Shaktikanta Das | ಇತಿಹಾಸದ ವಿದ್ಯಾರ್ಥಿಗೆ ತಿಜೋರಿ ಜವಾಬ್ದಾರಿ..? ಇಲ್ಲಿದೆ ಶಕ್ತಿಕಾಂತ ದಾಸ್ ಸಂಪೂರ್ಣ ಹಿನ್ನಲೆ!
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದ ಬಹುನಿರೀಕ್ಷಿತ ಪುನಾರಚನೆ ಮತ್ತು ವಿಸ್ತರಣೆಯ ಸುಳಿವು ದೆಹಲಿಯ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಜೂನ್ 28 ಅಥವಾ 29 ರಂದು ಈ ಕುರಿತ ಅಧಿಕೃತ ಘೋಷಣೆಯಾಗುವ ಸಾಧ್ಯತೆಯಿದ್ದು, ಪ್ರಮುಖ ಖಾತೆಗಳಲ್ಲಿ ಭಾರಿ ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ. ‘
ಹಲವು ಸಚಿವರನ್ನು ಸಂಪುಟದಿಂದ ಕೈಬಿಡುವುದು ಮತ್ತು ಇನ್ನು ಹಲವರ ಖಾತೆಗಳನ್ನು ಬದಲಾಯಿಸುವ ಚರ್ಚೆಗಳು ತೀವ್ರವಾಗಿ ನಡೆಯುತ್ತಿವೆ. ಈ ಎಲ್ಲಾ ಬೆಳವಣಿಗೆಗಳ ನಡುವೆ, ಸದ್ಯ ಅತ್ಯಂತ ಹೆಚ್ಚು ಚರ್ಚೆಯಾಗುತ್ತಿರುವ ಹೆಸರು ಆರ್‌ಬಿಐ ಮಾಜಿ ಗವರ್ನರ್ ಶಕ್ತಿಕಾಂತ ದಾಸ್ ಅವರದ್ದು!. ಇವರನ್ನು ದೇಶದ ಮುಂದಿನ ಹಣಕಾಸು ಸಚಿವರನ್ನಾಗಿ ನೇಮಿಸುವ ಸಾಧ್ಯತೆಗಳ ಬಗ್ಗೆ ದೊಡ್ಡ ಮಟ್ಟದ ವದಂತಿಗಳು ಹರಿದಾಡುತ್ತಿವೆ.
ಪ್ರಸ್ತುತ ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ 69 ವರ್ಷದ ಶಕ್ತಿಕಾಂತ ದಾಸ್ ಅವರ ವೃತ್ತಿಪರ ಹಿನ್ನೆಲೆ ಮತ್ತು ಸುದೀರ್ಘ ಅನುಭವವೇ ಅವರು ಈ ಮಹತ್ವದ ಹುದ್ದೆಯ ರೇಸ್‌ನಲ್ಲಿ ಮುಂಚೂಣಿಗೆ ಬರಲು ಪ್ರಮುಖ ಕಾರಣವಾಗಿದೆ.
ಸಿ ಡಿ ದೇಶ್‌ಮುಖ್, ಮನಮೋಹನ್ ಸಿಂಗ್ ಸಾಲಿಗೆ ಸೇರ್ಪಡೆ..?
ಸ್ವಾತಂತ್ರ್ಯದ ನಂತರದ ಭಾರತದ ಇತಿಹಾಸದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ಗವರ್ನರ್ ಆಗಿ ಸೇವೆ ಸಲ್ಲಿಸಿ, ತದನಂತರ ದೇಶದ ಹಣಕಾಸು ಸಚಿವರಾದ ಸಾಧನೆ ಮಾಡಿರುವುದು ಕೇವಲ ಇಬ್ಬರು ಮಾತ್ರ. ಶಕ್ತಿಕಾಂತ ದಾಸ್ ಅವರು ಹಣಕಾಸು ಸಚಿವರಾಗಿ ನೇಮಕಗೊಂಡರೆ, ಆ ಅಪರೂಪದ ಸಾಧಕರ ಸಾಲಿಗೆ ಮೂರನೆಯವರಾಗಿ ಸೇರ್ಪಡೆಯಾಗಲಿದ್ದಾರೆ.
