು.

ಪ್ರಧಾನಿ ಮೋದಿಯವರ ಪ್ರಶಂಸೆ

ಭಾರತವು ಈ ಕಾಮನ್‌ವೆಲ್ತ್ ಕೂಟದಲ್ಲಿ ಒಟ್ಟು 39 ಪದಕಗಳನ್ನು ಗೆದ್ದು ನಾಲ್ಕನೇ ಸ್ಥಾನ ಪಡೆದಿದೆ. ಇದರಲ್ಲಿ 13 ಚಿನ್ನದ ಪದಕಗಳಿದ್ದು, ಪೈಕಿ 7 ಚಿನ್ನದ ಪದಕಗಳು ಬಾಕ್ಸಿಂಗ್ ವಿಭಾಗದಿಂದಲೇ ಬಂದಿವೆ.
ಕ್ರೀಡಾಪಟುಗಳ ಶ್ರಮವನ್ನು ಕೊಂಡಾಡಿದ ಪ್ರಧಾನಿ ಮೋದಿ, "ಕಳೆದ12-13 ವರ್ಷಗಳಿಂದ ನನ್ನ ನಿವಾಸಕ್ಕೆ ನಿಯಮಿತವಾಗಿ ಬರುತ್ತಿರುವ ಏಕೈಕ ಗುಂಪೆಂದರೆ ಅದು ಕ್ರೀಡಾಪಟುಗಳು. ನಾವು ಶಾಲಾ ಮಟ್ಟದಲ್ಲಿ ಕ್ರೀಡೆಗೆ ನೀಡುವ ಉತ್ತೇಜನಕ್ಕಿಂತಲೂ ಹೆಚ್ಚಾಗಿ, ನೀವು ಗೆದ್ದು ತರುವ ಪದಕಗಳು ಕೋಟ್ಯಂತರ ಯುವಕರಿಗೆ ಕ್ರೀಡೆಯಲ್ಲಿ ಸಾಧನೆ ಮಾಡಲು ನಿಜವಾದ ಪ್ರೇರಣೆಯಾಗುತ್ತವೆ" ಎಂದು ಹುರಿದುಂಬಿಸಿದರು (ಏಜೆನ್ಸೀಸ್​).