Speaker of the Knesset Medal | 'ಸ್ಪೀಕರ್ ಆಫ್ ದಿ ನೆಸ್ಸೆಟ್ ಮೆಡಲ್' ಪಡೆದ ವಿಶ್ವದ ಮೊದಲ ವಿದೇಶಿ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದ ಪ್ರಧಾನಿ ಮೋದಿ
- 'ಸ್ಪೀಕರ್ ಆಫ್ ದಿ ನೆಸ್ಸೆಟ್ ಮೆಡಲ್' ಪಡೆದ ವಿಶ್ವದ ಮೊದಲ ವಿದೇಶಿ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದ ಮೋದಿ
- ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಎರಡೂ ದೇಶಗಳಿಂದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ಪಡೆದ ನಮೋ
- ಈ ಗೌರವ ಉಭಯ ನಡುವಿನ ದಶಕಗಳ ಕಾಲದ ಅಚಲ ಸ್ನೇಹಕ್ಕೆ ಅರ್ಪಿಸಿದ ಮೋದಿ
ಜೆರುಸಲೆಮ್/ದೆಹಲಿ: ಭಾರತ ಮತ್ತು ಇಸ್ರೇಲ್ ನಡುವಿನ ಕಾರ್ಯತಂತ್ರದ ಸಂಬಂಧವನ್ನು ಹೊಸ ಎತ್ತರಕ್ಕೆ ಕೊಂಡೊಯ್ದ ಗೌರವಾರ್ಥವಾಗಿ, ಪ್ರಧಾನಿ ನರೇಂದ್ರ ಮೋದಿಗೆ ಇಸ್ರೇಲ್‌ನ ಸಂಸತ್ತು (ನೆಸ್ಸೆಟ್) ಬುಧವಾರ 'ಸ್ಪೀಕರ್ ಆಫ್ ದಿ ನೆಸ್ಸೆಟ್ ಮೆಡಲ್' (Speaker of the Knesset Medal) ನೀಡಿ ಗೌರವಿಸಿದೆ. ಈ ಪ್ರಶಸ್ತಿಯನ್ನು ಸ್ವೀಕರಿಸಿದ ವಿಶ್ವದ ಮೊದಲ ವಿದೇಶಿ ನಾಯಕ ಎಂಬ ಇತಿಹಾಸವನ್ನು ಮೋದಿ ನಿರ್ಮಿಸಿದ್ದಾರೆ.
ಇಸ್ರೇಲ್ ಸಂಸತ್ತಿನಲ್ಲಿ ಪ್ರಧಾನಿಯವರ ಭಾಷಣದ ಬಳಿಕ ಸ್ಪೀಕರ್ ಅಮೀರ್ ಒಹಾನಾ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ನೆಸ್ಸೆಟ್ ಪದಕವನ್ನು ಸ್ವೀಕರಿಸಲು ನನಗೆ ತುಂಬಾ ಗೌರವವಾಗಿದೆ. ನಾನು ಅದನ್ನು ನಮ್ರತೆ ಮತ್ತು ಕೃತಜ್ಞತೆಯಿಂದ ಸ್ವೀಕರಿಸುತ್ತೇನೆ ಎಂದು ಪ್ರಧಾನಿ ಮೋದಿ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.
ಇದು ಒಬ್ಬ ವ್ಯಕ್ತಿಗಲ್ಲ, ಭಾರತ ಮತ್ತು ಇಸ್ರೇಲ್ ನಡುವಿನ ಶಾಶ್ವತ ಸ್ನೇಹಕ್ಕೆ ಸಂದ ಗೌರವ, ಇದು ನಮ್ಮ ಎರಡು ರಾಷ್ಟ್ರಗಳಿಗೆ ಮಾರ್ಗದರ್ಶನ ನೀಡುವ ಹಂಚಿಕೆಯ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ಮೋದಿ ಬರೆದುಕೊಂಡಿದ್ದಾರೆ.