ಆ ಇಬ್ಬರು ನಾಯಕರಲ್ಲಿ ಮೊದಲಿಗರು ಸಿ ಡಿ ದೇಶ್‌ಮುಖ್ ಅವರು. ಆರ್‌ಬಿಐನ ಮೊದಲ ಭಾರತೀಯ ಗವರ್ನರ್ ಆಗಿ 1943 ರಿಂದ 1949 ರವರೆಗೆ ಸೇವೆ ಸಲ್ಲಿಸಿದ್ದರು ಇವರು, ತದನಂತರ 1950 ರಿಂದ 1956 ರವರೆಗೆ ಭಾರತದ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿದರು.
ಎರಡನೇಯವರು ಡಾ. ಮನಮೋಹನ್ ಸಿಂಗ್ :ಇವರು 1982 ರಿಂದ 1985 ರವರೆಗೆ ಆರ್‌ಬಿಐ ಗವರ್ನರ್ ಆಗಿದ್ದರು. ನಂತರ 1991 ರಿಂದ 1996 ರವರೆಗೆ ದೇಶದ ಹಣಕಾಸು ಸಚಿವರಾಗಿ ಹಾಗೂ ತದನಂತರ 2004 ರಿಂದ 2014 ರವರೆಗೆ ದೇಶದ ಪ್ರಧಾನಮಂತ್ರಿಯಾಗಿಯೂ ಸೇವೆ ಸಲ್ಲಿಸಿದರು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ದಿನದಿಂದ ಇಂದಿನವರೆಗೆ ಆರ್‌ಬಿಐ ಗವರ್ನರ್, ಹಣಕಾಸು ಸಚಿವ ಮತ್ತು ಪ್ರಧಾನಮಂತ್ರಿ ಎಂಬ ಮೂರೂ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿದ ಏಕೈಕ ವ್ಯಕ್ತಿ ಎಂದರೆ ಅದು ಡಾ. ಮನಮೋಹನ್ ಸಿಂಗ್ ಮಾತ್ರ.
ಬಜೆಟ್ ತಜ್ಞ ಹಾಗೂ ಜಾಗತಿಕ ಮನ್ನಣೆ ಪಡೆದ ನಾಯಕ
ಶಕ್ತಿಕಾಂತ ದಾಸ್ ಅವರು ಈಗಾಗಲೇ ಆರ್‌ಬಿಐನ 25ನೇ ಗವರ್ನರ್ ಆಗಿ ಯಶಸ್ವಿ ಸೇವೆ ಸಲ್ಲಿಸಿದ್ದು, ಹಣಕಾಸು ಸಚಿವ ಹುದ್ದೆಗೆ ಇವರು ಅರ್ಹರು ಎಂಬ ಮಾತುಗಳು ಪ್ರಬಲವಾಗಿವೆ ಕೇಳಿ ಬರುತ್ತಿವೆ. ದಾಸ್ ಅವರು ಈ ಹಿಂದೆ ಹಣಕಾಸು ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ಒಟ್ಟು 8 ಕೇಂದ್ರ ಬಜೆಟ್‌ಗಳ ತಯಾರಿ ಪ್ರಕ್ರಿಯೆಯಲ್ಲಿ ನೇರವಾಗಿ ಭಾಗಿಯಾಗಿದ್ದರು. ಆರ್ಥಿಕ ನೀತಿ, ತೆರಿಗೆ ವ್ಯವಸ್ಥೆ ಮತ್ತು ಹೂಡಿಕೆ ವಿಷಯಗಳಲ್ಲಿ ಅವರು ಅಪಾರವಾದ ಪರಿಣತಿಯನ್ನು ಹೊಂದಿದ್ದಾರೆ ಎನ್ನಲಾಗಿದೆ.
