ಪ್ರಧಾನಿ ಮೋದಿ 
ದೇಶ

ಇಂದಿನಿಂದ ಮೂರು ದಿನಗಳ ಜೋರ್ಡಾನ್, ಇಥಿಯೋಪಿಯಾ ಹಾಗೂ ಓಮನ್‌ ಪ್ರವಾಸ ಕೈಗೊಂಡ ಪ್ರಧಾನಿ ಮೋದಿ ; ವ್ಯಾಪಾರ ಒಪ್ಪಂದ ಬಗ್ಗೆ ಚರ್ಚೆ| PM Modi

ನವದೆಹಲಿ: ಪ್ರಧಾನಿ ಮೋದಿ(PM Modi) ಇಂದಿನಿಂದ ಡಿ.18ರವರೆಗೆ ಜೋರ್ಡಾನ್, ಇಥಿಯೋಪಿಯಾ ಹಾಗೂ ಓಮನ್‌ ಮೂರು ದೇಶಗಳ ಪ್ರವಾಸಕ್ಕೆ ತೆರಳಿದ್ದು, ಪ್ರಮುಖ ವ್ಯಾಪಾರ ಒಪ್ಪಂದಗಳ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ವರದಿಯಾಗಿದೆ. ದೇಶದ ಆರ್ಥಿಕತೆ ಮತ್ತು ಜಾಗತಿಕ ದಕ್ಷಿಣದಾದ್ಯಂತ ಪ್ರಮುಖ ಪಾಲುದಾರರೊಂದಿಗೆ ಸಂಬಂಧಗಳನ್ನು ಬಲಪಡಿಸಲು ಈ ಪ್ರವಾಸ ಕೈಗೊಳ್ಳಲಾಗಿದೆ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಹಾಕಿರುವ ಪ್ರಧಾನಿ ಮೋದಿ, ಇಂದು ನಾನು ಜೋರ್ಡಾನ್‌ನ ಹ್ಯಾಶೆಮೈಟ್ ಸಾಮ್ರಾಜ್ಯ, ಫೆಡರಲ್ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಇಥಿಯೋಪಿಯಾ ಹಾಗೂ ಓಮನ್ ಸುಲ್ತಾನೇಟ್‌ಗೆ ಮೂರು ರಾಷ್ಟ್ರಗಳ ಭೇಟಿಯನ್ನು ಪ್ರಾರಂಭಿಸುತ್ತಿದ್ದೇನೆ, ಈ ಮೂರು ರಾಷ್ಟ್ರಗಳು ಭಾರತವು ಪ್ರಾಚೀನ ನಾಗರಿಕ ಸಂಬಂಧಗಳನ್ನು ಮತ್ತು ವ್ಯಾಪಕವಾದ ಸಮಕಾಲೀನ ದ್ವಿಪಕ್ಷೀಯ ಸಂಬಂಧಗಳನ್ನು ಹಂಚಿಕೊಳ್ಳುತ್ತವೆ ಎಂದು ಹೇಳಿದ್ದಾರೆ.
ಇಂದು ಮೊದಲು ಜೋರ್ಡಾನ್​​ಗೆ ಭೇಟಿ ನೀಡಿದ್ದು, ವಿಮಾನ ನಿಲ್ದಾಣದಲ್ಲಿ ಪ್ರಧಾನಿಯನ್ನು ಜೋರ್ಡಾನ್ ಪ್ರಧಾನಿ ಜಾಫರ್ ಹಸನ್ ಸ್ವಾಗತಿಸಿದ್ದಾರೆ. ಇಂದು ಮತ್ತು ನಾಳೆ ಎರಡು ದಿನಗಳ ಕಾಲ ರಾಜ ಅಬ್ದುಲ್ಲಾ II ಬಿನ್ ಅಲ್ ಹುಸೇನ್ ಅವರ ಆಹ್ವಾನದ ಮೇರೆಗೆ ಮೋದಿ ಜೋರ್ಡಾನ್‌ಗೆ ಭೇಟಿ ನೀಡಿದ್ದಾರೆ. ಈ ಭೇಟಿಯು 75 ವರ್ಷಗಳ ರಾಜತಾಂತ್ರಿಕ ಸಂಬಂಧಗಳನ್ನು ಸ್ಮರಿಸುತ್ತದೆ. ಎರಡೂ ಕಡೆಯವರು ದ್ವಿಪಕ್ಷೀಯ ಸಂಬಂಧ ಮತ್ತು ಹೊಸ ಸಹಕಾರ ಕ್ಷೇತ್ರಗಳಲ್ಲಿ ಕೈಜೋಡಿಸಿಲಿವೆ.
ಅಮ್ಮನ್‌ನಲ್ಲಿ ತಮ್ಮ ವಾಸ್ತವ್ಯದ ಸಮಯದಲ್ಲಿ ಮೋದಿ ಅವರು ರಾಜ ಅಬ್ದುಲ್ಲಾ II, ಪ್ರಧಾನಿ ಜಾಫರ್ ಹಸನ್ ಮತ್ತು ಕ್ರೌನ್ ಪ್ರಿನ್ಸ್ ಅಲ್ ಹುಸೇನ್ ಬಿನ್ ಅಬ್ದುಲ್ಲಾ II ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಬಳಿಕ ನಾಡಿದ್ದು ಡಿ. 16 ಮತ್ತು 17ರಂದು ಇಥಿಯೋಪಿಯಾಕ್ಕೆ ಭೇಟಿ ನೀಡಲಿದ್ದಾರೆ. ಇಥಿಯೋಪಿಯನ್ ಪ್ರಧಾನಿ ಅಬಿ ಅಹ್ಮದ್ ಅಲಿ ಅವರೊಂದಿಗೆ ಅಭಿವೃದ್ಧಿ ಸಹಕಾರ, ಕೃಷಿ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಸಾಮರ್ಥ್ಯ ವೃದ್ಧಿ ಮತ್ತು ಭಾರತೀಯ ವ್ಯವಹಾರಗಳಿಗೆ ಹೂಡಿಕೆ ಅವಕಾಶಗಳ ಕುರಿತು ವ್ಯಾಪಕ ಮಾತುಕತೆ ನಡೆಸಲಿದ್ದಾರೆ.
ಕೊನೆಗೆ ಡಿ. 17-18 ರಂದು ಮೋದಿ ಅವರು ಒಮಾನ್‌ಗೆ ಭೇಟಿ ನೀಡಲಿದ್ದು, ಅಲ್ಲಿ ಭಾರತ ಮತ್ತು ಒಮಾನ್ ತಮ್ಮ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದವನ್ನು (ಸಿಇಪಿಎ) ಔಪಚಾರಿಕವಾಗಿ ಘೋಷಿಸಿ ಸಹಿ ಹಾಕುವ ನಿರೀಕ್ಷೆಯಿದೆ.
ಪಶ್ಚಿಮ ಏಷ್ಯಾ ಮತ್ತು ಆಫ್ರಿಕಾದಲ್ಲಿ ಭಾರತದ ಕಾರ್ಯತಂತ್ರದ ಉಪಸ್ಥಿತಿಯನ್ನು ಬಲಪಡಿಸುವ ಮತ್ತು ಒಮಾನ್ ಜೊತೆ ಪ್ರಮುಖ ಮುಕ್ತ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸುವ ಗುರಿಯನ್ನು ಹೊಂದಿದೆ (ಏಜೆನ್ಸೀಸ್).