ದೇಶ

ಚಿನ್ನದ ಬೆಲೆ ಇಳಿದಿದ್ದೇಗೆ? 1965ರ ಲಾಲ್ ಬಹದ್ದೂರ್ ಶಾಸ್ತ್ರಿ ಕರೆಯನ್ನು ಉದಾಹರಿಸಿ ಅಸಲಿ ಕಾರಣ ಬಿಚ್ಚಿಟ್ಟ ನಮೋ! | Narendra Modi

ಲಖನೌ: ದೇಶದ ಆರ್ಥಿಕ ಹಿತದೃಷ್ಟಿಯಿಂದ ಅನಗತ್ಯವಾಗಿ ಚಿನ್ನ ಖರೀದಿಸದಂತೆ ತಾವು ನೀಡಿದ್ದ ಕರೆಗೆ ದೇಶದ ಜನತೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಇದರಿಂದ ಚಿನ್ನದ ಬೆಲೆ ಇಳಿಕೆಯಾಗಿ ಜನರ ಹಣ ಉಳಿತಾಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಲಖನೌದ ಗೋಮತಿ ನಗರದ ಇಂದಿರಾ ಗಾಂಧಿ ಪ್ರತಿಷ್ಠಾನದಲ್ಲಿ ನಡೆದ 5ನೇ ರಾಷ್ಟ್ರೀಯ ಕೌಶಲ್ಯ ಘಟಿಕೋತ್ಸವವನ್ನು ಉದ್ದೇಶಿಸಿ ಶನಿವಾರ ಮಾತನಾಡಿದ ನಮೋ ಈ ವಿಷಯ ತಿಳಿಸಿದರು.

ಒಂದು ವರ್ಷದ ಕಾಲ ಅನಿವಾರ್ಯವಿಲ್ಲದಿದ್ದರೆ ಚಿನ್ನ ಖರೀದಿಸಬೇಡಿ ಎಂದು ನಾನು ದೇಶವಾಸಿಗಳಲ್ಲಿ ವಿನಂತಿಸಿದ್ದೆ ಎಂದು ಮೋದಿ ನೆನಪಿಸಿಕೊಂಡರು, 1965ರ ತೀವ್ರ ಆಹಾರ ಅಭಾವದ ಸಂದರ್ಭದಲ್ಲಿ ಅಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಒಂದು ಹೊತ್ತಿನ ಊಟ ತ್ಯಜಿಸುವಂತೆ ನೀಡಿದ್ದ ಕರೆಗೆ ತಮ್ಮ ಈ ಮನವಿಯನ್ನು ಹೋಲಿಸಿದ ಅವರು, ಅಂದು ದೇಶ ಶಾಸ್ತ್ರಿಯವರ ಮಾತಿಗೆ ಬೆಲೆ ಕೊಟ್ಟಿತ್ತು. ಇಂದಿಗೂ ನಮ್ಮ ದೇಶದ ಜನರಲ್ಲಿ ಅದೇ ರಾಷ್ಟ್ರಪ್ರೇಮ ಮತ್ತು ಗುಣವಿದೆ. ನನ್ನಂತಹ ಸಾಮಾನ್ಯ ವ್ಯಕ್ತಿಯ ಮಾತಿಗೆ ಬೆಲೆ ಕೊಟ್ಟು ಜನರು ಚಿನ್ನ ಖರೀದಿಸುವುದನ್ನು ಕಡಿಮೆ ಮಾಡಿದರು, ಪರಿಣಾಮವಾಗಿ ಚಿನ್ನದ ಬೆಲೆ ಇಳಿಯಿತು. ಇಂದು ಜನರೇ ನನ್ನ ಬಳಿ ಬಂದು, ಮೋದಿ ಜೀ, ನೀವು ಹೇಳಿದಿರಿ, ನಾವು ಕೇಳಿದೆವು, ಇದರಿಂದ ನಮ್ಮ ಹಣ ಉಳಿಯಿತು ಎನ್ನುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಮೇ ತಿಂಗಳ ಮನವಿ

ಕಳೆದ ಮೇ ತಿಂಗಳಲ್ಲಿ ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಕಚ್ಚಾ ತೈಲ ಬೆಲೆ ಏರಿಕೆಯಾಗಿ ಭಾರತದ ವಿದೇಶಿ ವಿನಿಮಯ ಮೀಸಲಿನ ಮೇಲೆ ತೀವ್ರ ಒತ್ತಡ ಉಂಟಾಗಿತ್ತು. ಈ ಸಂದರ್ಭದಲ್ಲಿ ಹೈದರಾಬಾದ್‌ನಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಚಿನ್ನದ ಖರೀದಿಯಿಂದ ನಮ್ಮ ವಿದೇಶಿ ವಿನಿಮಯವು ಹೆಚ್ಚಿನ ಪ್ರಮಾಣದಲ್ಲಿ ಖರ್ಚಾಗುತ್ತಿದೆ. ರಾಷ್ಟ್ರದ ಹಿತದೃಷ್ಟಿಯಿಂದ ನಾವು ಒಂದು ವರ್ಷ ಚಿನ್ನ ಖರೀದಿಸದಿರಲು ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದ್ದರು.

