ಭಾರತ-ಇಂಡೋನೇಷ್ಯಾ ಸ್ನೇಹಕ್ಕೆ ಹೊಸ ಬಲ 
ದೇಶ

ಭಾರತ-ಇಂಡೋನೇಷ್ಯಾ ಸ್ನೇಹಕ್ಕೆ ಹೊಸ ಬಲ: ಪ್ರಧಾನಿ ಮೋದಿಗೆ ಅತ್ಯುನ್ನತ ನಾಗರಿಕ ಗೌರವದ ಜತೆಗೆ ಮಹತ್ವದ ಒಪ್ಪಂದಗಳಿಗೆ ಸಹಿ

ಪ್ರಮುಖ ಮುಖ್ಯಾಂಶಗಳು

  • ಭಾರತ-ಇಂಡೋನೇಷ್ಯಾ ಮಹತ್ವದ ಒಪ್ಪಂದ
  • ಉಭಯ ದೇಶಗಳ ಬಾಂಧವ್ಯದಲ್ಲಿ ಹೊಸ ಮೈಲಿಗಲ್ಲು
  • ಪ್ರಧಾನಿ ಮೋದಿಗೆ ಇಂಡೋನೇಷ್ಯಾ ಅತ್ಯುನ್ನತ ನಾಗರಿಕ ಗೌರವ 'ಬಿಂಟಾಂಗ್ ಆದಿಪೂರ್ಣ' ಪ್ರಶಸ್ತಿ ಪ್ರದಾನ
ಜಕಾರ್ತ: ಇಂಡೋನೇಷ್ಯಾಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿಗೆ ಭವ್ಯ ಸ್ವಾಗತ ಕೋರಿದ ಉಭಯ ದೇಶದ ಅಧ್ಯಕ್ಷರು, ತಮ್ಮ ರಾಷ್ಟ್ರದ ಅತ್ಯುನ್ನತ ನಾಗರಿಕ ಗೌರವ 'ಬಿಂಟಾಂಗ್ ಆದಿಪೂರ್ಣ' ಪ್ರಶಸ್ತಿ ನೀಡಿ ಗೌರವಿಸಿದರು.
ಮೋದಿ ಅವರಿದ್ದ ವಿಮಾನ ಇಂಡೋನೇಷ್ಯಾದ ವಾಯುಗಡಿ ರೇಖೆಯನ್ನು ಪ್ರವೇಶಿಸುತ್ತಿದ್ದಂತೆ ಅಲ್ಲಿನ ವಾಯುಸೇನೆಯ ಯುದ್ಧವಿಮಾನಗಳು ಬೆಂಗಾವಲಾಗಿ ನಿಂತು ಗೌರವ ಸಲ್ಲಿಸಿದ್ದು ವಿಶೇಷ. ಜುಲೈ 6ರಿಂದ 8 ರವರೆಗೆ ನಡೆಯಲಿರುವ ಈ ಪ್ರವಾಸದಲ್ಲಿ ರಕ್ಷಣೆ, ತಂತ್ರಜ್ಞಾನ ಮತ್ತು ಆರ್ಥಿಕತೆಗೆ ಸಂಬಂಧಿಸಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗುವುದು.

ಭಾರತದ 'ಇವಿಎಂ' ಮಾದರಿಗೆ ಇಂಡೋನೇಷ್ಯಾ ಜೈ

ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದ ಚುನಾವಣಾ ನಿರ್ವಹಣಾ ಮಾದರಿಯನ್ನು ಶ್ಲಾಘಿಸಿದ ಇಂಡೋನೇಷ್ಯಾಗೆ ಸರಿಹೊಂದುವಂತಹ ಇವಿಎಂ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಭಾರತ ಸಂಪೂರ್ಣ ಬೆಂಬಲ ಘೋಷಿಸಿದೆ. ಇದರೊಟ್ಟಿಗೆ ಭಾರತದ 'ಅಸ್ತ್ರ' ಮಿಸೈಲ್‌ಗಳ ಖರೀದಿ ಜೊತೆಗೆ ಆಪರೇಷನ್ ಸಿಂಧೂರದಲ್ಲಿ ಏರ್-ಟು-ಏರ್ ಕ್ಷಿಪಣಿ ತಂತ್ರಜ್ಞಾನದ ಯಶಸ್ಸನ್ನು ಕಣ್ಣಾರೆ ಕಂಡಿರುವ ಇಂಡೋನೇಷ್ಯಾ, ಈ ಕ್ಷಿಪಣಿಗಳನ್ನು ಆಮದು ಮಾಡಿಕೊಳ್ಳಲು ಸಿದ್ಧವಾಗಿದೆ.

ಸ್ನೇಹ, ಸೇನೆ ಬಲ

ಇಂಡೋನೇಷ್ಯಾ ಈಗಾಗಲೇ ಭಾರತದ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಗಳನ್ನು ಬಳಸುತ್ತಿದ್ದು, ಈಗ ತನ್ನ ಬ್ರಹ್ಮೋಸ್ ಶಸ್ತ್ರಾಗಾರವನ್ನು ಮತ್ತಷ್ಟು ವಿಸ್ತರಿಸಲು ಸಜ್ಜಾಗಿದೆ. ಈ ನಿಟ್ಟಿನಲ್ಲಿ, ಪೂರಕವಾಗಿ ಇಂಡೋನೇಷ್ಯಾಗೆ ಭಾರತವು ಹೆಚ್ಚಿನ ಬ್ಯಾಟರಿಗಳನ್ನು ಒದಗಿಸುವ ಮೂಲಕ ಹೆಚ್ಚಿನ ಬೆಂಬಲ ನೀಡಲಿದೆ.

ಖನಿಜ ಮತ್ತು ಕೈಗಾರಿಕಾ ಹೂಡಿಕೆ

ಮಹತ್ವದ ಖನಿಜಗಳ ಪೂರೈಕೆಯನ್ನು ಬಲಪಡಿಸಲು ಭಾರತವು ಇಂಡೋನೇಷ್ಯಾದಲ್ಲಿ ಸ್ಟೀಲ್, ನಿಕಲ್ ಮತ್ತು ರೇರ್ ಅರ್ಥ್ ಪರ್ಮನೆಂಟ್ ಮ್ಯಾಗ್ನೆಟ್‌ಗಳ ಉತ್ಪಾದನೆಯಲ್ಲಿ ದೊಡ್ಡ ಮಟ್ಟದ ಹೂಡಿಕೆ ಮಾಡಲು ಸಜ್ಜಾಗಿದೆ.
2018ರಲ್ಲಿ ಭಾರತ ಮತ್ತು ಇಂಡೋನೇಷ್ಯಾ ನಡುವಿನ ರಾಜತಾಂತ್ರಿಕ ಸಂಬಂಧವನ್ನು ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಗೆ ಏರಿಸಿದ ನಂತರ ಪ್ರಧಾನಿ ಮೋದಿ ಅವರು ಇಂಡೋನೇಷ್ಯಾಕ್ಕೆ ನೀಡುತ್ತಿರುವ ಮೊದಲ ದ್ವಿಪಕ್ಷೀಯ ಭೇಟಿ ಇದಾಗಿದೆ. ಈ ಭೇಟಿಯು ಎರಡೂ ದೇಶಗಳ ನಡುವಿನ ಪರಸ್ಪರ ನಂಬಿಕೆ ಮತ್ತು ಸ್ನೇಹವನ್ನು ಇನ್ನಷ್ಟು ಬಲಪಡಿಸಿದೆ,(ಏಜೆನ್ಸೀಸ್).