ಆರ್‌ಬಿಐ ಗವರ್ನರ್ ಆಗಿ ಅವರು ನೀಡಿದ ಅತ್ಯುತ್ತಮ ಸೇವೆಗಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಜಾಗತಿಕ ಮನ್ನಣೆ ಸಿಕ್ಕಿದ್ದು, ಅತ್ಯುನ್ನತ A+ ರೇಟಿಂಗ್ ಹಾಗೂ ಹಲವು ಪ್ರತಿಷ್ಠಿತ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಅವರಿಗೆ ಒಲಿದಿವೆ.
ಇತಿಹಾಸದ ವಿದ್ಯಾರ್ಥಿಯ ಆಡಳಿತಾತ್ಮಕ ಪಯಣ
ಶಕ್ತಿಕಾಂತ ದಾಸ್ ಅವರು 1957 ರ ಫೆಬ್ರವರಿ 26 ರಂದು ಒಡಿಶಾದ ಭುವನೇಶ್ವರದಲ್ಲಿ ಜನಿಸಿದರು. ಭುವನೇಶ್ವರದ ಡೆಮನ್‌ಸ್ಟ್ರೇಷನ್ ಮಲ್ಟಿಪರ್ಪಸ್ ಶಾಲೆಯಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಮುಗಿಸಿದರು. ನಂತರ ಉನ್ನತ ವ್ಯಾಸಂಗಕ್ಕಾಗಿ ದೆಹಲಿಗೆ ತೆರಳಿದ ಅವರು, ಪ್ರತಿಷ್ಠಿತ ದೆಹಲಿ ವಿಶ್ವವಿದ್ಯಾಲಯದ ಸೇಂಟ್ ಸ್ಟೀಫನ್ಸ್ ಕಾಲೇಜಿನಿಂದ ಇತಿಹಾಸ ವಿಷಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆದರು. ಇದರ ಜೊತೆಗೆ ಬರ್ಮಿಂಗ್‌ಹ್ಯಾಮ್ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ಆಡಳಿತದಲ್ಲಿ ಪೋಸ್ಟ್‌ಗ್ರಾಜುಯೇಟ್ ಪದವಿ ಪಡೆದಿದ್ದಾರೆ.
ಶಕ್ತಿಕಾಂತ ದಾಸ್ ಅವರು 1980 ರ ಬ್ಯಾಚ್‌ನ ತಮಿಳುನಾಡು ಕೆಡರ್‌ನ ಭಾರತೀಯ ಆಡಳಿತ ಸೇವೆ (IAS) ಅಧಿಕಾರಿಯಾಗಿದ್ದು, ಸಾರ್ವಜನಿಕ ಆಡಳಿತದಲ್ಲಿ ಅತ್ಯಂತ ಯಶಸ್ವಿ ವೃತ್ತಿಜೀವನವನ್ನು ಹೊಂದಿದ್ದಾರೆ. ತಮಿಳುನಾಡಿನಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಅವರು ದಿಂಡಿಗಲ್ ಮತ್ತು ಕಾಂಚೀಪುರಂ ಜಿಲ್ಲೆಗಳ ಜಿಲ್ಲಾಧಿಕಾರಿಯಾಗಿಯೂ ಕೆಲಸ ಮಾಡಿದ್ದರು.
ಆರ್ಥಿಕ ಇಲಾಖೆಯಲ್ಲಿ ಸುದೀರ್ಘ ಸೇವೆ
ಮೂಲತಃ ಇತಿಹಾಸದ ವಿದ್ಯಾರ್ಥಿಯಾಗಿದ್ದರೂ ಸಹ, ಶಕ್ತಿಕಾಂತ ದಾಸ್ ತಮ್ಮ 37 ವರ್ಷಗಳಿಗೂ ಹೆಚ್ಚಿನ ಸುದೀರ್ಘ ಆಡಳಿತಾತ್ಮಕ ವೃತ್ತಿಜೀವನದ ಬಹುಪಾಲು ಸಮಯವನ್ನು ಕಳೆದದ್ದು ಭಾರತ ಸರ್ಕಾರದ ಆರ್ಥಿಕ ಮತ್ತು ಹಣಕಾಸು ಇಲಾಖೆಗಳಲ್ಲೇ. ಅವರು ಭಾರತ ಸರ್ಕಾರದ ಕಂದಾಯ ಕಾರ್ಯದರ್ಶಿ ಮತ್ತು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಯಂತಹ ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದಾರೆ.
