ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಶಸ್ತಿ ಪ್ರದಾನ  
ದೇಶ

ಪ್ರಧಾನಿ ಮೋದಿಗೆ ಸೀಶೆಲ್ಸ್ ಅತ್ಯುನ್ನತ ಗೌರವ: 'ಗಾರ್ಡಿಯನ್ ಆಫ್ ದಿ ಬ್ಲೂ ಹೊರಿಜನ್' ಪ್ರಶಸ್ತಿ ಪ್ರದಾನ

ಪ್ರಮುಖ ಮುಖ್ಯಾಂಶಗಳು

  • ಪ್ರಧಾನಿ ನರೇಂದ್ರ ಮೋದಿಗೆ ಸೀಶೆಲ್ಸ್ ರಾಷ್ಟ್ರದ ಅತ್ಯುನ್ನತ ರಾಷ್ಟ್ರೀಯ ಗೌರವ
  • 'ಗಾರ್ಡಿಯನ್ ಆಫ್ ದಿ ಬ್ಲೂ ಹೊರಿಜನ್' ಪ್ರಶಸ್ತಿ ನೀಡಿ ಗೌರವ
ವಿಕ್ಟೋರಿಯಾ (ಸೀಶೆಲ್ಸ್): ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಗೆ ನೀಡಿರುವ ವಿಶೇಷ ಕೊಡುಗೆಯನ್ನು ಗುರುತಿಸಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೀಶೆಲ್ಸ್ ರಾಷ್ಟ್ರವು ತನ್ನ ಅತ್ಯುನ್ನತ ರಾಷ್ಟ್ರೀಯ ಗೌರವ 'ಗಾರ್ಡಿಯನ್ ಆಫ್ ದಿ ಬ್ಲೂ ಹೊರಿಜನ್' (Guardian of the Blue Horizon) ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. 
ಸೀಶೆಲ್ಸ್ ಅಧ್ಯಕ್ಷ ಡಾ. ಪ್ಯಾಟ್ರಿಕ್ ಹೆರ್ಮಿನೀ ಅವರು ಮೋದಿಯವರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಹಸಿರು ಬೆಳವಣಿಗೆ, ಹವಾಮಾನ ವೈಪರೀತ್ಯದ ವಿರುದ್ಧದ ಹೋರಾಟ ಹಾಗೂ ಸುಸ್ಥಿರ ಅಭಿವೃದ್ಧಿಗಾಗಿ ಪ್ರಧಾನಿ ಅವರು ಜಾಗತಿಕ ಮಟ್ಟದಲ್ಲಿ ಕೈಗೊಂಡಿರುವ ನಿರಂತರ ಪ್ರಯತ್ನಗಳಿಗೆ ಸಂದ ದೊಡ್ಡ ಯಶಸ್ಸು ಇದಾಗಿದೆ.
ಸೀಶೆಲ್ಸ್ ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, "ಈ ಗೌರವವನ್ನು ನಾನು ಹವಾಮಾನ ವೈಪರೀತ್ಯದ ಸವಾಲುಗಳ ವಿರುದ್ಧ ಹೋರಾಡುತ್ತಿರುವ ಹಾಗೂ ಪರಿಸರ ಸಂರಕ್ಷಣೆಯನ್ನು ಮುಂದಿನ ಪೀಳಿಗೆಯ ಜವಾಬ್ದಾರಿ ಎಂದು ಭಾವಿಸಿರುವ ಎಲ್ಲಾ ರಾಷ್ಟ್ರಗಳಿಗೂ ಅರ್ಪಿಸುವೆ" ಎಂದರು. 
"ಹಿಂದೂ ಮಹಾಸಾಗರವು ನಮ್ಮೊಂದಿಗಿನ ಮನೆ ಎಂದು ನಾವು ಸದಾ ನಂಬುತ್ತೇವೆ. ಅದರ ಸುರಕ್ಷತೆ, ಸುಸ್ಥಿರತೆ ಮತ್ತು ಸಮೃದ್ಧಿ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ಮಹಾಸಾಗರವನ್ನು ಅವಕಾಶಗಳ ಸಾಗರವನ್ನಾಗಿ ಮಾಡುವುದೇ ನಮ್ಮ ದೃಷ್ಟಿ" ಎಂದು ಪ್ರಧಾನಿ ಮೋದಿ ಹೇಳಿದರು,(ಏಜೆನ್ಸೀಸ್).