ಪ್ರಧಾನಿ ಮೋದಿಯವರ ವೈಯಕ್ತಿಕ ನಾಯಕತ್ವ ಮತ್ತು ಕಳೆದ ಒಂದು ದಶಕದಲ್ಲಿ ಅವರು ಭಾರತ-ಇಸ್ರೇಲ್ ಸಂಬಂಧವನ್ನು ಕೇವಲ ರಕ್ಷಣಾ ವಲಯಕ್ಕೆ ಸೀಮಿತಗೊಳಿಸದೆ, ಕೃಷಿ, ತಂತ್ರಜ್ಞಾನ ಮತ್ತು ನಾವೀನ್ಯತೆ ಕ್ಷೇತ್ರಗಳಿಗೂ ವಿಸ್ತರಿಸಿದ ಸಾಧನೆಯನ್ನು ನೆಸ್ಸೆಟ್ ಶ್ಲಾಘಿಸಿದೆ.
ಇತ್ತೀಚಿನ ಗೌರವವನ್ನು ಈ ಪ್ರದೇಶದಲ್ಲಿ ಭಾರತದ ವಿಸ್ತರಿಸುತ್ತಿರುವ ರಾಜತಾಂತ್ರಿಕ ಉಪಸ್ಥಿತಿ ಮತ್ತು ಪ್ರಮುಖ ಪಾಲುದಾರರೊಂದಿಗೆ ಸಹಕಾರವನ್ನು ಗಾಢವಾಗಿಸುವಾಗ ಸಮತೋಲಿತ ಸಂಬಂಧಗಳನ್ನು ಕಾಪಾಡಿಕೊಳ್ಳುವ ಪ್ರಯತ್ನಗಳ ಸಂಕೇತವೆಂದು ನೋಡಲಾಗುತ್ತದೆ. ತಂತ್ರಜ್ಞಾನ-ಚಾಲಿತ ಪಾಲುದಾರಿಕೆಗಳು, ಭದ್ರತಾ ಸಹಯೋಗ ಮತ್ತು ಭಾರತ-ಇಸ್ರೇಲ್ ಸಂಬಂಧಗಳನ್ನು ವ್ಯಾಖ್ಯಾನಿಸುವುದನ್ನು ಮುಂದುವರಿಸುವ ಉದಯೋನ್ಮುಖ ಆರ್ಥಿಕ ಅವಕಾಶಗಳಿಂದ ಭಾರತದ ವಿದೇಶಾಂಗ ನೀತಿಯು ಹೇಗೆ ಹೆಚ್ಚು ರೂಪುಗೊಳ್ಳುತ್ತಿದೆ ಎಂಬುದನ್ನು ಈ ಮಾನ್ಯತೆ ಎತ್ತಿ ತೋರಿಸುತ್ತದೆ.
ಸಂಚಲನ ಸೃಷ್ಟಿಸಿದ ಇಸ್ರೆಲ್ ನಡೆ
ಪ್ರಧಾನಿ ಮೋದಿಗೆ ಒಲಿದಿರುವ ಈ ಗೌರವವು ಅಂತರಾಷ್ಟ್ರೀಯ ರಾಜತಾಂತ್ರಿಕ ವಲಯದಲ್ಲಿ ದೊಡ್ಡ ಸಂಚಲನವ್ನೇ ಸೃಷ್ಟಿಸಿದ್ದು, 2018ರಲ್ಲಿ ಪ್ಯಾಲೆಸ್ತೀನ್ ದೇಶವು ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಗ್ರಾಂಡ್ ಕಾಲರ್ ಆಫ್ ದಿ ಸ್ಟೇಟ್ ಆಫ್ ಪ್ಯಾಲೆಸ್ತೀನ್ ನೀಡಿ ಮೋದಿಯವರನ್ನು ಗೌರವಿಸಿತ್ತು.ಇದೀಗ ಇಸ್ರೇಲ್ ಕೂಡ ತನ್ನ ಅತ್ಯುನ್ನತ ಸಂಸದೀಯ ಪದಕ ನೀಡುವ ಮೂಲಕ, ಮಧ್ಯಪ್ರಾಚ್ಯದ ಸಂಕೀರ್ಣ ರಾಜಕೀಯದ ನಡುವೆಯೂ ಮೋದಿ ಅವರು ಎರಡು ದೇಶಗಳೊಂದಿಗೆ ಸಮತೋಲಿತ ಮತ್ತು ಗಟ್ಟಿಯಾದ ಬಾಂಧವ್ಯ ಹೊಂದಿದ್ದಾರೆ ಎನ್ನುವುದನ್ನು ಸಾಬೀತುಪಡಿಸಿದೆ.