ಡಿಸೆಂಬರ್ 2018 ರಿಂದ ಡಿಸೆಂಬರ್ 2024 ರವರೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಆರ್‌ಬಿಐನಿಂದ ನಿವೃತ್ತರಾದ ಬೆನ್ನಲ್ಲೇ, ಫೆಬ್ರವರಿ 2025 ರಲ್ಲಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಯಿತು.
ಸಂಸತ್ತಿನ ಸದಸ್ಯರಲ್ಲದ ದಾಸ್ ಸಚಿವರಾಗುವುದು ಹೇಗೆ...?
ಶಕ್ತಿಕಾಂತ ದಾಸ್ ಅವರು ಸದ್ಯ ಸಂಸತ್ತಿನ ಲೋಕಸಭೆ ಅಥವಾ ರಾಜ್ಯಸಭೆ ಎರಡರಲ್ಲೂ ಸದಸ್ಯರಾಗಿಲ್ಲ. ಒಂದು ವೇಳೆ ಅವರು ಮುಂದಿನ ಹಣಕಾಸು ಸಚಿವರಾಗಿ ನೇಮಕಗೊಂಡರೆ, ನಿಯಮಗಳ ಪ್ರಕಾರ ಪ್ರಮಾಣ ವಚನ ಸ್ವೀಕರಿಸಿದ 6 ತಿಂಗಳೊಳಗಾಗಿ ಸಂಸತ್ತಿನ ಯಾವುದಾದರೂ ಒಂದು ಸದನದ ಸದಸ್ಯರಾಗಬೇಕಾಗುತ್ತದೆ. ಇದಕ್ಕಾಗಿ ಬಿಜೆಪಿ ಅವರನ್ನು ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಕಳುಹಿಸುವ ಆಲೋಚನೆಯಲ್ಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇದಕ್ಕೆ ಪೂರಕವೆಂಬಂತೆ, ಮುಂಬರುವ ನವೆಂಬರ್ ತಿಂಗಳಿನಲ್ಲಿ ಉತ್ತರ ಪ್ರದೇಶದ 10 ರಾಜ್ಯಸಭಾ ಸ್ಥಾನಗಳು ತೆರವಾಗುತ್ತಿದ್ದು, ಆ ಸಮಯದಲ್ಲಿ ದಾಸ್ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಕಳುಹಿಸಲು ಬಿಜೆಪಿ ಕಾರ್ಯತಂತ್ರ ರೂಪಿಸುತ್ತಿದೆ ಎಂದು ಹೇಳಲಾಗುತ್ತಿದೆ. ಒಟ್ಟಾರೆಯಾಗಿ ಹೇಳುವುದಾದರೆ, ಈ ವಾರದಲ್ಲಿ ನಡೆಯಲಿದೆ ಎನ್ನಲಾಗುತ್ತಿರುವ ಈ ಸಂಪುಟ ಪುನಾರಚನೆಯು ಕೇವಲ ರಾಜಕೀಯ ಬದಲಾವಣೆಯಷ್ಟೇ ಅಲ್ಲದೆ, ಪರಿಣಿತ ಆಡಳಿತಗಾರರೊಬ್ಬರ ಕೈಗೆ ದೇಶದ ಆರ್ಥಿಕ ಚುಕ್ಕಾಣಿ ನೀಡುವ ಮೂಲಕ ಭಾರತದ ಆರ್ಥಿಕ ಇತಿಹಾಸದಲ್ಲಿ ಒಂದು ಮಹತ್ವದ ಮೈಲಿಗಲ್ಲಾಗುವ ಮುನ್ಸೂಚನೆ ನೀಡಿದೆ(ಏಜೆನ್ಸೀಸ್).