ರಾಹುಲ್ ಗಾಂಧಿ ಮತ್ತು ಪ್ರಧಾನಿ ಮೋದಿ
ತಿರುವನಂತಪುರಂ: ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿಯಂತ್ರಣದಲ್ಲಿದ್ದು, ಅವರನ್ನು ಸರ್ ಎಂದು ಕರೆಯುತ್ತಾರೆ. ಇದು ಅತ್ಯಂತ ಅವಮಾನಕರ ವಿಷಯ, ಮೋದಿ ಇನ್ನೂ ಬ್ರಿಟಿಷ್ ಯುಗದಲ್ಲಿರುವ ರೀತಿ ಇದೆ ಎಂದು ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi) ವಾಗ್ದಾಳಿ ನಡೆಸಿದ್ದಾರೆ.
ಶನಿವಾರ(ಏ. 04) ಕೇರಳದ ಇಡುಕ್ಕಿಯಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿರುವ ಅವರು, ಎಡ ಪ್ರಜಾಸತ್ತಾತ್ಮಕ ರಂಗ(ಎಲ್‌ಡಿಎಫ್) ಬಿಜೆಪಿಯೊಂದಿಗೆ ಕೈಜೋಡಿಸುತ್ತಿದೆ ಎಂದು ಆರೋಪಿಸಿದ್ದು, ಟ್ರಂಪ್ ಪ್ರಧಾನಿ ಮೋದಿಯನ್ನು ನಿಯಂತ್ರಿಸುವ ರೀತಿ, ಪ್ರಧಾನಿ ಮೋದಿ ಸಿಎಂ ಪಿಣರಾಯಿ ವಿಜಯನ್ ಅವರನ್ನು ನಿಯಂತ್ರಿಸುತ್ತಾರೆ ಎಂದು ಹೇಳಿದ್ದಾರೆ.
ಇಂದು, ಎಲ್ಲರೂ ಬಿಜೆಪಿ, ಆರ್‌ಎಸ್‌ಎಸ್ ಹಾಗೂ ಎಡರಂಗದ ನಡುವಿನ ಸಂಬಂಧವನ್ನು ನೋಡಬಹುದು. ಜೆಪಿ-ಆರ್‌ಎಸ್‌ಎಸ್ ಜೊತೆಗಿನ ಮೈತ್ರಿಯಿಂದಾಗಿ ಎಲ್‌ಡಿಎಫ್ ತನ್ನ ಎಡಪಂಥೀಯ ಸಿದ್ಧಾಂತವನ್ನು ಕಳೆದುಕೊಂಡಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಯಾವಾಗಲೂ ಸೈದ್ಧಾಂತಿಕ ಎದುರಾಳಿಯಾಗಿ ಎಲ್‌ಡಿಎಫ್ ವಿರುದ್ಧ ಹೋರಾಡುತ್ತಿತ್ತು, ಆದರೆ ಈಗ ಎಲ್‌ಡಿಎಫ್ ಬದಲಾಗಿದೆ, ಎಲ್‌ಡಿಎಫ್‌ನಲ್ಲಿ ಎಡಪಂಥ ಇಲ್ಲ, ಮತ್ತು ಚುನಾವಣೆಯ ನಂತರ ಅದರಲ್ಲಿ ಏನೂ ಉಳಿಯುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಶಬರಿಮಲೆ ಚಿನ್ನದ ಪ್ರಕರಣವನ್ನು ಉಲ್ಲೇಖಿಸಿ, ಪ್ರಧಾನಿ ಮೋದಿ ಯಾವುದೇ ರಾಜ್ಯಕ್ಕೆ ಹೋದಾಗಲೆಲ್ಲಾ ಧರ್ಮ ಮತ್ತು ದೇವಾಲಯಗಳ ಬಗ್ಗೆ ಮಾತನಾಡುತ್ತಾರೆ, ಆದರೆ ಕೇರಳದ ವಿಷಯ ಬಂದಾಗ ಬಾಯಿ ತೆರೆಯುವುದಿಲ್ಲ. ಇದಕ್ಕೆ ಕಾರಣ ಅವರ ಅವರು ಎಲ್ಡಿಎಫ್ಗೆ ಸಹಾಯ ಮಾಡಲು ಬಯಸುತ್ತಾರೆ ಎಂದಿದ್ದಾರೆ.
ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ಹೋರಾಡುತ್ತಿರುವುದರಿಂದ ನನ್ನ ವಿರುದ್ಧ ಅನೇಲ ಪ್ರಕರಣಗಳನ್ನು ದಾಖಲಿಸಲಾಗಿದೆ. ವಿಚಾರಣೆ ನಡೆಸಲಾಗ್ತಿದೆ. ಆದರೆ ನಾನು ಯಾವಗಲೂ ಹಿಂದೆ ಸರಿದಿಲ್ಲ. ಪ್ರಧಾನಿ ಮೋದಿ ಪ್ರತಿದಿನ ನನ್ನನ್ನು ಟೀಕಿಸುತ್ತಾರೆ. ಆದರೆ ಕೇರಳ ಸಿಎಂ ಅಥವಾ ಅವರ ಕುಟುಂಬದ ಬಗ್ಗೆ ಒಂದೇ ಒಂದು ಮಾತನ್ನೂ ಹೇಳುವುದಿಲ್ಲ ಎಂದು ತಿಳಿಸಿದ್ದಾರೆ.
ಏಪ್ರಿಲ್ 9ರಂದು ಕೇರಳ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 4 ರಂದು ಮತ ಎಣಿಕೆ ನಡೆಯಲಿದೆ. ಆಡಳಿತರೂಢ ಸಿಪಿಎಂ ನೇತೃತ್ವದ ಎಲ್‌ಡಿಎಫ್ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಈ ನಡುವೆ ಖಾತೆ ತೆರೆಯಲು ಬಿಜೆಪಿ ತೀವ್ರ ಕಸರತ್ತು ನಡೆಸಿದೆ (ಏಜೆನ್ಸೀಸ್).