Nagpur Explosion (ಚಿತ್ರ X) 
ದೇಶ

ಬೆಳ್ಳಂಬೆಳಗ್ಗೆ ನಡುಗಿದ ನಾಗ್ಪುರ: 17 ಕಾರ್ಮಿಕರ ದುರ್ಮರಣಕ್ಕೆ ಪ್ರಧಾನಿ ಮೋದಿ ಕಂಬನಿ; ಸಂತ್ರಸ್ತರಿಗೆ ಒಟ್ಟು 7 ಲಕ್ಷ ರೂ. ಪರಿಹಾರ Nagpur Explosion

ಪ್ರಮುಖ ಮುಖ್ಯಾಂಶಗಳು

  • ಮಹಾರಾಷ್ಟ್ರದ ನಾಗ್ಪುರದಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದ ಭೀಕರ ಸ್ಪೋಟದಲ್ಲಿ ಸುಮಾರು 17 ಜನ ಸಾವು
  • ನರೇಂದ್ರ ಮೋದಿ, ಮಹಾರಾಷ್ಟ್ರದ ಸಿಎಂ ದೇವೇಂದ್ರ ಫಡ್ನವೀಸ್ ಮೃತರಿಗೆ ಸಂತಾಪ ಸೂಚಿಸಿದ್ದಾರೆ
  • ನಾಗ್ಪುರದ ಸ್ಫೋಟಕ ಘಟಕದಲ್ಲಿ ಸಂಭವಿಸಿದ ಅಪಘಾತವು ಅತ್ಯಂತ ನೋವಿನ ಸಂಗತಿ; ಪಿಎಂ ಮೋದಿ
ಮಹಾರಾಷ್ಟ್ರ: ಮಹಾರಾಷ್ಟ್ರದ ನಾಗ್ಪುರದಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದ ಭೀಕರ ಸ್ಪೋಟದಲ್ಲಿ (Nagpur explosion) ಸುಮಾರು 17 ಜನ ಸಾವನ್ನಪ್ಪಿ, ಹಲವರು ಗಂಭೀರ ಗಾಯಗೊಂಡಿರುವ ಹಿನ್ನಲೆ, ನರೇಂದ್ರ ಮೋದಿ, ಮಹಾರಾಷ್ಟ್ರದ ಸಿಎಂ ದೇವೇಂದ್ರ ಫಡ್ನವೀಸ್ ಮೃತರಿಗೆ ಸಂತಾಪ ಸೂಚಿಸಿದ್ದು, ಅವರ ಕುಟುಂಬಗಳಿಗೆ ತಲಾ 2 ಲಕ್ಷ ಮತ್ತು 5 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.
ಈ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದು, ನಾಗ್ಪುರದ ಸ್ಫೋಟಕ ಘಟಕದಲ್ಲಿ ಸಂಭವಿಸಿದ ಅಪಘಾತವು ಅತ್ಯಂತ ನೋವಿನ ಸಂಗತಿ. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಸ್ಥಳೀಯ ಆಡಳಿತವು ಸಂತ್ರಸ್ತರಿಗೆ ಸಹಾಯ ಮಾಡುತ್ತಿದೆ. ಮೃತರ ಪ್ರತಿ ಸಂಬಂಧಿಕರಿಗೆ PMNRF ನಿಂದ 2 ಲಕ್ಷ ರೂ.ಪರಿಹಾರ ನೀಡಲಾಗುವುದು. ಗಾಯಾಳುಗಳಿಗೆ 50,000 ರೂ. ನೀಡಲಾಗುವುದು ಎಂದು ತಮ್ಮ ಎಕ್ಸ್​ ಖಾತೆಯಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.

ದುರದೃಷ್ಟಕರ ಸಂಗತಿ; ಸಿ ಎಂ ದೇವೆಂದ್ರ ಫಡ್ನಾವಿಸ್​

ನಾಗ್ಪುರ ಜಿಲ್ಲೆಯ ರೌಲ್ಗಾಂವ್‌ನಲ್ಲಿರುವ ಸ್ಫೋಟಕ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಪೋಟದ ಘಟನೆ ಅತ್ಯಂತ ದುರದೃಷ್ಟಕರ. ಘಟನೆ ಸಂಭವಿಸಿದಾಗಿನಿಂದಲೂ ನಾನು ಸ್ಥಳೀಯ ಆಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಈಗಾಗಲೇ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ತಲುಪಿದ್ದು, ರಕ್ಷಣಾ ಕಾರ್ಯಾಚರಣೆಗಳು ಚುರುಕುಗೊಂಡಿವೆ. ಈವರೆಗೂ ಸುಮಾರು 17 ಜನ ಪ್ರಾಣ ಕಳೆದುಕೊಂಡಿದ್ದು, 18 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ನಾಗ್ಪುರಕ್ಕೆ ಸ್ಥಳಾಂತರಿಸಲಾಗಿದ್ದು, ಬೇಗ ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಿಎಂ ಫಡ್ನವೀಸ್ ಭಾವುಕರಾಗಿದ್ದಾರೆ.

ಘಟನೆಯ ಹಿನ್ನೆಲೆ

ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಸ್ಫೋಟಕ ತಯಾರಿಕಾ ಘಟಕದಲ್ಲಿ ಸಂಭವಿಸಿದ ಭೀಕರ ದುರಂತದಲ್ಲಿ ಕನಿಷ್ಠ 17 ಜನರು ಸಾವನ್ನಪ್ಪಿದ್ದು, 18ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ನಾಗ್ಪುರ ನಗರದಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಕಾಟೋಲ್ ತಹಸಿಲ್‌ನ ರೌಲ್‌ಗಾಂವ್​ನಲ್ಲಿರುವ ಎಸ್‌ಬಿಎಲ್ ಎನರ್ಜಿ ಲಿಮಿಟೆಡ್ ಸ್ಪೋಟಕ ತಯಾರಿಕಾ ಸಂಸ್ಥೆಯಲ್ಲಿ ಘಟನೆ ಸಂಭವಿಸಿದ್ದು, ಈ ಕಂಪನಿಯು ಗಣಿಗಾರಿಕೆ ಮತ್ತು ಕೈಗಾರಿಕಾ ಉದ್ದೇಶಗಳಿಗಾಗಿ ಬಳಸಲಾಗುವ ಡೆಟೊನೇಟರ್‌ಗಳನ್ನು ತಯಾರಿಸುತ್ತಿತ್ತು ಎನ್ನಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಭಾನುವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಕಾರ್ಖಾನೆಯ ಡೆಟೊನೇಟರ್ ಪ್ಯಾಕಿಂಗ್ ಯುನಿಟ್‌ನಲ್ಲಿ ಈ ಸ್ಫೋಟ ಸಂಭವಿಸಿದೆ. ಈ ವೇಳೆ ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಿಲುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ (ಏಜೆನ್ಸೀಸ್​).