BRICS Summit | ಪುಟಿನ್-ಜಿನ್‌ಪಿಂಗ್ ಕೈ ಹಿಡಿದು ಪ್ರಧಾನಿ ಮೋದಿ ನೀಡಿದ ಬಲವಾದ ಸಂದೇಶವೇನು..?  
ದೇಶ

ಜಾಗತಿಕ ವೇದಿಕೆಯಲ್ಲಿ ಒಗ್ಗಟ್ಟಿನ ಪ್ರದರ್ಶನ: ಪುಟಿನ್-ಜಿನ್‌ಪಿಂಗ್ ಕೈ ಹಿಡಿದು ಪ್ರಧಾನಿ ಮೋದಿ ನೀಡಿದ ಬಲವಾದ ಸಂದೇಶವೇನು..? | BRICS Summit

ನವದೆಹಲಿ: ಬ್ರಿಕ್ಸ್ ಶೃಂಗಸಭೆ (BRICS Summit) ಶನಿವಾರ (ಸೆ.12) ಅಧಿಕೃತವಾಗಿ ಆರಂಭಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರ ಕೈಹಿಡಿದುಕೊಂಡು ನಿಂತಿರುವ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ದೆಹಲಿಯಲ್ಲಿ ಬ್ರಿಕ್ಸ್ ಶೃಂಗಸಭೆ ಪ್ರಾರಂಭವಾಗಿದೆ ಎಂದು ಬರೆದುಕೊಂಡಿರುವ ಈ ಫೋಟೋ ಏಷ್ಯಾದ ನೆರೆಹೊರೆಯ ರಾಷ್ಟ್ರಗಳ ನಡುವಿನ ಬಲವಾದ ಬಾಂಧವ್ಯದ ಸಂಕೇತವಾಗಿ ಹೊರಹೊಮ್ಮಿದೆ.
ಮಹತ್ವದ ದ್ವಿಪಕ್ಷೀಯ ಮಾತುಕತೆಗಳ ನಡುವೆ ಶೃಂಗಸಭೆ ಪ್ರಾರಂಭವಾಗಿದ್ದು, ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಗ್ಲೋಬಲ್ ಸೌತ್ (ಅಭಿವೃದ್ಧಿಶೀಲ) ರಾಷ್ಟ್ರಗಳು ಜಾಗತಿಕ ಮಟ್ಟದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಜಾಗತಿಕ ಸಂವಾದಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಗ್ಲೋಬಲ್ ಸೌತ್ ದೇಶಗಳ ನೀತಿ ನಿರೂಪಕರಿಗೆ ಅಗತ್ಯವಿರುವ ತರಬೇತಿ ಮತ್ತು ಪರಿಣತಿಯನ್ನು ಒದಗಿಸಲು ಭಾರತ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಅವರು ಭರವಸೆ ನೀಡಿದರು.
ಇದೇ ವೇಳೆ, ರಾಜತಾಂತ್ರಿಕ ವಲಯದಲ್ಲಿ ಬ್ರಿಕ್ಸ್ ಒಕ್ಕೂಟವು ಪ್ರಮುಖ ಯಶಸ್ಸನ್ನು ಸಾಧಿಸಿದ್ದು, ಭಯೋತ್ಪಾದನೆ ಹಾಗೂ ಏಕಪಕ್ಷೀಯ ಯುದ್ಧ ಕೃತ್ಯಗಳನ್ನು ಕಟ್ಟುನಿಟ್ಟಾಗಿ ಖಂಡಿಸುವ ದೆಹಲಿ ಘೋಷಣೆಯನ್ನು ಅಂಗೀಕರಿಸಿದೆ. ಹಲವಾರು ಸಂವೇದನಾಶೀಲ ವಿಷಯಗಳ ಕುರಿತು ನಾಯಕರ ನಡುವೆ ಭಿನ್ನಾಪ್ರಾಯಗಳಿದ್ದರೂ, ಶನಿವಾರ ಬೆಳಗಿನ ಜಾವದವರೆಗೆ ನಡೆದ ಸುದೀರ್ಘ ಮತ್ತು ತೀವ್ರ ಸಂಪ್ರದಾಯಿಕ ಮಾತುಕತೆಗಳ ನಂತರ ಎಲ್ಲಾ ನಾಯಕರ ನಡುವೆ ಒಮ್ಮತ ಮೂಡಿದೆ. ಈ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಸಭೆಯು ಅತ್ಯಂತ ಫಲಪ್ರದ ಹಾಗೂ ಸಕಾರಾತ್ಮಕವಾಗಿ ನಡೆದಿದ್ದು, ಯಾವುದೇ ಸದಸ್ಯ ರಾಷ್ಟ್ರವೂ ಅಸಮ್ಮತಿಯನ್ನು ವ್ಯಕ್ತಪಡಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಶೃಂಗಸಭೆಯಲ್ಲಿ ಭಾಗವಹಿಸಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಶುಕ್ರವಾರ ಮುಂಜಾನೆಯೇ ದೆಹಲಿಗೆ ಆಗಮಿಸಿದ್ದರೆ, ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಶನಿವಾರ ಮಧ್ಯಾಹ್ನ ಬಂದಿಳಿದರು. ಪ್ರಧಾನಿ ಮೋದಿ ಅವರು ಶುಕ್ರವಾರ ಸಂಜೆ ಪುಟಿನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದು, ರಾಜಕೀಯ, ಆರ್ಥಿಕ, ರಕ್ಷಣೆ, ಇಂಧನ, ಬಾಹ್ಯಾಕಾಶ, ಕೌಶಲ್ಯ ಚಲನಶೀಲತೆ ಮತ್ತು ಜನರಿಂದ ಜನರೊಂದಿಗಿನ ಬಾಂಧವ್ಯದ ಕುರಿತು ವಿಸ್ತೃತವಾಗಿ ಚರ್ಚಿಸಿದರು. ಈ ಮಾತುಕತೆಯ ವೇಳೆ ಮಧ್ಯಪ್ರಾಚ್ಯ ಯುದ್ಧ ಮತ್ತು ಕಪ್ಪು ಸಮುದ್ರದ ಪ್ರದೇಶದ ಸಂಘರ್ಷದ ಕುರಿತು ಉಭಯ ನಾಯಕರು ಮಾತನಾಡಿದ್ದು, ಇಂತಹ ಯುದ್ಧ ಮತ್ತು ಸಂಘರ್ಷಗಳನ್ನು ಪರಿಹರಿಸಲು ಮಾತುಕತೆ ಹಾಗೂ ರಾಜತಾಂತ್ರಿಕತೆ ಮಾತ್ರವೇ ಏಕೈಕ ಮಾರ್ಗ ಎಂದು ಮೋದಿ ಅವರು ಪುಟಿನ್ ಅವರಿಗೆ ಪುನರುಚ್ಚರಿಸಿದರು.
ಮತ್ತೊಂದೆಡೆ, ಜಾಗತಿಕ ನಾಯಕರನ್ನು ಉದ್ದೇಶಿಸಿ ಮಾತನಾಡಿದ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್, ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧವು ಅಂತರರಾಷ್ಟ್ರೀಯ ಸಮುದಾಯದ ಸಾಮಾನ್ಯ ಹಿತಾಸಕ್ತಿಗಳಿಗೆ ಪೂರಕವಾಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ(ಏಜೆನ್ಸೀಸ್​).