Narendra Modi in Indonesia > ಉಭಯ ದೇಶಗಳ ಸ್ನೇಹಕ್ಕೆ ರಾಮಾಯಣ, ಮಹಾಭಾರತವೇ ಆಧಾರ ಸ್ತಂಭ ಎಂದ ಪ್ರಧಾನಿ ಮೋದಿ 
ದೇಶ

ಪಹಲ್ಗಾಮ್ ದಾಳಿ ವೇಳೆ ಬೆಂಬಲ ನೀಡಿದ್ದು!...ಉಭಯ ದೇಶಗಳ ಸ್ನೇಹಕ್ಕೆ ರಾಮಾಯಣ, ಮಹಾಭಾರತವೇ ಆಧಾರ ಸ್ತಂಭ ಎಂದ ಪ್ರಧಾನಿ ಮೋದಿ | Narendra Modi in Indonesia

Narendra Modi in Indonesia: ಪ್ರಧಾನಿ ನರೇಂದ್ರ ಮೋದಿ ಅವರ ಇಂಡೋನೇಷ್ಯಾ ಪ್ರವಾಸದ ಎರಡನೇ ದಿನ ಜಾಗತಿಕ ರಾಜತಾಂತ್ರಿಕ ಇತಿಹಾಸದಲ್ಲಿ ಒಂದು ಸುವರ್ಣ ಅಧ್ಯಾಯಕ್ಕೆ ಸಾಕ್ಷಿಯಾಗಿದೆ. ಜಕಾರ್ತಕ್ಕೆ ಭೇಟಿ ನೀಡಿರುವ ಪ್ರಧಾನಿ ಮೋದಿ ಅವರಿಗೆ ಇಂಡೋನೇಷ್ಯಾ ಸರ್ಕಾರವು ತನ್ನ ಅತ್ಯುನ್ನತ ನಾಗರಿಕ ಗೌರವವಾದ ಬಿಂತಾಂಗ್ ಅಡಿಪೂರ್ಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಅಧ್ಯಕ್ಷ ಪ್ರಬೋವೊ ಸುಬಿಯಾಂತೊ ಅವರಿಂದ ಈ ಮಹೋನ್ನತ ಪ್ರಶಸ್ತಿಯನ್ನು ಸ್ವೀಕರಿಸಿದ ನಂತರ, ಪ್ರಧಾನಿ ಮೋದಿ ಇಂಡೋನೇಷ್ಯಾ ಸಂಸತ್ತನ್ನು ಉದ್ದೇಶಿಸಿ ಜಂಟಿ ಜಾಗತಿಕ ಹಿತಾಸಕ್ತಿಗಳ ಕುರಿತು ಮಾತನಾಡಿದರು.
140 ಕೋಟಿ ಭಾರತೀಯರ ಪರವಾಗಿ ಇಂಡೋನೇಷ್ಯಾದ ಜನತೆಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನಿ ಮೋದಿ, ಪ್ರಜಾಪ್ರಭುತ್ವದ ಜನನಿ ಎನಿಸಿಕೊಂಡಿರುವ ಭಾರತದ ಹೆಮ್ಮೆಯ ಪ್ರಜೆಯಾಗಿ ನಾನು ನಿಮಗೆ ಶುಭ ಹಾರೈಸುತ್ತಿದ್ದೇನೆ. ಇಂಡೋನೇಷ್ಯಾದ ಜನತೆ ನನ್ನ ಮೇಲೆ ತೋರಿದ ಪ್ರೀತಿ ಮತ್ತು ಈ ಅತ್ಯುನ್ನತ ಗೌರವವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಭಾವುಕರಾಗಿ ನುಡಿದರು.

ರಾಮಾಯಣ-ಮಹಾಭಾರತದ ಕನೆಕ್ಷನ್!

