Narendra Modi > ಇಸ್ರೋ ಸಾಧನೆಗೆ ಪ್ರಧಾನಿ ಮೋದಿ ಜೈಕಾರ 
ದೇಶ

GSLV-F17 ಯಶಸ್ಸು ಭಾರತದ ಬೆಳೆಯುತ್ತಿರುವ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿ!....ಇಸ್ರೋ ಸಾಧನೆಗೆ ಪ್ರಧಾನಿ ಮೋದಿ ಜೈಕಾರ | Narendra Modi

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಜಿಎಸ್‌ಎಲ್‌ವಿ-ಎಫ್17 (GSLV-F17) ರೋಕೆಟ್ ಮೂಲಕ ಇಒಎಸ್-05 (EOS-05) ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿರುವುದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಶುಕ್ರವಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಐತಿಹಾಸಿಕ ಯೋಜನೆಯು ಭಾರತದ ಬಾಹ್ಯಾಕಾಶ ಕ್ಷೇತ್ರದ ಶ್ರೇಷ್ಠತೆ, ನಾವೀನ್ಯತೆ ಹಾಗೂ ಬೆಳೆಯುತ್ತಿರುವ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಬಣ್ಣಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ ಮೋದಿ, ಈ ಉಡಾವಣೆಯು ಇಸ್ರೋ ಸಾಧಿಸಿದ ಮತ್ತೊಂದು ಅತ್ಯುತ್ತಮ ಮೈಲಿಗಲ್ಲು ಹಾಗೂ ದೇಶಕ್ಕೆ ಹೆಮ್ಮೆಯ ಕ್ಷಣವಾಗಿದೆ ಎಂದು ಹೇಳಿದ್ದಾರೆ.
"

ಇಸ್ರೋ ಸಂಸ್ಥೆಗೆ ಮತ್ತೊಂದು ಅತ್ಯುತ್ತಮ ಸಾಧನೆ ಹಾಗೂ ನಮ್ಮ ದೇಶಕ್ಕೆ ಹೆಮ್ಮೆಯ ಕ್ಷಣ. ಜಿಯೋಸಿಂಕ್ರೋನಸ್ ಕಕ್ಷೆಯಿಂದ ಕಾರ್ಯನಿರ್ವಹಿಸಲಿರುವ ಭಾರತದ ಮೊದಲ ಇಮೇಜಿಂಗ್ ಉಪಗ್ರಹವಾದ EOS-05 ಅನ್ನು ಹೊತ್ತೊಯ್ದ GSLV-F17 ಯಶಸ್ವಿ ಉಡಾವಣೆಯು, ಭಾರತದ ಬಾಹ್ಯಾಕಾಶ ಕ್ಷೇತ್ರವನ್ನು ವ್ಯಾಖ್ಯಾನಿಸುವ ಶ್ರೇಷ್ಠತೆ, ನಾವೀನ್ಯತೆ ಮತ್ತು ಬೆಳೆಯುತ್ತಿರುವ ಸಾಮರ್ಥ್ಯದ ಪ್ರತಿಫಲನವಾಗಿದೆ.

ಪ್ರಧಾನಿ ನರೇಂದ್ರ ಮೋದಿ

ಇದಲ್ಲದೆ, ಈ ಯೋಜನೆಯ ಯಶಸ್ಸು ಇಸ್ರೋ ಹಾಗೂ ಭಾರತೀಯ ಕೈಗಾರಿಕಾ ವಲಯದ ನಡುವೆ ಬೆಳೆಯುತ್ತಿರುವ ಸಹಭಾಗಿತ್ವವನ್ನು ಎತ್ತಿ ತೋರಿಸುತ್ತದೆ ಮತ್ತು ಮುಂಬರುವ ದಿನಗಳಲ್ಲಿ ದೇಶದ ಇಡೀ ಬಾಹ್ಯಾಕಾಶ ವ್ಯವಸ್ಥೆಯನ್ನು ಮತ್ತಷ್ಟು ವಿಸ್ತರಿಸಲಿದೆ ಎಂದು ಪ್ರಧಾನಿ ಪ್ರಶಂಸಿಸಿದ್ದಾರೆ.

ಯಶಸ್ವಿಯಾಗಿ ಕಕ್ಷೆ ಸೇರಿದ EOS-05 ಉಪಗ್ರಹ!

ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು ಮುಂಜಾನೆ ಉಡಾವಣೆಗೊಂಡ ಇಒಎಸ್-05 (EOS-05) ಉಪಗ್ರಹವು ಭೂಮಿಯ ಸಬ್-ಜಿಯೋಸಿಂಕ್ರೋನಸ್ ಟ್ರಾನ್ಸ್‌ಫರ್ ಕಕ್ಷೆಯನ್ನು ಯಶಸ್ವಿಯಾಗಿ ಸೇರಿಕೊಂಡಿದೆ. ಇಸ್ರೋ ನೀಡಿರುವ ಮಾಹಿತಿಯಂತೆ, ಈ ಉಪಗ್ರಹವನ್ನು ಮುಂಜಾನೆ ಸುಮಾರು 2:55 ಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.
ಈ ಉಪಗ್ರಹವು ಬಾಹ್ಯಾಕಾಶದಲ್ಲಿ ಸುಮಾರು 36,000 ಕಿಲೋಮೀಟರ್ ಎತ್ತರದಿಂದ ಇಡೀ ಭಾರತದ ಭೂಭಾಗವನ್ನು ನಿರಂತರವಾಗಿ ಕಣ್ಣಿಡಲು ಸಹಾಯ ಮಾಡಲಿದೆ. ಈ ಕುರಿತು ಮಾತನಾಡಿದ ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್, ಇದು ಕೇವಲ ಜಾರೂಸಿ (Spy) ಉಪಗ್ರಹವಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದು, ದೇಶದ ನಾಗರಿಕರ ಸುರಕ್ಷತೆ, ಕೃಷಿ, ವಿಕೋಪ ನಿರ್ವಹಣೆ ಹಾಗೂ ಭದ್ರತೆಯ ದೃಷ್ಟಿಯಿಂದ ಇಒಎಸ್-05 ಭಾರತದ ಮೇಲ್ಮೈಯನ್ನು ನಿರಂತರವಾಗಿ ಸ್ಕ್ಯಾನ್ ಮಾಡಲಿದೆ ಎಂದು ತಿಳಿಸಿದ್ದಾರೆ.
ಈ ಕ್ಯಾಲೆಂಡರ್ ವರ್ಷದಲ್ಲಿ ಗಗನಯಾನದ ಮೊದಲ ಮಾನವರಹಿತ ಮಿಷನ್ ಉಡಾವಣೆಗಾಗಿ ಉತ್ಸಾಹಭರಿತ ಮತ್ತು ವ್ಯವಸ್ಥಿತ ಕೆಲಸ ನಡೆಯುತ್ತಿದೆ, ಈ ಕ್ಯಾಲೆಂಡರ್ ವರ್ಷದಲ್ಲಿ ಮಾನವರಹಿತ ಮಿಷನ್ ಉಡಾವಣೆಗಾಗಿ ಚಟುವಟಿಕೆಗಳು ಬಹಳ ಉತ್ಸಾಹದಿಂದ ಮತ್ತು ವ್ಯವಸ್ಥಿತವಾಗಿ ನಡೆಯುತ್ತಿವೆ ಎಂದರು. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಶ್ಲಾಘಿಸಿದ ನಾರಾಯಣನ್, ಸಂಚಿಕೆ ಉಪಗ್ರಹ NVS-03 ಸೇರಿದಂತೆ ಇನ್ನೂ ಆರು ಉಡಾವಣೆಗಳನ್ನು ಈ ಹಣಕಾಸು ವರ್ಷದಲ್ಲಿ ಗುರಿಯಾಗಿಟ್ಟುಕೊಳ್ಳಲಾಗಿದೆ ಎಂದು ತಿಳಿಸಿದರು

ದೇಶದ ಸ್ಥಾನವನ್ನು ಇದು ಬಲಪಡಿಸುತ್ತಿದೆ ಎಂದ ಕೇಂದ್ರ ಸಚಿವ ಜಿತೇಂದ್ರ ಸಿಂಗ್

ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಅವರು ಇಸ್ರೋದ GSLV-F17 ರಾಕೆಟ್ ಮಿಷನ್‌ನ ಯಶಸ್ವಿ ಉಡಾವಣೆಯನ್ನು ಶ್ಲಾಘಿಸಿದರು. ಭಾರತದ ಬಾಹ್ಯಾಕಾಶ ಸಾಮರ್ಥ್ಯಗಳು ಹೊಸ ಎತ್ತರಕ್ಕೆ ಏರುತ್ತಲೇ ಇವೆ ಮತ್ತು ಜಾಗತಿಕ ಬಾಹ್ಯಾಕಾಶ ಶಕ್ತಿಯಾಗಿ ದೇಶದ ಸ್ಥಾನವನ್ನು ಇದು ಬಲಪಡಿಸುತ್ತಿದೆ ಎಂದರು. EOS-05 ಅತ್ಯಾಧುನಿಕ ಭೂ ವೀಕ್ಷಣಾ ಉಪಗ್ರಹವಾಗಿದೆ ಮತ್ತು ಜಿಯೋಸಿಂಕ್ರೊನಸ್ ಕಕ್ಷೆಯಿಂದ ಭಾರತದ ಮೊದಲ ಇಮೇಜಿಂಗ್ ಉಪಗ್ರಹವಾಗಿದೆ. ಇದು ಗೋಚರ, ಇನ್ಫ್ರಾರೆಡ್, ಮಲ್ಟಿಸ್ಪೆಕ್ಟ್ರಲ್ ಮತ್ತು ಹೈಪರ್‌ಸ್ಪೆಕ್ಟ್ರಲ್ ಬ್ಯಾಂಡ್‌ಗಳಲ್ಲಿ ಸುಧಾರಿತ ಚಿತ್ರಗಳನ್ನು ಸೆರೆಹಿಡಿಯಲು ಅನುವು ಮಾಡಿಕೊಡುತ್ತದೆ ಎಂದು ಜಿತೇಂದ್ರ ಸಿಂಗ್ ತಮ್ಮ ಎಕ್ಸ್ ಖಾತೆಯ ಪೋಸ್ಟ್​​ನಲ್ಲಿ ಬರೆದುಕೊಂಡಿದ್ದಾರೆ(ಏಜೆನ್ಸೀಸ್​).