ಶರದ್ ಪವಾರ್ ಕೈತಪ್ಪಿದ ರಾಷ್ಟ್ರಪತಿ ಹುದ್ದೆ! 
ದೇಶ

ಶರದ್ ಪವಾರ್ ಕೈತಪ್ಪಿದ ರಾಷ್ಟ್ರಪತಿ ಹುದ್ದೆ! 2019ರಲ್ಲಿ ಆ ಒಂದು ನಿರ್ಧಾರ ತೆಗೆದುಕೊಂಡಿದ್ದರೆ ಲೆಕ್ಕಾಚಾರವೇ ಬದಲಾಗುತ್ತಿತ್ತು ಎಂದ ಕೇಂದ್ರ ಸಚಿವ | Ramdas Athawale

ನವದೆಹಲಿ: ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಅವರು 2019ರಲ್ಲೇ ಬಿಜೆಪಿ ನೇತೃತ್ವದ ಎನ್​ಡಿಎ ಸೇರ್ಪಡೆಯಾಗಿದ್ದರೆ, 2022ರ ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪವಾರ್ ಅವರ ಹೆಸರನ್ನು ಪರಿಗಣಿಸುವ ಸಾಧ್ಯತೆಯಿತ್ತು ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ರಾಮದಾಸ್ ಅಠಾವಳೆ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಬುಧವಾರ ಸುದ್ದಿಸಂಸ್ಥೆ ಐಎಎನ್‌ಎಸ್ ಜೊತೆ ಮಾತನಾಡಿದ ಅವರು, ಶರದ್ ಪವಾರ್ ಅವರನ್ನು ಎನ್‌ಡಿಎ ತೆಕ್ಕೆಗೆ ತರಲು ತಾವು ಹಲವು ಬಾರಿ ಪ್ರಯತ್ನಿಸಿದ್ದಾಗಿ ತಿಳಿಸಿದ್ದಾರೆ.

2019ರ ರಾಜಕೀಯ ಬೆಳವಣಿಗೆಗಳನ್ನು ಮೆಲುಕು ಹಾಕಿದ ಅಠಾವಳೆ, ಶರದ್ ಪವಾರ್ ಅವರು ಎನ್‌ಡಿಎ ಸೇರಬೇಕು ಎಂದು ಸಲಹೆ ನೀಡಿದವರಲ್ಲಿ ನಾನೇ ಮೊದಲಿಗ. ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಆಧಾರದ ಮೇಲೆ ನಾವು ಒಟ್ಟಾಗಿ ಕೆಲಸ ಮಾಡೋಣ ಎಂದು ಅವರಿಗೆ ಪದೇ ಪದೇ ಮನವಿ ಮಾಡಿದ್ದೆ. 2014ರಿಂದ 2019ರವರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿಗೆ ವೇಗ ನೀಡಿದ್ದರು ಮತ್ತು ಹಲವು ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿತ್ತು ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶರದ್ ಪವಾರ್ ಅವರ ಬಗ್ಗೆ ಅಪಾರ ಗೌರವವಿದೆ ಎಂದ ಅಠಾವಳೆ, 2047ರ ವೇಳೆಗೆ ಭಾರತವನ್ನು ವಿಶ್ವದ ನಂಬರ್ ಒನ್ ಆರ್ಥಿಕತೆಯನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ. ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಶರದ್ ಪವಾರ್ ಅವರನ್ನು ತಮ್ಮ ಆದರ್ಶ ಎಂದು ಹೇಳಿಕೊಳ್ಳುತ್ತಿದ್ದರು. ಆದ್ದರಿಂದ ಪವಾರ್ ಎನ್‌ಡಿಎ ಸೇರಬೇಕಿತ್ತು. ಒಂದು ವೇಳೆ ಅವರು 2019ರಲ್ಲಿ ನಮ್ಮೊಂದಿಗೆ ಕೈಜೋಡಿಸಿದ್ದರೆ, 2022ರ ರಾಷ್ಟ್ರಪತಿ ಚುನಾವಣೆಗೆ ಪ್ರಧಾನಿ ಮೋದಿ ಅವರು ಪವಾರ್ ಅವರ ಹೆಸರನ್ನು ಖಂಡಿತಾ ಪರಿಗಣಿಸುತ್ತಿದ್ದರು ಎಂದು ಅಭಿಪ್ರಾಯಪಟ್ಟಿದ್ದಾರೆ.