ಉಭಯ ದೇಶಗಳ ನಡುವಿನ ಸಾಂಸ್ಕೃತಿಕ ಬಾಂಧವ್ಯವನ್ನು ನೆನೆದ ಪ್ರಧಾನಿ ಮೋದಿ, ಭಾರತ ಮತ್ತು ಇಂಡೋನೇಷ್ಯಾ ಕೇವಲ ಭೌಗೋಳಿಕವಾಗಿ ಸಮುದ್ರ ಹಂಚಿಕೊಂಡಿಲ್ಲ, ಬದಲಿಗೆ ಶತಮಾನಗಳ ಹಳೆಯ ಇತಿಹಾಸವನ್ನು ಹಂಚಿಕೊಂಡಿವೆ ಎಂದರು. ನಮ್ಮಿಬ್ಬರ ನಡುವಿನ ಸಂಬಂಧವು ರಾಮಾಯಣ, ಮಹಾಭಾರತ ಮತ್ತು ಪುರಾತನ ನಲಂದಾ ವಿಶ್ವವಿದ್ಯಾಲಯದ ಜ್ಞಾನದ ಪರಂಪರೆಯಿಂದ ಬೆಸೆದುಕೊಂಡಿದೆ. ನಾವು ವಯಾಂಗ್ (ಗೊಂಬೆಯಾಟ), ನೃತ್ಯ ಮತ್ತು ಸಂಗೀತದ ಮೂಲಕ ಮಾತ್ರವಲ್ಲದೆ ಬೊರೊಬುದೂರ್ ಮತ್ತು ಪ್ರಂಬನನ್‌ನಂತಹ ಭವ್ಯ ಸ್ಮಾರಕಗಳ ಮೂಲಕವೂ ಪರಸ್ಪರ ಬೆಸೆದುಕೊಂಡಿದ್ದೇವೆ ಎಂದರು.
ಇಂಡೋನೇಷ್ಯಾದ ರಾಷ್ಟ್ರೀಯ ಲಾಂಛನ ಗರುಡ ಮತ್ತು ಒಡಿಶಾದ ಬಾಲಿ ಯಾತ್ರೆ ನಮ್ಮ ಸಾಂಸ್ಕೃತಿಕ ಬೇರುಗಳನ್ನು ನೆನಪಿಸುತ್ತವೆ. ರುಚಿಯ ವಿಷಯಕ್ಕೆ ಬಂದರೆ ಭಾರತದ ಪಾಪಡ್ ಮತ್ತು ಇಂಡೋನೇಷ್ಯಾದ ಕೃಪುಕ್ ನಡುವೆ ಯಾವುದು ಹೆಚ್ಚು ಕ್ರಂಚಿ ಎಂದು ನಿರ್ಧರಿಸುವುದು ಕಷ್ಟ, ಆದರೆ, ನಮ್ಮಿಬ್ಬರ ಜೀವನದಲ್ಲಿ ಸಾಂಬಾರ ಪದಾರ್ಥಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಭಾರತ-ಇಂಡೋನೇಷ್ಯಾದ ನಿಕಟತೆಯನ್ನು ಪ್ರಧಾನಿ ಮೋದಿ ವಿವರಿಸಿದರು.

ಸಾಮ್ರಾಜ್ಯ ವಿಸ್ತರಣೆಯಲ್ಲ, ಸಮಗ್ರ ಅಭಿವೃದ್ಧಿಯೇ ಭಾರತದ ಮಂತ್ರ

ಇದೇ ವೇಳೆ ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ಪ್ರಧಾನಿ, ಭಾರತದ ಜಾಗತಿಕ ದೃಷ್ಟಿಕೋನವು ಭೂಪ್ರದೇಶಗಳನ್ನು ವಶಪಡಿಸಿಕೊಳ್ಳುವ ಸಾಮ್ರಾಜ್ಯಶಾಹಿ ನೀತಿಯಲ್ಲ, ಬದಲಿಗೆ ಸಮಗ್ರ ಅಭಿವೃದ್ಧಿಯನ್ನು ಒಳಗೊಂಡಿದೆ ಎಂದರು. ಭಾರತದ ಮೂಲ ಮಂತ್ರವಾದ ಸಬ್ಕಾ ಸಾತ್, ಸಬ್ಕಾ ವಿಕಾಸ್ ತತ್ವದ ಆಧಾರದ ಮೇಲೆಯೇ ಭಾರತವು ಜಗತ್ತಿನ ಇತರ ದೇಶಗಳೊಂದಿಗೆ ಸಹಕಾರ ಮತ್ತು ಜಂಟಿ ಸಹಭಾಗಿತ್ವದ ಮೂಲಕ ಪ್ರಗತಿ ಸಾಧಿಸಲು ಬಯಸುತ್ತದೆ ಎಂದು ಸ್ಪಷ್ಟಪಡಿಸಿದರು.

ಪಹಲ್ಗಾಮ್ ಉಗ್ರರ ದಾಳಿ: ಕಷ್ಟದ ಕಾಲದಲ್ಲಿ ಜೊತೆ ನಿಂತ ಜಕಾರ್ತ!

ಕಳೆದ ವರ್ಷ ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ಇಡೀ ಜಗತ್ತೇ ಭಾರತದ ಸ್ಥಿತಿಯನ್ನು ನೋಡುತ್ತಿದ್ದಾಗ, ಇಂಡೋನೇಷ್ಯಾ ಮಾತ್ರ ಭಾರತದ ಬೆನ್ನೆಲುಬಾಗಿ ಗಟ್ಟಿಯಾಗಿ ನಿಂತಿತ್ತು ಎಂದಿರುವ ಪ್ರಧಾನಿ ಮೋದಿ, ಈ ದೊಡ್ಡ ಬೆಂಬಲಕ್ಕಾಗಿ ಅಧ್ಯಕ್ಷ ಪ್ರಬೋವೊ ಮತ್ತು ಇಂಡೋನೇಷ್ಯಾ ಸಂಸತ್ತಿಗೆ ಧನ್ಯವಾದ ಅರ್ಪಿಸಿದರು. ಪ್ರಸ್ತುತ ಉಭಯ ದೇಶಗಳು ಭಯೋತ್ಪಾದನೆ ನಿಗ್ರಹ ಜಂಟಿ ಕಾರ್ಯಕಾರಿ ಸಮಿತಿ ಮೂಲಕ ಜಾಗತಿಕ ರಕ್ಷಣಾ ರಂಗದಲ್ಲಿ ಕೈಜೋಡಿಸಿ ಕೆಲಸ ಮಾಡುತ್ತಿರುವುದನ್ನು ಪ್ರಧಾನಿ ಈ ಸಂದರ್ಭದಲ್ಲಿ ಸ್ಮರಿಸಿದರು(ಏಜೆನ್ಸೀಸ್​).