ನವದೆಹಲಿ: ಆಗಸ್ಟ್ 15ರಂದು ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆ ನಡೆಸುತ್ತಿರುವ ಹಿನ್ನೆಲೆ ಪ್ರಧಾನಿ ಮೋದಿ(PM Modi) ತಮ್ಮ ಇನ್ಸ್ಟಾಗ್ರಾಂನಲ್ಲಿ ಮಂಗಳವಾರ(ಆ. 11) ಮತ್ತೊಂದು ವಿಡಿಯೋ ಪೋಸ್ಟ್ ಮಾಡಿದ್ದು, ಹರ್-ಘರ್ ತಿರಂಗಾ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ನಾಗರಿಕರಿಗೆ ಕರೆ ನೀಡಿದ್ದಾರೆ.
ದೆಹಲಿಯಲ್ಲಿ ಆಡಳಿತಾರೂಢ ಎನ್ಡಿಎ ಮೈತ್ರಿಕೂಟದ 'ಮಂಗಲ್ ಮಿಲನ್' ಕಾರ್ಯಕ್ರಮದಲ್ಲಿ ಸಂಸದರು ಮತ್ತು ಕೇಂದ್ರ ಸಚಿವರು ತ್ರಿವರ್ಣ ಧ್ವಜವನ್ನು ಬೀಸುತ್ತಾ ವಂದೇ ಮಾತರಂ ಮತ್ತು ಭಾರತ್ ಮಾತಾ ಕಿ ಜೈ ಘೋಷಣೆಗಳನ್ನು ಕೂಗುತ್ತಿರುವ ವೀಡಿಯೊವನ್ನು ಮೋದಿ ಹಂಚಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿರುವ ಪ್ರಧಾನಿ ಮೋದಿ, ಆಗಸ್ಟ್ 15ರಂದು ಹೆಮ್ಮೆಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿ, ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಿ ಮತ್ತು ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಪ್ರತಿಜ್ಞೆ ಮಾಡಿ ಎಂದಿದ್ದಾರೆ.
ಮುಂದುವರೆದು, ಹರ್-ಘರ್ ತಿರಂಗ, ಘರ್-ಘರ್ ತಿರಂಗ, ಹರ್ ಮನ್ ತಿರಂಗ ಎಂದು ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸುವಂತೆಯೂ ಕರೆ ನೀಡಿದ್ದು, ತ್ರಿವರ್ಣ ಧ್ವಜವು ನಮಗೆ ಹೆಮ್ಮೆಯ ವಿಷಯವಾಗಿದ್ದು, ಅದು ಯಾವಾಗಲೂ ದೇಶ ಸೇವೆ ಮಾಡಲು ನಮಗೆ ಸ್ಫೂರ್ತಿ ನೀಡುತ್ತದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).