ಎಸ್‌ಪಿ-ಕಾಂಗ್ರೆಸ್ ಮೈತ್ರಿಯಲ್ಲಿ ಬಿರುಕು?

ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ನಡುವೆ ನಡೆಯುತ್ತಿರುವ ಸೀಟು ಹಂಚಿಕೆ ಮಾತುಕತೆಗಳ ಕುರಿತು ಅಠಾವಳೆ ವ್ಯಂಗ್ಯವಾಡಿದ್ದು, ಇಂಡಿಯಾ ಮೈತ್ರಿಕೂಟದ ಈ ಎರಡು ಪಕ್ಷಗಳ ನಡುವೆ ಒಮ್ಮತ ಮೂಡುವುದು ಕಷ್ಟಕರ ಎಂದಿದ್ದಾರೆ.

ಉಭಯ ಪಕ್ಷಗಳ ನಡುವೆ ಯಾವ ರೀತಿಯ ಒಪ್ಪಂದವಾಗುತ್ತದೆ ಎಂದು ನನಗೆ ತಿಳಿದಿಲ್ಲ. ಆದರೆ ಸಮಾಜವಾದಿ ಪಕ್ಷವು ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನಗಳನ್ನು ಬಿಟ್ಟುಕೊಡುತ್ತದೆ ಎಂದು ನನಗನಿಸುವುದಿಲ್ಲ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಎಸ್‌ಪಿ ಮತ್ತು ಕಾಂಗ್ರೆಸ್ ಪ್ರತ್ಯೇಕವಾಗಿ ಸ್ಪರ್ಧಿಸುವ ಸಾಧ್ಯತೆಯೂ ಇದೆ. ಅಂತಿಮ ನಿರ್ಧಾರ ಅವರಿಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ.

ಬಿಜೆಪಿ-ಅಕಾಲಿದಳ ಮೈತ್ರಿ: ಎನ್‌ಡಿಎ ಗೆಲುವಿನ ಹಾದಿ ಸುಗಮ!

ಪಂಜಾಬ್ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಶಿರೋಮಣಿ ಅಕಾಲಿದಳ ಮತ್ತೆ ಮೈತ್ರಿ ಮಾಡಿಕೊಂಡಿರುವುದನ್ನು ಅಠಾವಳೆ ಸ್ವಾಗತಿಸಿದ್ದಾರೆ. ಈ ಮೈತ್ರಿಯಿಂದ ರಾಜ್ಯದಲ್ಲಿ ಎನ್‌ಡಿಎ ಗೆಲುವಿನ ಹಾದಿ ಸುಗಮವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರ ನೇತೃತ್ವದಲ್ಲಿ ಈ ಎರಡೂ ಪಕ್ಷಗಳು ಹಲವು ವರ್ಷಗಳ ಕಾಲ ಯಶಸ್ವಿಯಾಗಿ ಆಡಳಿತ ನಡೆಸಿದ್ದನ್ನು ಅವರು ನೆನಪಿಸಿಕೊಂಡರು.

ಇದೇ ವೇಳೆ ಪಂಜಾಬ್‌ನ ಆಮ್ ಆದ್ಮಿ ಪಕ್ಷದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ರಾಜ್ಯದಲ್ಲಿ ಹೆಚ್ಚುತ್ತಿರುವ ಮಾದಕವಸ್ತು ಕಳ್ಳಸಾಗಣೆ, ಯುವಜನರ ಸಮಸ್ಯೆ ಹಾಗೂ ರೈತರ ಸಂಕಷ್ಟಗಳಿಂದಾಗಿ ಜನರು ಆಪ್ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನಗೊಂಡಿದ್ದಾರೆ ಎಂದು ಆರೋಪಿಸಿದರು(ಏಜೆನ್ಸೀಸ್​).