ಅಂದು ಪ್ರಧಾನಿಯವರು ನೀಡಿದ್ದ ಏಳು ಪ್ರಮುಖ ಮನವಿಗಳಲ್ಲಿ ಇಂಧನ ಬಳಕೆ ತಗ್ಗಿಸುವುದು, ವರ್ಕ್ ಫ್ರಮ್ ಹೋಮ್ (ಮನೆಯಿಂದಲೇ ಕೆಲಸ) ಪದ್ಧತಿಗೆ ಉತ್ತೇಜನ ನೀಡುವುದು ಮತ್ತು ವಿದೇಶಿ ಪ್ರವಾಸಗಳನ್ನು ಕಡಿಮೆ ಮಾಡುವುದು ಸಹ ಸೇರಿದ್ದವು. ಸೆಪ್ಟೆಂಬರ್‌ನಲ್ಲೂ ಅವರು ಇದೇ ಮನವಿಯನ್ನು ಪುನರುಚ್ಚರಿಸಿದ್ದರು. ಇದಕ್ಕೆ ಪೂರಕವಾಗಿ, ಮೇ ತಿಂಗಳಲ್ಲಿ ಕೇಂದ್ರ ಸರ್ಕಾರವು ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕವನ್ನು ಶೇ. 6ರಿಂದ ಶೇ. 15ಕ್ಕೆ ಏರಿಸಿತ್ತು. ಇದರಿಂದ ಆಭರಣ ತಯಾರಿಕಾ ಕಂಪನಿಗಳ ಷೇರುಗಳ ಮೇಲೂ ಪರಿಣಾಮ ಬೀರಿತ್ತು.

ಚಿನ್ನದ ದರ ಗಣನೀಯ ಕುಸಿತ!

ಪ್ರಧಾನಿಯವರ ಮನವಿ ಮತ್ತು ಸರ್ಕಾರದ ಕ್ರಮಗಳು ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರಿವೆ. ಗುಡ್‌ರಿಟರ್ನ್ಸ್' (Goodreturns) ವರದಿಯ ಪ್ರಕಾರ, ಮೇ 9ರಂದು ದೆಹಲಿಯಲ್ಲಿ ಪ್ರತಿ ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,250 ರೂಪಾಯಿ ಇತ್ತು. ಆದರೆ ಕಳೆದ ಕೆಲವು ತಿಂಗಳುಗಳಲ್ಲಿ ದರದಲ್ಲಿ ಭಾರಿ ಇಳಿಕೆಯಾಗಿದ್ದು, ಪ್ರಸ್ತುತ ಪ್ರತಿ ಗ್ರಾಂಗೆ 12,523ರೂಗೆ ಬಂದು ತಲುಪಿದೆ.

ಸರ್ಕಾರಿ ಅಂಕಿಅಂಶಗಳ ಪ್ರಕಾರ, ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ ದೇಶದ ಅಧಿಕೃತ ಚಿನ್ನದ ಆಮದು ಸುಮಾರು ಶೇ. 40ರಷ್ಟು ಕುಸಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 41.24 ಬಿಲಿಯನ್ ಡಾಲರ್ ಮೌಲ್ಯದ ಚಿನ್ನ ಆಮದಾಗಿದ್ದರೆ, ಈ ಬಾರಿ ಅದು 24.78 ಬಿಲಿಯನ್ ಡಾಲರ್‌ಗೆ ಇಳಿಕೆಯಾಗಿದೆ. ಅಂತೆಯೇ, ವಿಶ್ವ ಚಿನ್ನದ ಮಂಡಳಿಯ ದತ್ತಾಂಶಗಳ ಪ್ರಕಾರ, ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಚಿನ್ನದ ಬೇಡಿಕೆಯು ಕಳೆದ ವರ್ಷಕ್ಕಿಂತ ಶೇ. 29ರಷ್ಟು ಕಡಿಮೆಯಾಗಿ 162 ಟನ್‌ಗಳಿಗೆ ತಲುಪಿದೆ. ಆಭರಣಗಳ ಬೇಡಿಕೆಯಲ್ಲೂ ಶೇ. 20ರಷ್ಟು ಇಳಿಕೆಯಾಗಿದ್ದು, ಸುಮಾರು 100 ಟನ್‌ಗಳಿಗೆ ಸೀಮಿತವಾಗಿದೆ. ಒಟ್ಟಾರೆಯಾಗಿ, ಜನರ ಸಹಕಾರದಿಂದ ದೇಶದ ವಿದೇಶಿ ವಿನಿಮಯ ಉಳಿತಾಯವಾಗುವುದರ ಜೊತೆಗೆ ಚಿನ್ನದ ಬೆಲೆಯೂ ನಿಯಂತ್ರಣಕ್ಕೆ ಬಂದಿದೆ(ಏಜೆನ್ಸೀಸ್​).