ಶೌರ್ಯ ಯಾತ್ರೆಯಲ್ಲಿ ಪ್ರಧಾನಿ ಮೋದಿ  
ದೇಶ

ಸೋಮನಾಥ ದೇವಾಲಯದ ಶೌರ್ಯಯಾತ್ರೆಯಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ: ಬಳಿಕ ದೇವಾಸ್ಥಾನದಲ್ಲಿ ಪ್ರಾರ್ಥನೆ | PM Modi

ಅಹ್ಮದಾಬಾದ್: ಗುಜರಾತ್​ನ ಐತಿಹಾಸಿಕ ಸೋಮನಾಥ ದೇವಾಲಯದಲ್ಲಿ ನಾಲ್ಕು ದಿನಗಳ ಕಾಲ ನಡೆಯುತ್ತಿರುವ ಸೋಮನಾಥ ಸ್ವಾಭಿಮಾನ್ ಪರ್ವ್ ಆಚರಣೆಯಲ್ಲಿ ಇಂದು(ಜ. 11) ನಡೆದ ಶೌರ್ಯಯಾತ್ರೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದು, ಬಳಿಕ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.
1026ರಲ್ಲಿ  ಮಹಮ್ಮದ್ ಘಜ್ನಿ ಸೋಮನಾಥ ದೇವಾಲಯದ ಮೇಲೆ ಆಕ್ರಮಣ ಮಾಡಿ 1,000 ವರ್ಷಗಳಾದ ನೆನಪಿಗಾಗಿ ಸೋಮನಾಥ ಸ್ವಾಭಿಮಾನ್ ಪರ್ವ್ ಆಚರಿಸಲಾಗುತ್ತಿದ್ದು, ಅದರ ಭಾಗವಾಗಿ ದೇವಸ್ಥಾನದಲ್ಲಿ ಪೂಜೆ, ಯಾತ್ರೆಗಳನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಬಳಿಕ ವೀರ್ ಹಮೀರ್ಜಿ ಗೋಹಿಲ್ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಗಳಿಗೆ ಪುಷ್ಪ ನಮನ ಸಲ್ಲಿಸಿದ್ದಾರೆ. ಕ್ರಿ.ಶ. 1299ರಲ್ಲಿ ಜಾಫರ್ ಖಾನ್ ನೇತೃತ್ವದಲ್ಲಿ ನಡೆದ ಆಕ್ರಮಣದ ಸಮಯದಲ್ಲಿ ಸೋಮನಾಥ ದೇವಾಲಯವನ್ನು ರಕ್ಷಿಸುವಾಗ ವೀರ್ ಹಮೀರ್ಜಿ ಗೋಹಿಲ್ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದರು. 
 'ಶೌರ್ಯ ಯಾತ್ರೆ' ಸೋಮನಾಥ ಸ್ವಾಭಿಮಾನ್ ಪರ್ವದ ಭಾಗವಾಗಿ ಆಯೋಜಿಸಲಾದ ಸಾಂಕೇತಿಕ ಮೆರವಣಿಗೆಯಾಗಿದೆ. ಇದು ಶತಮಾನಗಳ ಪ್ರತಿಕೂಲ ಪರಿಸ್ಥಿತಿಯಲ್ಲಿ ಸೋಮನಾಥನನ್ನು ಸಂರಕ್ಷಿಸಿದ ಧೈರ್ಯ, ತ್ಯಾಗ ಮತ್ತು ಅದಮ್ಯ ಚೈತನ್ಯವನ್ನು ಪ್ರತಿನಿಧಿಸುತ್ತದೆ. 
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಸೋಮನಾಥ ಶಾಶ್ವತ ದೈವತ್ವದ ದಾರಿದೀಪವಾಗಿ ನಿಂತಿದೆ. ಅದರ ಪವಿತ್ರ ಉಪಸ್ಥಿತಿಯು ಪೀಳಿಗೆಯಿಂದ ಪೀಳಿಗೆಗೆ ಜನರಿಗೆ ಮಾರ್ಗದರ್ಶನ ನೀಡುತ್ತಲೇ ಇದೆ ಎಂದು ಬರೆದಿದ್ದಾರೆ.
ಸೋಮನಾಥ್ ದೇವಾಲಯದ ಪುನರಾವರ್ತಿತ ನಾಶ ಮತ್ತು ಪುನರುಜ್ಜೀವನವು ವಿಶ್ವ ಇತಿಹಾಸದಲ್ಲಿ ವಿಶಿಷ್ಟವೆಂದು ಪರಿಗಣಿಸಲ್ಪಟ್ಟಿದೆ, ಇದು ಅದರ ನಿರಂತರ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಪ್ರತಿಬಿಂಬಿಸುತ್ತದೆ. 1947ರ ನವೆಂಬರ್ 12ರ ದೀಪಾವಳಿಯ ದಿನದಂದು, ಕರ್ತಕ್ ಸೂದ್ 1ರಂದು, ಸರ್ದಾರ್ ವಲ್ಲಭಭಾಯಿ ಪಟೇಲ್ ಸೋಮನಾಥದ ಅವಶೇಷಗಳಿಗೆ ಭೇಟಿ ನೀಡಿ, ದೇವಾಲಯವನ್ನು ಪುನರ್ನಿರ್ಮಿಸುವ ಸಂಕಲ್ಪವನ್ನು ವ್ಯಕ್ತಪಡಿಸಿದ್ದರು. 
ಮುಂದೆ ಭಾರತದ ಸಾಂಸ್ಕೃತಿಕ ವಿಶ್ವಾಸವನ್ನು ಪುನಃಸ್ಥಾಪಿಸಲು ದೇವಸ್ಥಾನದ ಮರುನಿರ್ಮಾಣ ಅತ್ಯಗತ್ಯ ಎಂದು ಸಾರ್ವಜನಿಕರ ಬೆಂಬಲದಿಂದ ಪುನರ್​ನಿರ್ಮಾಣ ಮಾಡಿ, ಅಂದಿನ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರಿಂದ ಉದ್ಘಾಟನೆ ಮಾಡಿಸಿದ್ದರು (ಏಜೆನ್ಸೀಸ್).