WhatsApp 
ದೇಶ

ಇನ್ಮುಂದೆ WhatsApp ಕೇವಲ ಉಚಿತವಲ್ಲ! ಚಂದಾದಾರಿಕೆ ಪಡೆದವರಿಗೆ ಮಾತ್ರ ಸಿಗಲಿದೆ ಈ 'ಪ್ಲಸ್' ಪವರ್

ಬಾಬುಪ್ರಸಾದ್​ ಮೋಡಿಸ್​
ಬೆಂಗಳೂರು: ಜಗತ್ತಿನಾದ್ಯಂತ ಅತಿ ಹೆಚ್ಚು ಜನಪ್ರಿಯತೆ ಹೊಂದಿರುವ ಮೆಸೇಜಿಂಗ್ ಆಪ್ 'ವಾಟ್ಸಾಪ್'(WhatsApp) ಈಗ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದೆ. ಯೂಟ್ಯೂಬ್ ಮತ್ತು ಎಕ್ಸ್ (ಟ್ವಿಟರ್) ಮಾದರಿಯಲ್ಲೇ ಈಗ ವಾಟ್ಸಾಪ್ ಕೂಡ 'ವಾಟ್ಸಾಪ್ ಪ್ಲಸ್' (WhatsApp Plus) ಎಂಬ ಪಾವತಿಸಿದ ಚಂದಾದಾರಿಕೆ (Paid Subscription) ಯೋಜನೆಯನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ತಿಂಗಳುಗಳಿಂದ ಈ ಬಗ್ಗೆ ಹರಿದಾಡುತ್ತಿದ್ದ ಊಹಾಪೋಹಗಳಿಗೆ ಈಗ ತೆರೆ ಬಿದ್ದಿದ್ದು, ಕಂಪನಿಯು ಆಯ್ದ ಬೀಟಾ ಬಳಕೆದಾರರಿಗೆ ಈ ಸೇವೆಯನ್ನು ಪರೀಕ್ಷಾರ್ಥವಾಗಿ ಹೊರತಂದಿದೆ.

ಹೆಚ್ಚುವರಿ ಫೀಚರ್ಸ್‌ಗಳ ಲಾಟರಿ

ಬಳಕೆದಾರರು ಹಣ ಪಾವತಿಸಿ ವಾಟ್ಸಾಪ್ ಪ್ಲಸ್ ಸದಸ್ಯತ್ವ ಪಡೆದರೆ ಅವರಿಗೆ ಸಾಮಾನ್ಯ ಬಳಕೆದಾರರಿಗಿಂತ ಹೆಚ್ಚಿನ ಸೌಲಭ್ಯಗಳು ದೊರೆಯಲಿವೆ. ವರದಿಗಳ ಪ್ರಕಾರ, ಪಾವತಿಸಿದ ಬಳಕೆದಾರರು ತಮ್ಮ ಇಚ್ಛೆಯಂತೆ ಅಪ್ಲಿಕೇಶನ್ ಅನ್ನು ಕಸ್ಟಮೈಸ್ ಮಾಡಿಕೊಳ್ಳಬಹುದು.
ವಿಶೇಷ ಥೀಮ್‌ಗಳು: ಸುಮಾರು 18ಕ್ಕೂ ಹೆಚ್ಚು ಆಕರ್ಷಕ ಥೀಮ್‌ಗಳು ಮತ್ತು ವಿಭಿನ್ನ ಬಣ್ಣಗಳ ಆಯ್ಕೆ ಲಭ್ಯವಿರಲಿದೆ.
ಚಾಟ್ ಪಿನ್ ಸೌಲಭ್ಯ: ಪ್ರಸ್ತುತ ವಾಟ್ಸಾಪ್‌ನಲ್ಲಿ ಕೇವಲ 3 ಚಾಟ್‌ಗಳನ್ನು ಮಾತ್ರ ಮೇಲ್ಭಾಗದಲ್ಲಿ ಪಿನ್ ಮಾಡಬಹುದು. ಆದರೆ 'ಪ್ಲಸ್' ಚಂದಾದಾರರು 20ಕ್ಕೂ ಹೆಚ್ಚು ಚಾಟ್‌ಗಳನ್ನು ಪಿನ್ ಮಾಡುವ ಅವಕಾಶ ಪಡೆಯಲಿದ್ದಾರೆ.
ವಿಶಿಷ್ಟ ರಿಂಗ್‌ಟೋನ್‌ಗಳು: ಪ್ರತಿಯೊಂದು ಚಾಟ್‌ಗೂ ಪ್ರತ್ಯೇಕ ರಿಂಗ್‌ಟೋನ್ ಮತ್ತು ಅಧಿಸೂಚನೆ (Notification) ಟೋನ್‌ಗಳನ್ನು ಸೆಟ್ ಮಾಡಿಕೊಳ್ಳಬಹುದು.
ಪ್ರತ್ಯೇಕ ಐಕಾನ್‌ಗಳು: ಆಪ್‌ನ ಐಕಾನ್ ಅನ್ನು ಬದಲಾಯಿಸುವ ಹಾಗೂ ವಿಶೇಷ ಸ್ಟಿಕ್ಕರ್ ಪ್ಯಾಕ್‌ಗಳನ್ನು ಬಳಸುವ ಸೌಲಭ್ಯವೂ ಇರಲಿದೆ.

