ಪ್ರಧಾನಿ ಮೋದಿ, ಡೊನಾಲ್ಡ್ ಟ್ರಂಪ್ ಹಾಗೂ ಮಲ್ಲಿಕಾರ್ಜುನ ಖರ್ಗೆ
ನವದೆಹಲಿ: ಪ್ರಧಾನಿ ಮೋದಿ ನನ್ನ ಸ್ನೇಹಿತ, ನಾನು ಅವರ ಅಭಿಮಾನಿ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತಿಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿನಾಶ ಮಾಡುವುದರಲ್ಲಿ ಇಬ್ಬರು ಒಂದೇ, ಹಾಗಾಗಿ ಇಬ್ಬರು ಪರಸ್ಪರ ಹೊಗಳಿಕೊಂಡಿದ್ದಾರೆ ಎಂದು ಟಾಂಗ್ ನೀಡಿದ್ದಾರೆ.
ಈ ಕುರಿತು ಎಎನ್ಐ ಜೊತೆ ಮಾತನಾಡಿರು ಮಲ್ಲಿಕಾರ್ಜುನ ಖರ್ಗೆ, ಇಬ್ಬರು ಒಂದೇ ರೀತಿಯ ಗುಣಲಕ್ಷಣಗಳನ್ನು ಹೊಂದಿದ್ದಾರೆ. ಒಬ್ಬರು ಜಗತ್ತನ್ನು ನಾಶಮಾಡುತ್ತಿದ್ದರೆ, ಇನ್ನೊಬ್ಬರು ದೇಶವನ್ನು ನಾಶಮಾಡುತ್ತಿದ್ದಾರೆ. ಅದಕ್ಕಾಗಿಯೇ ಅವರು ಪರಸ್ಪರ ಹೊಗಳುತ್ತಾರೆ. ನೀವು ನನ್ನನ್ನು ಹೊಗಳಿ, ನಾನು ನಿಮ್ಮನ್ನು ಹೊಗಳುತ್ತೇನೆ' ಎಂಬ ಗಾದೆಯಂತೆ ಎಂದು ಟಾಂಗ್ ನೀಡಿದ್ದಾರೆ.
ದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿಯಲ್ಲಿ ಆಯೋಜಿಸಲಾಗಿದ್ದ(India-US) ಅಮೆರಿಕದ 250ನೇ ಸ್ವಾತಂತ್ರ್ಯ ದಿನಾಚರಣೆಯ ವಿಶೇಷ ಸಮಾರಂಭದಲ್ಲಿ ವರ್ಚುವಲ್(ವಿಡಿಯೋ ಕಾನ್ಫರೆನ್ಸ್) ಮೂಲಕ ಭಾಗವಹಿಸಿ ಡೊನಾಲ್ಡ್ ಟ್ರಂಪ್ ಮಾತನಾಡಿದ್ದರು. ಈ ವೇಳೆ ಪ್ರಧಾನಿ ಮೋದಿಯನ್ನು ಹೊಗಳಿದ್ದರು.
ನಾನು ಭಾರತವನ್ನು ಅಪಾರವಾಗಿ ಪ್ರೀತಿಸುತ್ತೇನೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಆಪ್ತ ಸ್ನೇಹಿತ ಮತ್ತು ನಾನವರ ದೊಡ್ಡ ಅಭಿಮಾನಿ. ಭಾರತವು ಯಾವುದೇ ಸಂದರ್ಭದಲ್ಲೂ ಅಮೆರಿಕವನ್ನು ಶೇಕಡಾ 100 ರಷ್ಟು ನಂಬಬಹುದು. ಭಾರತಕ್ಕೆ ಏನು ಬೇಕಿದ್ದರೂ ನಮ್ಮಿಂದ ಸಿಗಲಿದೆ ಎಂದು ಹೇಳಿದ್ದರು.
ಇನ್ನೂ ಮಂಗಳವಾರ ನಡೆಯಲಿರುವ ಕ್ವಾಡ್ ವಿದೇಶಾಂಗ ಮಂತ್ರಿಗಳ ಸಭೆಯಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ರುಬಿಯೊ ಅವರ ಆಸ್ಟ್ರೇಲಿಯಾ ಮತ್ತು ಜಪಾನಿನ ಸಹವರ್ತಿಗಳು ಭಾಗವಹಿಸಲಿದ್ದಾರೆ (ಏಜೆನ್ಸೀಸ್).