ಭಯೋತ್ಪಾದನೆ ವಿರುದ್ಧ ಮೋದಿ ಗುಡುಗು
ಇಸ್ರೆಲ್ ಸಂಸತ್ ಭವನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಯೋತ್ಪಾದನೆಯು ಕೇವಲ ಒಂದು ದೇಶದ ಸಮಸ್ಯೆಯಲ್ಲ, ಅದು ಮಾನವೀಯತೆಯ ವಿರೋಧಿ. ಯಾವುದೇ ಸಿದ್ಧಾಂತ, ಧರ್ಮ ಅಥವಾ ರಾಜಕೀಯ ಕಾರಣಗಳು ಅಮಾಯಕ ನಾಗರಿಕರ ಹತ್ಯೆಯನ್ನು ಸಮರ್ಥಿಸಲು ಸಾಧ್ಯವೇ ಇಲ್ಲ ಎಂದು ಗುಡುಗಿದ ಪ್ರಧಾನಿ, ಭಯೋತ್ಪಾದನೆಯನ್ನು ಒಳ್ಳೆಯ ಮತ್ತು ಕೆಟ್ಟ ಭಯೋತ್ಪಾದನೆ ಎಂದು ವಿಂಗಡಿಸುವುದನ್ನು ಮೊದಲು ನಿಲ್ಲಿಸಬೇಕು ಎಂದರು.
ಜಾಗತಿಕ ಶಾಂತಿಗಾಗಿ ಕರೆ
ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಸಂಘರ್ಷದ ಬಗ್ಗೆಯೂ ಪರೋಕ್ಷವಾಗಿ ಉಲ್ಲೇಖಿಸಿದ ಪ್ರಧಾನಿ, ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕವೇ ಶಾಶ್ವತ ಪರಿಹಾರ ಸಾಧ್ಯ ಎಂದು ಪುನರುಚ್ಚರಿಸಿದರು. ಹಿಂಸಾಚಾರವು ಎಂದಿಗೂ ಪ್ರಗತಿಗೆ ದಾರಿಯಾಗಲಾರದು ಎನ್ನುವುದು ಭಾರತದ ಅಚಲ ನಂಬಿಕೆ ಎಂದು ತಿಳಿಸಿದರು.
ಪ್ರಧಾನಿ ಮೋದಿಗೆ ರೆಡ್ ಕಾರ್ಪೆಟ್ ಸ್ವಾಗತ
ಒಂಬತ್ತು ವರ್ಷಗಳಲ್ಲಿ ಎರಡನೇ ಬಾರಿಗೆ ಇಸ್ರೇಲ್‌ಗೆ ಭೇಟಿ ನೀಡುತ್ತಿರುವ ಮೋದಿಯನ್ನು, ಅಲ್ಲಿನ ಪ್ರಧಾನಿ ನೆತನ್ಯಾಹು ಮತ್ತು ಅವರ ಪತ್ನಿ ಸಾರಾ ಬೆನ್ ಗುರಿಯನ್ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ಇದೇ ವೇಳೆ ಭಾರತದ ಪ್ರಧಾನಿಗೆ ರೆಡ್ ಕಾರ್ಪೆಟ್ ಸ್ವಾಗತ ದೊರೆಯಿತು. ಇದಾದ ಬಳಿಕ ಉಭಯ ನಾಯಕರು ಖಾಸಗಿ ಸಭೆ ನಡೆಸಿದರು(ಏಜೆನ್ಸೀಸ್).