ಖರ್ಚು ಎಷ್ಟು? ಭಾರತದಲ್ಲಿ ಬೆಲೆ ಎಷ್ಟಿರಬಹುದು?

ಸದ್ಯದ ಮಾಹಿತಿಯ ಪ್ರಕಾರ, ಯುರೋಪ್‌ನಲ್ಲಿ ಈ ಚಂದಾದಾರಿಕೆಗೆ ತಿಂಗಳಿಗೆ 2.49 ಯುರೋಗಳನ್ನು ನಿಗದಿಪಡಿಸಲಾಗಿದೆ. ಭಾರತೀಯ ರೂಪಾಯಿ ಮೌಲ್ಯದಲ್ಲಿ ಇದು ಸರಿಸುಮಾರು 250 ರೂಪಾಯಿಗಳಾಗುತ್ತವೆ. ಆದರೂ, ಭಾರತೀಯ ಮಾರುಕಟ್ಟೆಗೆ ಈ ಸೇವೆ ಅಧಿಕೃತವಾಗಿ ಬಿಡುಗಡೆಯಾದಾಗ ಬೆಲೆಯಲ್ಲಿ ವ್ಯತ್ಯಾಸವಾಗುವ ಸಾಧ್ಯತೆಯಿದೆ. ಟೆಕ್ ಲೋಕದ ತಜ್ಞರ ಪ್ರಕಾರ, ಭಾರತದಲ್ಲಿ ಸ್ಪರ್ಧಾತ್ಮಕ ಬೆಲೆ ಇರಲಿದ್ದು, ಬಳಕೆದಾರರಿಗೆ ಆಕರ್ಷಕ ಪ್ಯಾಕೇಜ್ ನೀಡುವ ಸಾಧ್ಯತೆಯಿದೆ.

ಉಚಿತ ಸೇವೆ ಎಂದಿನಂತೆಯೇ ಇರಲಿದೆ

ವಾಟ್ಸಾಪ್ ಪ್ಲಸ್ ಎಂಬುದು ಸಂಪೂರ್ಣವಾಗಿ ಐಚ್ಛಿಕ (Optional) ಸೇವೆಯಾಗಿದೆ. ಅಂದರೆ, ಈ ಹೆಚ್ಚುವರಿ ವೈಶಿಷ್ಟ್ಯಗಳು ಬೇಕಾದವರು ಮಾತ್ರ ಹಣ ಪಾವತಿಸಬಹುದು. ಒಂದು ವೇಳೆ ನೀವು ಹಣ ಪಾವತಿಸದಿದ್ದರೂ, ವಾಟ್ಸಾಪ್‌ನ ಮೂಲಭೂತ ಕಾರ್ಯಗಳಾದ ಮೆಸೇಜ್ ಕಳುಹಿಸುವುದು, ಆಡಿಯೋ ಮತ್ತು ವಿಡಿಯೋ ಕರೆಗಳು ಹಾಗೂ ಫೈಲ್ ಹಂಚಿಕೆ ಎಂದಿನಂತೆ ಉಚಿತವಾಗಿಯೇ ಇರಲಿವೆ. ಹಣ ಕೊಡದ ಬಳಕೆದಾರರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.

ಯಾವಾಗ ಬಿಡುಗಡೆ?

ಸದ್ಯ ಆಂಡ್ರಾಯ್ಡ್ ಬೀಟಾ ಪರೀಕ್ಷಕರಿಗೆ ಮಾತ್ರ ಈ ವೈಶಿಷ್ಟ್ಯ ಲಭ್ಯವಿದೆ. ಮುಂದಿನ ಕೆಲವು ವಾರಗಳಲ್ಲಿ ಆಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರಿಗೂ ಈ ಸೇವೆಯನ್ನು ಹಂತ-ಹಂತವಾಗಿ ಪರಿಚಯಿಸಲು ವಾಟ್ಸಾಪ್ ಯೋಜಿಸಿದೆ. ಒಟ್ಟಾರೆಯಾಗಿ, ವಾಟ್ಸಾಪ್ ಈಗ ಕೇವಲ ಸಂವಹನ ಮಾಧ್ಯಮವಾಗಿ ಉಳಿಯದೆ, ಕಸ್ಟಮೈಸೇಶನ್ ಮೂಲಕ ಪ್ರೀಮಿಯಂ ಅನುಭವ ನೀಡಲು ಮುಂದಾಗಿದೆ,(ಏಜೆನ್ಸೀಸ್​).